ವಿವಾಹವಾದ ಮೇಲೆ ಒಂದಿಷ್ಟು ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅವುಗಳ ಬಗ್ಗೆ ಅರಿವಿದ್ದರೆ ಸಮಸ್ಯೆ ಬಂದಾಗ ಹೆದರಬೇಕಿಲ್ಲ, ಎದುರಿಸುವ ಧೈರ್ಯ ತಂದುಕೊಳ್ಳಬಹುದು.
ಲವ್ ಮ್ಯಾರೇಜ್ ಇರಲಿ, ಮನೆಯವರು ನೋಡಿ ನಿಶ್ಚಯಿಸಿದ ಮದುವೆಯೇ ಇರಲಿ, ಎರಡರಲ್ಲೂ ಒಂದಿಷ್ಟು ಪ್ಲಸ್ಸು, ಮೈನಸ್ಸುಗಳಿರುತ್ತವೆ. ಒಳಿತು, ಕೆಡುಕುಗಳಿರುತ್ತವೆ. ಯಾವುದು ಉತ್ತಮ, ಏಕೆ ಎಂಬುದನ್ನು ಯಾರೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೂ, ಭಾರತೀಯ ಪೋಷಕರು ತಾವು ನೋಡಿ ನಿಶ್ಚಯಿಸುವ ಮದುವೆಯೇ ಉತ್ತಮ ಎಂಬು ಭಾವಿಸುತ್ತಾರೆ. ಭಾರತದಲ್ಲಿ ಶೇ.80ರಷ್ಟು ಜನ ಆರೇಂಜ್ಡ್ ಮ್ಯಾರೇಜ್ ಬಯಸುತ್ತಾರೆ. ಪೋಷಕರು ಎಲ್ಲ ರೀತಿಯಲ್ಲೂ ನೋಡಿ, ವಿಚಾರಿಸಿ ಮಾಡುವ ಮದುವೆಯಾದ್ದರಿಂದ ಸಮಸ್ಯೆಗಳು ಬರುವುದಿಲ್ಲ ಎಂಬುದು ಬಹುತೇಕರ ಭಾವನೆ. ಆದರೆ, ಲವ್ ಮ್ಯಾರೇಜ್ ಆದರೂ, ಹಿರಿಯರು ನಿಶ್ಚಯಿಸಿದ ಮದುವೆಯೇ ಆದರೂ- ಮದುವೆ ಎಂದ ಮೇಲೆ ಸಮಸ್ಯೆ ಅದರ ಅವಳಿ ಜೋಡಿಯಂತೆ ಜೊತೆಯಾಗಿ ಬರುತ್ತದೆ.
ಎಲ್ಲ ಬ್ಯಾಚುಲರ್‌ಗಳೂ ವಿವಾಹದ ಕನಸು ಕಾಣುವಾಗ ಜೋಡಿಯೊಂದು ಸಿಕ್ಕರೆ ಬದುಕು ಸುಂದರವಾಗಿರುತ್ತದೆ ಎಂದು ಬಹಳಷ್ಟು ಚೆಂದದ ಕಲ್ಪನೆಗಳನ್ನು ಕಟ್ಟಿಕೊಳ್ಳುತ್ತಾರೆ. ಅದು ನಿಜವೂ ಇರಬಹುದು. ಆದರೆ, ಯಾರೂ ಸಮಸ್ಯೆಗಳ ಬಗ್ಗೆ ಯೋಚಿಸುವುದಿಲ್ಲ. ವಿವಾಹವೆಂದರೆ ಪ್ಲಸ್ಸು ಮೈನಸ್ಸು ಎರಡೂ ತಿಳಿದಿರಬೇಕು. ಆಗ ಹೆಚ್ಚು ಭ್ರಮನಿರಸನವಾಗುವುದಿಲ್ಲ. ಅಷ್ಟೇ ಅಲ್ಲ, ವಿವಾಹದ ಸಾಮಾನ್ಯ ಸಮಸ್ಯೆಗಳನ್ನು ಎದುರಿಸಲು ನೀವು ಮಾನಸಿಕವಾಗಿ ಸಿದ್ಧರಾಗಿರುವಿರಿ.
