ಪ್ರೇಕ್ಷಕರೇ ಗಮನಿಸಿ, ಶೋ ರದ್ದಾಗಿದೆ: ಖಾಲಿ ಥಿಯೇಟರ್‌ಗಳಲ್ಲಿ ವಾರಕ್ಕೆ 10 ಚಿತ್ರಗಳ ಜಾತ್ರೆ

By Kannadaprabha NewsFirst Published May 27, 2022, 8:40 AM IST
Highlights

ಕನ್ನಡ ಚಿತ್ರಗಳಿಗೆ ಪ್ರೇಕ್ಷಕ ಬರುತ್ತಿಲ್ಲ. ಕಳೆದ ನಾಲ್ಕೈದು ವಾರಗಳಲ್ಲಿ ಬಿಡುಗಡೆಯಾದ ಮೂವತ್ತಕ್ಕೂ ಹೆಚ್ಚು ಚಿತ್ರಗಳು ಸೋತು ಮಲಗಿವೆ. ಎರಡನೇ ಪ್ರದರ್ಶನವೇ ರದ್ದಾಗುತ್ತಿದೆ. ಎಷ್ಟೋ ಚಿತ್ರಗಳು ಒಂದು ಹೋಗಿದ್ದೇ ಗೊತ್ತಾಗುತ್ತಿಲ್ಲ. ಪ್ರೇಕ್ಷಕರ ಬಳಿ ದುಡ್ಡಿಲ್ಲ, ಪ್ರವೇಶ ದರ ಹೆಚ್ಚಾಗಿದೆ ಎನ್ನುತ್ತಿದೆ ಚಿತ್ರೋದ್ಯಮ.

ಕೋವಿಡ್‌ ನಂತರ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ಚೇತರಿಕೆ ನೀಡಿದ್ದರಲ್ಲಿ ದಕ್ಷಿಣ ಭಾರತದ ಚಿತ್ರಗಳ ಪಾಲು ದೊಡ್ಡದು. ಈ ವಿಚಾರದಲ್ಲಿ ಕನ್ನಡದ ‘ಕೆಜಿಎಫ್‌ 2’ ಹಾಗೂ ತೆಲುಗಿನ ‘ಆರ್‌ಆರ್‌ಆರ್‌’, ‘ಪುಷ್ಪ’ ಚಿತ್ರಗಳನ್ನು ಮೊದಲಿಗೆ ಹೆಸರಿಸಬಹುದು. ಈ ಚಿತ್ರಗಳ ಮೂಲಕ ಚಿತ್ರೋದ್ಯಮಕ್ಕೆ ಉತ್ಸಾಹ ತುಂಬಿದ ಪ್ರೇಕ್ಷಕ ಕಳೆದ ಮೂರು- ನಾಲ್ಕು ವಾರಗಳಿಂದ ಚಿತ್ರಮಂದಿರಗಳ ಕಡೆ ಮುಖ ಮಾಡುತ್ತಿಲ್ಲ.

‘ಕೆಜಿಎಫ್‌ 2’ ನಂತರ ತೆರೆಕಂಡಿರುವ ಸುಮಾರು ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪ್ರೇಕ್ಷಕ ಯಾವುದರ ಕೈ ಹಿಡಿದಿದ್ದಾನೆ ಎಂದು ಕೇಳಿದರೆ ಉತ್ತರ ಶೂನ್ಯ. ಕಳೆದ ವಾರ ಹತ್ತು ಚಿತ್ರಗಳು ಬಿಡುಗಡೆ ಆಗಿವೆ. ಅವುಗಳಲ್ಲಿ ಬಹಳಷ್ಟುಸಿನಿಮಾಗಳ ಎರಡನೆಯ ಪ್ರದರ್ಶನ ಬಹಳಷ್ಟುಕಡೆ ನಡೆಯಲೇ ಇಲ್ಲ.

