ADITYA-L1: ಭೂಮಿಯ ಕಕ್ಷೆಯಲ್ಲಿ 16 ದಿನ ಇರಲಿದೆ ಆದಿತ್ಯ, ಆ ಬಳಿಕ ಸೂರ್ಯನತ್ತ!

By Santosh NaikFirst Published Sep 2, 2023, 10:58 AM IST
Highlights

ಆದಿತ್ಯ ಎಲ್‌1 ಮಿಷನ್‌ ಕುರಿತಾಗಿ ಇಸ್ರೋ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಸೂರ್ಯನ ಅಧ್ಯಯನಕ್ಕಾಗಿ ಕಳಿಸಲಿರುವ ಈ ಸೌರ ವೀಕ್ಷಣಾಲಯ ಭೂಮಿ ಹಾಗೂ ಸೂರ್ಯ ನಡುವಿನ ಅಂತರದ ಶೇ.1ರಷ್ಟು ಮಾತ್ರವೇ ಕ್ರಮಿಸಲಿದೆ ಎಂದು ತಿಳಿಸಿದೆ.
 

ಬೆಂಗಳೂರು (ಸೆ.2): ಚಂದ್ರಯಾನ-3 ದೊಡ್ಡಮಟ್ಟದ ಯಶಸ್ಸಿನ ಬಳಿಕ ಇಸ್ರೋ ಮಹತ್ವದ ಯೋಜನೆಯಾದ ಸೂರ್ಯಯಾನಕ್ಕೆ ಸಿದ್ಧವಾಗಿದೆ. ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಕಳಿಸಲಿರುವ ಭಾರತದ ಮೊಟ್ಟಮೊದಲ ಸೌರ ವೀಕ್ಷಣಾಲಯ ಆದಿತ್ಯ ಎಲ್‌ 1 ಶನಿವಾರ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದ 2ನೇ ಲ್ಯಾಂಚ್‌ಪ್ಯಾಡ್‌ನಿಂದ 11.50ಕ್ಕೆ ನಭಕ್ಕೆ ಹಾರಲಿದೆ. ಇದರ ನಡುವೆ ಆದಿತ್ಯ ಎಲ್‌-1 ಮಿಷನ್‌ನ ಪ್ರಮುಖ ಘಟ್ಟಗಳನ್ನು ಇಸ್ರೋ ತಿಳಿಸಿದೆ. ಆದಿತ್ಯ ಎಲ್‌1 ಸೌರ ವೀಕ್ಷಣಾಲಯವು ಭೂಮಿಯಿಂದ ಸರಿಸುಮಾರು 15 ಲಕ್ಷ ಕಿಲೋಮೀಟರ್‌ ದೂರದಲ್ಲಿಯೇ ಉಳಿಯುತ್ತದೆ. ಇದು ಬಾಹ್ಯಾಕಾಶದಲ್ಲಿ ಭಾರತದ ನೌಕೆಯೊಂದು ಪ್ರಯಾಣಿಸಲಿರುವ ಅತ್ಯಂತ ದೂರದ ಅಂತರವಾಗಿದೆ. ಹಾಗಿದ್ದರೂ, ಆದಿತ್ಯ ಎಲ್‌1 ಭೂಮಿ ಹಾಗೂ ಸೂರ್ಯನ ನಡುವಿನ ಅಂತರದ ಶೇ.1ರಷ್ಟು ಮಾತ್ರವೇ ಕ್ರಮಿಸಿದೆ. ಸೂರ್ಯ ಅನಿಲದ ದೈತ್ಯ ಗೋಳವಾಗಿದೆ. ಆದಿತ್ಯ ಎಲ್‌ 1 ಸೂರ್ಯ ಹೊರಗಿನ ವಾತಾವರಣವನ್ನು ಮಾತ್ರವೇ ಅಧ್ಯಯನ ಮಾಡುತ್ತದೆ.  ಆದಿತ್ಯ ಎಲ್‌-1 ಸೂರ್ಯನ ಮೇಲೆ ಇಳಿಯುವುದಿಲ್ಲ ಅಥವಾ ಸೂರ್ಯ ಅತೀ ಸಮೀಪ ಕೂಡ ಹೋಗೋದಿಲ್ಲ ಎಂದು ಮಾಹಿತಿ ನೀಡಿದೆ.

