ಥಿಯೇಟರ್ ತೆರೆಯಲಿ, ಬದುಕು ಉಳಿಯಲಿ: ಚಿತ್ರರಂಗದ ಗಣ್ಯರು ಏನಂತಾರೆ.?

By Kannadaprabha NewsFirst Published Sep 16, 2020, 11:00 AM IST
Highlights

ಅಕ್ಟೋಬರ್‌ನಲ್ಲಿ ಚಿತ್ರಮಂದಿರಗಳು ತೆರೆಯುತ್ತವೆ ಎಂಬ ಮಾಹಿತಿ ಇತ್ತಾದರೂ ಈಗ ಅಕ್ಟೋಬರ್‌ನಲ್ಲಿ ಥೇಟರ್‌ ಬಾಗಿಲು ತೆರೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಸುಮಾರು 10 ಸಾವಿರ ಮಂದಿ ತಂತ್ರಜ್ಞರ ಮತ್ತು ಚಿತ್ರರಂಗಕ್ಕೆ ಸಂಬಂಧಿಸಿದ ಸಾವಿರಾರು ಮಂದಿಯ ಬದುಕಿನ ಪ್ರಶ್ನೆಯ ಕಾರಣ ಚಿತ್ರರಂಗದ ಮಂದಿ ಚಿತ್ರಮಂದಿರ ತೆರೆಯಬೇಕು ಎಂಬ ಆಶಯ ವ್ಯಕ್ತಪಡಿಸುತ್ತಾರೆ.

ಕೊರೋನಾ ಸೆಕೆಂಡ್‌ ವೇವ್‌ ಆರಂಭಗೊಂಡಿದೆ. ದೇಶಾದ್ಯಾಂತ ಕೋವಿಡ್‌-19 ಪಾಸಿಟಿವ್‌ ಪ್ರಕರಣಗಳು ಒಂದು ಲಕ್ಷ ಮುಟ್ಟುತ್ತಿವೆ. ಇಂಥಾ ಸಂದರ್ಭದಲ್ಲಿ ಚಿತ್ರರಂಗದ ಮುಂದಿನ ದಾರಿ ಏನು ಎಂಬುದು ಎಲ್ಲರ ಚಿಂತೆ. ಅಕ್ಟೋಬರ್‌ನಲ್ಲಿ ಚಿತ್ರಮಂದಿರಗಳು ತೆರೆಯುತ್ತವೆ ಎಂಬ ಮಾಹಿತಿ ಇತ್ತಾದರೂ ಈಗ ಅಕ್ಟೋಬರ್‌ನಲ್ಲಿ ಥೇಟರ್‌ ಬಾಗಿಲು ತೆರೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಸುಮಾರು 10 ಸಾವಿರ ಮಂದಿ ತಂತ್ರಜ್ಞರ ಮತ್ತು ಚಿತ್ರರಂಗಕ್ಕೆ ಸಂಬಂಧಿಸಿದ ಸಾವಿರಾರು ಮಂದಿಯ ಬದುಕಿನ ಪ್ರಶ್ನೆಯ ಕಾರಣ ಚಿತ್ರರಂಗದ ಮಂದಿ ಚಿತ್ರಮಂದಿರ ತೆರೆಯಬೇಕು ಎಂಬ ಆಶಯ ವ್ಯಕ್ತಪಡಿಸುತ್ತಾರೆ.

ಕೊರೋನಾ ಸೆಕೆಂಡ್‌ ವೇವ್‌ ಆತಂಕವಿದೆಯೇ?

ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಲಾಕ್‌ಡೌನ್‌ ಆರಂಭವಾಗಲಿದೆಯೇ ಎನ್ನುವ ಆತಂಕ ಚಿತ್ರರಂಗದಲ್ಲೂ ಶುರುವಾಗಿದೆ. ‘ಅ.1 ರಿಂದ ಚಿತ್ರಮಂದಿರಗಳು ಶುರುವಾಗುತ್ತವೆ ಎಂದಿರುವುದು ಸುಳ್ಳು. ಯಾಕೆಂದರೆ ಇನ್ನೂ ನಮಗೆ ಮಾರ್ಗದರ್ಶನ ಸೂತ್ರಗಳೇ ಬಂದಿಲ್ಲ. ಚಿತ್ರಮಂದಿರ ಆರಂಭಿಸಿ ಎಂದ ಕೂಡಲೇ ಬಾಗಿಲು ತೆರೆಯಲು ಆಗಲ್ಲ. ಕನಿಷ್ಠ 15 ದಿನ ತಯಾರಿಗೇ ಬೇಕು.

