ಬಿದ್ದು ಗೆದ್ದ ಆ ಇಬ್ಬರ ಕಥೆ ಇದು!

By Kannadaprabha News  |  First Published Jun 9, 2020, 9:05 AM IST

ಕಷ್ಟದ ಕುಲುಮೆಯಲ್ಲಿ ಬೆಂದು ವಿಗ್ರಹವಾದವರ ಕತೆ ಇದು. ಬದುಕಿನ ಪೆಟ್ಟುಗಳು, ಕಷ್ಟಗಳು ಹೇಗೆ ನಮ್ಮನ್ನು ಕೆಳಕ್ಕೆ ಬೀಳಿಸುತ್ತವೆ, ಫೀನಿಕ್ಸ್‌ನಂತೆ ಅವುಗಳಿಂದ ಮೇಲೇಳೋದು ಹೇಗೆ, ಬದುಕನ್ನು ಫೇಸ್‌ ಮಾಡೋದು ಹೇಗೆ? ಆ ಧೈರ್ಯವನ್ನು ಈ ಇಬ್ಬರು ನೀಡ್ತಾರೆ.


1. ಅಪ್ಪ ಸುಟ್ಟಿದ್ದು ನನ್ನ ಚರ್ಮವನ್ನು, ಧೈರ್ಯವನ್ನಲ್ಲ!

ಇವಳ ಹೆಸರು ನೀಮಾ ಅಂತಿಟ್ಟುಕೊಳ್ಳಿ. ಗಂಡ, ಮಗಳ ಜೊತೆಗೆ ಹಾಸಿಗೆ ಮೇಲೆ ಮಲಗಿದ್ದಳು. ಮುಖದ ಮೇಲೆ ಬೆಂಕಿ ಬಿದ್ದಂತಾಗಿ ಎಚ್ಚರವಾಯಿತು. ನೋಡಿದರೆ ಮುಖ, ಕತ್ತಿನ ಚರ್ಮವೆಲ್ಲ ಕರಗುತ್ತಿದೆ. ಎದುರಿಗೆ ನಿಂತಿರುವ ಅಪ್ಪ, ಅವರ ಕೈಯಲ್ಲಿ ಆ್ಯಸಿಡ್‌ ಬಾಟಲಿ! ‘ಆಸ್ಪತ್ರೆಗೆ ನನ್ನನ್ನು ಕರೆದೊಯ್ಯುವಾಗಲೂ ಕಿರುಚುತ್ತಲೇ ಇದ್ದೆ. ಯಾಕೆ ಹೀಗೆ ಮಾಡಿದ್ರಿ ಅಪ್ಪಾ.. ತನ್ನ ಮಗಳ ಮೇಲೆ ಅಪ್ಪನೇ ಆ್ಯಸಿಡ್‌ ಹಾಕ್ತಾರೆ ಅಂದರೆ ಅದನ್ನು ನಂಬಕ್ಕಾಗುತ್ತಾ? ಅವರಿಗೆ ದುಶ್ಚಟಗಳಿದ್ದವು. ಅದನ್ನು ನಿಲ್ಲಿಸಿ ಅಂತ ನಾನು ಹೇಳಿದ್ದು ಅವರಿಗೆ ಸಿಟ್ಟು ಬರಿಸಿತ್ತು. ಅದಕ್ಕಾಗಿ ಹೆತ್ತ ಮಗಳ ಮೇಲೆಯೇ ಆ್ಯಸಿಡ್‌ ಹಾಕಿದ್ದರು’ ಅಂತ ತಮ್ಮ ಪರಿಸ್ಥಿತಿ ವಿವರಿಸುತ್ತಾರೆ ನೀಮಾ.

