Chandrayaan 3 Updates: ತಮಿಳುನಾಡಿನ ಈ ಗ್ರಾಮದ ಮಣ್ಣಿಗೂ, ವಿಕ್ರಮ್‌ ಲ್ಯಾಂಡರ್‌-ರೋವರ್‌ಗೂ ಇದೆ ಸಂಬಂಧ!

By Santosh Naik  |  First Published Aug 23, 2023, 11:48 AM IST

chandrayaan 3 landing: ಚಂದ್ರಯಾನ-3 ಯೋಜನೆಯ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ ಇಂದು ಚಂದ್ರಸ್ಪರ್ಶ ಮಾಡಲಿದೆ. ಆದರೆ, ಇದಕ್ಕಾಗಿ ಇಸ್ರೋ ನಡೆಸಿದ ಸಿದ್ಧತೆ ಹೇಗಿತ್ತು ಎನ್ನುವುದು ವಿವರ ಇಲ್ಲಿದೆ. ಚಂದ್ರನ ವಾತಾವರಣ ನಿರ್ಮಾಣಕ್ಕಾಗಿ ತಮಿಳುನಾಡಿನ ಗ್ರಾಮದಿಂದ ಮಣ್ಣನ್ನು ಇಸ್ರೋ ಬಳಸಿಕೊಂಡಿತ್ತು.
 


ಬೆಂಗಳೂರು (ಆ.23): ರಾಜಧಾನಿ ಬೆಂಗಳೂರಿನಿಂದ ಬರೀ 255 ಕಿಲೋಮೀಟರ್‌ ದೂರದಲ್ಲಿರುವ ತಮಿಳುನಾಡಿನ ನಮಕ್ಕಲ್‌ ಜಿಲ್ಲೆಯ ಎರಡು ಗ್ರಾಮಕ್ಕೂ ಚಂದ್ರಯಾನ-3 ಯೋಜನೆಗೂ ಒಂದು ಸಂಬಂಧವಿದೆ. ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ನ ಅಭ್ಯಾಸಕ್ಕಾಗಿ ಇಸ್ರೋ ನಮಕ್ಕಲ್‌ನ ಎರಡು ಗ್ರಾಮದ ಮಣ್ಣನ್ನು ಬಳಸಿಕೊಂಡು, ಚಂದ್ರನ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಇದೇ ಗ್ರಾಮದ ಮಣ್ಣಿನಿಂದ ಚಂದ್ರನ ವಾತಾವರಣ ನಿರ್ಮಾಣ ಮಾಡುವುದರ ಹಿಂದೆ ದೊಡ್ಡ ಕಥೆಯಿದೆ. 2019ರ ಜುಲೈ 22 ರಂದು ಭಾರತ ತನ್ನ ಚಂದ್ರಯಾನ-2 ಪ್ರಾಜೆಕ್ಟ್‌ಅನ್ನು ನಭಕ್ಕೆ ಹಾರಿಸಿತ್ತು. ಆಗಲೂ ಕೂಡ ಚಂದ್ರನ ದಕ್ಷಿಣ ಧ್ರುವ ಮುಟ್ಟುವದು ಭಾರತದ ಗುರಿಯಾಗಿತ್ತು. ಅದೇ ವರ್ಷದ ಸೆಪ್ಟೆಂಬರ್‌ 6 ರಂದು ಆರ್ಬಿಟರ್‌ ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿತ್ತು. ಆದರೆ, ಚಂದ್ರನ ಸ್ಪರ್ಶದಿಂದ 2.1 ಕಿಲೋಮೀಟರ್‌ ದೂರವಿರುವಾಗ ವಿಕ್ರಮ್‌ ಸಂಪರ್ಕ ಕಳೆದುಕೊಂಡಿತ್ತು. ಆ ಬಳಿಕ ವಿಕ್ರಮ್‌ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವಕ್ಕೆ ಅಪ್ಪಳಿಸಿದೆ ಎಂದು ಇಸ್ರೋ ತಿಳಿಸಿತ್ತು.