ಬೇತಾಳಕ್ಕೆ ಜೀವ ಬಂತು: 3 ವರ್ಷದ ಹಿಂದಿನ ಚಿತ್ರ ಕ್ಲೈಮ್ಯಾಕ್ಸ್‌ಗೆ

ಜತೆಗೆ ಇಂತಿಷ್ಟೆಪ್ರೇಕ್ಷಕರಿಗೆ ಪ್ರವೇಶ ಎನ್ನುವ ನೀತಿಯಿಂದ ಚಿತ್ರಮಂದಿರಗಳಿಗೆ ಚಾಲನೆ ಕೊಡಲಾಗದು. ನಾವು ಇನ್ನೂ ಕೂಡ ಕೇಂದ್ರ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದೇವೆ. ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಬೇರೆ ಬೇರೆ ದೇಶಗಳಲ್ಲಿ ಮತ್ತೆ ಲಾಕ್‌ಡೌನ್‌ ಶುರುವಾಗಿದೆ. ಹೀಗಾಗಿ ದೇಶದಲ್ಲೂ ಮತ್ತೆ ಲಾಕ್‌ಡೌನ್‌ ವಿಧಿಸುತ್ತಾರೆಯೇ ಎನ್ನುವ ಆತಂಕದಲ್ಲಿದ್ದೇವೆ. ಅದೇ ಕಾರಣಕ್ಕೆ ಚಿತ್ರಮಂದಿರಗಳ ಆರಂಭಕ್ಕೂ ಆದೇಶ ನೀಡುತ್ತಿಲ್ಲ ಎಂಬುದು ನಮ್ಮ ಅನಿಸಿಕೆ. ಒಟ್ಟಿನಲ್ಲಿ ಕೊರೋನಾ ಸೆಕೆಂಡ್‌ ವೇವ್‌ ಭಯ ಅಂತೂ ಇದೆ’ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ ಕುಮಾರ್‌.

ಚಿತ್ರರಂಗದ ಮಂದಿಯ ಅಭಿಪ್ರಾಯಗಳು

ಮತ್ತೆ ಲಾಕ್‌ಡೌನ್‌ ಬೇಡ

ಕೊರೋನಾ ಪ್ರಕರಣಗಳು ಹೆಚ್ಚಾಗಿ ಮತ್ತೆ ಲಾಕ್‌ಡೌನ್‌ ಶುರುವಾದರೆ ಕೊನೆಯ ಹಿಡಿ ಮಣ್ಣು ಹಾಕಿದಂತೆ ಆಗುತ್ತದೆ. ಕೊನೆ ಜೀವದ ಗುಟುಕು ಎನ್ನುವುದು ನನ್ನ ಅಭಿಪ್ರಾಯ. ಚಿತ್ರಮಂದಿರಗಳು ಆರಂಭವಾಗಿ ಸ್ಟಾರ್‌ ನಟರ ಚಿತ್ರಗಳಿಗೆ ಪ್ರೇಕ್ಷಕರು ಬರುತ್ತಾರೆ. ಆ ಮೂಲಕ ಮತ್ತೆ ಚಿತ್ರರಂಗ ಚೇತರಿಕೆ ಕಾಣುತ್ತದೆ ಎನ್ನುವ ಭರವಸೆಯಲ್ಲಿ ಇದ್ವಿ. ಆದರೆ, ಕೊರೋನಾ ಪ್ರಕರಣಗಳು ಕಡಿಮೆ ಆಗುತ್ತಿಲ್ಲ ಎಂಬುದು ನಿಜ. ಆದರೆ, ಲಾಕ್‌ಡೌನ್‌ ಆದರೆ ನಮ್ಮ ಮುಂದೆ ದಾರಿ ಇಲ್ಲ. ಸಮಾಜದಲ್ಲಿ ಕೊರೋನಾ ಭಯ ಹೋಗಿದೆ. ಹೀಗಾಗಿ ಭಯಕ್ಕಿಂತ ಹೆಚ್ಚಾಗಿ ಸವಾಲು ಇದ್ದವು. ಈಗ ಕೊರೋನಾ ಸೆಕೆಂಡ್‌ ವೇವ್‌, ಮತ್ತೆ ಲಾಕ್‌ಡೌನ್‌ ಎಂದರೆ ಬದುಕು ಬ್ಲಾಂಕ್‌ ಆಗುತ್ತದೆ ಅಷ್ಟೆ ಎನ್ನುತ್ತಾರೆ ಕರ್ನಾಟಕ ಚಲನ ಚಿತ್ರ ನಿರ್ದೇಶಕ ಸಂಘ ಅಧ್ಯಕ್ಷ ಟೇಶಿ ವೆಂಟಕೇಶ್‌.

