
ಬೆಂಗಳೂರು(ಏ.13): ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಭವಿ ವೇಗಿ ಇಶಾಂತ್ ಶರ್ಮಾ ಈ ಇಬ್ಬರು ಬಾಲ್ಯದ ಗೆಳೆಯರು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಡೆಲ್ಲಿ ಮೂಲದ ಈ ಇಬ್ಬರು ಕ್ರಿಕೆಟಿಗರು ಭಾನುವಾರ(ಮೇ.12)ದಂದು ಇಲ್ಲಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಮುಖಾಮುಖಿಯಾಗಿದ್ದರು. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ 62ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಿದವು. ಈ ಪಂದ್ಯದಲ್ಲಿ ಬಾಲ್ಯದ ಗೆಳೆಯರಾದ ಕೊಹ್ಲಿ-ಇಶಾಂತ್ ಶರ್ಮಾ ಅವರ ತುಂಟಾಟದ ಕ್ಷಣಗಳು ಅನಾವರಣವಾದವು. ಇದರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಅದರಲ್ಲೂ ಗೆಳೆಯ ಹಾಗೂ ಎದುರಾಳಿ ತಂಡದ ವೇಗಿ ಇಶಾಂತ್ ಶರ್ಮಾ ಅವರ ಬೌಲಿಂಗ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್ ಚಚ್ಚಿದರು. ಹೌದು, ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್‌ನ ಹಿರಿಯ ಆಟಗಾರರು, ಆಪ್ತ ಸ್ನೇಹಿತರಾದ ವಿರಾಟ್ ಕೊಹ್ಲಿ ಹಾಗೂ ಇಶಾಂತ್ ಶರ್ಮಾ ನಡುವೆ ‘ನಾನಾ... ನೀನಾ...?’ ಎನ್ನುವ ಸ್ಪರ್ಧೆ ಏರ್ಪಟ್ಟಿತ್ತು.
ಕಳೆದ ಸಲ ಫ್ಲಾಪ್ ಶೋ, ಈ ಸಲ ಸೂಪರ್ ಶೋ..! KKR ಅದ್ಭುತ ಪ್ರದರ್ಶನಕ್ಕೆ ಕಾರಣ ಯಾರು?
ಕೊಹ್ಲಿಯನ್ನು ಹೇಗಾದರೂ ಮಾಡಿ ಔಟ್ ಮಾಡುತ್ತೇನೆ ಎಂದು ಪಣತೊಟ್ಟಿದ್ದ ಇಶಾಂತ್ ಶರ್ಮಾ, ದಿಗ್ಗಜ ಬ್ಯಾಟರ್ ತಮಗೆ ಒಂದು ಆಕರ್ಷಕ ಸಿಕ್ಸರ್ ಬಾರಿಸಿದರೂ ಎದೆಗುಂದಲಿಲ್ಲ. ಅಮೋಘವಾಗಿ ಬ್ಯಾಟ್ ಮಾಡುತ್ತಿದ್ದ ಕೊಹ್ಲಿಗೆ ಆಫ್‌ಸ್ಟಂಪ್‌ನಿಂದ ಆಚೆ ಬೌಲ್ ಮಾಡಿ ಯಶಸ್ಸು ಸಾಧಿಸಿದರು. ಚೆಂಡನ್ನು ಬೌಂಡರಿಗಟ್ಟುವ ಭರದಲ್ಲಿ ಕೊಹ್ಲಿ ಕೀಪರ್‌ಗೆ ಕ್ಯಾಚ್ ನೀಡಿದರು.
ವಿರಾಟ್ ಕೊಹ್ಲಿ ವಿಕೆಟ್ ಚೆಲ್ಲಿದ ಬಳಿಕ ತಲೆಬಗ್ಗಿಸಿ ಪೆವಿಲಿಯನ್‌ನತ್ತ ಹಿಂದಿರುಗುವಾಗ ಇಶಾಂತ್, ಅವರತ್ತ ಓಡಿ ಅವರನ್ನು ಅಡ್ಡಗಟ್ಟಲು ಯತ್ನಿಸಿದರು. ಕೊಹ್ಲಿ ನಗುತ್ತಲೇ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಈ ಇಬ್ಬರು ಆಪ್ತ ಸ್ನೇಹಿತರ ನಡುವಿನ ಸ್ಪರ್ಧೆ ಮೈದಾನದಲ್ಲಿದ್ದ ಇತರ ಆಟಗಾರರ ಮುಖದಲ್ಲೂ ನಗು ತರಿಸಿತು. ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳೂ ಖುಷಿ ಪಟ್ಟರು. ಸಾಮಾಜಿಕ ತಾಣಗಳಲ್ಲಿ ಈ ಸನ್ನಿವೇಶದ ವಿಡಿಯೋ ಭಾರಿ ವೈರಲ್ ಆಗಿದೆ.
