ಕಂಪನಿಗೆ ರಾಜೀನಾಮೆ: ಫಸ್ಟ್ ಇಂಪ್ರೆಶನ್‌ನಷ್ಟೇ, ಕಡೆಯದ್ದೂ ಮುಖ್ಯ

By Suvarna NewsFirst Published Feb 20, 2020, 4:03 PM IST
Highlights

ಹೊಸ ಕೆಲಸ ಸಿಕ್ಕಿತೆಂದು ರಾಜಿನಾಮೆ ನೀಡುತ್ತಿದ್ದೀರೋ ಅಥವಾ ಹಳೆಯ ಕೆಲಸ ಇಷ್ಟವಾಗುತ್ತಿಲ್ಲ ಎಂದು ಬಿಡುತ್ತಿದ್ದೀರೋ ಎಂಬುದು ಯಾರಿಗೂ ಮುಖ್ಯವಾಗುವುದಿಲ್ಲ. ಹೇಗೆ ಬಿಡುತ್ತಿದ್ದೀರಿ ಎಂಬುದಷ್ಟೇ ಎಲ್ಲರಿಗೂ ವಿಷಯವಾಗುತ್ತದೆ.

ಕೆಲಸಕ್ಕೆ ರಾಜೀನಾಮೆ ಕೊಡುವುದು ಹೇಳಿದಷ್ಟು ಸುಲಭವಲ್ಲ. ರಿಸೈನ್ ಮಾಡಿದವರು ಯಾರನ್ನೇ ಕೇಳಿ, ಬಾಸ್ ಅಥವಾ ಮೇಲಧಿಕಾರಿಗೆ ತಾನು ರಿಸೈನ್ ಮಾಡುವ ವಿಷಯ ಹೇಳುವುದನ್ನು ಆತ ನೂರಾರು ಬಾರಿ ಮನಸ್ಸಲ್ಲೇ ರಿಹರ್ಸಲ್ ಮಾಡಿರುತ್ತಾನೆ. ಅಷ್ಟಾಗಿಯೂ ವಿಷಯ ಹೇಳುವಾಗ, ಎಲ್ಲಿ ಸಂಬಂಧ ಕೆಡಿಸಿಕೊಳ್ಳುವೆನೋ, ಬಾಸ್‌ಗೆ ಕೋಪ ಬರುವುದೋ ಎಂಬ ಭಯ ಇದ್ದೇ ಇರುತ್ತದೆ. ಬೇಡ ಇಲ್ಲೇ ಇರಿ ಎಂದರೆ ಏನು ಹೇಳುವುದು, ಸಮಸ್ಯೆಯನ್ನು ಮೊದಲೇ ತಿಳಿಸಲಿಲ್ಲವೇಕೆ ಎಂದರೆ ಏನು ಹೇಳುವುದು ಎಂಬೆಲ್ಲವನ್ನೂ ಆತ ಯೋಚಿಸಿರುತ್ತಾನೆ. ಏಕೆಂದರೆ ಕಚೇರಿಯೊಂದರಲ್ಲಿ ನಾವು ನೀಡುವ ಫಸ್ಟ್ ಇಂಪ್ರೆಶನ್ ಎಷ್ಟು ಮುಖ್ಯವೋ, ಲಾಸ್ಟ್ ಇಂಪ್ರೆಶನ್ ಕೂಡಾ ಅಷ್ಟೇ ಮುಖ್ಯ. ಉದ್ಯೋಗದ ಜಗತ್ತು ಚಿಕ್ಕದು. ಯಾರಿಗೆ ಗೊತ್ತು, ನೀವು ಭವಿಷ್ಯದಲ್ಲಿ ಮತ್ತೆ ಅದೇ  ಕಂಪನಿಯಲ್ಲೋ, ಅದೇ ಜನಗಳೊಟ್ಟಿಗೋ ಕೆಲಸ ಮಾಡುವ ಮತ್ತೊಂದು ಅವಕಾಶ ಬರಬಹುದು. ಅಥವಾ ಬೇರೆ ಕಡೆ ಹೋಗುವಾಗ ಅವರ ಸಹಾಯ ಪಡೆಯಬೇಕಾಗಬಹುದು. 

ನಿಖಿಲ್ ಭಾವಿ ಪತ್ನಿ ರೇವತಿ ಯಾವ ಕೋರ್ಸ್ ಮಾಡಿದ್ದಾರೆ ಗೊತ್ತಾ?...

