ಮನೆಯೊಳಗೂ, ಹೊರಗೂ ದುಡಿಯುವ ಮಹಿಳೆಗೆ ಸಮಸ್ಯೆಗಳು ಹತ್ತಾರು. ಎರಡನ್ನೂ ಸಂಭಾಳಿಸುವುದೇ ಆಕೆಯ ಎದುರಿಗಿರುವ ಸವಾಲು. ಮನೆಯಲ್ಲೂ ಆಫೀಸಿನಲ್ಲೂ ದುಡಿಯುವ ಹೆಣ್ಣು ಮಗಳೊಬ್ಬಳ ಕಥೆಯಿದು.
ಆ ದಿನ ಕೆಂಡದಂತೆ ಮಗನ ಮೈಸುಡುತ್ತಿತ್ತು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡೆಸಿ ಆಫೀಸ್ ತಲುಪುವಲ್ಲಿ ಅರ್ಧ ಗಂಟೆ ತಡವಾಗಿತ್ತು. ತಿಂಗಳಲ್ಲಿ ಹೀಗೆ 2-3 ಬಾರಿ ಇಂತಹ ಸಮಸ್ಯೆ ಎದುರಾಗುತ್ತಲೇ ಇತ್ತು. ಹತ್ತು ಗಂಟೆಗೆ ಲಾಗಿನ್ ಆದ್ರೆ ಮುಂದೆ ಲಾಗ್ ಓಟ್ ಆಗುವುದು ಏಳು ಗಂಟೆ. ದಿನದ ಹತ್ತು ತಾಸು ಹೊರಗೆ ಹೋಗುತ್ತಿತ್ತು. ಇದು ನಿತ್ಯದ ಪರಿಪಾಠ. ಆಫೀಸ್ ಕೆಲಸ ಅಷ್ಟೇ ಆಗಿದ್ದರೆ ಅದೇನು ಅನ್ನಿಸುತ್ತಿರಲಿಲ್ಲ. ಉಗಳುವುದಕ್ಕೂ ಆಗದೆ ನುಂಗುವುದಕ್ಕೂ ಆಗದೆ ಬದುಕು ಬಿಸಿ ತುಪ್ಪವಾಗಿ ಮನೆಯ ಇತರೆ ಜವಾಬ್ದಾರಿಗಳು ನನ್ನ ಹೆಗಲೇರಿ ಕುಳಿತವು. ಅಕ್ಷರಶಃ ಬದುಕು ಕಾಯಕವೇ ಕೈಲಾಸವಾಯ್ತು.
ಮನೆಯ ಕೆಲಸಕ್ಕೂ ಮತ್ತೊಂದು ಜೀವ ಇಲ್ಲದಾಗಿ ಹೋಯ್ತು. ಮುಂಜಾನೆ ಮಕ್ಕಳನ್ನು ಸ್ಕೂಲ್ ವ್ಯಾನ್ ಹತ್ತಿಸಿ, ವಿದಾಯ ಹೇಳಿ ಒಳ ಸೇರಿ ಒಮ್ಮೆ ನಿಟ್ಟುಸಿರು ಬಿಟ್ಟು, ಕೈಗೆ ಪತ್ರಿಕೆ ಹಿಡಿದು ಓದಿದಾಗ ಮನಸ್ಸು ಹಾಯ್ ಅನ್ನಿಸುತ್ತಿತ್ತು. ದಿನ ಪತ್ರಿಕೆ ನನಗೆ ಟಾನಿಕ್ ಸೇವಿಸಿದಾಗ ಬರುವ ಎನರ್ಜಿ ಇದ್ದಂತಾಗಿತ್ತು. ಸುದ್ದಿ ಓದಿದ ಮೇಲೆಯೆ ಮನಸು ನಿರಾಳವಾಗುತ್ತಿತ್ತು. ಬಳಿಕ ಮುಂದಿನ ಕೆಲಸಗಳಿಗೆ ಸಜ್ಜಾಗುತ್ತಿದ್ದೆ.