undefined
ಆರೇಂಜ್ಡ್ ಮ್ಯಾರೇಜ್ ಆದ ಜೋಡಿ ಎದುರಿಸುವ ಸಾಮಾನ್ಯ ಸಮಸ್ಯೆಗಳಿವು,
ಅತ್ತೆ ಮಾವಗೆ ಹೊಂದಿಕೊಳ್ಳುವುದು
ಇನ್ನೊಬ್ಬರೊಂದಿಗೆ ಬದುಕಬೇಕೆಂದರೆ ಒಂದಿಷ್ಟು ಹೊಂದಾಣಿಕೆ ಬೇಕೇ ಬೇಕು. ಅಂಥದರಲ್ಲಿ ಅವರ ಕುಟುಂಬ ಸದಸ್ಯರೆಲ್ಲರ ಜೊತೆ ಹೊಂದಿಕೊಳ್ಳಬೇಕೆಂದರೆ ಅದು ಒಂದು ಬಗೆಯ ಸವಾಲೇ ಸರಿ. ಅದರಲ್ಲೂ ಸ್ವಾತಂತ್ರ್ಯದ ಸಂಪೂರ್ಣ ರುಚಿ ನೋಡಿರುವ ಇಂದಿನ ಹುಡುಗಿಯರಿಗೆ ಅತ್ತೆಮಾವನ ನಿರೀಕ್ಷೆಗಳನ್ನು ಪೂರೈಸುವುದು ಸ್ವಲ್ಪ ಕಷ್ಟವೇ ಆಗುತ್ತದೆ. ಅವರಿಗಾಗಿ ಡ್ರೆಸಿಂಗ್ ಸ್ಟೈಲ್ ಬದಲಿಸಬೇಕಾಗಬಹುದು, ಹೊಸ ಆಹಾರಾಭ್ಯಾಸ, ಹೊಸ ಹೊಸ ನೆಂಟರಿಷ್ಟರ ಜೊತೆ ಬೆರೆಯುವುದು, ಅತ್ತೆಮಾವ ಬಯಸುವ ಸಂಪ್ರದಾಯಗಳನ್ನು ಪಾಲಿಸುವುದು, ಅಡುಗೆ ಕಲಿಯುವುದು ಮಾಡಲೇಬೇಕಾಗುತ್ತದೆ. ಜೊತೆಗೆ ಸಮಯ ಪಾಲನೆ, ಶಿಸ್ತು, ಎಲ್ಲರನ್ನೂ ಗೌರವಿಸುವುದನ್ನು ಬಹುತೇಕ ಅತ್ತೆಮಾವಂದಿರು ಬಯಸುತ್ತಾರೆ. ಹೊಸ ಕುಟುಂಬಕ್ಕೆ ಹೊಂದಿಕೊಳ್ಳುವುದೆಂದರೆ ಹೆಚ್ಚಿನ ಪರಿಶ್ರಮ ಹಾಕಲೇಬೇಕಾಗುತ್ತದೆ.
ಜವಾಬ್ದಾರಿ
ವಿವಾಹವಾದ ಕ್ಷಣದಿಂದಲೇ ಜೋಡಿಯ ಜವಾಬ್ದಾರಿಗಳು ಎರಡರಿಂದ ಮೂರರಷ್ಟು ಹೆಚ್ಚುತ್ತವೆ, ನಿರೀಕ್ಷೆಯ ಭಾರ ಕೂಡಾ. ಅವರ ನಗು, ಮಾತು, ಕೆಲಸ ಪ್ರತಿಯೊಂದನ್ನೂ ಎಲ್ಲರೂ ಗಮನಿಸುತ್ತಿರುತ್ತಾರೆ. ಹೀಗಾಗಿ, ರಿಯಾಲಿಟಿ ಶೋನಲ್ಲಿದ್ದಂತೆ ಭಾಸವಾದರೆ ಅದು ವಿಶೇಷವಲ್ಲ. ಇದರೊಂದಿಗೆ ತಮ್ಮ ಹೊರತಾಗಿ ಮನೆಯ ಎಲ್ಲ ಸದಸ್ಯರ ಆರೋಗ್ಯ ಕಾಳಜಿ ಮಾಡುವುದು, ಆರ್ಥಿಕ ಭಾರಗಳನ್ನು ನಿಭಾಯಿಸುವುದು, ಮನೆಗೆಲಸ, ಸಂಪ್ರದಾಯ ಪಾಲನೆ, ಸಂಗಾತಿಯ ನಿರೀಕ್ಷೆಗಳನ್ನು ಮುಟ್ಟುವುದು, ಎಲ್ಲರಿಗೂ ಸಮಯ ಹೊಂದಿಸುವುದು- ಯಾವುದರಲ್ಲೋ ಕೊಂಚ ಎಡವಿದರೂ ಹರಿದು ಬರುವ ದೂರುಗಳು, ಭಿನ್ನಾಭಿಪ್ರಾಯಗಳು... ಇವೆಲ್ಲವೂ ಬಹುತೇಕ ಎಲ್ಲ ಆರೇಂಜ್ಡ್ ಮ್ಯಾರೇಜ್‌ಗಳಲ್ಲೂ ಜೋಡಿಗೆ ತಲೆನೋವಾಗಿ ಕಾಡುತ್ತದೆ.
