ಅರ್ಥಶಾಸ್ತ್ರವನ್ನು ಅರ್ಥ ಮಾಡಿಸಿದ ಲಾಕ್‍ಡೌನ್; ದುಂದುವೆಚ್ಚಕ್ಕೆ ಬಿತ್ತು ಕಡಿವಾಣ!

By Suvarna NewsFirst Published Apr 3, 2020, 4:07 PM IST
Highlights

ಆಧುನಿಕ ಜೀವನಶೈಲಿಗೆ ಮಾರುಹೋಗಿರುವ ನಾವು ಅದೆಷ್ಟು ದುಂದುವೆಚ್ಚ ಮಾಡುತ್ತಿದ್ದೆವು ಎಂಬುದು ಅರ್ಥವಾಗಲು ಕೊರೋನಾ ಎಂಬ ಮಹಾಮಾರಿಯೇ ವಕ್ಕರಿಸಿಕೊಳ್ಳಬೇಕಾಯಿತು. ಬದುಕು ಅದೆಷ್ಟು ಸರಳ ಎಂಬ ಪಾಠವನ್ನು ಲಾಕ್‍ಡೌನ್ ಕಲಿಸಿದೆ.

2020ರಲ್ಲಿ ಖರ್ಚು ಕಡಿಮೆ ಮಾಡುತ್ತೇನೆ ಎಂಬ ರೆಸಲ್ಯೂಶನ್ ಕೈಗೊಂಡವರಿಗೆ ಮೊದಲ ಎರಡೂವರೆ ತಿಂಗಳು ಇದನ್ನು ಅನುಷ್ಠಾನಗೊಳಿಸೋದು ಕಷ್ಟವಾಗಿರಬಹುದು. ಆದ್ರೆ ಮಾರ್ಚ್ ಮೂರನೇ ವಾರದಿಂದ ವರ್ಕ್ ಫ್ರಂ ಹೋಮ್ ಹಾಗೂ ಲಾಕ್‍ಡೌನ್ ಪರಿಣಾಮ ದೈನಂದಿನ ಖರ್ಚು-ವೆಚ್ಚದಲ್ಲೂ ಗಮನಾರ್ಹ ಇಳಿಕೆಯಂತೂ ಖಂಡಿತಾ ಆಗಿರುತ್ತೆ. ಅಂತೂ ಈ ವರ್ಷದ ಆರಂಭದಲ್ಲಿ ಕೈಗೊಂಡ ರೆಸಲ್ಯೂಶನ್ ಕೊನೆಯ ತನಕ ನೆನಪಿನಲ್ಲಿರಲು, ಕಾರ್ಯರೂಪಕ್ಕೆ ಬರಲು ಹಲವರಿಗೆ ಲಾಕ್‍ಡೌನ್ ನೆರವಾಗಿರೋದಂತೂ ಸತ್ಯ. ಹಾಗಾದ್ರೆ ಲಾಕ್‍ಡೌನ್ ಕಲಿಸಿದ ಆರ್ಥಿಕ ಪಾಠವೇನು ?

