ಟಿಕೆಟ್ ಫೈಟ್: ಅನಂತ್‌ ಕ್ಷೇತ್ರದಲ್ಲಿ ಪತ್ನಿ ಬಿಜೆಪಿ ಅಭ್ಯರ್ಥಿ?

By Web DeskFirst Published Feb 25, 2019, 11:26 AM IST
Highlights

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಒಂದರ್ಥದಲ್ಲಿ ಬಿಜೆಪಿಯ ಭದ್ರಕೋಟೆ. ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಅವರು ಇಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಆದರೆ ಈ ಬಾರಿ ಅನಂತ್ ಇಲ್ಲ. ಅನಂತ್ ನಿಧನದ ಅನುಕಂಪದ ಲಾಭ ಪಡೆಯಲು ಅವರ ಪತ್ನಿ ತೇಜಸ್ವಿನಿ ಅವರನ್ನು ಕಣಕ್ಕಿಳಿಸಬೇಕು ಎಂಬ ಕೂಗು ಎದ್ದಿತ್ತು. ಆರಂಭದಲ್ಲಿ ಅಷ್ಟೇನು ಒಲವು ತೋರದಿದ್ದ ತೇಜಸ್ವಿನಿ ಈಗ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು 1991ರಿಂದಲೂ ತಿಣುಕಾಡುತ್ತಿರುವ ಕಾಂಗ್ರೆಸ್ ಈ ಬಾರಿ ಗೋವಿಂದರಾಜನಗರದ ಮಾಜಿ ಶಾಸಕ ಪ್ರಿಯಕೃಷ್ಣ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದೆ.

ಮಹಾಭಾರತ ಸಂಗ್ರಾಮ: ಬೆಂಗಳೂರು ದಕ್ಷಿಣ ಕ್ಷೇತ್ರ

ಬೆಂಗಳೂರು[ಫೆ.25]: ಹಲವು ದಶಕಗಳಿಂದ ಕಾಂಗ್ರೆಸ್‌ ಪಕ್ಷ ತನ್ನ ವಶಕ್ಕೆ ತೆಗೆದುಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟು ವಿಫಲವಾಗಿರುವ ಕ್ಷೇತ್ರ ಬೆಂಗಳೂರು ದಕ್ಷಿಣ.

ಕಳೆದ ಏಳು ಅವಧಿಗಳಿಂದ ಅಂದರೆ, 1991ರಿಂದಲೂ ಈ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿದೆ. ಸತತವಾಗಿ ಏಳು ಬಾರಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಿರುವುದರಿಂದ ಕಾಂಗ್ರೆಸ್ಸಿಗೆ ಈ ಬಾರಿಯೂ ಕ್ಷೇತ್ರ ಸುಲಭದ ತುತ್ತೇನಲ್ಲ. ಆದರೆ, ಕಳೆದ ಆರು ಬಾರಿ ಗೆಲುವು ಗಳಿಸುವ ಮೂಲಕ ಕ್ಷೇತ್ರದ ಮೇಲೆ ಬಲವಾದ ಹಿಡಿತ ಹೊಂದಿದ್ದ ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌ ಅವರು ಈ ಬಾರಿ ಇಲ್ಲ ಎನ್ನುವುದು ಬಿಜೆಪಿ ಪಾಳೆಯದಲ್ಲಿ ತುಸು ಆತಂಕ ಸೃಷ್ಟಿಸಿದೆ.

ಟಿಕೆಟ್ ಫೈಟ್: ದೇವಮೂಲೆಯಲ್ಲಿ ಮತ್ತೆ ‘ಕೈ’ ಪತಾಕೆ?