ಆದಿತ್ಯ-ಎಲ್1 ಎನ್ನುವುದು ಸೂರ್ಯನ ಸಮಗ್ರ ಅಧ್ಯಯನಕ್ಕೆ ಮೀಸಲಾದ ಉಪಗ್ರಹವಾಗಿದೆ. ಇದರಲ್ಲಿ ಏಳು ವಿಭಿನ್ನ ಪೇಲೋಡ್‌ಗಳನ್ನು ಇರಿಸಲಾಗಿದೆ. ಎಲ್ಲಾ ಪೇಲೋಡ್‌ಗಳು ಕೂಡ ಸ್ಥಳೀಯವಾಗಿ ಅಭಿವೃದ್ಧಿ ಮಾಡಲಾಗಿದೆ. ನೇರವಾಗಿ ಇಸ್ರೋ ಐದು ಪೇಲೋಡ್‌ಗಳನ್ನು ಅಭಿವೃದ್ಧಿ ಮಾಡಿದ್ದರೆ, ಇಸ್ರೋದ ಸಹಯೋಗದೊಂದಿಗೆ ಭಾರತೀಯ ಶೈಕ್ಷಣಿಕ ಸಂಸ್ಥೆಗಳಿಂದ ಎರಡು ಪೇಲೋಡ್‌ಗಳನ್ನು ಅಭಿವೃದ್ಧಿ ಮಾಡಲಾಗಿದೆ.

ಸಂಸ್ಕೃತದಲ್ಲಿ ಆದಿತ್ಯ ಎಂದರೆ ಸೂರ್ಯ. ಎಲ್‌1 ಎನ್ನುವುದು ಸೂರ್ಯ ಹಾಗೂ ಭೂಮಿಯ ನಡುವಿನ ಲಾಂಗ್ರೇಜ್ ಪಾಯಿಂಟ್‌ 1 ಎನ್ನುವುದನ್ನು ಸೂಚಿಸುತ್ತದೆ. ಲಾಂಗ್ರೇಜ್‌ ಪಾಯಿಂಟ್‌ ಎನ್ನುವುದು ಬಾಹ್ಯಾಕಾಶದಲ್ಲಿಯೇ ಇರುವ ಒಂದು ಸ್ಥಳ. ಭೂಮಿ ಮತ್ತು ಸೂರ್ಯ ಮಾತ್ರವಲ್ಲ, ಭೂಮಿ ಮತ್ತು ಇತರ ಆಕಾಶಕಾಯಗಳ ಗುರುತ್ವಾಕರ್ಷಣೆಯ ಬಲಗಳು ಕೂಡ ಸಮತೋಲದಲ್ಲಿ ಇರುತ್ತದೆ. ಇಲ್ಲಿ ನೌಕೆ ನಿಯೋಜಿಸಿದರೆ ಸೂರ್ಯನನ್ನು ಗ್ರಹಣದಂಥ ಯಾವುದೇ ಅಡ್ಡಿ ಆತಂಕಗಳು ಇಲ್ಲದೇ ಸತತವಾಗಿ ನೇರವಾಗಿ ವೀಕ್ಷಣೆ ಮಾಡಲು ಸಾಧ್ಯ. ಇದು ಹೆಚ್ಚಿನ ಇಂಧನ ವ್ಯರ್ಥಮಾಡದೇ ಸುದೀರ್ಘ ಕಾಲ ನೌಕೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಭೂಮಿ ಹಾಗೂ ಚಂದ್ರನ ನಡುವೆಯೂ ಕೂಡ ಇಂಥದ್ದೊಂದು ಪಾಯಿಂಟ್‌ ಇದೆ.

ಇಂದು ಉಡಾವಣೆಗೊಳ್ಳುವ ಆದಿತ್ಯ ಎಲ್‌ 1 ನೌಕೆ 16 ದಿನಗಳ ಕಾಲ ಭೂಮಿ ಕಕ್ಷೆಯಲ್ಲಿ ಇರುತ್ತದೆ. ಈ ಹಂತದಲ್ಲಿ ಭೂಮಿಯ ಸುತ್ತ ಐದು ಕ್ಷಕೆ ಏರಿಸುವ ಭ್ರಮಣೆಗೆ ಆದಿತ್ಯ ಎಲ್‌ 1 ಒಳಗಾಗಲಿದೆ. ಅದಾದ ಬಳಿಕ ಆದಿತ್ಯ ಎಲ್‌1 ಟ್ರಾನ್ಸ್‌ ಲಂಗ್ರಾಂಜಿಯನ್‌ 1 ಕಕ್ಷೆಗೆ ಸೇರಿಸುವ ಕೆಲಸವನ್ನು ಮಾಡಲಾಗುತ್ತದೆ. ಅಲ್ಲಿಂದ ಲಾಂಗ್ರೇಜ್‌ 1 ಪಾಯಿಂಟ್‌ನ ಗಮ್ಯಸ್ಥಾನಕ್ಕೆ ತಲುಪುವ 110 ದಿನಗಳ ಜರ್ನಿ ಆರಂಭವಾಗಲಿದೆ.  L1 ಪಾಯಿಂಟ್‌ಗೆ ಬಂದ ನಂತರ, ಮತ್ತೊಂದು ಕ್ಷಕ್ಷೆ ಏರಿಸುವ ಕೆಲಸದೊಂದಿಗೆ ಆದಿತ್ಯ-L1 ಅನ್ನು L1 ಸುತ್ತ ಕಕ್ಷೆಗೆ ಬಂಧಿಸುತ್ತದೆ, ಇದು ಭೂಮಿ ಮತ್ತು ಸೂರ್ಯನ ನಡುವಿನ ಸಮತೋಲಿತ ಗುರುತ್ವಾಕರ್ಷಣೆಯ ಸ್ಥಳವಾಗಿದೆ. ಉಪಗ್ರಹವು ಭೂಮಿ ಮತ್ತು ಸೂರ್ಯನನ್ನು ಸೇರುವ ರೇಖೆಗೆ ಸರಿಸುಮಾರು ಲಂಬವಾಗಿರುವ ಸಮತಲದಲ್ಲಿ ಅನಿಯಮಿತ ಆಕಾರದ ಕಕ್ಷೆಯಲ್ಲಿ L1 ಸುತ್ತ ಸುತ್ತುವ ತನ್ನ ಸಂಪೂರ್ಣ ಕಾರ್ಯಾಚರಣೆಯ ಜೀವನವನ್ನು ಕಳೆಯುತ್ತದೆ.