ಸಿನಿಮಾ ರಿಲೀಸ್‌ ಆಗ್ತಿದೆ. ಆದರೆ ಪ್ರೇಕ್ಷಕರ ಕೊರತೆಯಿಂದ ಪ್ರದರ್ಶನ ರದ್ದಾಗುತ್ತಿದೆ. ಐದು ಮಂದಿಗಿಂತ ಕಡಿಮೆ ಪ್ರೇಕ್ಷಕ ಇದ್ದರೆ ಪ್ರದರ್ಶನ ರದ್ದು ಮಾಡಬಹುದು. ಅದೀಗ ಆಗುತ್ತಿದೆ. ಕಳೆದ ವಾರ ಹಲವು ಚಿತ್ರಗಳಿಗೆ ಎರಡನೇ ಪ್ರದರ್ಶನದ ಭಾಗ್ಯವೂ ಇರಲಿಲ್ಲ ಅನ್ನುತ್ತಾರೆ ಚಿತ್ರರಂಗದ ಹಿರಿಯರು.

TWENTY ONE HOURS REVIEW; ಧನಂಜಯ್‌ ಇರುವಿಕೆಯೇ ಈ ಸಿನಿಮಾದ ಹೆಗ್ಗಳಿಕೆ

ಟಿಕೆಟ್‌ ದರ ಜಾಸ್ತಿಯಾಯಿತು

‘ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲೂ ‘ಕೆಜಿಎಫ್‌ 2’ ಸಿನಿಮಾ ಬಂತು. ಆ ನಂತರ ಕೇರಳದಲ್ಲಿ ‘ಜನ ಗಣ ಮನ’ ಸಿನಿಮಾ ಬಂದು ಹಿಟ್‌ ಆಯಿತು. ಈ ಸಿನಿಮಾ ಬೆಂಗಳೂರಿನಲ್ಲೂ ಯಶಸ್ಸು ಕಂಡಿತು. ತಮಿಳಿನಲ್ಲಿ ‘ಡಾನ್‌’ ಸಿನಿಮಾ ಬಂದು ಗೆಲುವು ಕಂಡಿತು. ತೆಲುಗಿನಲ್ಲಿ ‘ಸರ್ಕಾರಿ ವಾರಿ ಪಾಠ’ ಸಿನಿಮಾ ಬಂದು ಯಶಸ್ಸು ಆಯಿತು. ಈ ಎಲ್ಲ ಚಿತ್ರಗಳು ‘ಕೆಜಿಎಫ್‌ 2’ ನಂತರವೇ ಬಂದಿದ್ದು. ಕನ್ನಡದಲ್ಲಿ ‘ಕೆಜಿಎಫ್‌ 2’ ನಂತರ ಜನ ಮೆಚ್ಚುವ ಸಿನಿಮಾ ಬರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಲ್ಲಿ ಟಿಕೆಟ್‌ ರೇಟು ಜಾಸ್ತಿ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಟಿಕೆಟ್‌ ರೇಟು ಇರುವುದು ಕನ್ನಡ ಚಿತ್ರರಂಗದಲ್ಲಿ ಮಾತ್ರ. ಒಂದು ಚಿತ್ರಕ್ಕೆ ನಾನೂರು, ಐನೂರು ಕೊಡುವ ಪ್ರೇಕ್ಷಕ, ವಾರ ವಾರ ಅಷ್ಟೇ ದುಡ್ಡು ಕೊಟ್ಟು ಸಿನಿಮಾ ನೋಡಲು ಸಾಧ್ಯವೇ? ಇದು ಪ್ರೇಕ್ಷಕರಿಗೆ ದೊಡ್ಡ ಹೊಡೆತ ಬಿದ್ದಿದೆ. ಟಿಕೆಟ್‌ ರೇಟು ಕಡಿಮೆ ಆಗದೆ ಹೋದರೆ ಇದೇ ಪರಿಸ್ಥಿತಿ ಮುಂದುವರಿಯುತ್ತದೆ’ ಎನ್ನುತ್ತಾರೆ ನಿರ್ಮಾಪಕ ಹಾಗೂ ವಿತರಕ ಎನ್‌ ಕುಮಾರ್‌.