ಬರೋಬ್ಬರಿ ಮೂರು ತಿಂಗಳ ಕಾಲ ಚಂದ್ರನ ನೆಲದ ಮೇಲೆ ಲ್ಯಾಂಡರ್‌ಗಾಗಿ ಇಸ್ರೋ ಹುಡುಕಾಟ ನಡೆಸಿತ್ತು. ಕೊನೆಗೆ ನಾಸಾದ ಎಲ್‌ಆರ್‌ಓಸಿ (ಲೂನಾರ್‌ ರೆಕೊನೆಸೆನ್ಸ್‌ ಆರ್ಬಿಟರ್‌) ಈ ಲ್ಯಾಂಡರ್‌ಅನ್ನು ಪತ್ತೆ ಮಾಡಿತ್ತು. ಲ್ಯಾಂಡರ್‌ ಸಾಫ್ಟ್‌ ಆಗಿ ಲ್ಯಾಂಡ್‌ ಆಗದ ಕಾರಣ ಅದರ ಒಳಗಿದ್ದ ರೋವರ್‌ ಕೂಡ ಬ್ಲಾಸ್ಟ್‌ ಆಗಿತ್ತು. ಹಾಗಂತ ಈ ಯೋಜನೆ ಸಂಪೂರ್ಣ ವಿಫಲವಾಗಿರಲಿಲ್ಲ. ಯಾಕೆಂದರೆ, ಭಾರತ ಯಶಸ್ವಿಯಾಗಿ ಆರ್ಬಿಟರ್‌ಅನ್ನು ಚಂದ್ರನ ಕಕ್ಷೆಗೆ ಸೇರಿಸಿತ್ತು. ಈಗ ಚಂದ್ರಯಾನ-3 ಪ್ರಾಜೆಕ್ಟ್‌ ಮೂಲಕ ಮತ್ತೊಮ್ಮೆ ದಕ್ಷಿಣ ಧ್ರುವಕ್ಕೆ ಇಳಿಯುವ ಪ್ರಯತ್ನ ಮಾಡುತ್ತಿದೆ. ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ಅನ್ನು ಚಂದ್ರನ ಮೇಲೆ ಇಳಿಸಲಿದೆ. ಈ ಯೋಜನೆಯಲ್ಲಿ ಇಸ್ರೋ ಆರ್ಬಿಟರ್‌ಅನ್ನು ಸೇರಿಸಿಲ್ಲ. ಅದರ ಬದಲಾಗಿ, ಪ್ರಪಲ್ಶನ್‌ ಹೆಸರಿನ ಪ್ರಪಲ್ಶನ್‌ ಮಾಡ್ಯುಲ್‌ಅನ್ನು ಸೇರಿಸಿತ್ತು. ಇದು ಚಂದ್ರನ ಕಕ್ಷೆಯ ವರೆಗೆ ಲ್ಯಾಂಡರ್‌ ಹಾಗೂ ರೋವರ್‌ ಅನ್ನು ತಲುಪಿಸಿತ್ತು.

ನಮಕ್ಕಲ್‌ ಗ್ರಾಮ: ಚಂದ್ರಯಾನ 3 ಯೋಜನೆಯ ರೋವರ್ ಮತ್ತು ಲ್ಯಾಂಡರ್‌ಗೆ ಇಲ್ಲಿನ ಇಸ್ರೋ ಸಂಶೋಧನಾ ಕೇಂದ್ರಗಳಲ್ಲಿ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ತರಬೇತಿ ನೀಡಲಾಗಿತ್ತು. ಈ ಎರಡನ್ನೂ ಚಂದ್ರನ ಮೇಲೆ ಇಳಿಸುವ ನಿಟ್ಟಿನಲ್ಲಿ ಭೂಮಿಯ ಮೇಲೆ ಪರೀಕ್ಷಿಸಲಾಯಿತು. ಹೀಗಾಗಿ ಇಸ್ರೋ ಭೂಮಿಯಲ್ಲಿ ಚಂದ್ರನಂಥ ವಾತಾವರಣ ನಿರ್ಮಿಸಿ ಸಂಶೋಧನಾ ಪ್ರಯೋಗಾಲಯದಲ್ಲಿ ಸಂಶೋಧನೆ ನಡೆಸಿತು. ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನಂತೆಯೇ ಗುರುತ್ವಾಕರ್ಷಣೆಯೊಂದಿಗೆ ಸಂಶೋಧನಾ ಪ್ರಯೋಗಾಲಯದಲ್ಲಿ ಇರುವ ಅನಿಲಗಳನ್ನು ಮಾತ್ರ ಬಳಸಿ ಸರಿಯಾಗಿ ಇಳಿಯುತ್ತದೆಯೇ ಎಂದು ಪರೀಕ್ಷಿಸಲಾಯಿತು. ಇದಕ್ಕಾಗಿ ಚಂದ್ರನಲ್ಲಿರುವಂತೆ ನೆಲ ಮತ್ತು ಮಣ್ಣನ್ನು ಬಳಸಲಾಗಿದೆ.