Latest Videos

undefined

ಆಸ್ಪತ್ರೆಯಲ್ಲಿ ಹಲವು ತಿಂಗಳುಗಳ ಚಿಕಿತ್ಸೆ. ಈ ಮಧ್ಯೆ ಅವಳ ಮುಖ ಅವಳಿಗೆ ಕಾಣದಿರಲಿ ಅಂತ ಕನ್ನಡಿಗಳನ್ನೆಲ್ಲ ತೆಗೆದಿಟ್ಟಿದ್ದರು. ಆದರೂ ಈಕೆ ಅಚಾನಕ್‌ ಆಗಿ ತನ್ನ ಮುಖ ನೋಡಿಕೊಂಡಾಗ ಕಿಟಾರನೆ ಕಿರುಚಿ ಅಳತೊಡಗಿದರು. ಆಗ ಓಡಿ ಬಂದ ಅಮ್ಮ ಸಮಾಧಾನ ಮಾಡಿ ಧೈರ್ಯ ಹೇಳಿದ್ದರು. ಇತ್ತ ಕಣ್ಣು ಆಪರೇಶನ್‌ ಆಗುತ್ತಿದ್ದಾಗ ನೀಮಾ ಅಮ್ಮನೂ ಅಸುನೀಗುತ್ತಾರೆ. ದಿಕ್ಕೇ ತೋಚದ ನೀಮಾಗೆ ಆತ್ಮಹತ್ಯೆಯ ಯೋಚನೆ ಬಂದರೂ ಮಗುವಿಗಾಗಿ ತಡೆದುಕೊಳ್ಳುತ್ತಾಳೆ. ಆಮೇಲಾಮೇಲೆ ಗಂಡ ಈಕೆಯ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹಿಂದೇಟು ಹಾಕ್ತಾನೆ. ಬೇರೆಯವರ ಜೊತೆಗೆ ಅಫೇರ್‌ ಇಟ್ಟುಕೊಂಡು ನಿತ್ಯ ಈಕೆಗೆ ಹೊಡೆತ, ಬಿಸಿ ಎಣ್ಣೆ ಎರೆಚುವುದು ಇತ್ಯಾದಿ ಹಿಂಸೆ ನೀಡುತ್ತಾನೆ. ಅವನನ್ನು ಬಿಟ್ಟು ಹೊರಬರಬೇಕು ಅಂದರೆ ಈಕೆ ಆರ್ಥಿಕ ಸ್ವಾವಲಂಬಿಯಲ್ಲ, ಮಗಳ ಜವಾಬ್ದಾರಿಯೂ ಇದೆ. ಎಲ್ಲೇ ಕೆಲಸ ಕೇಳಿದರೂ ಯಾರೂ ಕೆಲಸ ಕೊಡುವುದಿಲ್ಲ. ಕೊನೆಗೆ ಈಕೆಯ ನೆರವಿಗೆ ಬಂದದ್ದು ‘ಶಿ ರೋಸಸ್‌’.

ಅಪ್ಪನನ್ನು ಕೂರಿಸಿ 1200 ಕಿ. ಮೀ ಸೈಕಲ್ ತುಳಿದ ಜ್ಯೋತಿ ಗೌರವಿಸಿ ಅಂಚೆ ಚೀಟಿ ಬಿಡುಗಡೆ! 

ಈ ಸಂಸ್ಥೆ ಈಕೆಯನ್ನು ಆರ್ಥಿಕ ಸ್ವಾವಲಂಬಿಯಾಗಿಯಷ್ಟೇ ಮಾಡಲಿಲ್ಲ, ಈಕೆ ಸಹಜವಾಗಿ ಜನರ ಜೊತೆಗೆ ಬೆರೆಯುವಂತೆ, ತನ್ನ ಕಷ್ಟವನ್ನು ಹಂಚಿಕೊಳ್ಳುವಂತೆ ಮಾಡಿತು. ಮಾನಸಿಕವಾಗಿ ಸ್ಥೈರ್ಯ ತುಂಬಿತು. ಈಗ ನೀಮಾ ಮಗಳ ಜೊತೆಗೆ ಸ್ವಾವಲಂಬಿ ದಿನ ಕಳೆಯುತ್ತಿದ್ದಾಳೆ. ಗಂಡನಿಂದ ಡಿವೋರ್ಸ್‌ ಪಡೆದಿದ್ದಾಳೆ. ಅಪ್ಪ ಹಾಗೂ ಗಂಡನ ದೌರ್ಜನ್ಯದ ವಿರುದ್ಧ ಕೇಸ್‌ ಹಾಕಿ ಹೋರಾಟ ಮಾಡುತ್ತಿದ್ದಾಳೆ.

‘ಅವರು ನನ್ನ ಚರ್ಮವನ್ನು ಸುಡಬಹುದು, ಧೈರ್ಯವನ್ನಲ್ಲ’ ಅಂತ ಕೆಚ್ಚಿನಿಂದ ಹೇಳುವ ನೀಮಾ ನಮಗೆಲ್ಲ ಸ್ಫೂರ್ತಿ.

2. ದೇವರಂತೆ ಬಂದ ತಂಗಿ

ತಂಗಿ ಕೊಟ್ಟಭರವಸೆಯಿಂದಲೇ ಕ್ಯಾನ್ಸರ್‌ಅನ್ನು ಮಣಿಸಿ ನಗುತ್ತಿರುವ ಯುವಕ ಹೇಳಿದ ಸತ್ಯ ಕತೆ.

