ಇತ್ತೀಚಿಗೆ ಗೋವಾದ ಅಂತಾರಾಷ್ಟ್ರೀಯ ಚಿತ್ರೋತ್ಸದಲ್ಲಿ ಮಾತಾಡುತ್ತಾ ರಿಷಬ್ ಶೆಟ್ಟಿ, ಕನ್ನಡ ಚಿತ್ರಗಳನ್ನು ಓಟಿಟಿಯಲ್ಲಿ ಕಡೆಗಣಿಸುತ್ತಿರುವ ಬಗ್ಗೆ ಹೇಳಿದರು. ಈ ಕುರಿತು ಅವರು ಚಿತ್ರಪ್ರಭದ ಜೊತೆ ಮಾತನಾಡಿದ್ದಾರೆ.
ಕನ್ನಡದ ಒಂದು ಬಹುಕೋಟಿ ಚಿತ್ರವನ್ನು ಒಂದು ಓಟಿಟಿ ಖರೀದಿಸಿ ದೊಡ್ಡ ನಷ್ಟ ಮಾಡಿಕೊಂಡಿತು. ಅದಾದ ನಂತರ ಎಲ್ಲಾ ಓಟಿಟಿಗಳೂ ಕನ್ನಡ ಚಿತ್ರಗಳನ್ನು ಕೊಳ್ಳಲು ಹಿಂಜರಿಯುತ್ತವೆ ಎಂಬ ಮಾತು ಕೇಳಿಬರುತ್ತಿದೆ. ನಿಜವೇ?
- ಕನ್ನಡ ಸಿನಿಮಾಗಳನ್ನು ಕೊಳ್ಳುವುದನ್ನು ಓಟಿಟಿಗಳು ಕಳೆದ ಎರಡು ವರುಷಗಳಿಂದ ಕಡಿಮೆ ಮಾಡಿವೆ ಅನ್ನುವುದು ನಿಜ. ಅದಕ್ಕೆ ಕಾರಣಗಳೇನು ಅನ್ನುವುದು ನನಗೆ ಗೊತ್ತಿಲ್ಲ. ಆದರೆ ಸಣ್ಣ ಸಿನಿಮಾಗಳಿಂದ ಅವರಿಗೆ ಯಾವತ್ತೂ ನಷ್ಟವಾಗಿಲ್ಲ. ಕನ್ನಡದ ಸಾಕಷ್ಟು ಪ್ರೇಕ್ಷಕರು ವಿವಿಧ ಓಟಿಟಿ ಫ್ಲಾಟ್‌ಫಾರ್ಮುಗಳಲ್ಲಿ ಸಿನಿಮಾ ನೋಡುತ್ತಾರೆ.
undefined
ಹಾಗಿದ್ದರೂ ಓಟಿಟಿಗಳು ಕನ್ನಡ ಸಿನಿಮಾಗಳನ್ನೇಕೆ ಖರೀದಿ ಮಾಡುತ್ತಿಲ್ಲ?
-ನಾವಿನ್ನೂ ಕನ್ನಡ ಮಾರುಕಟ್ಟೆಗೆ ಪೂರ್ತಿಯಾಗಿ ತೆರೆದುಕೊಂಡಿಲ್ಲ ಎಂದು ಹೇಳುತ್ತಾರೆ. ಕನ್ನಡದಲ್ಲಿ ಬರುವ ಸಣ್ಣ ಬಜೆಟ್ಟಿನ ಫೆಸ್ಟಿವಲ್ ಸಿನಿಮಾಗಳ ಖರೀದಿ ನಿಲ್ಲಿಸಿದ್ದಾರೆ. ಹಲವು ದೊಡ್ಡ ಬ್ಯಾನರಿನ ಅನೇಕ ಚಿತ್ರಗಳು ಕೊಳ್ಳುವವರಿಗಾಗಿ ಕಾಯುತ್ತಿವೆ. ಅವೆಲ್ಲ ವಿವಿಧ ಚಿತ್ರೋತ್ಸವಗಳಲ್ಲಿ ಮನ್ನಣೆ ಪಡೆದ ಚಿತ್ರಗಳು. ಅಂಥ ಸಿನಿಮಾಗಳ ಪ್ರೇಕ್ಷಕ ವರ್ಗ ಚಿಕ್ಕದು. ಮಾಸ್ ಸಿನಿಮಾಗಳಂತೆ ಅವನ್ನು ಥೇಟರಿನಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ. ಓಟಿಟಿ ಅಂಥ ಚಿತ್ರಗಳನ್ನು ಕೊಂಡುಕೊಳ್ಳಬೇಕು.
