ನಿಮ್ಮ ಮಗು ಹತ್ತು ರೂಪಾಯಿ ಕದಿಯುತ್ತೆ. ಅಮ್ಮ ಕಠಿಣವಾಗಿ ದಂಡಿಸಿದರೆ ಆಕೆ ಮಾಡಿದ ಆಹಾರ ತಿನ್ನೊಲ್ಲ. ನೀವು ಅಮ್ಮನಿಗೆ ಬೈತೀರೋ ಮಗೂಗೋ? ಹಾಗಿದ್ರೆ ನೀವು ಓದಬೇಕಾದ ವಿಷಯ ಇಲ್ಲಿದೆ.
ಒಂದು ಪುಟ್ಟ ಜಾಹೀರಾತು ಕತೆಯಿದೆ. ಅದರಲ್ಲಿ ಪುಟ್ಟ ಮಗ, ಅಪ್ಪನ ಜೇಬಿನಿಂದ ೧೦ ರೂಪಾಯಿ ಕದ್ದಿದಾನೆ. ಅದಕ್ಕೆ ಅಮ್ಮ ಆತನಿಗೆ ಬುದ್ಧಿ ಕಲಿಸಲೆಂದು ಸರಿಯಾಗಿ ಬೈದಿರುತ್ತಾಳೆ, ದಂಡಿಸಿರುತ್ತಾಳೆ. ಆಮೇಲೆ ಆ ಫ್ಯಾಮಿಲಿ ಡೈನಿಂಗ್ ಟೇಬಲ್ ಮೇಲೆ ಊಟ ಮಾಡ್ತಾ ಇರುತ್ತೆ. ಫ್ಯಾಮಿಲಿಯ ಕೊನೇ ಸೊಸೆ ಅಂದರೆ ಆ ಮಗುವಿನ ಅಮ್ಮ ಎಲ್ರಿಗೂ ಬಡಿಸ್ತಾ ಇರ್ತಾಳೆ. ಆದ್ರೆ ಆಕೆಯ ಮಗ ಮಾತ್ರ ಅದೇ ಸಿಟ್ಟಿನಿಂದ ತಿಂಡಿ ತಿನ್ನದೆ ತಟ್ಟೆಯನ್ನು ತಳ್ಳಬಿಡ್ತಾನೆ. ಯಾರೂ ಮಾತಾಡೊಲ್ಲ. ಆತನ ಅಮ್ಮ ಆ ತಟ್ಟೆಯನ್ನು ಮತ್ತೆ ತಿನ್ನುವಂತೆ ಆತನ ಮುಂದೆ ಇಡುತ್ತಾಳೆ. ಆಗಲೂ ಆತ ತಾನು ತಿನ್ನೋದಿಲ್ಲ ಎಂದು ತಳ್ಳುತ್ತಾನೆ. ಆತನ ಅಮ್ಮ ಮಾತಿಲ್ಲದೇ ಆ ತಟ್ಟೆಯನ್ನು ಅಲ್ಲಿಂದ ತೆಗೆದಿಡುತ್ತಾಳೆ. ಮಗನಿಗೆ ಬಡಿಸೋದೇ ಇಲ್ಲ. ಉಳಿದವರಿಗೆಲ್ಲಾ ಬಡಿಸ್ತಾಳೆ. ಇದನ್ನು ನೋಡಿ ಫ್ಯಾಮಿಲಿಯ ಎಲ್ಲರೂ ತಲೆಗೊಂದು ಮಾತಾಡ್ತಾರೆ.
'ಅಷ್ಟು ಪುಟ್ಟ ಮಗೂಗೆ ನೀನು ಹಾಗೆ ಮಾಡಬಹುದಾ?' 'ಅಷ್ಟೊಂದು ಸಣ್ಣ ತಪ್ಪಿಗೆ ನೀನು ಹಾಗೆ ಶಿಕ್ಷಿಸಬಾರದಿತ್ತು' 'ನೀನು ಮಾಡ್ತಿರೋದು ಕ್ರೂರವಾಗಿದೆ' 'ನೀನು ಮಕ್ಕಳನ್ನು ನೋಡಿಕೊಳ್ತಿರೋದು ಸರಿಯಲ್ಲ' ಏನು ನಿನ್ನ ಹಣ ಕದ್ದನಾ? ನನ್ನ ಜೇಬಿನಿಂದ ತೆಗೆದದ್ದು ತಾನೆ?' ಎಂದೆಲ್ಲಾ ಕಟುವಾದ ಮಾತುಗಳನ್ನು ಆಕೆ ಕೇಳಬೇಕಾಗಿ ಬರುತ್ತೆ. ಆದರೆ ಅಮ್ಮ ಅದ್ಯಾವುದಕ್ಕೂ ಪ್ರತಿಕ್ರಿಯೆ ನೀಡೊಲ್ಲ. ಸುಮ್ಮನಿರ್ತಾಳೆ.