ಈ ಕಾರಣಕ್ಕಾಗಿಯೇ ಜೆಡಿಎಸ್‌ ನೆರವಿನಿಂದ ಈ ಬಾರಿಯಾದರೂ ಕ್ಷೇತ್ರದಲ್ಲಿ ಬಾವುಟ ಹಾರಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ ಪಾಳೆಯದಲ್ಲಿ ನಡೆಯುತ್ತಿದೆ. ಆದರೆ, ಸಮರ್ಥ ಅಭ್ಯರ್ಥಿಯ ಕೊರತೆ ಕಾಂಗ್ರೆಸ್‌ ಪಕ್ಷವನ್ನು ಬಲವಾಗಿ ಕಾಡುತ್ತಿದೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾಗಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಸ್ಥಾನ ಹೊಂದಾಣಿಕೆಯಾದಲ್ಲಿ ಈ ಕ್ಷೇತ್ರ ಕಾಂಗ್ರೆಸ್‌ ಪಾಲಾಗುವುದು ಬಹುತೇಕ ನಿಶ್ಚಿತವಾಗಿದೆ.

ಬಿಜೆಪಿ ಭಿನ್ನಾಭಿಪ್ರಾಯ ತೊಡಕು

ಅನಂತಕುಮಾರ್‌ ಅವರೇ ಈ ಬಾರಿಯೂ ಅಭ್ಯರ್ಥಿಯಾಗಿದ್ದಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಅವರಿಲ್ಲದ ಕಾರಣ ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅವರೇ ಅಭ್ಯರ್ಥಿಯಾದಲ್ಲಿ ಸಹಜವಾಗಿಯೇ ಅನುಕಂಪದ ಅಲೆ ಭರ್ಜರಿಯಾಗಿ ಕೆಲಸ ಮಾಡಬಹುದು. ಆದರೆ, ಕ್ಷೇತ್ರದ ಬಿಜೆಪಿ ಪಾಳೆಯದಲ್ಲಿ ಇದುವರೆಗೆ ಕಾಣದಿದ್ದ ಭಿನ್ನಾಭಿಪ್ರಾಯ, ಅಪಸ್ವರದ ಬೆಳವಣಿಗೆಗಳು ತೊಡಕಾಗಿ ಪರಿಣಮಿಸಬಹುದೇ ಎಂಬ ಅನುಮಾನವೂ ಇದೆ.

ಟಿಕೆಟ್ ಫೈಟ್: ಉಡುಪಿಯಲ್ಲಿ ಕರಂದ್ಲಾಜೆ ನಿರಾಕರಿಸಿದ್ರೆ ಹೆಗ್ಡೆಗೆ ಟಿಕೆಟ್?

ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್‌, ಜಯನಗರ ಮತ್ತು ಬೊಮ್ಮನಹಳ್ಳಿ. ಈ ಪೈಕಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಮೂರರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಜೆಡಿಎಸ್‌ಗೆ ಇಲ್ಲಿ ಶಾಸಕರ ಬಲ ಇಲ್ಲ.

ಒಮ್ಮೆ ಮಾತ್ರ ಇಲ್ಲಿ ಕಾಂಗ್ರೆಸ್‌ ಗೆಲುವು

1977ರಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಇದುವರೆಗೆ 11 ಚುನಾವಣೆಗಳನ್ನು ಕಂಡಿದೆ. ಈ ಪೈಕಿ ಕಾಂಗ್ರೆಸ್‌ ಪಕ್ಷ ಗೆದ್ದಿದ್ದು ಕೇವಲ ಒಂದು ಬಾರಿ ಮಾತ್ರ. 1989ರಲ್ಲಿ ಮಾಜಿ ಮುಖ್ಯಮಂತ್ರಿ ಆರ್‌.ಗುಂಡೂರಾವ್‌ ವಿಜೇತರಾಗಿದ್ದರು. ಅದಕ್ಕೂ ಮೊದಲು ಮೂರು ಬಾರಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ಗೆಲುವು ಸಾಧಿಸಿತ್ತು. ಗುಂಡೂರಾವ್‌ ನಂತರ ನಡೆದ ಏಳು ಚುನಾವಣೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ. ಮೊದಲ ಬಾರಿಗೆ ಅಂದರೆ, ಬಿಜೆಪಿಯಿಂದ ಕೆ.ವೆಂಕಟಗಿರಿಗೌಡ ಅವರು ಗೆಲುವು ಸಾಧಿಸಿದ್ದರು. ಅದರ ನಂತರ ನಡೆದ ಆರು ಚುನಾವಣೆಗಳಲ್ಲೂ ಅನಂತಕುಮಾರ್‌ ಅವರು ಸತತವಾಗಿ ಗೆಲುವಿನ ಪತಾಕೆ ಹಾರಿಸುತ್ತಲೇ ಬಂದಿದ್ದರು.