ಕೊರೋನಾ ವೈರಸ್‌ಗೆ ಅರಳುತ್ತಿವೆ ಆನ್‌ಲೈನ್ ಅಫೇರ್ಸ್

ಅಗತ್ಯವಾಗಿದ್ದನ್ನು ಮಾತ್ರ ಖರೀದಿಸಿ
ಲಾಕ್‍ಡೌನ್ ಪರಿಣಾಮವಾಗಿ ದಿನದಲ್ಲಿ ನಿರ್ದಿಷ್ಟ ಅವಧಿ ಮಾತ್ರ ಹೊರಗೆ ಹೋಗಲು ಅವಕಾಶವಿದೆ. ದಿನಸಿ, ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು, ಶಾಪಿಂಗ್ ಮಾಲ್‍ಗಳು ಬಂದ್ ಇವೆ. ಹೀಗಾಗಿ ಜನರು ಅಗತ್ಯವಿರುವ ವಸ್ತುಗಳನ್ನಷ್ಟೇ ಖರೀದಿಸುತ್ತಿದ್ದಾರೆ. ಮಾರ್ಕೆಟ್‍ಗೆ ಹೋದವರು ವಾರಕ್ಕೆ ಬೇಕಾಗುವಷ್ಟು ಅಗತ್ಯ ಸಾಮಗ್ರಿಗಳನ್ನಷ್ಟೇ ಖರೀದಿಸಿ ಹಿಂತಿರುಗುತ್ತಿದ್ದಾರೆ. ಪರಿಣಾಮ ಈ ತಿಂಗಳು ಖರ್ಚು ಸಿಕ್ಕಾಪಟ್ಟೆ ಕಡಿಮೆಯಾಗಿರೋದಂತೂ ಗ್ಯಾರಂಟಿ. ತಿಂಗಳ ಹಿಂದೆ ನೀವು ಹೇಗಿದ್ದೀರಿ ಎಂಬುದನ್ನು ಸ್ವಲ್ಪ ರಿವೈಂಡ್ ಮಾಡಿಕೊಂಡು ನೋಡಿ. ವೀಕೆಂಡ್ ಬಂತೆಂದ್ರೆ ಮನೆಯೊಳಗಡೆ ಇರುವುದೇ ಬೋರ್ ಎಂದು ಭಾವಿಸುತ್ತಿದ್ರೆ. ಮಾಲ್, ಮಾರ್ಕೆಟ್, ಶಾಪಿಂಗ್ ಸ್ಟ್ರೀಟ್‍ಗಳಿಗೆ ಹೋಗಿಲ್ಲ ಅಂದ್ರೆ ವೀಕೆಂಡ್ ಮಜಾ ಮಾಡಿದ ತೃಪ್ತಿಯೇ ಸಿಗುತ್ತಿರಲಿಲ್ಲ ಅಲ್ವಾ? ಇನ್ನು ಕಣ್ಣಿಗೆ ಕಂಡಿದ್ದು, ಮನಸ್ಸು ಬಯಸಿದ್ದು ಎಲ್ಲವನ್ನೂ ಕೊಂಡುಕೊಳ್ಳುವ ಬಯಕೆ. ಆದ್ರೆ ಈಗ? ಹೊರಗೆ ಹೋಗಲು ಕರೋನಾ ಭಯ. ಇನ್ನು ಹೊರಗೆ ಹೋಗಬೇಕು ಎಂದು ಮನಸ್ಸು ಹಟ ಮಾಡಿದ್ರೂ ಪೊಲೀಸರ ಲಾಠಿ ಏಟಿನ ಭಯವಂತೂ ಇದ್ದೇಇದೆ. ಹೀಗಾಗಿ ಅಗತ್ಯ ಸಾಮಗ್ರಿಗಳನ್ನಷ್ಟೇ ಖರೀದಿಸುವ ಮೂಲಕ ಖರ್ಚಿನ ಮೇಲೊಂದು ಹಿಡಿತ ಸಾಧಿಸಿದ್ದೇವೆ. 

ಮನೆಯಲ್ಲೇ ಆಹಾರ ಸಿದ್ಧಪಡಿಸಿದ್ರೆ ಖರ್ಚು ಕಡಿಮೆ
ಆಫೀಸ್‍ನಿಂದ ಲೇಟಾಗಿ ಬಂದಿದ್ದು ಇಲ್ಲವೆ ರಜೆ ಎಂಬ ನೆಪವನ್ನು ಮುಂದಿಟ್ಟುಕೊಂಡು ಹೊರಗಡೆಯಿಂದ ಫುಡ್ ಆರ್ಡರ್ ಮಾಡೋದು ಇಲ್ಲವೆ ವಾರಕ್ಕೊಮ್ಮೆ ಹೋಟೆಲ್‍ಗೆ ಹೋಗೋದು ನಗರ ನಿವಾಸಿಗಳ ಕಾಮನ್ ಟ್ರೆಂಡ್. ಆದ್ರೆ ಮನೆಯಲ್ಲೇ ಸಿದ್ಧಪಡಿಸುವ ಆಹಾರ ಎಷ್ಟು ರುಚಿಯಾಗಿರುತ್ತೆ ಎಂಬುದನ್ನು ಲಾಕ್‍ಡೌನ್ ತೋರಿಸಿ ಕೊಟ್ಟಿದೆ. ಅಷ್ಟೇ ಅಲ್ಲ, ಇಷ್ಟು ದಿನ ಹೋಟೆಲ್‍ಗೆ ಅನಗತ್ಯವಾಗಿ ಎಷ್ಟು ದುಡ್ಡು ಸುರಿಯುತ್ತಿದ್ರೆ ಎಂಬುದನ್ನು ಮನದಟ್ಟು ಮಾಡಿಸಿದೆ ಕೂಡ.

