ಸೋಲಿಲ್ಲದ ಸರದಾರ ಸಿ.ಟಿ.ರವಿಗೆ ಕಮಲದ ಗರಡಿಯಲ್ಲಿ ಪಳಗಿದ ತಮ್ಮಯ್ಯ ಟಕ್ಕರ್‌

By Kannadaprabha News  |  First Published May 4, 2023, 10:20 AM IST

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಸತತ ನಾಲ್ಕು ಬಾರಿ ಗೆದ್ದು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಇದೀಗ ಐದನೇ ಬಾರಿಯ ಗೆಲುವಿಗೆ ಉತ್ಸುಕರಾಗಿದ್ದಾರೆ. 


ಆರ್‌.ತಾರಾನಾಥ್‌

ಚಿಕ್ಕಮಗಳೂರು (ಮೇ.04): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಸತತ ನಾಲ್ಕು ಬಾರಿ ಗೆದ್ದು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಇದೀಗ ಐದನೇ ಬಾರಿಯ ಗೆಲುವಿಗೆ ಉತ್ಸುಕರಾಗಿದ್ದಾರೆ. ಆದರೆ, ಅವರ ಜೊತೆಗೇ ಈ ಹಿಂದೆ ಕೆಲಸ ಮಾಡಿದ, ಬಿಜೆಪಿಯ ಗರಡಿಯಲ್ಲಿ ಪಳಗಿದ, ಅಲ್ಲಿನ ಚುನಾವಣಾ ತಂತ್ರಗಾರಿಕೆಯನ್ನು ಹತ್ತಿರದಿಂದ ಬಲ್ಲ ಸಿ.ಟಿ.ರವಿಯವರ ಆಪ್ತ ಎಚ್‌.ಡಿ. ತಮ್ಮಯ್ಯ, ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದಾರೆ. ಅವರು ಸೋಲಿಲ್ಲದ ಸರದಾರನಿಗೆ ಟಕ್ಕರ್‌ ಕೊಡ್ತಾರಾ ಎಂಬುದು ಕುತೂಹಲದ ಸಂಗತಿ.

Latest Videos

undefined

ಕಾಂಗ್ರೆಸ್‌ನಿಂದ ಟಿಕೆಟ್‌ಗಾಗಿ 6 ಮಂದಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಯಾರಿಗೂ ಟಿಕೆಟ್‌ ಕೊಡದೆ, ಬಿಜೆಪಿಯಿಂದ ಬಂದಿರುವ ಎಚ್‌.ಡಿ.ತಮ್ಮಯ್ಯ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿರುವುದರ ಹಿಂದೆ ಚುನಾವಣಾ ತಂತ್ರಗಾರಿಕೆಯಿದೆ. ಹೀಗಾಗಿ, ಎರಡು ದಶಕಗಳ ಬಳಿಕ 2023ರ ವಿಧಾನಸಭೆ ಚುನಾವಣೆ ಈ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ 2,30,594 ಮತದಾರರಿದ್ದಾರೆ. 2018ರಲ್ಲಿ 70,863 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದ ಸಿ.ಟಿ.ರವಿ, ಈ ಬಾರಿ ಒಂದು ಲಕ್ಷ ಮತಗಳನ್ನು ಪಡೆಯುವ ಗುರಿ ಹೊಂದಿದ್ದಾರಂತೆ. ಈ ಟಾಸ್‌್ಕನ್ನು ಪಕ್ಷದ ಕಾರ್ಯಕರ್ತರಿಗೆ ನೀಡಿದ್ದಾರೆ. ಅಂದರೆ, ಕಳೆದ ಬಾರಿಗಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ. ಅವರ ನಿರೀಕ್ಷೆಗೆ ಕಡಿವಾಣ ಹಾಕಲು ಕಾಂಗ್ರೆಸ್‌ ಹಲವು ತಂತ್ರ ಮಾಡುತ್ತಿದೆ.