ಟಿಕೆಟ್ ಫೈಟ್: ಕಾಂಗ್ರೆಸ್ ಭದ್ರಕೋಟೆ ಚಾಮರಾಜನಗರದಲ್ಲಿ ಅರಳುತ್ತಾ ಕಮಲ?

ಅನಂತ್‌ ಪತ್ನಿ ಸ್ಪರ್ಧೆ ಖಚಿತ

ಇದೀಗ ಅನಂತಕುಮಾರ್‌ ಅವರ ಸ್ಥಾನವನ್ನು ತುಂಬಲು ಪತ್ನಿ ತೇಜಸ್ವಿನಿ ಅವರು ಮುಂದಾಗಿದ್ದಾರೆ. ಅನಂತಕುಮಾರ್‌ ಅವರ ನಿಧನದ ನಂತರದ ಕೆಲವು ದಿನಗಳವರೆಗೆ ತಾವು ರಾಜಕೀಯ ಪ್ರವೇಶಿಸುವುದಿಲ್ಲ ಎನ್ನುತ್ತಿದ್ದ ತೇಜಸ್ವಿನಿ ಅವರು ಇದೀಗ ಚುನಾವಣಾ ರಾಜಕೀಯಕ್ಕೆ ಸಜ್ಜಾಗಿದ್ದಾರೆ. ಪಕ್ಷ ಒಪ್ಪಿದಲ್ಲಿ ಕಣ್ಕಕಿಳಿಯುವುದಾಗಿ ಬಹಿರಂಗವಾಗಿಯೇ ಘೋಷಿಸಿ ಅಖಾಡಕ್ಕೂ ಇಳಿದಿದ್ದಾರೆ.

ಟಿಕೆಟ್ ಫೈಟ್: ದಾವಣಗೆರೆಯಲ್ಲಿ ಕೈ-ಕಮಲ ನಡುವೆ ಪ್ರಬಲ ಪೈಪೋಟಿ

ಹಾಗೆ ನೋಡಿದರೆ ಅನಂತಕುಮಾರ್‌ ಅವರ ಹಲವು ಚುನಾವಣೆಗಳಲ್ಲಿ ತೇಜಸ್ವಿನಿ ಅವರ ಪಾತ್ರವೇ ಪ್ರಮುಖವಾಗಿತ್ತು. ಅನಂತ್‌ ಅವರು ಗೆಲುವು ಸಾಧಿಸಿ ದೆಹಲಿಗೆ ಹೋದ ನಂತರ ಕ್ಷೇತ್ರದಾದ್ಯಂತ ಕಾರ್ಯಕರ್ತರು ಹಾಗೂ ಜನಸಾಮಾನ್ಯರೊಂದಿಗೆ ಸತತ ಸಂಪರ್ಕ ಇಟ್ಟುಕೊಳ್ಳುವ ಮೂಲಕ ತೇಜಸ್ವಿನಿ ಅವರು ಪತಿಯ ಕೊರತೆ ಎದುರಾಗದಂತೆ ನೋಡಿಕೊಳ್ಳುತ್ತಿದ್ದರು. ಮೇಲಾಗಿ ತಮ್ಮ ಅದಮ್ಯ ಚೇತನ ಸಂಸ್ಥೆ ಮೂಲಕ ಕ್ಷೇತ್ರದಲ್ಲಿ ಸತತವಾಗಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಚ್ಚು ಪರಿಚಿತರಾಗಿದ್ದಾರೆ.