undefined
ಸಂಭ್ರಮದ ಊಟೆಯಾಗಬೇಕಿತ್ತು ಆ ದಿನ, ಆದರೆ
ಇಷ್ಟೆಲ್ಲಾ ಕೆಲಸ ನಿಭಾಯಿಸುತ್ತಿರುವ ನನಗೆ ಹಿರಿಯರು ಹಾಕಿಕೊಟ್ಟಮಾರ್ಗದರ್ಶನವೆ ಭದ್ರ ಬುನಾದಿ ಇರಬೇಕೆ? ಎಂದು ಹಲವು ಸಲ ಪ್ರಶ್ನಿಸಿಕೊಳ್ಳುತ್ತಿದ್ದೆ. ಅದು ನಿಜ, ನಮ್ಮ ದೇಶದಲ್ಲಿ ಕುಟುಂಬ ಪದ್ಧತಿ, ಸಂಸ್ಕೃತಿ, ಸಂಸ್ಕಾರಗಳು ಅನಾದಿ ಕಾಲದಿಂದಲೂ ಹೆಣ್ಣು ಮಗುವಾಗಿ ಹುಟ್ಟಿದ ಕೂಡಲೇ ಆಕೆಗೆ ಹಲವು ಕಟ್ಟು ಪಾಡುಗಳಿಂದ ಆಕೆಯನ್ನು ಬಂಧಿಸಲಾಗುತ್ತದೆ. ಹಿರಿಯರು ತಿಳಿಸಿಕೊಟ್ಟನಿಯಮಗಳನ್ನೆ ಬದುಕಿನುದ್ದಕ್ಕೂ ಹೆಣ್ಣು ಚಾಚು ತಪ್ಪದೆ ನಿಭಾಯಿಸುಕೊಂಡು ಬರುತ್ತಾಳೆ.
ಚಿಕ್ಕವಯಸ್ಸಿನಲ್ಲಿ ತಂದೆಯನ್ನ ಕೇಳಿದ್ದೆ, ಅಮ್ಮ, ಮನೆ ಕೆಲಸದೊಂದಿಗೆ ಹೊರಗಡೆ ದುಡಿದು ಬರುತ್ತಾಳೆ ಅವಳಂತೆ ನೀನೇಕೆ ಮನೆ ಕೆಲಸ ಮಾಡಲಾರೆ ಅಂತ, ಆಗ ಅಪ್ಪ ಹೇಳಿದ್ದು ಹೀಗೆ, ನಿಮ್ಮಮ್ಮ ನನ್ನ ಮದುವೆಯಾಗಿ ಬಂದಿದ್ದಾಳೆ. ಅದಕ್ಕಾಗಿ ನನ್ನ ಮನೆಯ ಕೆಲಸವನ್ನೆಲ್ಲ ಆಕೆಯೇ ಮಾಡುತ್ತಾಳೆ ಎಂದಿದ್ದರು. ಹೆಣ್ಣು ಅಂದಾಕ್ಷಣ ಮನೆ ಕೆಲಸಕ್ಕೆ ಸೀಮಿತಳು ಅನ್ನೋ ಮನೋಭಾವ ಬಹುತೇಕ ಪುರುಷರಲ್ಲಿ ಕಾಣುತ್ತೇವೆ.