ಇನ್ನು ವಿರಾಟ್ ಕೊಹ್ಲಿ ತಮಗೆ ಬಂದಿದ್ದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಜಾಯಮಾನದವರೇ ಅಲ್ಲ. ಆರ್‌ಸಿಬಿ ಬ್ಯಾಟಿಂಗ್ ಮುಗಿದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್, 188 ರನ್‌ಗಳ ಸವಾಲಿನ ಗುರಿ ಬೆನ್ನತ್ತಿತು. ಯಶ್ ದಯಾಳ್, ಲಾಕಿ ಫರ್ಗ್ಯೂಸನ್ ಮಾರಕ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತತ್ತರಿಸಿ ಹೋಯಿತು. ಡೆಲ್ಲಿ ಪರ ಇಶಾಂತ್ ಶರ್ಮಾ ಕೊನೆಯವರಾಗಿ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದರು. ಆಗ ಸುಮ್ಮನಿರದ ವಿರಾಟ್ ಕೊಹ್ಲಿ, ಗೆಳೆಯನನ್ನು ಸ್ಲೆಡ್ಜಿಂಗ್ ಮಾಡುವ ಮೂಲಕ ಬಾಕಿ ಚುಕ್ತಾ ಮಾಡಿದರು.
ಹೀಗಿತ್ತು ನೋಡಿ ಆ ಕ್ಷಣ:
ಇನ್ನು ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮತ್ತೊಮ್ಮೆ ಅಭೂತಪೂರ್ವ ಆಟ ಪ್ರದರ್ಶಿಸಿದ ಆರ್‌ಸಿಬಿ ಚಿನ್ನಸ್ವಾಮಿಯ ಸೂಪರ್ ಸಂಡೇ ಕದನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್ ಜಯಭೇರಿ ಬಾರಿಸಿದೆ. ಸತತ 5, ಒಟ್ಟಾರೆ 6 ಗೆಲುವಿನೊಂದಿಗೆ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದು, ನೆಟ್ ರನ್‌ರೇಟನ್ನೂ ಸಾಕಷ್ಟು ಹೆಚ್ಚಿಸಿಕೊಂಡು ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಅತ್ತ ಡೆಲ್ಲಿ 13ರಲ್ಲಿ 7ನೇ ಸೋಲು ಕಂಡಿದ್ದು, ಪ್ಲೇ-ಆಫ್ ರೇಸ್‌ನಲ್ಲಿ ಹಿಂದಕ್ಕೆ ಬಿದ್ದಿದೆ.
RCBಗೆ 5ನೇ ದಿಗ್ವಿಜಯ; ಚೆನ್ನೈ ಎದುರು ಕೇವಲ ಇಷ್ಟು ರನ್ ಅಂತರದಲ್ಲಿ ಗೆದ್ರೆ ಬೆಂಗಳೂರು ಪ್ಲೇ ಆಫ್ ಫಿಕ್ಸ್..!
ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಉತ್ತಮ ಆರಂಭದ ಹೊರತಾಗಿಯೂ ಕಲೆಹಾಕಿದ್ದು 9 ವಿಕೆಟ್‌ಗೆ 187 ರನ್. ಚಿನ್ನಸ್ವಾಮಿಯಲ್ಲಿ ಈ ಮೊತ್ತ ಯಾವುದೇ ತಂಡಕ್ಕೂ ಚೇಸ್ ಮಾಡಬಹುದಾದ ಮೊತ್ತ. ಆದರೆ ಆರ್‌ಸಿಬಿಯ ಅನಿರೀಕ್ಷಿತ ಬೆಂಕಿ ಬೌಲಿಂಗ್ ದಾಳಿ ಡೆಲ್ಲಿಯನ್ನು ಕಂಗೆಟ್ಟಿಸಿತು. ಫೀಲ್ಡಿಂಗ್ ಕೂಡ ಅಮೋಘವಾಗಿದ್ದ ಕಾರಣ ಡೆಲ್ಲಿ 19.1 ಓವರಲ್ಲಿ ಆಲೌಟ್ ಆಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.