ಕ್ವಾರಂಟೈನ್ ಸಮಯವನ್ನು ಮಜವಾಗಿ ಕಳೆಯಿರಿ

ವಾರಕ್ಕೊಮ್ಮೆ ಶಾಪಿಂಗ್ ಮಾಡದಿದ್ರೂ ಬಟ್ಟೆಗೇನೋ ಕೊರತೆಯಿಲ್ಲ
ವೀಕೆಂಡ್ ಇರುವುದೇ ಶಾಪಿಂಗ್ ಮಾಡಲು ಎಂಬ ಅಭಿಪ್ರಾಯ ಹಲವರಲ್ಲಿದೆ. ಬಟ್ಟೆ ಇಡಲು ವಾರ್ಡ್‍ರೋಪ್‍ನಲ್ಲಿ ಜಾಗವಿಲ್ಲದಿದ್ದರೂ ಪ್ರತಿ ವಾರ ಏನಾದ್ರೂ ಖರೀದಿಸಿದ್ರೇನೆ ಕೆಲವರಿಗೆ ನೆಮ್ಮದಿ. ಆದ್ರೆ ಲಾಕ್‍ಡೌನ್‍ನಿಂದಾಗಿ ಇಂಥ ಅನಗತ್ಯ ದುಂದುವೆಚ್ಚಗಳಿಗೆ ಫುಲ್‍ಸ್ಟಾಪ್ ಬಿದ್ದಿದೆ. ವಾರ್ಡ್‍ರೋಪ್‍ನಲ್ಲಿ ಒಮ್ಮೆಯೂ ಬಳಸದಿರುವ ಅಥವಾ ಒಂದೋ ಎರಡೋ ಬಾರಿ ಬಳಸಿದ ಡ್ರೆಸ್‍ಗಳು ಎಷ್ಟಿವೆ ಎಂಬುದನ್ನು ಲೆಕ್ಕ ಹಾಕಲು ಇದು ಸೂಕ್ತ ಸಮಯ. ಒಮ್ಮೆ ವಾರ್ಡ್‍ರೋಪ್ ತೆರೆದು ನಿಮ್ಮ ಬಳಿ ಎಷ್ಟು ಡ್ರೆಸ್‍ಗಳಿವೆ ಎಂಬುದನ್ನು ಮರೆಯದೆ ಲೆಕ್ಕ ಮಾಡಿದ್ರೆ ಶಾಪಿಂಗ್ ಹೆಸರಲ್ಲಿ ನೀವೆಷ್ಟು ಹಣ ಪೋಲು ಮಾಡುತ್ತಿದ್ರೆ ಎಂಬುದು ತಿಳಿಯುತ್ತದೆ. 