ನೋಡುವಷ್ಟೂ ನೋಡಿ ಆ ಮನೆಯ ಹಿರಿಯ ಯಜಮಾನ, ವೃದ್ಧ, ಎಲ್ಲರನ್ನೂ ಸುಮ್ಮನಿರಿಸ್ತಾನೆ. 'ಇಂದು ಅವನು ತನ್ನ ಅಪ್ಪನ ಜೇಬಿನಿಂದ ಕದ್ದಿರಬಹುದು. ನಾಳೆ ಇನ್ಯಾರದೋ ಹಣ ಕದೀತಾನೆ. ಇಂದು ಹೀಗೆ ಮಾಡಿದರೆ ನಾಳೆ ಅವನು ಇನ್ನೇನೋ ಮಾಡಬಹುದು?' ಎಂದು ಇತರರಿಗೆ ತಿಳಿ ಹೇಳುತ್ತಾನೆ. 'ನೀನು ಸರಿಯಾದ ಕೆಲಸವನ್ನೇ ಮಾಡ್ತಾ ಇದೀಯ' ಎಂದು ಸೊಸೆಗೆ ಮೆಚ್ಚುಗೆ ಹೇಳ್ತಾನೆ. ಎಲ್ಲರೂ ಮುದುಕನ ಮಾತಿನಲ್ಲಿ ಸತ್ಯ ಇದೆ ಎಂದು ಅರ್ಥ ಮಾಡಿಕೊಂಡು ಸುಮ್ಮನಾಗ್ತಾರೆ.
Parenting Tips : ಮಕ್ಕಳ ಜೀವನ ಹಾಳು ಮಾಡುತ್ತೆ ಪಾಲಕರ ಅತಿಯಾದ ಮುದ್ದು
ಈ ಜಾಹೀರಾತು ಚಂದದ ಒಂದು ಸತ್ಯವನ್ನು ಹೇಳುತ್ತೆ. ನಮ್ಮಲ್ಲಿ ಬಗೆಬಗೆಯ ಪೇರೆಂಟ್ಸ್ ಇರ್ತೀವಿ. ಮಕ್ಕಳು ಮಾಡೋದೆಲ್ಲಾ ಸರಿ ಎಂದು ಭಾವಿಸಿಕೊಂಡು, ಅವರು ತಪ್ಪು ಮಾಡಿದರೂ ಸರಿ ಎಂದು ಅವರನ್ನು ಸಹಿಸಿಕೊಂಡು, ಅವರನ್ನೇ ಸಮರ್ಥಿಸಿಕೊಂಡು ಇರುವವರು ಒಂದು ವಿಧ, ಮಕ್ಕಳು ಮಾಡುವ ಸಣ್ಣಪುಟ್ಟ ತಪ್ಪಿಗೂ ಹೊಡೆದು ಬಡಿದು ಬುದ್ಧಿ ಕಲಿಸಲು ಯತ್ನಿಸುವವರು ಇನ್ನೊಂದು ಥರ. ಎರಡೂ ಸರಿಯಲ್ಲ. ಮಕ್ಕಳು ದಾರಿ ತಪ್ಪಿದಲ್ಲಿ ತಿಳಿಹೇಳಿ, ಅವರಿಂದ ಸರಿಯಾದ ನಡತೆಯನ್ನು ರೂಢಿಸುವಲ್ಲಿ ನಿರಂತರ ಎಚ್ಚರ ಬೇಕು. ಕೆಲವರು ಅಮ್ಮಂದಿರಿರುತ್ತಾರೆ. ಅವರು ತಮ್ಮ ಮಗ ಅಥವಾ ಮಗಳಿಗೆ ಯಾವುದಾದರೂ ವಿಷಯಕ್ಕೆ ಜೋರಾಗಿ ಬೈದು ಅಥವಾ ಕಠಿಣವಾಗಿ ವರ್ತಿಸಿ ಬುದ್ಧಿ ಕಲಿಸಲು ಯತ್ನಿಸುತ್ತಾರೆ. ಉದಾಹರಣೆಗೆ, ಮಗು ಶಾಲೆಯಿಂಧ ಯಾರದೋ ಸಹಪಾಠಿಯ ಪೆನ್ಸಿಲ್ ಕದ್ದು ತಂದ ಎಂದಿಟ್ಟುಕೊಳ್ಳಿ. ಅಮ್ಮ ಅಥವಾ ಅಪ್ಪ ಈ ವಿಷಯ ತಿಳಿದರೆ, ಕೂಡಲೇ ಮಗನಿಂದಲೇ ಆ ಪೆನ್ಸಿಲ್ ಅನ್ನು ಆತನಿಗೆ ಮರಳಿ ಕೊಡಿಸಿ, ಸಾರಿ ಕೇಳಿಸಬೇಕು. ಬದಲಾಗಿ, ಒಂದು ಪುಟ್ಟ ಪೆನ್ಸಿಲ್ ತಾನೇ, ಏನಾಗುತ್ತದೆ ಮಹಾ ಎಂದು ಸುಮ್ಮನಿದ್ದರೆ ಮುಂದೆ ಮಗ ದೊಡ್ಡ ಚೋರನೇ ಆದಾನು. ಅದಕ್ಕೆ ಬೇಜವಾಬ್ದಾರಿ ಅಪ್ಪ- ಅಮ್ಮನೇ ಹೊಣೆಗಾರರಾಗಬೇಕಾಗುತ್ತದೆ. ಬದಲಾಗಿ, ಆ ಕ್ಷಣದಲ್ಲೇ ಕಠಿಣವಾಗಿ ದಂಡಿಸುವ ಅಪ್ಪ ಅಥವಾ ಅಮ್ಮ ನಿಜಕ್ಕೂ ಆತನ ಭವಿಷ್ಯವನ್ನು ಸರಿದಾರಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರ್ಥ.
ಒಂದು ವೇಳೆ ಇಂಥ ಸಂದರ್ಭದಲ್ಲಿ ಅಮ್ಮನಾದವಳು ಮಗನ ಮೇಲೆ ಅಥವಾ ಮಗಳ ಮೇಲೆ ಕಠಿಣವಾಗಿ ವರ್ತಿಸಿದರೆ, ಫ್ಯಾಮಿಲಿ ಸದಸ್ಯರು ಆಕೆಯ ಜೊತೆಗೆ ನಿಲ್ಲುವುದು ಅಗತ್ಯ. ಬದಲು ಅಮ್ಮ ಕಠಿಣವಾಗಿ ವರ್ತಿಸುವುದು, ಇತರ ಸದಸ್ಯರು ಅದ್ನು ಸರಿ ಮಾಡುವಂತೆ ಅಮ್ಮನಿಗೆ ಬೈಯುವುದು ಮತ್ತು ಮಗುವನ್ನು ಸಮರ್ಥಿಸುವುದು ಮಾಡಿದರೆ, ಆಗ ಇಬ್ಬರ ಮೇಲೂ ನೆಗೆಟಿವ್ ಪರಿಣಾಮ ಆಗುತ್ತೆ. ತನ್ನ ಮಾತಿಗೆ ಇಲ್ಲಿ ಬೆಲೆಯಿಲ್ಲ ಎಂದು ಅಮ್ಮ ಅರ್ಥ ಮಾಡಿಕೊಂಡು ಸೈಲೆಂಟ್ ಆಗುತ್ತಾಳೆ, ಮಗು ಹಾಳಾಗುತ್ತಿರುವುದು ಆಕೆಗೆ ಗೊತ್ತಾದರೂ ಅವಳು ಏನೂ ಮಾಡುವಂತಿರುವುದಿಲ್ಲ. ಇನ್ನು ಮಗು, ತಾನು ಮಾಡಿದ್ದೆಲ್ಲ ಸರಿ ಅಂದುಕೊಳ್ಳುತ್ತದೆ. ನಾನು ತಪ್ಪು ಮಾಡಿದರೂ ಅಮ್ಮ ನನ್ನನ್ನು ದಂಡಿಸುವಂತಿಲ್ಲ, ಯಾಕೆಂದರೆ ಉಳಿದವರೆಲ್ಲಾ ನನ್ನ ಸಪೋರ್ಟ್‌ಗೆ ಇದಾರೆ ಎಂದುಕೊಂಡು ಇನ್ನಷ್ಟು ಅಟ್ಟಹಾಸದಿಂಧ ಮೆರೆಯುತ್ತದೆ. ಇಂಥ ಮಗು ಮುಂದೆ ದೊಡ್ಡವನಾ/ಳಾದಾಗ ಅಮ್ಮನನ್ನು ಕಾಲ ಕಸಕ್ಕಿಂತ ಕಡೆಯಾಗಿ ಕಾಣಬಹುದು. ಅಮ್ಮ ಒಳಗೊಳಗೇ ಕೊರಗಿ ನವೆಯಬಹುದು. ಹೀಗೆ ಇಬ್ಬರೂ ಸಫರ್ ಆಗುತ್ತಾರೆ.