ಆನೆಗುಡ್ಡೆ ನನಗೆ ಅದೃಷ್ಟದ ಬಾಗಿಲು, ಕಾಂತಾರದ ಮುನ್ನುಡಿ ಹೇಳಲು ಹೊರಟಿದ್ದೇನೆ: ರಿಷಬ್ ಶೆಟ್ಟಿ
ಓಟಿಟಿಗಳು ಕೂಡ ಲಾಭ ಮಾಡುವುದಕ್ಕೆಂದೇ ಬಂದಿರುವಂಥವು. ಅವರು ಲಾಭದ ನಿರೀಕ್ಷೆಯಲ್ಲೇ ಇರುತ್ತಾರಲ್ಲ?
-ಎಲ್ಲಾ ಭಾಷೆಗಳಲ್ಲೂ ಇದೇ ತೀರ್ಮಾನ ತೆಗೆದುಕೊಂಡಿದ್ದರೆ ಪ್ರಶ್ನಿಸಬೇಕಾಗಿರಲಿಲ್ಲ. ಈ ಕಡೆಗಣನೆ ಆಗುತ್ತಿರುವುದು ಕನ್ನಡಕ್ಕೆ ಮಾತ್ರ. ಕನ್ನಡದಲ್ಲಿ ಹೆಚ್ಚು ಪ್ರೇಕ್ಷಕರಿಲ್ಲ, ಸಬ್‌ಸ್ಕ್ರೈಬರುಗಳಿಲ್ಲ. ಸಣ್ಣ ಚಿತ್ರಗಳನ್ನು ಹಾಕಿದರೆ ಮೆಂಬರ್‌ಶಿಪ್ ಹೆಚ್ಚಾಗುವುದಿಲ್ಲ ಅನ್ನುವ ವಾದ ಹೂಡುವುದು ಸುಲಭ. ಆದರೆ, ಪ್ರತಿ ಭಾಷೆಯಲ್ಲೂ ಇಂಥ ಫೆಸ್ಟಿವಲ್ ಸಿನಿಮಾಗಳು, ಅರ್ಥಪೂರ್ಣ ಸಿನಿಮಾಗಳು, ಕಲಾತ್ಮಕ ಸಿನಿಮಾಗಳು ಇರುತ್ತವಲ್ಲ. ಅವುಗಳಿಗೆ ಕೊಡುವ ಗೌರವವನ್ನು ನಮ್ಮ ಕನ್ನಡ ಸಿನಿಮಾಗಳಿಗೂ ಕೊಡಿ. ತಾರತಮ್ಯ ಬೇಡ ಎನ್ನುವುದಷ್ಟೇ ನನ್ನ ಮನವಿ.
ಸಣ್ಣ ಸಿನಿಮಾಗಳು ಕೇವಲ ಓಟಿಟಿಯನ್ನಷ್ಟೇ ನಂಬಿಕೊಂಡಿರಬೇಕೇ? ಅವುಗಳಿಗೆ ಬೇರೆ ಆದಾಯದ ಮೂಲ ಇಲ್ಲವೇ?
-ಸರ್ಕಾರ ಬಹಳ ಒಳ್ಳೆಯ ಕೆಲಸ ಮಾಡಿದೆ. ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಆರಂಭಿಸಿದ ಫಿಲ್ಮೀ ಬಜಾರ್ ಇಂಥ ಚಿತ್ರಗಳಿಗೆ ನೆರವಾಗುತ್ತಿದೆ. ವರ್ಕ್ ಇನ್ ಪ್ರಾಗ್ರೆಸ್ ಹಂತದಲ್ಲಿ ಚಿತ್ರದ ಪೋಸ್ಟ್ ಪ್ರೊಡಕ್ಷನ್‌ಗೆ ನೆರವಾಗುತ್ತಿದೆ. ಆದರೆ ಇಷ್ಟೇ ಸಾಕಾಗುವುದಿಲ್ಲ. ಚಿತ್ರದ ಮಾರುಕಟ್ಟೆಯ ಜವಾಬ್ದಾರಿ ಎಲ್ಲಕ್ಕಿಂತ ದೊಡ್ಡದು. ಇದಕ್ಕೆ ಸರ್ಕಾರ ನೆರವಾಗಬೇಕು. ನಮ್ಮ ಭಾಷೆಯ ಮಾಸ್ ಸಿನಿಮಾಗಳನ್ನು ಬಯಸುವ ಓಟಿಟಿಗಳೂ ನೆರವಾಗಬೇಕು. ಪ್ರಧಾನ ವಾಹಿನಿಯ, ಗೆದ್ದ ಚಿತ್ರಗಳು ಮಾತ್ರ ಬೇಕು ಅನ್ನುವುದು ಸರಿಯಲ್ಲ.
ಕಾಂತಾರ ಚಾಪ್ಟರ್ 1 ಫಸ್ಟ್ ಲುಕ್ ರಿಲೀಸ್; ರಿಷಬ್ ಶೆಟ್ಟಿ ಅವತಾರಕ್ಕೆ ಉಘೇ ಎಂದ ಸಿನಿ ರಸಿಕರು!