ಆರ್‌. ಅಶೋಕ್‌ ಬೇರೆ ತಂತ್ರ

ರಾಜ್ಯ ಹಾಗೂ ಕೇಂದ್ರ ಬಿಜೆಪಿ ಮಟ್ಟದಲ್ಲೂ ತೇಜಸ್ವಿನಿ ಅವರನ್ನೇ ಅಭ್ಯರ್ಥಿಯನ್ನಾಗಿಸಬೇಕು ಎಂಬ ಒಮ್ಮತಾಭಿಪ್ರಾಯ ವ್ಯಕ್ತವಾಗಿದ್ದರೂ ಬೆಂಗಳೂರು ಬಿಜೆಪಿಯ ‘ಸಾಮ್ರಾಟ್‌’ ಎಂದೇ ಗುರುತಿಸಲ್ಪಡುವ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರು ಮುನಿಸಿಕೊಂಡಿರುವುದು ಗಮನಾರ್ಹ ಬದಲಾವಣೆ. ಅನಂತಕುಮಾರ್‌ ಅವರ ಬಲಗೈ ಬಂಟನಂತೆ ಇದ್ದ ಅಶೋಕ್‌ ಅವರು ಈಗ ತೇಜಸ್ವಿನಿ ಅವರಿಗೂ ಅದೇ ಪ್ರಮಾಣದ ನಿಷ್ಠೆ ತೋರಬೇಕು ಎಂಬ ನಿರೀಕ್ಷೆಯನ್ನು ಒಪ್ಪುತ್ತಿಲ್ಲ.

ಟಿಕೆಟ್ ಫೈಟ್: ಡಿಕೆ+ಎಚ್‌ಡಿಕೆ ವರ್ಸಸ್‌ ಯೋಗಿ?

ಚುನಾವಣೆಗೆ ನಿಲ್ಲಬೇಕು ಎಂದುಕೊಂಡಿರುವವರು ಕ್ಷೇತ್ರದ ವ್ಯಾಪ್ತಿಯಲ್ಲಿನ ಪಕ್ಷದ ಮುಖಂಡರನ್ನು ಅದರಲ್ಲೂ ಹಿರಿಯ ನಾಯಕರಾಗಿರುವ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ನಿಲುವು ಹೊಂದಿರುವ ಅಶೋಕ್‌ ಅವರು ತೇಜಸ್ವಿನಿ ಬದಲು ಬೇರೊಬ್ಬರನ್ನು ಕಣಕ್ಕಿಳಿಸಲು ತೆರೆಮರೆಯ ಪ್ರಯತ್ನವನ್ನೂ ನಡೆಸಿದ್ದಾರೆ. ಆದರೆ, ಅದು ಯಶಸ್ಸು ಕಾಣುವ ಬಗ್ಗೆ ಅನುಮಾನವಿದೆ.

ಟಿಕೆಟ್ ಫೈಟ್: ವಿಜಯಪುರದಲ್ಲಿ ಜಿಗಜಿಣಗಿ V/S ಅಲಗೂರ?

ಒಟ್ಟು ಐವರು ಬಿಜೆಪಿ ಶಾಸಕರ ಪೈಕಿ ಇಬ್ಬರು ಅನಂತಕುಮಾರ್‌ ಅವರ ಮೇಲಿನ ಗೌರವದಿಂದಲೋ ಅಥವಾ ಜಾತಿ ಕಾರಣದಿಂದಲೋ ತೇಜಸ್ವಿನಿ ಅವರ ಪರವಾಗಿ ನಿಂತಿದ್ದಾರೆ. ಆದರೆ, ಇನ್ನುಳಿದ ಮೂವರು ಮತ್ತೊಂದು ಕಡೆ ನಿಂತಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಪಕ್ಷದ ವರಿಷ್ಠರು ಮಧ್ಯೆ ಪ್ರವೇಶಿಸಿ ತೇಜಸ್ವಿನಿ ಮತ್ತು ಅಶೋಕ್‌ ಅವರ ನಡುವಿನ ಮುನಿಸನ್ನು ಶಮನಗೊಳಿಸುವ ಪ್ರಯತ್ನ ಮಾಡುವ ಸಾಧ್ಯತೆ ಹೆಚ್ಚಿದೆ.

ಕಾಂಗ್ರೆಸ್ಸಿಂದ ಪ್ರಿಯಕೃಷ್ಣ ಕಣಕ್ಕೆ?