ಎಣ್ಣೆ ಇಲ್ಲದೆಯೂ ಎಂಜಾಯ್ ಮಾಡ್ಬಹುದು
ರಾತ್ರಿ ಆಗುತ್ತಿದ್ದಂತೆ ಕೆಲವರಿಗೆ ಮದ್ಯ ಹೊಟ್ಟೆಗಿಳಿದ್ರೇನೆ ನಿದ್ರೆ ಬರೋದು. ಎಲ್ಲ ಚಿಂತೆ, ತಲೆಬಿಸಿಗಳಿಗೂ ಎಣ್ಣೆಯೇ ಮದ್ದು ಎಂದು ಭಾವಿಸಿರುವ ಪುರುಷೋತ್ತಮರು ಅನೇಕರಿದ್ದಾರೆ. ಆದ್ರೆ ಬಾರ್, ವೈನ್‍ಶಾಪ್‍ಗಳಿಗೆ ಬೀಗ ಬಿದ್ದ ಕಾರಣ ಲಾಕ್‍ಡೌನ್ ಅವಧಿಯಲ್ಲಿ ನಶೆಯೇರುವ, ಕಿಕ್ ನೀಡುವ ಯಾವುದೇ ವಸ್ತುಗಳು ಸಿಗುತ್ತಿಲ್ಲ. ಎಣ್ಣೆ ಇಲ್ಲದೆಯೋ ಬದುಕಬಹುದು, ಮನೆಮಂದಿ ಜೊತೆಗೆ ಎಂಜಾಯ್ ಮಾಡಬಹುದು ಎನ್ನುವುದು ಕೆಲವೇ ಕೆಲವು ಮಂದಿಗಾದರೂ ಈ ಅವಧಿಯಲ್ಲಿ ಅರ್ಥವಾಗಿರುತ್ತೆ. ಎಣ್ಣೆಗಾಗಿ ಸುರಿಯುತ್ತಿದ್ದ ಹಣದ ಮೌಲ್ಯವನ್ನು ಲಾಕ್‍ಡೌನ್ ತಿಳಿಸಿದೆ. 

ಅಜ್ಜ-ಅಜ್ಜಿ ಸಾಂಗತ್ಯ ನೀಡಿದರೆ, ಮಕ್ಕಳಿಗದೇ ಬೆಸ್ಟ್ ಗಿಫ್ಟ್!

ಮನೆಯಲ್ಲೇ ಕುಳಿತು ಕೆಲಸ ಮಾಡಿದ್ರೆ ನಯಾಪೈಸಾ ಖರ್ಚಿಲ್ಲ
ಆಫೀಸ್‍ಗೆ ಹೋಗಿ ಕೆಲಸ ಮಾಡೋದು ಭಾರತದ ಹೆಚ್ಚಿನ ಕಂಪನಿಗಳಲ್ಲಿ ಕಡ್ಡಾಯ. ಆದ್ರೆ ಮನೆಯಿಂದಲೇ ಕೆಲಸ ಮಾಡೋದ್ರಿಂದ ಉದ್ಯೋಗಿಗಳಿಗೆ ಅದೆಷ್ಟು ಲಾಭವಿದೆ ಎಂಬುದನ್ನು ಲಾಕ್‍ಡೌನ್ ಮನದಟ್ಟು ಮಾಡಿಸಿದೆ. ಆಫೀಸ್ ಕ್ಯಾಬ್ ಇಲ್ಲದವರಿಗೆ ಟ್ರಾವೆಲಿಂಗ್ ಖರ್ಚು ಉಳಿತಾಯವಾಗುತ್ತಿದೆ. ಇನ್ನು ಆಫೀಸ್‍ನಲ್ಲಿ ಲಂಚ್, ಟೀ, ಸ್ನ್ಯಾಕ್ಸ್ ಅಂತಹ ಖರ್ಚು ಮಾಡುತ್ತಿದ್ದ ಹಣವೂ ಉಳಿಯುತ್ತಿದೆ. ಮನೆಯಲ್ಲೇ ಊಟ, ತಿಂಡಿ ಎಲ್ಲವೂ ಆಗುತ್ತಿರುವ ಕಾರಣ ಜೇಬಿಗೆ ಯಾವುದೇ ಹೊರೆಯಿಲ್ಲ. ಬೈಕ್, ಕಾರು ಮನೆ ಮುಂದೆ ಆರಾಮವಾಗಿ ರೆಸ್ಟ್ ಮಾಡುತ್ತಿರುವ ಕಾರಣ ಪೆಟ್ರೋಲ್‍ಗೆ ಸುರಿಯುತ್ತಿದ್ದ ಹಣ ಕೂಡ ಉಳಿತಾಯವಾಗಿದೆ. 

 

click me!