ಬಿರಿಯಾನಿ ತಿಂದವರಿಗೆ ಚಿತ್ರಾನ್ನ ಹಿಡಿಸದು

ರಾಮ್‌ ಫಿಲಮ್ಸ್‌ನ ವಿತರಕ ರಾಮ್‌ ಜಗದೀಶ್‌ ಅವರು ಹೇಳುವುದೇ ಬೇರೆ. ‘ನಾಲ್ಕು ವಾರಗಳ ಹಿಂದೆ ಮೂರು ದೊಡ್ಡ ಚಿತ್ರಗಳು ಬಂದಿವೆ. ಆ ಚಿತ್ರಗಳನ್ನು ನೋಡಿದ ಪ್ರೇಕ್ಷಕ ಈಗಲೂ ಅದೇ ಗುಂಗಿನಲ್ಲಿ ಇದ್ದಾನೆ. ದೊಡ್ಡ ಹ್ಯಾಂಗೋವರ್‌ನಲ್ಲಿರುವ ಪ್ರೇಕ್ಷಕನನ್ನು ಚಿಕ್ಕ ಚಿತ್ರಗಳಿಗೆ ಕರೆದುಕೊಂಡು ಬರುವುದಕ್ಕೆ ಸಾಕಷ್ಟುಸಾಹಸ ಮಾಡಬೇಕು. ಚಿತ್ರಮಂದಿರಕ್ಕೆ ಬರುವ ತನಕ ಆ ಚಿತ್ರದ ಬಗ್ಗೆ ಕ್ರೇಜು ಹುಟ್ಟಿಸಬೇಕು, ಬಂದ ಮೇಲೆ ಕತೆ ಹಿಡಿಸಬೇಕು. ಅಂಥ ಜಾದು ಕಳೆದ ಮೂರು ವಾರಗಳಲ್ಲಿ ಬಂದ ಯಾವ ಚಿತ್ರವೂ ಮಾಡಲಿಲ್ಲ. ಮೂರು ವಾರಗಳ ಹಿಂದೆ ಬಿರಿಯಾರಿ ತಿನ್ನಿಸಿ, ಇದ್ದಕ್ಕಿದ್ದಂತೆ ಚಿತ್ರಾನ್ನ ತಿನ್ನಿ ಅಂದರೆ ಪ್ರೇಕ್ಷಕ ಒಪ್ಪಲ್ಲ. ಆತ ತನಗೆÜ ಚಿತ್ರಾನ್ನವೂ ಬೇಕು ಎನ್ನುವ ಹಸಿವು ಆಗುವ ತನಕ ಕಾಯಬೇಕು. ಈಗ ಬರುತ್ತಿರುವುದು ಬಿರಿಯಾನಿ ಚಿತ್ರಗಳಲ್ಲ. ಜತೆಗೆ ಈ ರೀತಿಯ ಚಿತ್ರಗಳು ಒಂದೆರಡು ವಾರ ಹೋದರೆ ಓಟಿಟಿ ಅಥವಾ ಟೀವಿಗಳಲ್ಲಿ ಬರುತ್ತವೆ ಎನ್ನುವ ಭಾವನೆ. ಹೀಗಾಗಿ ಜನ ಸಿನಿಮಾಗಳನ್ನು ನೋಡಲು ಬರುತ್ತಿಲ್ಲ’ .

Sakutumba Sametha Film Review: ಹಿತವಾದ ಪಿಸುಮಾತಿನಂಥಾ ಗಾಢ ಸಣ್ಣಕಥೆ

‘ಎಲ್ಲ ಚಿತ್ರಗಳನ್ನು ‘ಕೆಜಿಎಫ್‌ 2’ ರೀತಿಯಲ್ಲೇ ನೋಡಬೇಡಿ. ಇಂಥ ಚಿತ್ರಗಳನ್ನೂ ಪರಿಗಣಿಸಿ’ ಎಂದು ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಸಾಧು ಕೋಕಿಲ ಹೇಳಿದ ಮಾತಿನಲ್ಲಿ ವಾಸ್ತವ ಕೂಡ ಇದೆ. ಹೀಗಾಗಿ ಹೌಸ್‌ಫುಲ್‌ ಎನ್ನುವ ಬೋರ್ಡ್‌ ಹಾಕಬೇಕಾದ ಚಿತ್ರಮಂದಿರಗಳು, ಸಿನಿಮಾ ಬಿಡುಗಡೆ ದಿನವೇ ‘ಶೋ ರದ್ದಾಗಿದೆ’ ಎನ್ನುವ ಬೋರ್ಡ್‌ಗಳನ್ನು ಹಾಕುತ್ತಿವೆ.