ಸೂರ್ಯನತ್ತ ‘ಆದಿತ್ಯ ಎಲ್-1’ ಉಡಾವಣೆಗೆ ಕ್ಷಣಗಣನೆ: ಶ್ರೀಹರಿಕೋಟಾದಿಂದ ರಾಕೆಟ್ ಉಡ್ಡಯನ

ಎಲ್‌ 1 ಪಾಯಿಂಟ್‌ನಲ್ಲಿ ಆದಿತ್ಯ ಎಲ್‌1 ನಿಯೋಜನೆ ಮಾಡುವುದರಿಂದ ಯಾವುದೇ ಅಡೆತಡೆಯಿಲ್ಲದೆ ಸೂರ್ಯನನ್ನು ನೋಡಲು ಸಾಧ್ಯವಾಗುತ್ತದೆ. ಈ ಸ್ಥಳವು ಸೌರ ವಿಕಿರಣ ಮತ್ತು ಕಾಂತೀಯ ಬಿರುಗಾಳಿಗಳನ್ನು ಭೂಮಿಯ ಕಾಂತೀಯ ಕ್ಷೇತ್ರ ಮತ್ತು ವಾತಾವರಣದಿಂದ ಪ್ರಭಾವಿಸುವ ಮೊದಲು ಉಪಗ್ರಹವನ್ನು ಪ್ರವೇಶಿಸಲು ಅನುಮತಿಸುತ್ತದೆ. ಅದರೊಂದಿಗೆ L1 ಪಾಯಿಂಟ್‌ನ ಗುರುತ್ವಾಕರ್ಷಣೆಯ ಸ್ಥಿರತೆಯು ಆಗಾಗ್ಗೆ ಕಕ್ಷೆಯ ನಿರ್ವಹಣೆಯ ಪ್ರಯತ್ನಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ, ಉಪಗ್ರಹದ ಕಾರ್ಯಾಚರಣೆಯ ಸಾಮರ್ಥ್ಯವನ್ನು ಉತ್ತಮಗೊಳಿಸುತ್ತದೆ. ನೌಕೆಗಳಲ್ಲಿನ 7 ಪೇಲೋಡ್‌ (ಉಪಕರಣ) ಮೂಲಕ ಫೋಟೋಸ್ಪಿಯರ್‌, ಕ್ರೋಮೋಸ್ಪಿಯರ್‌ ಮತ್ತು ಸೂರ್ಯನ ಹೊರವಲಯ (ಕರೋನಾ)ವನ್ನು ಎಲೆಕ್ಟ್ರೋಮ್ಯಾಗ್ನೆಟಿಕ್‌, ಪಾರ್ಟಿಕಲ್‌ ಮತ್ತು ಮ್ಯಾಗ್ನೆಟಿಕ್‌ ಫೀಲ್ಡ್‌ ಡಿಟೆಕ್ಟರ್‌ಗಳ ಮೂಲಕ ಅಧ್ಯಯನ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

Aditya-L1: ನಾವೆಲ್ಲಾ ಅಚ್ಚರಿಪಡುವಷ್ಟು ಸೂರ್ಯನ ಚಿತ್ರಗಳನ್ನು ಒಂದೇ ದಿನ ಕಳಿಸಲಿದೆ ಆದಿತ್ಯ!

click me!