ಉತ್ತರ ಕನ್ನಡ: ರೂಪಾಲಿ ನಾಯ್ಕ ಬಿರುಸಿನ ಪ್ರಚಾರ, ಬಿಜೆಪಿಗೆ ಬಲ

By Kannadaprabha News  |  First Published May 3, 2024, 6:43 AM IST

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರದ ಭರಾಟೆ ಜೋರಾಗಿದ್ದು, ಪಕ್ಷದ ಮುಖಂಡರು ಪ್ರಚಾರದಲ್ಲಿ ನಿರತರಾಗಿದ್ದರೂ, ವಿಶೇಷವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. 


ಕಾರವಾರ (ಮೇ.03): ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರದ ಭರಾಟೆ ಜೋರಾಗಿದ್ದು, ಪಕ್ಷದ ಮುಖಂಡರು ಪ್ರಚಾರದಲ್ಲಿ ನಿರತರಾಗಿದ್ದರೂ, ವಿಶೇಷವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸಿ, ನರೇಂದ್ರ ಮೋದಿ ಅವರಿಗೆ ಮತ್ತಷ್ಟು ಶಕ್ತಿ ನೀಡುವಂತೆ ವಿನಂತಿಸುತ್ತ ಮತದಾರರ ಮನ ಗೆಲ್ಲುತ್ತಿದ್ದಾರೆ.

ರೂಪಾಲಿ ಎಸ್. ನಾಯ್ಕ ಅವರು ಜನರೆದುರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುತ್ತಿದ್ದಾರೆ. ಮೋದಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಿಸಿ, ಬಾಲರಾಮನ ಮೂರ್ತಿ ಪ್ರತಿಷ್ಠಾಪಿಸಿದ್ದಕ್ಕೆ ಅಭಿನಂದಿಸುತ್ತಿದ್ದಾರೆ. ಜತೆಗೆ ಪ್ರಧಾನಿ ಮೋದಿ ಯಾವುದೇ ಸ್ವಾರ್ಥ ಇಲ್ಲದೆ ದೇಶಕ್ಕಾಗಿ, ದೇಶದ ಜನತೆಯ ಅಭಿವೃದ್ಧಿಗಾಗಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ನರೇಂದ್ರ ಮೋದಿ ನಮಗೆ ಆದರ್ಶ. ಅವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿಸಬೇಕಾಗಿದೆ. ಹೀಗಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸಿ, ನರೇಂದ್ರ ಮೋದಿ ಅವರಿಗೆ ಇನ್ನಷ್ಟು ಶಕ್ತಿ ತುಂಬೋಣ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.

Latest Videos

undefined

ಪ್ರಜ್ವಲ್‌ ರೇವಣ್ಣ ವಿರುದ್ಧ ಜಡ್ಜ್‌ ಮುಂದೆ ಸಂತ್ರಸ್ತೆ ಹೇಳಿಕೆ: ಬಂಧನದ ಆತಂಕ ಹೆಚ್ಚಳ

ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದುದ್ದಕ್ಕೂ ಚುರುಕಿನಿಂದ ಓಡಾಡಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಬಿಜೆಪಿ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಕಾರವಾರ- ಅಂಕೋಲಾ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಕಾರ್ಯಕರ್ತರ ಸಹಕಾರದಿಂದ ಐತಿಹಾಸಿಕವಾಗಿ ಸಂಘಟನೆ ಮಾಡಿರುವ ರೂಪಾಲಿ ಎಸ್. ನಾಯ್ಕ ಆ ಕ್ಷೇತ್ರದಲ್ಲಿ ಬಿಜೆಪಿಗೆ ಭರ್ಜರಿ ಲೀಡ್ ದೊರೆಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ರೂಪಾಲಿ ಎಸ್. ನಾಯ್ಕ ಮಹಿಳೆಯರ ಪರವಾಗಿ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಪ್ರತಿಪಾದಿಸುತ್ತ ಮಹಿಳಾ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಪ್ರಚಾರದ ಸಭೆಗಳಲ್ಲಿ ಹುಬ್ಬಳ್ಳಿಯ ನೇಹಾ ಹತ್ಯೆಯನ್ನು ಬಲವಾಗಿ ಖಂಡಿಸುವ ಅವರು, ಹೋದ ಹೋದಲ್ಲಿ ಕಾಂಗ್ರೆಸ್ಸಿಗರು ಗ್ಯಾರಂಟಿ ಎನ್ನುತ್ತಿದ್ದಾರೆ. ಆದರೆ ನಮ್ಮ ಮಹಿಳೆಯರು, ಯುವತಿಯರಿಗೇ ಈ ರಾಜ್ಯದಲ್ಲಿ ಗ್ಯಾರಂಟಿ ಇಲ್ಲ. ಅವರ ಬದುಕಿಗೆ ಭದ್ರತೆ ಇಲ್ಲ. ಜೀವಕ್ಕೆ ಗ್ಯಾರಂಟಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಮೊದಲು ನಮ್ಮ ಮಹಿಳೆಯರ ಜೀವಕ್ಕೆ ಗ್ಯಾರಂಟಿ ಕೊಡಿ ಎನ್ನುತ್ತಿದ್ದಾರೆ. ರೂಪಾಲಿ ಎಸ್. ನಾಯ್ಕ ಅವರು ಪ್ರಚಾರಕ್ಕೆ ಹೋದಲ್ಲೆಲ್ಲ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಮತದಾರರಿಂದ ಅಭೂತಪೂರ್ವ ಸ್ಪಂದನೆ ಸಿಗುತ್ತಿದೆ. ರೂಪಾಲಿ ಅವರ ಪ್ರಚಾರ ಬಿಜೆಪಿ ಪ್ರಾಬಲ್ಯವನ್ನು ಇನ್ನಷ್ಟು ಬಲಪಡಿಸಿದಂತಾಗುತ್ತಿದೆ.