ಜನರ ಬಳಿ ದುಡ್ಡಿಲ್ಲ

ಬೆಂಗಳೂರಿನ ಥಿಯೇಟರ್‌ ಮಾಲೀಕರು ಸಿನಿಮಾ ಬಿಡುಗಡೆಯಾದ ಎರಡನೇ ದಿನಕ್ಕೇ ಪ್ರೇಕ್ಷಕರಿಲ್ಲದೇ ಶೋ ರದ್ದಾದ್ದರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ. ಬೆಂಗಳೂರಿನ ಅನುಪಮಾ, ಅಭಿನಯ ಮೊದಲಾದ ಥಿಯೇಟರ್‌ ಮಾಲೀಕರಾದ ಜ್ಞಾನೇಶ್ವರ ಐತಾಳ್‌ ಅವರ ಪ್ರಕಾರ, ಥಿಯೇಟರ್‌ಗೆ ಬರುವವರು ಕಾಮನ್‌ ಮ್ಯಾನ್‌. ಅವರಿಗೆ ಸಿನಿಮಾ ಲಕ್ಸುರಿ. ಅದಕ್ಕೊಂದು ಬಜೆಟ್‌ ಎತ್ತಿಡುತ್ತಾರೆ. ಈ ಬಾರಿ ‘ಕೆಜಿಎಫ್‌ 2’ ಹಾಗೂ ‘ಆರ್‌ಆರ್‌ಆರ್‌’ ಸಿನಿಮಾಗಳು ವಿಪರೀತ ಎನಿಸುವಷ್ಟುಟಿಕೇಟ್‌ ದರ ಇಟ್ಟಕಾರಣ ಜನ 600 ರು., 800 ರು. ಕೊಟ್ಟು ಆ ಚಿತ್ರ ನೋಡಿದ್ದಾರೆ. ಸದ್ಯಕ್ಕೆ ಸಿನಿಮಾ ನೋಡಲು ಅವರ ಬಳಿ ಬಜೆಟ್‌ ಇಲ್ಲ. ಜೊತೆಗೆ ಜನ ಕಂಟೆಂಟ್‌ ಸಿನಿಮಾ ಎದುರು ನೋಡುತ್ತಿದ್ದಾರೆ. ಅಂಥಾ ಸಿನಿಮಾಗಳು ಬರುತ್ತಿಲ್ಲ.

Prarambha Film Review: ಪ್ರೇಮದ ಸೋಲು ಜೀವನದ ಅಂತ್ಯವಲ್ಲ

ಹತ್ತು ನಿಮಿಷ ನೋಡಲಾಗದ ಸಿನಿಮಾ

ನವರಂಗ್‌ ಥಿಯೇಟರ್‌ನ ಮಾಲೀಕ ಹಾಗೂ ಚಿತ್ರ ನಿರ್ಮಾಪಕ ಕೆ ಸಿ ಎನ್‌ ಮೋಹನ್‌ ಕಳೆದ ವಾರ ನಡೆದ ಒಂದು ಘಟನೆ ವಿವರಿಸಿದ್ದಾರೆ. ‘ಪ್ರತೀ ಶುಕ್ರವಾರ ನಮ್ಮ ಥಿಯೇಟರ್‌ಗೆ ಬರುವ ಚಿತ್ರದ ಮೊದಲ ಶೋ ನೋಡುವ ಪರಿಪಾಠ ನನ್ನದು. ಕಳೆದ ವಾರ ಒಂದು ಸಿನಿಮಾ ಇತ್ತು. ಇಡೀ ಶೋ ಬಿಡಿ, ಹತ್ತು ನಿಮಿಷ ಕೂರಲಿಕ್ಕೂ ನನ್ನಿಂದಾಗಿಲ್ಲ. ಸಿನಿಮಾ ತಂಡದವರೇ ಟಿಕೆಟ್‌ ನೀಡಿದ ಕೆಲವರು ಶೋದಲ್ಲಿದ್ದರು. ಇಂಟರ್‌ವಲ್‌ ಬಳಿಕ ಅವರೂ ನಾಪತ್ತೆ. ಇಂಥಾ ಸಿನಿಮಾಗಳೇ ಹೆಚ್ಚೆಚ್ಚು ಬಂದರೆ ಯಾರು ನೋಡ್ತಾರೆ ಹೇಳಿ. ದುಡ್ಡು ಕೊಟ್ಟು ಸಿನಿಮಾ ನೋಡಿ ಅಂದ್ರೂ ಈಗ ಜನ ನೋಡಲ್ಲ. ಕಂಟೆಂಟ್‌ ಇರುವ ಕೆಲವು ಸಿನಿಮಾಗಳು ಬರುತ್ತಿವೆ. ಆದರೆ ಅವರಲ್ಲಿ ಥಿಯೇಟರ್‌ ರಿಲೀಸ್‌ ಮಾಡುವ, ಪ್ರಚಾರ ಮಾಡುವ ಆರ್ಥಿಕ ಚೈತನ್ಯ ಇಲ್ಲ. ಇವತ್ತು ನಮ್ಮ ಥಿಯೇಟರ್‌ನಲ್ಲಿ 5 ಸಿನಿಮಾ ರಿಲೀಸ್‌ ಆಗುತ್ತಿದೆ. ಅವುಗಳ ಕಥೆ ಏನೋ ಗೊತ್ತಿಲ್ಲ’ ಎನ್ನುತ್ತಾರೆ ಮೋಹನ್‌.