ಕೊಪ್ಪಳ ಕಾಂಗ್ರೆಸ್‌ ಕೋಟೆಯಲ್ಲಿ ಅರಳಲು ಕಮಲ ಯತ್ನ: ಸಂಚಲನ ಮೂಡಿಸಿದ ರೆಡ್ಡಿ ಎಂಟ್ರಿ

ರವಿಯ ಆಪ್ತನೇ ‘ಕೈ’ ಅಭ್ಯರ್ಥಿ: ಎಚ್‌.ಡಿ.ತಮ್ಮಯ್ಯ ಲಿಂಗಾಯತ ಸಮುದಾಯದವರು, ಬಿಜೆಪಿಯಲ್ಲಿ ಸುಮಾರು 15 ವರ್ಷ ಇದ್ದವರು. ಆ ಪಕ್ಷದಲ್ಲಿನ ಚುನಾವಣೆ ತಂತ್ರಗಾರಿಕೆ ಬಲ್ಲವರು. 2004, 2008ರ ವಿಧಾನಸಭಾ ಚುನಾವಣೆಯಲ್ಲಿ ಸಿ.ಟಿ.ರವಿ ಗೆದ್ದ ಸಂದರ್ಭದಲ್ಲಿ ಬಿಜೆಪಿಯ ಮನೆಯಲ್ಲಿದ್ದ ಒಗ್ಗಟ್ಟಿನಲ್ಲಿ ಸದ್ಯ ಬಿಕ್ಕಟ್ಟು ಹೊಗೆಯಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸರ್ಕಾರದಲ್ಲಿ ವಿಶೇಷ ಸ್ಥಾನಮಾನ ಸಿಗದೆ ಇರುವ ಅತೃಪ್ತರು ಪಕ್ಷದೊಳಗೆ ಇದ್ದಾರೆ. ಗುತ್ತಿಗೆ ಕೆಲಸ ಮಾಡುತ್ತಾ ಪಕ್ಷಕ್ಕೆ ನಿಷ್ಠಾವಂತರಾಗಿದ್ದ ಕೆಲವರು ಇತ್ತೀಚಿನ ವರ್ಷಗಳಲ್ಲಿ ಗುತ್ತಿಗೆ ಕೆಲಸ ಸಿಗದೆ ನಿರುದ್ಯೋಗಿಗಳಾಗಿದ್ದಾರೆ. ಕೆಲವರು ಚಿಕ್ಕಮಗಳೂರು ಬಿಟ್ಟು ಬೇರೆ ಕ್ಷೇತ್ರಗಳಿಗೆ ವಲಸೆ ಹೋಗಿದ್ದಾರೆ. ಇದರ ಪ್ರಯೋಜನ ಪಡೆಯುವುದು ಕಾಂಗ್ರೆಸ್‌ನ ಪ್ಲ್ಯಾನ್‌ ಆಗಿದೆ. ಈ ಸಂಗತಿಗಳು ಸಿ.ಟಿ.ರವಿಗೆ ನೆಗೆಟಿವ್‌ ಪಾಯಿಂಟ್‌.

ಜೊತೆಗೆ, ತಮ್ಮಯ್ಯನವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಈ ಸಮುದಾಯದ ಮತಗಳ ಸಂಖ್ಯೆ ಸುಮಾರು 45 ಸಾವಿರಕ್ಕಿಂತ ಹೆಚ್ಚಿದೆ. ಸಿ.ಟಿ.ರವಿಯವರು ಒಕ್ಕಲಿಗ ಸಮುದಾಯದವರು. ಕ್ಷೇತ್ರದಲ್ಲಿ 14 ಸಾವಿರ ಒಕ್ಕಲಿಗ ಮತದಾರರಿದ್ದಾರೆ. ತಮ್ಮಯ್ಯ ಸ್ಪರ್ಧೆ ಮಾಡಿರುವುದರಿಂದ ಲಿಂಗಾಯತ ಸಮುದಾಯದ ಮತಗಳ ಸಂಖ್ಯೆ ಸಿ.ಟಿ.ರವಿಗೆ ಕಡಿಮೆಯಾಗಲಿದೆ ಎಂಬುದು ಸದ್ಯದ ಲೆಕ್ಕಾಚಾರ. ಜೊತೆಗೆ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿಯವರು ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಕೆಲವೊಮ್ಮೆ ಅಸಂವಿಧಾನಿಕ ಪದಗಳನ್ನು ಬಳಸಿ ಕುರುಬ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಿದೆ. 