ಜನರಿಗೂ ಮನರಂಜನೆ ಬೇಕಿದೆ

ಸ್ಯಾಂಡಲ್‌ವುಡ್‌ ಸೇರಿ ಭಾರತೀಯ ಚಿತ್ರರಂಗ ಈಗ ಕೇಂದ್ರದ ಕಡೆಗೆ ನೋಡುತ್ತಿದೆ. ಶೂಟಿಂಗ್‌ಗೆ ಅನುಮತಿ ನೀಡಿದ್ದರೂ ಮುಖ್ಯವಾಗಿ ಥಿಯೇಟರ್‌ ಬಾಗಿಲು ತೆರೆಸಬೇಕು. ಇಲ್ಲದೇ ಇದ್ದರೆ ಇಂಡಸ್ಟ್ರಿ ಮುಂದೆ ಸಾಗಲು ಸಾಧ್ಯವಿಲ್ಲ. ಒಂದು ಚಿತ್ರ ಬಿಡುಗಡೆ ಆದರೆ ಅಲ್ಲವೇ ಮತ್ತೊಂದು ಚಿತ್ರ ಸೆಟ್ಟೇರಲು ಸಾಧ್ಯ. ನಿರ್ಮಾಪಕರು ಹೆದರುತ್ತಿದ್ದಾರೆ. ಉತ್ಸಾಹ ಇದ್ದರೂ ಹೊಸ ಸಿನಿಮಾ ಮಾಡಲು ಆಗುತ್ತಿಲ್ಲ. ಹಾಗಾಗಿ ಈಗ ಚಿತ್ರರಂಗದ ದೃಷ್ಟಿಯಿಂದ ಕೇಂದ್ರ ಸರ್ಕಾರವೇ ಕೇಂದ್ರಬಿಂದು. ಬಾರ್‌, ಹೋಟೆಲ್‌ ಸೇರಿ ಹಲವಾರು ಕ್ಷೇತ್ರಗಳು ಬಾಗಿಲು ತೆರೆದಿವೆ. ಹೀಗಿರುವಾಗ ಸೂಕ್ತ ಸುರಕ್ಷಾ ಕ್ರಮಗಳನ್ನು ಸೂಚಿಸಿ ಥಿಯೇಟರ್‌ಗಳನ್ನು ಓಪನ್‌ ಮಾಡಿಸಿದರೆ ದೊಡ್ಡ ಸಮಸ್ಯೆ ಉಂಟಾಗದು. ಜನಕ್ಕೂ ಈಗ ಮನರಂಜನೆ ಬೇಕಿದೆ. ಹಾಗಾಗಿ ಪ್ರೇಕ್ಷಕ ಮತ್ತು ಇಂಡಸ್ಟ್ರಿ ನಡುವೆ ಇರುವ ಸೇತುವೆಯಾದ ಥಿಯೇಟರ್‌ ಅನ್ನು ಕೇಂದ್ರ ಸರ್ಕಾರ ತೆರೆದು ಮುಂದಿನ ದಾರಿ ಸುಗಮ ಮಾಡಬೇಕು ಎನ್ನುತ್ತಾರೆ ನಟ ದುನಿಯಾ ವಿಜಯ್‌.