ವಿವಾಹಪೂರ್ವ ಆತಂಕ
ಆರೇಂಜ್ಡ್ ಮ್ಯಾರೇಜ್‌ನಲ್ಲಿ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಹೆಚ್ಚು ಸಮಯ ಸಿಗುವುದಿಲ್ಲ. ಬಹಳಷ್ಟು ಬಾರಿ ವಿವಾಹಕ್ಕೆ ಒಪ್ಪಿಗೆ ನೀಡಿದ ಮೇಲಷ್ಟೇ ತಾವು ಬಾಳು ಹಂಚಿಕೊಳ್ಳುವವರ ಬಗ್ಗೆ ಅಲ್ಪಸ್ವಲ್ಪ ತಿಳಿಯುತ್ತಾ ಹೋಗುತ್ತದೆ. ಹಾಗಾಗಿ, ಬಹುತೇಕ ಅಪರಿಚಿತರಾಗಿಯೇ ಇರುವವರೊಡನೆ ಹೊಂದಿಕೊಳ್ಳುವ ಆತಂಕ ಎಲ್ಲರನ್ನೂ ಕಾಡುತ್ತದೆ. ಅದರಲ್ಲೂ ಮನೆಯ ಇತರ ಸದಸ್ಯರೊಂದಿಗೆ ಹೊಂದಿಕೊಳ್ಳುವ ವಿಚಾರ ತನ್ನಿಂದ ಸಾಧ್ಯವೇ ಎಂದು ದಿಗಿಲಿಗೆ ದೂಡುತ್ತದೆ.
ಹಣಕಾಸು ಚಿಂತೆಗಳು
ಬಹುತೇಕ ಗಂಡಸರಿಗೆ ವಿವಾಹವಾದ ಕೂಡಲೇ ಕುಟುಂಬದ ಸಂಪೂರ್ಣ ಹಣಕಾಸು ಹೊಣೆ ಹೆಗಲಿಗೇರುತ್ತದೆ. ಪತ್ನಿ ಕೆಲಸದಲ್ಲಿದ್ದ ಮಾತ್ರಕ್ಕೆ ಈ ಹೊಣೆಯಿಂದ ಮುಕ್ತವಾಗಲು ಸಾಧ್ಯವಿಲ್ಲ. ಹಾಗಾಗಿ, ಆರೇಂಜ್ಡ್ ಮ್ಯಾರೇಜ್‌ನಲ್ಲಿ ಪುರುಷರಿಗೆ ಜೀವನಪೂರ್ತಿ ಆರ್ಥಿಕ ಸದೃಢತೆಯನ್ನು ಸಾಬೀತುಪಡಿಸಬೇಕಾದ ಒತ್ತಡವಿರುತ್ತದೆ.
ದೂರುಗಳು
ಇಬ್ಬರೂ ಪಾರ್ಟ್ನರ್‌ಗಳಿಗೆ ಪರಸ್ಪರರ ಇಷ್ಟಕಷ್ಟಗಳು ಗೊತ್ತಿರುವುದಿಲ್ಲ. ಹೀಗಾಗಿ, ವಧುವಾಗಿ ಮನೆ ತುಂಬಿದಾಕೆ ಹೊಸ ಮನೆಯ ಹೊಸ ನಿಯಮಗಳು, ನಿರೀಕ್ಷೆಗಳು ನಿದ್ದೆಗೆಡಿಸಬಹುದು. ಪತಿಗೂ ಅಷ್ಟೆ, ಆಕೆಯೊಂದಿಗೆ ಏನು ಮಾತನಾಡಿದರೆ ತಪ್ಪೋ, ಏನು ಸರಿಯೋ ಗೊತ್ತಾಗದೆ ಒದ್ದಾಡುವಂತಾಗಬಹುದು. ಸ್ವಲ್ಪ ದಿನಗಳಲ್ಲೇ ಮನೆಯವರ ಬಗ್ಗೆ, ಪರಸ್ಪರರ ಕೆಲ ವರ್ತನೆಗಳ ಬಗ್ಗೆ ದೂರುಗಳು ಶುರುವಾಗಬಹುದು. ಇದರಿಂದ ಒತ್ತಡ ಹೆಚ್ಚುತ್ತದೆ.
ಇಬ್ಬರಲ್ಲೊಬ್ಬರಿಗೆ ಸಾಕಾದರೂ ಸಣ್ಣಪುಟ್ಟ ವಿಷಯಕ್ಕೂ ದೂರುಗಳು, ಜಗಳ ಶುರುವಾಗುತ್ತದೆ.