ಮಕ್ಕಳಿಗೆ ಕೆಲವು ವರ್ತನೆಗಳನ್ನು ಚಿಕ್ಕಂದಿನಿಂದಲೇ ಕಲಿಸಬೇಕು. ಉದಾಹರಣೆಗೆ, ನಿನ್ನ ಕೆಲಸ ನೀನೇ ಮಾಡಿಕೋ. ನಿನ್ನ ಬಟ್ಟೆ ನೀನೇ ತೊಳೆಯಲು ಕಲಿ. ನಿನ್ನ ಹಾಸಿಗೆ ನೀನೇ ಸರಿ ಮಾಡಿಕೋ. ಇನ್ನೊಬ್ಬರ ವಸ್ತುವನ್ನು ಗೌರವದಿಂಧ ಕಾಣು. ಕದಿಯಬೇಡ. ಅಕಸ್ಮಾತ್ ಹಾದಿಯಲ್ಲಿ ಬಿದ್ದಿದ್ದ ಸಿಕ್ಕರೂ ಅದು ಅದರ ಒಡೆಯರಿಗೆ ಸಿಗುವಂತೆ ಪ್ರಾಮಾಣಿಕತೆ ತೋರಿಸು. ಸುಳ್ಳು ಹೇಳಬೇಡ. ಇತರರೊಂದಿಗೆ ಕೂತು ಊಟ ಮಾಡು. ಇತರರು ಸೇವಿಸುವುದನ್ನೇ ತಾನೂ ಸೇವಿಸಬೇಕು, ತನಗಾಗಿ ಪ್ರತ್ಯೇಕ ತಿಂಡಿ ಬೇಕು ಎಂಧು ಹಠ ಮಾಡಬಾರದು. ಮಾಡಿದ ಅಡುಗೆ- ಊಟ- ತಿಂಡಿಯನ್ನು ಗೌರವಿಸಬೇಕು. ಬೇಕಾದಷ್ಟೇ ತಿಂಡಿಯನ್ನು ತಟ್ಡೆಗೆ ಹಾಕಿಸಿಕೊಳ್ಳಬೇಕು, ಹಾಕಿಸಿಕೊಂಡ ಆಹಾರವನ್ನು ವೇಸ್ಟ್ ಮಾಡಬಾರದು- ಇವೆಲ್ಲವನ್ನೂ ಮಗುವಿಗೆ ಹತ್ತು ವರ್ಷ ಆಗುವುದರೊಳಗೆ ಕಲಿಸಿದರೆ ಮುಂದೆ ಮಗು ಜವಾಬ್ದಾರಿಯುತ ನಾಗರಿಕನಾಗುತ್ತಾಳೆ/ಳೆ. ಇದನ್ನೆಲ್ಲ ಕಲಿಸುವಲ್ಲಿ ತಾಯಿಯ ಪಾತ್ರ ಮಹತ್ವದ್ದು. ಹಾಗೇ ತಾಯಿ ಇದನ್ನೆಲ್ಲ ಕಲಿಸುವಾಗ ಫ್ಯಾಮಿಲಿಯ ಇತರ ಸದಸ್ಯರು ಆಕೆಗೆ ಬೆಂಬಲ ನೀಡಬೇಕು.
Personality Development: EGO ಬಿಟ್ಬಿಡಿ..ಎಲ್ಲಾ ಸರಿ ಹೋಗುತ್ತೆ
ಇನ್ನು ಮುಂದೆ, ಇಂಥ ಸನ್ನಿವೇಶ ಬಂದಾಗ ನಿಮ್ಮ ಮನೆಯ ಸೊಸೆ ಅಥವಾ ಪತ್ನಿಯ ಪರವಾಗಿ ನಿಲ್ಲುತ್ತೀರಿ ತಾನೆ?