ನಾನಾಗ ಸೂರತ್‌ನಲ್ಲಿದ್ದೆ. ಮನೆಯವರು ಮುಂಬೈನಲ್ಲಿದ್ದರು. ಇದು ಎರಡು ವರ್ಷಗಳ ಹಿಂದಿನ ಘಟನೆ. ಸಡನ್ನಾಗಿ ಒಣಕೆಮ್ಮು ಶುರುವಾಯ್ತು. ಇನ್‌ಫೆಕ್ಷನ್‌ ಆಗಿರುತ್ತೆ ಅಂದುಕೊಂಡು ಡಾಕ್ಟರ್‌ ಹತ್ರ ಹೋದೆ. ಅವರು ಒಂದಿಷ್ಟುಟೆಸ್ಟ್‌ಗಳಿಗೆ ಬರೆದುಕೊಟ್ಟರು. ಆಮೇಲೆ ಮತ್ತೆ ಮತ್ತೆ ಟೆಸ್ಟ್‌ ಮಾಡಿದರು. ಬಳಿಕ ‘ಕೂಡಲೇ ನಿಮ್ಮ ಮನೆಯವರನ್ನು ಕರೆಸಿ’ ಅಂದರು. ‘ನನಗೇನಾಗಿದೆ, ದಯವಿಟ್ಟು ಹೇಳಿ ಡಾಕ್ಟರ್‌’ ಅಂತ ಗೋಗರೆದೆ. ‘ಲ್ಯುಕೇಮಿಯಾ’ ಅಂದರು. ತತ್ತರಿಸಿ ಹೋದೆ. ಆ ದಿನವೇ ಮನೆಯವರು ಬಂದು ಮುಂಬೈಗೆ ಕರೆದೊಯ್ದು ಅಲ್ಲಿ ಚಿಕಿತ್ಸೆ ಶುರು ಮಾಡಿದರು.

ವಿಪರೀತ ನೋವು. ಕೀಮೋ ನೀಡುವಾಗಲಂತೂ ನರಕ ಸದೃಶ. ನೋವಿಗೆ ಹೊರಳಾಡಿ ಒದ್ದಾಡುತ್ತಿದ್ದೆ. ನನ್ನ ತಂಗಿ ಉಕ್ಕಿಬರುವ ಅಳುವನ್ನು ನಿಯಂತ್ರಿಸಿ ನನ್ನನ್ನು ಸಮಾಧಾನ ಮಾಡುವ ವಿಫಲ ಪ್ರಯತ್ನ ಮಾಡುತ್ತಿದ್ದಳು. ನನ್ನ ಜೊತೆಗೆ ಅವರೆಲ್ಲ ಇದ್ದರೂ ನನ್ನ ನೋವನ್ನು ಅವರೊಂದಿಗೆ ಹಂಚಿಕೊಳ್ಳಲು ಆಗುತ್ತಿರಲಿಲ್ಲ. ಒಮ್ಮೆ ಬದುಕು ಕೊನೆಗೊಂಡು ಈ ನೋವು ಕೊನೆಯಾಗಲಿ ಅಂತ ಯಾವತ್ತೂ ಅಂದುಕೊಳ್ಳುತ್ತಿದ್ದೆ. ತಂಗಿ ಸಮಾಧಾನ ಮಾಡಿದಷ್ಟುಅವಳ ಮೇಲೆ ರೇಗಾಡುತ್ತಿದ್ದೆ. ‘ನಿಂಗೆಲ್ಲಿ ಗೊತ್ತಾಗುತ್ತೆ ನನ್ನ ನೋವು. ಹೋಗಾಚೆ’ ಅಂತ ಚೀರುತ್ತಿದ್ದೆ. ಅವಳು ಮೌನವಾಗಿ ನನ್ನ ಸಂತೈಸುವ ಕೆಲಸ ಮುಂದುವರಿಸುತ್ತಿದ್ದಳು.

ಕೀಮೋದಿಂದ ನನ್ನ ಕೂದಲು ಅಲ್ಲಲ್ಲಿ ಕಿತ್ತಂತೆ ಎದ್ದು ಬರುತ್ತಿತ್ತು. ತಿಂಗಳಾದ ಮೇಲೆ ತಲೆ ಪೂರ ಬೋಳಾಯಿತು. ಕೀಮೋ ಥೆರಪಿಯ ವೇಳೆ ವಾಕರಿಕೆ, ನೋವು, ಬಳಲಿಕೆ ತಡೆಯಲಾಗುತ್ತಿರಲಿಲ್ಲ. ಪ್ರತೀ ಸಲವೂ ತಂಗಿ ಜೊತೆಗಿರುತ್ತಿದ್ದಳು.