ಕಾಂಗ್ರೆಸ್‌ ಪಕ್ಷ ಪ್ರತಿ ಬಾರಿಯೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನ ಮಾಡಿದರೂ ಬಿಜೆಪಿಯಿಂದ ಈ ಕ್ಷೇತ್ರವನ್ನು ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಕಾಂಗ್ರೆಸ್ಸಿನ ಅಭ್ಯರ್ಥಿಗಳು ಬದಲಾಗುತ್ತಲೇ ಇದ್ದಾರೆ. ಉದಾಹರಣೆಗೆ ನೋಡುವುದಾದರೆ 1999ರಲ್ಲಿ ಬಿ.ಕೆ.ಹರಿಪ್ರಸಾದ್‌, 2004ರಲ್ಲಿ ಎಂ.ಕೃಷ್ಣಪ್ಪ, 2009ರಲ್ಲಿ ಕೃಷ್ಣ ಬೈರೇಗೌಡ ಹಾಗೂ ಕಳೆದ 2014ರಲ್ಲಿ ನಂದನ್‌ ನಿಲೇಕಣಿ ಅಭ್ಯರ್ಥಿಯಾಗಿ ಸೋಲುಂಡಿದ್ದರು.

ಟಿಕೆಟ್ ಫೈಟ್: ಬಿಜೆಪಿ ಟಿಕೆಟ್‌ಗೆ ಸವದಿ, ಕತ್ತಿ, ಕೋರೆ ಫೈಟ್‌

ಈ ಬಾರಿ ಮಾಜಿ ಶಾಸಕ ಪ್ರಿಯಕೃಷ್ಣ ಅವರನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷದಲ್ಲಿ ಒತ್ತಡ ಮತ್ತು ಒಲವು ವ್ಯಕ್ತವಾಗಿದೆ. ಆದರೆ, ಪ್ರಿಯಕೃಷ್ಣ ಅವರು ತಮ್ಮ ಅಂತಿಮ ನಿರ್ಧಾರ ತಿಳಿಸಿಲ್ಲ. ಪಕ್ಷದ ಎಲ್ಲ ಮುಖಂಡರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಸ್ಪಷ್ಟಭರವಸೆ ನೀಡಿದಲ್ಲಿ ತಾವು ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಹಲವು ಕಾಂಗ್ರೆಸ್‌ ಮುಖಂಡರು ಬಿಜೆಪಿಯೊಂದಿಗೆ ಅದರಲ್ಲೂ ಅನಂತಕುಮಾರ್‌ ಅವರ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಪ್ರಿಯಕೃಷ್ಣ ಈ ಮಾತನ್ನು ಹೇಳಿದ್ದಾರೆ ತಿಳಿದು ಬಂದಿದೆ.

ರಾಮಲಿಂಗಾರೆಡ್ಡಿ ಆಕಾಂಕ್ಷಿ, ಆದರೆ..

ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರೂ ಗಣನೀಯ ಸಂಖ್ಯೆಯಲ್ಲಿ ಇರುವುದರಿಂದ ಹಾಗೂ ಯುವಕರಾಗಿರುವುದರಿಂದ ಪ್ರಿಯಕೃಷ್ಣ ಅವರು ಬಿಜೆಪಿಗೆ ಪ್ರಬಲ ಪೈಪೋಟಿ ಒಡ್ಡಬಹುದು. ಜೆಡಿಎಸ್‌ ಬೆಂಬಲ ನೀಡಿದಲ್ಲಿ ಗೆಲುವು ತಮ್ಮದಾಗಬಹುದು ಎನ್ನುವುದು ಕಾಂಗ್ರೆಸ್‌ ನಾಯಕರ ಲೆಕ್ಕಾಚಾರ. ಒಂದು ವೇಳೆ ಬಿಜೆಪಿಯಿಂದ ತೇಜಸ್ವಿನಿ ಅನಂತಕುಮಾರ್‌ ಅವರು ಕಣಕ್ಕಿಳಿಯದಿದ್ದಲ್ಲಿ ಆಗ ತಾವು ಕಾಂಗ್ರೆಸ್‌ ಅಭ್ಯರ್ಥಿಯಾಗುವುದಾಗಿ ಮಾಜಿ ಸಚಿವ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಪಕ್ಷದ ನಾಯಕರ ಮುಂದೆ ಹೇಳಿದ್ದಾರೆ ಎಂಬ ಸುದ್ದಿಯೂ ಹೊರಬಿದ್ದಿದೆ.