ಪ್ರದರ್ಶಕರ ಸಂಘದ ಅಧ್ಯಕ್ಷ ಕೆ ವಿ ಚಂದ್ರಶೇಖರ್‌ ಸದ್ಯದ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ‘ಕಳೆದ ಕೆಲವು ವಾರಗಳ ಬೆಳವಣಿಗೆ ನಮ್ಮಲ್ಲೂ ಆತಂಕ ಸೃಷ್ಟಿಸಿದೆ. ಫಿಲಂ ಚೇಂಬರ್‌ ಎಲೆಕ್ಷನ್‌ ಮುಗಿದ ಬಳಿಕ ಈ ಬಗ್ಗೆ ಮೀಟಿಂಗ್‌ ಕರೆದು ಚರ್ಚಿಸಬೇಕೆಂದಿದ್ದೇವೆ. ಏಕೆಂದರೆ ಉತ್ತಮ ಗುಣಮಟ್ಟದ, ಜನರ ಬೇಡಿಕೆಗೆ ತಕ್ಕಂಥ ಸಿನಿಮಾ ಬಂದರೂ ಜನ ನೋಡುತ್ತಿಲ್ಲ. ಕಲೆಕ್ಷನ್‌ ಏನೇನೂ ಆಗ್ತಾ ಇಲ್ಲ. ಇದು ಬೆಂಗಳೂರು ನಗರದ ಕತೆ ಮಾತ್ರ ಅಲ್ಲ, ಇಡೀ ರಾಜ್ಯದಲ್ಲೇ ಸಮಸ್ಯೆ ಆಗಿದೆ’ ಎನ್ನುತ್ತಾರೆ.

ಒಟ್ಟಾರೆ ಸದ್ಯದ ಬೆಳವಣಿಗೆ ಚಿತ್ರರಂಗಕ್ಕೆ ಬಗೆಹರಿಸಲಾಗದ ಸಮಸ್ಯೆಯಾಗಿದೆ. ಕಂಟೆಂಟ್‌ ಇರುವ ‘ಸಕುಟುಂಬ ಸಮೇತ’ ದಂಥಾ ಸಿನಿಮಾಗಳೂ ಕಲೆಕ್ಷನ್‌ನಲ್ಲಿ ಸೋತಿವೆ. ಕಳೆದ ವಾರ ಬಿಡುಗಡೆಯಾದ ಹೆಚ್ಚಿನೆಲ್ಲ ಚಿತ್ರಗಳು ನೆಲಕ್ಕಚ್ಚಿವೆ. ಈ ವಾರವೂ 9 ಸಿನಿಮಾಗಳ ರಿಲೀಸ್‌ ಇದೆ. ಅವುಗಳಿಗೂ ಕಳೆದ ವಾರದ್ದೇ ಆತಂಕ ಇದೆ.

click me!