ಥಿಯೇಟರ್‌ ತೆರೆಯಲು ಅವಕಾಶ ನೀಡಿ

ಕೊರೋನಾ ಕಡಿಮೆ ಇದ್ದಾಗ ಜನ ಹೆದರಿದ್ದರು, ಲಾಕ್‌ಡೌನ್‌ ಆಗಿತ್ತು. ಆದರೆ ಈಗ ಎಲ್ಲವೂ ನಾರ್ಮಲ್‌ ಆಗುತ್ತಿದೆ. ನಾವೆಲ್ಲಾ ಹೊಂದಿಕೊಂಡು ಹೋಗುತ್ತಿದ್ದೇವೆ. ಸಿನಿಮಾ ಶೂಟಿಂಗ್‌ಗೆ ಅವಕಾಶ ಸಿಕ್ಕ ಮೇಲೆ ನಿಧಾನವಾಗಿ ಇಂಡಸ್ಟ್ರಿಯ ಕೆಲಸ ಕಾರ್ಯಗಳು ಆರಂಭವಾಗಿವೆ. ಬೇರೆ ದೇಶಗಳಲ್ಲೆಲ್ಲಾ ಥಿಯೇಟರ್‌ ಓಪನ್‌ ಆಗಿವೆ. ನಮ್ಮಲ್ಲೂ ಓಪನ್‌ ಆಗಬೇಕು. ನಮ್ಮದೂ ಒಂದು ಉದ್ಯಮ. ಇಲ್ಲಿಯೂ ಲಕ್ಷಾಂತರ ಮಂದಿ ಕೆಲಸ ಮಾಡುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ಥಿಯೇಟರ್‌ ತೆರೆಯಲು ಶೀಘ್ರವೇ ಅವಕಾಶ ನೀಡಬೇಕು. ಅದಾದ ಮೇಲೆ ನಮ್ಮ ಕಡೆಯಿಂದ ಚಿತ್ರ ಬಿಡುಗಡೆಯಾಗುತ್ತದೆ, ಪ್ರೇಕ್ಷಕರ ಕಡೆಯಿಂದ ಪ್ರತಿಕ್ರಿಯೆ ಸಿಕ್ಕುತ್ತದೆ. ಹಾಗೆ ಅವಕಾಶ ‘ರಾಬರ್ಟ್‌’ ಚಿತ್ರ ಥಿಯೇಟರ್‌ಗೆ ಬರುತ್ತದೆ ಎನ್ನುತ್ತಾರೆ ನಿರ್ದೇಶಕ ತರುಣ್‌ ಸುಧೀರ್‌.

ಸೀಮಿತ ಕಾರ್ಯಗಳಷ್ಟೇ ಆಗುತ್ತಿರುವುದು

ಸದ್ಯ ಚಿತ್ರರಂಗ ಒದ್ದಾಟದಲ್ಲಿದೆ. ದಿನಗೂಲಿ ನೌಕರರು ಸಾಕಷ್ಟುಸಮಸ್ಯೆ ಅನುಭವಿಸುತ್ತಿದ್ದಾರೆ. ಚಿತ್ರಕ್ಕಾಗಿ ಕತೆ, ಚಿತ್ರಕತೆ ಮಾಡಿಟ್ಟುಕೊಂಡಿದ್ದರೂ ಏನೂ ಪ್ರಗತಿ ಕಾಣುತ್ತಿಲ್ಲ. ವರ್ಷಕ್ಕೆ 300ಕ್ಕೂ ಅಧಿಕ ಚಿತ್ರಗಳನ್ನು ಮಾಡುತ್ತಿದ್ದ ಇಂಡಸ್ಟ್ರಿ ನಮ್ಮದು. ಒಂದು ಚಿತ್ರದ ಹಿಂದೆಯೇ ಮತ್ತೊಂದು ಚಿತ್ರಗಳನ್ನು ಕೆಲ ನಿರ್ಮಾಪಕರು ಮಾಡುತ್ತಿದ್ದರು. ಈಗ ಶೂಟಿಂಗ್‌ ಪೂರೈಸಿರುವ ಚಿತ್ರವೇ ಬಿಡುಗಡೆ ಆದರೆ ಸಾಕು ಎಂದು ಕೂತಿದ್ದಾರೆ. ಶೂಟಿಂಗ್‌ಗೆ ಅನುಮತಿ ಸಿಕ್ಕಿದ್ದರೂ ಸೀಮಿತವಾದ ಕೆಲಸಗಳಷ್ಟೇ ಆಗುತ್ತಿರುವುದು. ಕೆಲವರು ಒಟಿಟಿಗಾಗಿಯೇ ಸಿನಿಮಾ ಮಾಡುತ್ತಿದ್ದರೂ ಅಲ್ಲಿ ಕನ್ನಡ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಇದೆ. ಇದೆಲ್ಲವನ್ನೂ ನೋಡಿದರೆ ಚಿತ್ರಮಂದಿರ ತೆರೆಯದ ಹೊರತು ಇಂಡಸ್ಟ್ರಿ ಚೇತರಿಕೆಗೆ ಬೇರೆ ಮಾರ್ಗ ಇಲ್ಲ ಎನ್ನಿಸುತ್ತದೆ ಎಂದಿದ್ದಾರೆ ನಿರ್ದೇಶಕ ಸತ್ಯ ಪ್ರಕಾಶ್‌.