ಮನೆ ಹಾಗೂ ಮನೆಗೆ ಸಂಬಂಧಿಸಿದ ಜವಾಬ್ದಾರಿ ವಿಚಾರಕ್ಕೆ ಬಂದಾಗ ಎಲ್ಲದಕ್ಕೂ ಆಕೆಯೇ ಜವಾಬ್ದಾರಳು, ಆಕೆಯೇ ಹೊಣೆ, ತನ್ನದೇನೂ ಪಾತ್ರ ಇಲ್ಲ ಎಂದು ದೂರುಸರಿಯುವ ಗಂಡಸರೆ ಹೆಚ್ಚು. ಹೆಣ್ಣಾದವಳಿಗೆ ಮನೆ ಜವಾಬ್ದಾರಿ ಮಾತ್ರವಲ್ಲ ಗಂಡಸಿಗೆ ಸರಿ ಸಮನಾಗಿ ಕಚೇರಿಗಳಿಗೆ ಹೋಗಿ ಕೆಲಸ ನಿಭಾಯಿಸುತ್ತಾಳೆ. ಗಂಡಸು ನಿರ್ವಹಿಸುವ ಎಲ್ಲ ಕೆಲಸ ಕಾರ್ಯಗಳನ್ನು ಹೆಣ್ಣು ಮಗಳೂ ಸಹ ನಿರ್ವಹಿಸುತ್ತ ಇದ್ದಾಳೆ. ಆದರೆ, ಆಕೆಯು ಕೂಡ ತನ್ನಂತೆ ಒಂದು ಜೀವ ಎಂಬ
ಭಾವನೆ ಅಪ್ಪನಿಗೆ ಬರಲಿಲ್ಲ. ಗಾಣದೆತ್ತಿನಂತೆ ಆಕೆ ಹೊರಗೂ ಒಳಗೂ ದುಡಿಯುತ್ತಲೆ ಇರುತ್ತಿದ್ದಳು. ಕಡೆ ಪಕ್ಷ ಆಫೀಸ್ ನಲ್ಲಾದರೂ ವಾರಕ್ಕೆ ಒಂದು ದಿನ ರಜೆ ನೀಡುವ ನಿಯಮ ಇದೆ. ಆದರೆ, ಮನೆ ಕೆಲಸಕ್ಕೆ ಯಾವತ್ತೂ ರಜೆ ಎಂಬುದಿಲ್ಲ, ಶಾಶ್ವತ ನಿದ್ರೆಗೆ ಜಾರಿದ ಆದಿನವೇ ಬದುಕಿಗೊಂದು ಶಾಶ್ವ ತ ರಜೆ ಎನ್ನುತ್ತಿದ್ದಳು ಅಮ್ಮ. ಈಗ ನಾನು, ಸಹ ಅಮ್ಮ ಆಗಿದ್ದೇನೆ, ಅಮ್ಮನಂತೆ ಬದುಕಿನ ನೊಗ ಹೊತ್ತಿದ್ದೇನೆ. ಅಮ್ಮನ ಬಗ್ಗೆ ಮಕ್ಕಳಿಗಿರುವ ಕನಿಕರ, ಕಾಳಜಿ ಗಂಡಸಿಗೇಕೆ ಇರುವುದಿಲ್ಲ!
ಪ್ರೇಮ ಸುದೀರ್ಘ, ದಾಂಪತ್ಯ ಕ್ಷಣಿಕ, ಯಾಕ್ಹೀಗೆ?
ಆಕೆಯೂ ಸಹ ಗಂಡನ ಕಷ್ಟಸುಖಗಳಿಗೆ ಹಗಲು ರಾತ್ರಿ ಶ್ರಮಿಸಿದ್ದಾಳೆ, ಜೀವನ ಹಂಚಿಕೊಂಡಿದ್ದಾಳೆ. ಹೀಗಿದ್ದರೂ ಆಕೆಯ ಬಗ್ಗೆ ಹಿಡಿ ಪ್ರೀತಿ ತೋರಿಸದ ಅಪ್ಪನ ಬಗ್ಗೆ ರೊಚ್ಚಿಗೇಳಬೇಕು ಎನಿಸುತ್ತಿತ್ತು. ಇಂತಹ ವ್ಯಕ್ತಿತ್ವವುಳ್ಳವರಿಗಿಂತ ಮನೆಯಲ್ಲಿ ಸಾಕಿದ ಪ್ರಾಣಿಗಳೇ ಎಷ್ಟೋ ಮೇಲು ಎನಿಸಿದ್ದೂ ಉಂಟು. ಕೆಟ್ಟಮನಸ್ಸುಗಳೊಂದಿಗೆ ಬದುಕುವುದಕ್ಕಿಂತ ಒಳ್ಳೆಯತನದ ವಾತಾವರಣ ಹುಡುಕಿಕೊಂಡು ಹೋಗುವುದೇ ಸೂಕ್ತ. ಆಗ ಅನಿಸಿದ್ದು ಇಷ್ಟೇ, ಬದುಕಿಗೊಂದು ಬೇಕು ಉದ್ಯೋಗದ ಆಶ್ರಯ. ಉದ್ಯೋಗವಿಲ್ಲದ ಬದುಕು, ಬದುಕೆ ಅಲ್ಲ ಅಂತ ಜೀವನ ಅರ್ಥ ಮಾಡಿಸಿತು.
- ಬಸವಂತಿ ಕೋಟೂರು