ತಂದೆ ಸೈಫ್‌ ಬೆನ್ನ ಮೇಲೆ ಮೋಜು ಮಸ್ತಿ ಮಾಡುತ್ತಿರುವ ತೈಮೂರ್‌

ನನ್ನ ತಲೆಗೂದಲೆಲ್ಲ ಹೋದ ಕೆಲವು ದಿನಗಳಾಗಿದ್ದವು. ಆ ದಿನವೂ ಕೀಮೋ ಇತ್ತು. ಖಿನ್ನತೆ ಶುರುವಾಗಿತ್ತು. ಆಸ್ಪತ್ರೆ ಬೆಡ್‌ ಮೇಲೆ ಶವದಂತೆ ಬಿದ್ದುಕೊಂಡಿದ್ದೆ. ಅಷ್ಟೊತ್ತಿಗೆ ಹೊರಗಿಂದ ಯಾರೋ ಬಂದರು. ನೋಡಿದರೆ ನನ್ನ ತಂಗಿ. ಅವಳ ತಲೆ ಸಂಪೂರ್ಣ ಬೋಳಾಗಿದೆ, ನನ್ನ ಹಾಗೇ. ಆ ಕ್ಷಣ ನನಗೆ ತಲೆ ಎತ್ತಲಾಗಲಿಲ್ಲ. ನೀನ್ಯಾಕೆ ತಲೆ ಬೋಳಿಸಿಕೊಂಡೆ ಅಂತ ಅವಳಲ್ಲಿ ಯಾವ ಮುಖ ಇಟ್ಟು ಕೇಳುವುದು? ಅವಳು ನನ್ನ ಕೈ ಮೇಲೆ ಕೈ ಇಟ್ಟು ನನ್ನ ತಬ್ಬಿ ಹಿಡಿದು ಸಮಾಧಾನ ಮಾಡಿದಳು. ನಾವಿಬ್ಬರೂ ಬಹಳ ಹೊತ್ತು ಅಳುತ್ತಾ ಕೂತಿದ್ದೆವು. ಅದೇನೋ ಗೊತ್ತಿಲ್ಲ, ಆಮೇಲಿಂದ ಅವಳು ನನ್ನ ಜೊತೆಗಿದ್ದಾಳೆ ಅನ್ನುವ ಭಾವನೆ ನನ್ನ ಖಿನ್ನತೆಯನ್ನು ಹೊಡೆದೋಡಿಸಿತು, ನಾನು ಡಾಕ್ಟರ್‌ ನಿರೀಕ್ಷೆಗೂ ಮೊದಲೇ ಚೇತರಿಸಿಕೊಳ್ಳುತ್ತಿದ್ದೆ. ತಂಗಿ ಯಾವತ್ತೂ ನನ್ನ ಜೊತೆಗಿರುತ್ತಿದ್ದಳು. ನಾವಿಬ್ಬರೂ ಮಧ್ಯರಾತ್ರಿಯವರೆಗೆ ಹರಟುತ್ತಾ, ನಗುತ್ತಾ, ಯಾರಿಗೆ ಬೇಗ ಕೂದಲು ಬರುತ್ತೆ

ಅನ್ನೋದರ ಬಗ್ಗೆ ಮಾತಾಡುತ್ತಾ ದಿನ ಕಳೆದದ್ದೇ ಗೊತ್ತಾಗಲಿಲ್ಲ. ಒಂದು ದಿನ ಡಾಕ್ಟರ್‌ ನನ್ನ ಕೀಮೋವನ್ನೂ ನಿಲ್ಲಿಸಿದರು. ದೇವರಂತೆ ಬಂದ ತಂಗಿ, ಅವಳು ನೀಡಿದ ಧೈರ್ಯ ನನ್ನ ಬದುಕಿಸಿತ್ತು. ‘ತಂಗಿ ನನ್ನಲ್ಲಿ ಭರವಸೆ ತುಂಬಿದಳು. ಹೋಪ್‌ ಅನ್ನೋದೊಂದು ಇದ್ದರೆ ಕ್ಯಾನ್ಸರ್‌ ಕೂಡಾ ಗಣನೆಗೇ ಬರೋದಿಲ್ಲ’ ಅನ್ನೋದು ಈ ಸಂದರ್ಭ ನಾನು ಕಲಿತ ಪಾಠ.

click me!