ಟಿಕೆಟ್ ಫೈಟ್: ಕಾಂಗ್ರೆಸ್‌ ಸಂಸದ ಜೆಡಿಎಸ್‌ ಅಭ್ಯರ್ಥಿ ಆಗ್ತಾರಾ?

ಬ್ರಾಹ್ಮಣ ಸಮುದಾಯಕ್ಕೇ ಹೆಚ್ಚು ಒಲಿದ ಕ್ಷೇತ್ರ

ಈ ಕ್ಷೇತ್ರದಿಂದ ಅತಿಹೆಚ್ಚು ಬಾರಿ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳೇ ಗೆಲುವು ಸಾಧಿಸಿರುವುದು ವಿಶಿಷ್ಟವಾಗಿದೆ. 1977ರಲ್ಲಿ ಕೆ.ಎಸ್‌.ಹೆಗ್ಡೆ ಹಾಗೂ 1991ರಲ್ಲಿ ಕೆ.ವೆಂಕಟಗಿರಿಗೌಡ ಅವರನ್ನು ಹೊರತುಪಡಿಸಿದರೆ ಇನ್ನುಳಿದ 9 ಬಾರಿ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳೇ ಜಯಭೇರಿ ಬಾರಿಸಿದ್ದಾರೆ. ನಿವೃತ್ತ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅವರ ತಂದೆ ಕೆ.ಎಸ್‌.ಹೆಗ್ಡೆ ಅವರು ಈ ಕ್ಷೇತ್ರದಿಂದ 1977ರಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದು ಕ್ಷೇತ್ರದ ಮತ್ತೊಂದು ವಿಶೇಷ. ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಾಧೀಶರೂ ಆಗಿರುವ ಹೆಗ್ಡೆ ಅವರು ಜನತಾ ಪಕ್ಷದಿಂದ ಕಣಕ್ಕಿಳಿದು ಗೆದ್ದಿದ್ದರು.

ಟಿಕೆಟ್ ಫೈಟ್: ಸಿದ್ದು ಸ್ಪರ್ಧೆ ವದಂತಿಯಿಂದ ಕೊಪ್ಪಳ ಕ್ಷೇತ್ರದಲ್ಲಿ ಸಂಚಲನ

ರೇಸ್‌ನಲ್ಲಿ ಯಾರೆಲ್ಲಾ?

ಬಿಜೆಪಿ- ತೇಜಸ್ವಿನಿ ಅನಂತಕುಮಾರ್‌

ಕಾಂಗ್ರೆಸ್‌- ಪ್ರಿಯಕೃಷ್ಣ

ಇದು ಕಾಂಗ್ರೆಸ್ಸೇತರ ಕೋಟೆ

ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬೆಂಗಳೂರು ದಕ್ಷಿಣ ಕಾಂಗ್ರೆಸ್ಸೇತರ ಕೋಟೆಯಾಗಿಯೇ ಮುಂದುವರೆದಿದೆ. 1977ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಇದುವರೆಗೆ ನಡೆದ 11 ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದಿದ್ದು ಕೇವಲ ಒಂದು ಬಾರಿ ಮಾತ್ರ. 1989ರಲ್ಲಿ ಮಾಜಿ ಮುಖ್ಯಮಂತ್ರಿ ಆರ್‌.ಗುಂಡೂರಾವ್‌ ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಮೂರು ಬಾರಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ಗೆಲುವು ಸಾಧಿಸಿದೆ. ಗುಂಡೂರಾವ್‌ ಅವಧಿ ನಂತರ ನಡೆದ ಏಳು ಚುನಾವಣೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ.

ಟಿಕೆಟ್ ಫೈಟ್: ಉಗ್ರಪ್ಪಗೆ ಮೈತ್ರಿ ಟಿಕೆಟ್‌ ಖಚಿತ, ಬಿಜೆಪಿಯಿಂದ ಯಾರೆಂಬುದೇ ಅನಿಶ್ಚಿತ!

ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?

ಟಿಕೆಟ್ ಫೈಟ್: ಬಿಜೆಪಿ ಭದ್ರಕೋಟೆ ಕಸಿಯಲು ಕಾಂಗ್ರೆಸ್‌ ಕಸರತ್ತು!

click me!