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಡೆಸುವ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವುದಷ್ಟೇ ಅಲ್ಲ, ಪ್ರತಿಯೊಂದು ಬೂತ್‌ಗಳಿಗೂ ತಮ್ಮದೆ ಕಾರ್ಯಕರ್ತರೊಂದಿಗೆ ತೆರಳಿ ರೂಪಾಲಿ ಎಸ್. ನಾಯ್ಕ ಸಭೆ ನಡೆಸುತ್ತಿದ್ದಾರೆ. ಮತದಾರರಿಗೆ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಯೋಜನೆಗಳನ್ನು ಪರಿಚಯಿಸುತ್ತಿದ್ದಾರೆ. ಪಕ್ಷದತ್ತ ಜನರನ್ನು ಆಕರ್ಷಿಸುತ್ತಿದ್ದಾರೆ. ಪಕ್ಷಕ್ಕೆ ಕಾರ್ಯಕರ್ತರೇ ಆಧಾರ ಎಂದು ಪ್ರತಿಪಾದಿಸುವ ರೂಪಾಲಿ ಎಸ್. ನಾಯ್ಕ, ಕಾರ್ಯಕರ್ತರನ್ನು ಪ್ರೋತ್ಸಾಹಿಸುತ್ತಿರುವುದರಿಂದ ಸಂಘಟನೆಯಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದಾರೆ. ಬಲಿಷ್ಠವಾದ ಕಾರ್ಯಕರ್ತರ ಸಹಕಾರದಿಂದ ಬಿಜೆಪಿಯ ಪ್ರಚಾರ ಕಾರ್ಯ ಭರದಿಂದ ನಡೆಯುತ್ತಿದೆ.

ಮಹಿಳೆಯರು, ಬಡವರು, ದಲಿತರು, ಹಿಂದುಳಿದವರು ಹೀಗೆ ಎಲ್ಲ ಜಾತಿ ಧರ್ಮದವರೊಂದಿಗೆ ರೂಪಾಲಿ ಎಸ್. ನಾಯ್ಕ ಬೆರೆಯುತ್ತಿರುವುದರಿಂದ ಅವರಿಗೆ ಹತ್ತಿರವಾಗಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿರುವುದರಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಭಾರಿ ಬಲ ಬಂದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಲ್ಲದೇ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕಾರ್ಯವೈಖರಿ, ಸಾಧನೆಗಳನ್ನು ಜನತೆಯ ಮುಂದಿಟ್ಟು ಮತಯಾಚಿಸುತ್ತಿರುವುದು ಬಿಜೆಪಿ ಅಭ್ಯರ್ಥಿ ಕಾಗೇರಿ ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ.

ರಾಹುಲ್‌ ಗಾಂಧಿ ಪಿಎಂ ಆಗಲೆಂದು ಪಾಕಿಸ್ತಾನ ಬಯಕೆ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಒಬ್ಬ ದೇವಮಾನವ. ಅವರ ನಡೆ, ನುಡಿ, ನರನಾಡಿಗಳಲ್ಲಿ ರಾಷ್ಟ್ರೀಯತೆ, ದೇಶದ ಅಭಿವೃದ್ಧಿ, ಜನಪರವಾದ ಯೋಜನೆಗಳನ್ನು ಕೊಡುವುದು ತುಂಬಿಕೊಂಡಿದೆ. ಅವರೇ ಈ ದೇಶದ ಆಶಾಕಿರಣ. ದೇಶದ ಉಜ್ವಲ ಭವಿಷ್ಯ ಮೋದಿ ಅವರ ಕೈಯಲ್ಲಿದೆ. ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರಿಗೆ ಇನ್ನಷ್ಟು ಶಕ್ತಿ ತುಂಬೋಣ.
-ರೂಪಾಲಿ ಎಸ್. ನಾಯ್ಕ, ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಮಾಜಿ ಶಾಸಕರು, ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರ

click me!