ಮಣ್ಣು ಯಾಕೆ ಮುಖ್ಯ: ಲ್ಯಾಂಡರ್‌ ಇಳಿಯುವಾಗ ಚಂದ್ರನ ಮಣ್ಣು ಧೂಳಿನ ರೀತಿ ಆಗುತ್ತದೆ. ಇದು ನೌಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇರುತ್ತದೆ. ಚಂದ್ರಯಾನ-1ರ ಸಮಯದಲ್ಲಿ ಇಸ್ರೋ, ನಾಸಾದಿಂದ ಚಂದ್ರನ ಮಣ್ಣನ್ನು ಖರೀದಿ ಮಾಡಿತ್ತು. ಅಂದು 10 ಕೆಜಿ ಮಣ್ಣಿ ಖರೀದಿ ಮಾಡಿದ್ದ ಇಸ್ರೋ ಪ್ರತಿ ಕೆಜಿ ಮಣ್ಣಿಗೆ 150 ಡಾಲರ್‌ ನೀಡಿತ್ತು. ಆದರೆ, ಚಂದ್ರಯಾನ-2 ಯೋಜನೆಯ ವೇಳೆ 60 ಕೆಜಿಯ ಮಣ್ಣು ಅಗತ್ಯವಿತ್ತು. ಬಜೆಟ್‌ನ ಕಾರಣದಿಂದಾಗಿ ಇಸ್ರೋ, ನಾಸಾದಿಂದ ಮಣ್ಣನ್ನು ಖರೀದಿ ಮಾಡಿರಲಿಲ್ಲ. ಈ ಹಂತದಲ್ಲಿ ಚಂದ್ರನಲ್ಲಿರುವ ಮಣ್ಣನ್ನೇ ಹೊಂದಿರುವ ಊರಿನ ಹುಡುಕಾಟದಲ್ಲಿದ್ದಾಗ ಸಿಕ್ಕಿದ್ದು ನಮಕ್ಕಲ್‌ನ ಎರಡು ಗ್ರಾಮಗಳು. ಇದೇ ಮಣ್ಣನ್ನು ಇಸ್ರೋ ಚಂದ್ರಯಾನ-3ಯ ಲ್ಯಾಂಡರ್‌ ಹಾಗೂ ರೋವರ್‌ನ ಪರೀಕ್ಷೆಗಾಗಿ ಬಳಸಿದೆ. ನಮಕ್ಕಲ್‌ನ ಚಿತ್ತಂಬೂಂಡಿ ಮತ್ತು ಗುನ್ನಾಮಲೈ ಗ್ರಾಮಗಳ ಕಲ್ಲು-ಮಣ್ಣು ಹೆಚ್ಚೂ ಕಡಿಮೆ ಚಂದ್ರನಲ್ಲಿರುವ ಮಣ್ಣನ್ನೇ ಹೋಲುತ್ತದೆ. ಇಲ್ಲಿ ಕಲ್ಲುಗಳನ್ನು ತೆಗೆದುಕೊಳ್ಳುವ ಇಸ್ರೋ, ಸೇಲಂನಲ್ಲಿರುವ ಕಾರ್ಖಾನೆಯಲ್ಲಿ ಪೌಡರ್ ಮಾಡಲಾಗುತ್ತದೆ. ಬಳಿಕ ಇದನ್ನು ಸಂಶೋಧನಾ ಕೇಂದ್ರದಲ್ಲಿ ಹರಡಿ ಲ್ಯಾಂಡರ್‌-ರೋವರ್‌ನ ಪರೀಕ್ಷೆ ಮಾಡಲಾಗಿತ್ತು.

Latest Videos

undefined

Chandrayaan-3: ಬಾಹ್ಯಾಕಾಶದ ಕತ್ತಲಲೋಕದ ಬಗ್ಗೆ ನೀವು ಮಿಸ್‌ ಮಾಡದೇ ನೋಡಬೇಕಾದ ಸಿನಿಮಾಗಳು!

ಚಂದ್ರನ ವಾತಾವರಣವನ್ನು ಸೃಷ್ಟಿಸಲು ಇಸ್ರೋ ಇಲ್ಲಿನ ಮಣ್ಣನ್ನು ತೆಗೆದುಕೊಂಡಿದೆ. ಪ್ರಸ್ತುತ ಚಂದ್ರಯಾನ 3 ಉಡಾವಣೆಯಾಗುತ್ತಿದೆ ಮತ್ತು ಇದರಲ್ಲಿ ಮಾಡಿದ ಪರೀಕ್ಷೆಗಳ ಆಧಾರದ ಮೇಲೆ ಚಂದ್ರನ ಮೇಲೆ ಇಳಿಯಲಿದೆ. ಇದಕ್ಕಾಗಿ ಎರಡು ಗ್ರಾಮಸ್ಥರು ಒಂದು ರೂಪಾಯಿ ಕೂಡ ಪಡೆದುಕೊಂಡಿಲ್ಲ. ಚಂದ್ರಯಾನ 3 ಕ್ಕೆ ಸಹಾಯ ಮಾಡಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಎಲ್ಲಾ ಶಾಲೆಗಳಲ್ಲಿ ಚಂದ್ರಯಾನ-3 ಲ್ಯಾಂಡಿಂಗ್‌ನ ನೇರಪ್ರಸಾರ!

click me!