ಸಿನಿಮಾ ಸೆಳೆತ ಎಲ್ಲವನ್ನೂ ಸರಿ ಮಾಡುತ್ತೆ

ಒಮ್ಮೆ ಥಿಯೇಟರ್‌ ಓಪನ್‌ ಆಗಿ ಸಿನಿಮಾಗಳು ತೆರೆಯ ಮೇಲೆ ಬಂದ ಮೂರು ನಾಲ್ಕು ತಿಂಗಳ ಒಳಗೆ ಮತ್ತೆ ಎಲ್ಲವೂ ಮೊದಲಿನ ಸ್ಥಿತಿಗೆ ಬಂದೇ ಬರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಜನ ಈಗ ಕೊರೋನಾ ಮರೆತು ಬದುಕಲು ಆರಂಭಿಸಿದ್ದಾರೆ. ಒಟಿಟಿಯಲ್ಲಿ ಸಿನಿಮಾ ನೋಡುತ್ತಾರೆ ಎನ್ನುವುದು ಇದ್ದರೂ ಅದು ನಿರೀಕ್ಷಿತ ಮಟ್ಟದಲ್ಲಿ ಯಶ ಕಂಡಿಲ್ಲ. ಕತ್ತಲ ಕೋಣೆಯಲ್ಲಿ ತನ್ನ ಐಡೆಂಟಿಟಿ ಮರೆತು ಸಿನಿಮಾ ನೋಡಿ ಆನಂದಿಸುವ ಕ್ಷಣಕ್ಕಾಗಿ ಪ್ರೇಕ್ಷಕ ಕಾಯುತ್ತಿದ್ದಾನೆ. ಈ ಸೆಳೆತ ಎಲ್ಲವನ್ನೂ ಸರಿ ಮಾಡುತ್ತದೆ. ಇದು ಚಿತ್ರರಂಗದ ಪಾಲಿಗೆ ಪಾಸಿಟಿವ್‌ ಅಂಶ. ಮೊಬೈಲ್‌ನಲ್ಲಿ ಏನು ಬೇಕಾದರೂ ನೋಡುವ ಅವಕಾಶ ಇದ್ದರೂ ಬಿಗ್‌ ಸ್ಕ್ರೀನ್‌ನಲ್ಲಿ ಸಿನಿಮಾ ನೋಡುವ ಖುಷಿಯೇ ಬೇರೆ. ಇದೆಲ್ಲಾ ಸರಿಯಾಗಿ ಮತ್ತೆ ನಾವೆಲ್ಲಾ ಒಂದಾಗುವ ಕಾಲ ಬಂದೇ ಬರುತ್ತದೆ ಎನ್ನುತ್ತಾರೆ ನಿರ್ದೇಶಕ ಜಯತೀರ್ಥ.

ಚಿತ್ರರಂಗದ ಮುಂದಿರುವ ದಾರಿಗಳೇನು?

  • ಚಿತ್ರೀಕರಣ ಶುರು ಮಾಡಿರುವ ಚಿತ್ರಗಳು ಆದಷ್ಟುಬೇಗ ಶೂಟಿಂಗ್‌ ಮುಗಿಸಿಕೊಳ್ಳುವುದು.
  • ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಸೇರಿದಂತೆ ಒಳಾಂಗಣ ಕೆಲಸಗಳ ಕಡೆ ಗಮನ ಕೊಡುವುದು.
  • ಚಿತ್ರಮಂದಿರಗಳು ಆರಂಭಗೊಂಡ ಮೇಲೆ ಪ್ರೇಕ್ಷಕರು ಬರಲು ಶುರು ಮಾಡಿದರೆ ಹೊಸ ಚಿತ್ರಗಳ ಶೂಟಿಂಗ್‌ಗೆ ಚಾಲನೆ ಕೊಡುವುದು.
  • ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಚಿತ್ರಗಳು ಓಟಿಟಿ ಜತೆ ವ್ಯವಹಾರಕ್ಕೆ ಮುಂದಾಗುವುದು.
click me!