ಇಷ್ಟೇ  ಅಲ್ಲದೆ, ಹಲವು ವರ್ಷ ಉದ್ಯೋಗ ಮಾಡಿದ ಸ್ಥಳವನ್ನು ಕಹಿ ಅನುಭವದಿಂದ ತ್ಯಜಿಸಿದರೆ ಜೀವನಪೂರ್ತಿ ಆ ಕೊರಗು ನಿಮ್ಮನ್ನು ಕಾಡಬಹುದು. ಹಾಗಾಗಿ, ಕೆಲಸವನ್ನು ಹೇಗೆ ಬಿಡುತ್ತೀವೆಂಬುದು ಮುಖ್ಯವಾಗುತ್ತದೆ. ಹೊಸ ಕೆಲಸ ಸಿಕ್ಕಿತೆಂದು ರಾಜೀನಾಮೆ ನೀಡುತ್ತಿದ್ದೀರೋ ಅಥವಾ ಹಳೆಯ  ಕೆಲಸ ಇಷ್ಟವಾಗುತ್ತಿಲ್ಲ ಎಂದು ಬಿಡುತ್ತಿದ್ದೀರೋ, ಬಾಸ್ ಸರಿಯಿಲ್ಲದೆ ಬಿಡುತ್ತಿದ್ದೀರೋ, ಹಲವಾರು ಕಾರಣಗಳಿರಬಹುದು. ಆದರೆ ಅವು ಯಾರಿಗೂ ಮುಖ್ಯವಾಗುವುದಿಲ್ಲ. ಹೇಗೆ ಬಿಡುತ್ತಿದ್ದೀರಿ ಎಂಬುದಷ್ಟೇ ಎಲ್ಲರಿಗೂ ವಿಷಯವಾಗುತ್ತದೆ. ಹಾಗಾಗಿ, ಇಂಥ ಕಾರಣಗಳನ್ನೆಲ್ಲ ನಿಮ್ಮೊಂದಿಗೇ ಇಟ್ಟುಕೊಳ್ಳಿ. 

ಒಂದು  ವೇಳೆ ನೀವು ಕೆಲಸ ಬಿಡಲು ನಿರ್ಧರಿಸಿದ್ದು, ಅದನ್ನು ಬಾಸ್‌ ಕೋಪಗೊಳ್ಳದಂತೆ ಹೇಗೆ ತಿಳಿಸುವುದಪ್ಪಾ, ಎಂದು ಯೋಚಿಸುತ್ತಿದ್ದರೆ, ಇಲ್ಲಿ ಕೆಲ ಸಲಹೆಗಳಿವೆ.

ನಿಮ್ಮ ಸೂಪರ್ವೈಸರ್‌ಗೆ ತಿಳಿಸಿ
ಇಡೀ ಕಚೇರಿಯಲ್ಲಿ ನೀವು ಕೆಲಸ ಬಿಡುವ ಸುದ್ದಿ ಗುಸುಗುಸುವಾಗಿ ನಿಮ್ಮ ಮೇಲಧಿಕಾರಿಯ ಕಿವಿ ತಲುಪಲು ಬಿಡಬೇಡಿ. ರಾಜಿನಾಮೆ ನೀಡುವ ಉದ್ದೇಶವಿದ್ದರೆ, ಉಳಿದ ಎಲ್ಲರಿಗೂ ತಿಳಿಯುವ ಮೊದಲು ನಿಮ್ಮ ಮೇಲಧಿಕಾರಿಗೆ ನೀವೇ ಸ್ವತಃ ತಿಳಿಸಿ. ನಿಮ್ಮ ಸಹೋದ್ಯೋಗಿಯೇ ನಿಮ್ಮ ಬೆಸ್ಟ್ ಫ್ರೆಂಡ್ ಆಗಿರಬಹುದು- ಹಾಗಿದ್ದೂ ಅವರ ಬಳಿ ಕೂಡಾ ಹೇಳಬೇಡಿ. ಕಚೇರಿಯಲ್ಲಿ ನಿಮ್ಮ ಬೆಸ್ಟ್ ಫ್ರೆಂಡ್ ಕೂಡಾ ಒಳಗೊಳಗೇ ನಿಮ್ಮನ್ನು ಸ್ಪರ್ಧಿ ಎಂದು ಪರಿಗಣಿಸುತ್ತಿರುತ್ತಾರೆ ಎಂಬುದು ತಿಳಿದಿರಲಿ.

ಒಳ್ಳೇ ಕೆಲ್ಸ ಬೇಕಾ? ಫೇಸ್‌ಬುಕ್‌ನಲ್ಲಿ ಬಾಯಿಗೆ ಬಂದ ಹಾಗೆ ಬರೀಬೇಡಿ!...