ಈ ಧೋರಣೆಯಿಂದ ಸಣ್ಣ ಸಿನಿಮಾಗಳ ಭವಿಷ್ಯಕ್ಕೆ ತೊಂದರೆ ಆಗುತ್ತದೆ ಅನ್ನುತ್ತೀರಾ?
-ಈಗಾಗಲೇ ತೊಂದರೆ ಆಗಿದೆ. ನನ್ನ ನಿರ್ಮಾಣ ಸಂಸ್ಥೆಯ ಮೂರು ಸಿನಿಮಾಗಳು ಮಾರಾಟ ಆಗಿಲ್ಲ. ಅವನ್ನು ಚಿತ್ರಮಂದಿರದಲ್ಲಿ ಪ್ರದರ್ಶಿಸಿ ಹಾಕಿದ ಹಣ ವಾಪಸ್ಸು ಪಡೆಯಲು ಸಾಧ್ಯವಿಲ್ಲ. ಇವು ಮಾರಾಟ ಆಗದೇ ಹೋದರೆ ನಾನು ಇನ್ನೊಂದು ಸಿನಿಮಾ ನಿರ್ಮಾಣ ಮಾಡಲು ಹೋಗುವುದಿಲ್ಲ. ನನ್ನಂತೆಯೇ ರಕ್ಷಿತ್ ಶೆಟ್ಟಿ, ಬೇರೆ ಬೇರೆ ಸ್ವತಂತ್ರ ನಿರ್ಮಾಪಕರು ನಿರ್ಮಾಣ ಮಾಡಿದ ಹಲವಾರು ಸಿನಿಮಾಗಳಿವೆ. ಇವುಗಳನ್ನು ಸರ್ಕಾರ ಅಥವಾ ಓಟಿಟಿ ಕೈ ಹಿಡಿಯದೇ ಹೋದರೆ ಕಷ್ಟವಾಗುತ್ತದೆ.
ಇದಕ್ಕೆ ಪರಿಹಾರ ಏನಿದೆ?
-ಓಟಿಟಿಗಳಿಗೆ ಸಣ್ಣ ಸಿನಿಮಾದಿಂದ ಯಾವತ್ತೂ ತೊಂದರೆ ಆಗಿಲ್ಲ. ಅಂಥ ಸಿನಿಮಾಗಳನ್ನು ನೋಡುವ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಸಣ್ಣ ಸಿನಿಮಾಗಳನ್ನು, ಫೆಸ್ಟಿವಲ್‌ಗಳಲ್ಲಿ ಹೆಸರು ಮಾಡಿದ ಸಿನಿಮಾಗಳನ್ನು ಓಟಿಟಿಗಳು ಕೊಂಡುಕೊಳ್ಳಬೇಕು. ಅವೆಲ್ಲ ಒಂದು ಭಾಷೆಯನ್ನು ಶ್ರೀಮಂತಗೊಳಿಸಿದ ಚಿತ್ರಗಳು. ಅಂಥ ಚಿತ್ರಗಳು ಇದ್ದರೆ ಓಟಿಟಿಗಳಿಗೂ ಗೌರವ, ಭಾಷೆಗೂ ಗೌರವ.
ಇದನ್ನು ಸಾಂಘಿಕವಾಗಿ ಹೋರಾಡಿ ಪಡೆಯಲು ಸಾಧ್ಯವಿಲ್ಲವೇ?
-ಎಲ್ಲರೂ ಒಟ್ಟಾಗಿ ಕೇಳಿದರೆ ಕಷ್ಟವಿಲ್ಲ. ಆ ದಿನಗಳೂ ದೂರವಿಲ್ಲ. ಚಿತ್ರರಂಗ ಒಟ್ಟಾಗಬೇಕಿದೆ. ಮಾಸ್ ಮತ್ತು ಕ್ಲಾಸ್ ಸಿನಿಮಾಗಳ ಅಂತರ ಥೇಟರ್ ವ್ಯವಸ್ಥೆಯಲ್ಲಿ ಎದ್ದು ಕಾಣುತ್ತದೆ. ಆದರೆ ಓಟಿಟಿ ವ್ಯವಸ್ಥೆಯಲ್ಲಿ ಅಷ್ಟೇನೂ ಸಮಸ್ಯೆ ಆಗಬಾರದು. ಫೆಸ್ಟಿವಲ್ ಚಿತ್ರಗಳನ್ನು ಪೇಪರ್ ವ್ಯೂ ಆಧಾರದಲ್ಲಿ ಪ್ರದರ್ಶನಕ್ಕಿಡುವ ಬದಲು, ಕೊಂಡುಕೊಳ್ಳಬೇಕು ಮತ್ತು ಪ್ರೋತ್ಸಾಹ ನೀಡಬೇಕು. ಅದು ವ್ಯಾಪಾರ ಮತ್ತು ಧರ್ಮ.