ಹಿಜಾಬ್‌, ಹಲಾಲ್‌ ಕಟ್‌, ಟಿಪ್ಪು ಸುಲ್ತಾನ್‌ ಸೇರಿದಂತೆ ಇತರ ವಿವಾದಿತ ಹೇಳಿಕೆಗಳು ಈ ಬಾರಿಯ ಚುನಾವಣೆಯಲ್ಲಿ ಮುನ್ನೆಲೆಗೆ ಬಂದಿವೆ. ಇನ್ನು, ಸಿ.ಟಿ.ರವಿಗೆ ನೆಗೆಟಿವ್‌ ಎಷ್ಟಿದೆಯೋ, ಅಷ್ಟೇ ಪಾಸಿಟಿವ್‌ ಸಂಗತಿ ಕೂಡ ಇದೆ. ಚಿಕ್ಕಮಗಳೂರಿಗೆ ಸರ್ಕಾರಿ ಮೆಡಿಕಲ್‌ ಕಾಲೇಜು ಮಂಜೂರು ಮಾಡಿಸಲಾಗಿದೆ. ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ಪದರ್ಜೆಗೆ ಏರಿಸಲಾಗುತ್ತಿದೆ. ರಸ್ತೆಗಳ ನಿರ್ಮಾಣ ಆಗಿದೆ. ದಂಟರಮಕ್ಕಿ ಕೆರೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಕುಡಿಯುವ ನೀರಿನ ಅಮೃತ್‌ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ. 

ಈ ಬಾರಿಯ ಬಜೆಟ್‌ನಲ್ಲಿ ಟೆಕ್ಸ್‌ಟೈಲ್‌ ಪಾರ್ಕ್ ನಿರ್ಮಾಣ ಘೋಷಣೆ ಮಾಡಲಾಗಿದೆ. ಅವರ ಅಭಿವೃದ್ಧಿ ಕೆಲಸಗಳು, ಹಿಂದುತ್ವ ವಾದ ಅವರಿಗೆ ಪ್ಲಸ್‌ ಪಾಯಿಂಟ್‌. ಜೆಡಿಎಸ್‌ ಅಭ್ಯರ್ಥಿ ತಿಮ್ಮಶೆಟ್ಟಿಅವರ ಪ್ರಚಾರ, ಮತದಾರರ ಮನಸ್ಥಿತಿ ನೋಡಿದರೆ ಜೆಡಿಎಸ್‌ ಗುರಿ ಮುಟ್ಟುವ ಕುದುರೆಯಾಗಿ ರೇಸ್‌ನಲ್ಲಿ ಓಡುತ್ತಿಲ್ಲ. ಹೀಗಾಗಿ, ಸಿ.ಟಿ.ರವಿ ಹಾಗೂ ಅವರ ಆಪ್ತ ತಮ್ಮಯ್ಯ ನಡುವೆ ನೇರ ಸ್ಪರ್ಧೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಆನಂದ್‌ ಸಿಂಗ್‌ಗೆ ಪ್ರತಿಷ್ಠೆಯಾಗಿರುವ ವಿಜಯನಗರದ ವಿಜಯ: ಹಳಬರ ಮೇಲೆ ಕಾಂಗ್ರೆಸ್‌ಗೆ ನಂಬಿಕೆ

2018ರ ಫಲಿತಾಂಶ
ಸಿ.ಟಿ.ರವಿ(ಬಿಜೆಪಿ)-70,863.
ಬಿ.ಎಲ್‌.ಶಂಕರ್‌(ಕಾಂಗ್ರೆಸ್‌)-44,549.
ಬಿ.ಎಚ್‌.ಹರೀಶ್‌(ಜೆಡಿಎಸ್‌)-38,317.

ಜಾತಿ ಲೆಕ್ಕಾಚಾರ
ಒಟ್ಟು ಮತದಾರರು-2,30,594.
ವೀರಶೈವ-ಲಿಂಗಾಯತರು-45 ಸಾವಿರ.
ಕುರುಬ ಸಮುದಾಯ-28 ಸಾವಿರ.
ಪರಿಶಿಷ್ಟಜಾತಿ/ಪರಿಶಿಷ್ಟವರ್ಗ- 48 ಸಾವಿರ.
ಮುಸ್ಲಿಂ/ಕ್ರಿಶ್ಚಿಯನ್‌-30 ಸಾವಿರ.
ದೇವಾಂಗರು-12 ಸಾವಿರ.
ಒಕ್ಕಲಿಗರು-14 ಸಾವಿರ.

click me!