ಅಧಿಕೃತ ಹೇಳಿಕೆ ದಾಖಲೆ ನೀಡಿ
ಉದ್ಯೋಗ  ಕೋರಿ ರೆಸ್ಯೂಮೆ ನೀಡುವಾಗ ಎಷ್ಟು ಕಾಳಜಿ ವಹಿಸುವಿರೋ, ರಾಜಿನಾಮೆ ಪತ್ರಕ್ಕೂ ಅಷ್ಟೇ ಮಹತ್ವ ನೀಡಿ. ಸಿವಿಯಲ್ಲಿ ಏನೇನು ಹಾಕಿದ್ದಾರೆ ಎಂದು ಎಲ್ಲರೂ ಮತ್ತೆ ಮತ್ತೆ ಚೆಕ್ ಮಾಡಿ ಸರಿಪಡಿಸುವಂತೆ, ರಾಜೀನಾಮೆ ಪತ್ರವನ್ನು ಕೂಡಾ ಒಂದೆರಡು ಬಾರಿ ಓದಿ. ಯಾರಿಗೆ, ಯಾರಿಂದ, ದಿನಾಂಕ, ಸ್ಥಳ ಎಲ್ಲವೂ ಇದ್ದು, ಚಿಕ್ಕದಾಗಿ ಚೊಕ್ಕವಾಗಿ ಹೇಳಬೇಕಾದ್ದನ್ನು ಸರಿಯಾಗಿ ತಿಳಿಸಿ. ನೀವು ಒಳ್ಳೆಯ ತರದಲ್ಲಿ ಅಥವಾ ಕೆಟ್ಟ ರೀತಿಯಲ್ಲಿ ಕೆಲಸ ಬಿಟ್ಟರೂ, ರಾಜಿನಾಮೆ ಪತ್ರದಲ್ಲಿ ಮಾತ್ರ ನೀವು ಕೆಲಸ ಮಾಡಿದ ಕಂಪನಿಯ ಬಗೆಗೆ ಕೃತಜ್ಞತೆ ವ್ಯಕ್ತವಾಗಿರಬೇಕು. ನಿಮಗಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ತಿಳಿಸುವ ಸೌಜನ್ಯವಿರಬೇಕು. 

ಟ್ರಾನ್ಸಿಷನ್ ಪ್ಲ್ಯಾನ್
ರಾಜೀನಾಮೆ ಕೊಟ್ಟ ಬಳಿಕವೇ ಇರುವುದು ನಿಜವಾದ ಟಾಸ್ಕ್. ಹೌದು, ನೋಟಿಸ್ ಪೀರಿಯಡ್‌ ಕಳೆಯುವುದು ಉದ್ಯೋಗಿಗಷ್ಟೇ ಅಲ್ಲ, ಉದ್ಯೋಗದಾತರಿಗೂ ಸ್ವಲ್ಪ ಕಷ್ಟವೇ. ಏಕೆಂದರೆ ಉದ್ಯೋಗಿ ಯಾವೆಲ್ಲ ಪ್ರಾಜೆಕ್ಟ್‌ಗಳನ್ನು ಎಷ್ಟು ಮುಗಿಸಿದ್ದಾನೆಂಬ ಕುರಿತು ಅವರಿಗೆ ಅರಿವಿರುವುದಿಲ್ಲ. ಹೀಗಾಗಿ, ಅದನ್ನೆಲ್ಲ ರಾಜಿನಾಮೆ ಪತ್ರದಲ್ಲಿ ತಿಳಿಸಿದರೆ ಅನುಕೂಲ. ಜೊತೆಗೆ, ಯಾವ ಪ್ರಾಜೆಕ್ಟ್‌ಗೆ ಯಾವ ದಿನ ಡೆಡ್ಲೈನ್, ಅದು ಎಷ್ಟು ಮುಗಿದಿದೆ, ನೋಟಿಸ್ ಪೀರಿಯಡ್‌ನಲ್ಲಿ ಎಷ್ಟನ್ನು ಮುಗಿಸಬಹುದು ಎಲ್ಲವನ್ನೂ ವಿವರಿಸಿ. ಇದರಿಂದ ನಿಮ್ಮ ಜಾಗಕ್ಕೆ ಕೆಲಸಕ್ಕೆ ಬರುವವರಿಗೂ, ಮೇಲಧಿಕಾರಿಗೂ ಸಹಾಯವಾಗುತ್ತದೆ. 

ಸಹೋದ್ಯೋಗಿಗಳಿಗೆ ತಿಳಿಸಿ
ಇಷ್ಟೆಲ್ಲ ಆದ ಬಳಿಕ ನಿಮ್ಮ ಸಹೋದ್ಯೋಗಿಗಳಿಗೆ, ಮೆಂಟರ್‌ಗಳಿಗೆ ವಿಷಯ ತಿಳಿಸಿ. ಸಾಧ್ಯವಾದಷ್ಟು ಪಾಸಿಟಿವ್ ಕಾರಣಗಳನ್ನೇ ಕೊಡಿ. ಅವರಿಂದ ನಿಮಗಿಲ್ಲಿ ಎಷ್ಟೆಲಲ್ಲ ಸಹಾಯವಾಯಿತು ಎಂಬುದನ್ನು ಹೇಳಿ ಧನ್ಯವಾದ ಅರ್ಪಿಸಿ. ಎಲ್ಲರ ಸಂಪರ್ಕ ಸಂಖ್ಯೆಗಳನ್ನು ಪಡೆಯಿರಿ. 

click me!