ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ಮೈತ್ರಿಕೂಟದ ಭರ್ಜರಿ ಗೆಲುವಿನಿಂದಾಗಿ ಯಾವುದೇ ವಿಪಕ್ಷಕ್ಕೆ ಅಧಿಕೃತ ವಿಪಕ್ಷ ನಾಯಕ ಸ್ಥಾನ ಲಭಿಸಿಲ್ಲ.
ಮುಂಬೈ: ಮಹಾರಾಷ್ಟ್ರವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ ಮತ್ತು ಅಜಿತ್ ಪವಾರ್ ಬಣದ ಎನ್‌ಸಿಪಿ ಮಾಡಿದ ಅಭೂತಪೂರ್ವ ಸಾಧನೆಯಿಂದಾಗಿ ಮಹಾರಾಷ್ಟ್ರದ 15ನೇ ವಿಧಾನಸಭೆಯಲ್ಲಿ ಯಾವುದೇ ವಿಪಕ್ಷಕ್ಕೆ ಅಧಿಕೃತ ವಿಪಕ್ಷ ಮತ್ತು ಅಧಿಕೃತ ವಿಪಕ್ಷ ನಾಯಕನ ಸ್ಥಾನವೂ ಇಲ್ಲದಂತಾಗಿದೆ. ನಿಯಮಗಳ ಅನ್ವಯ ವಿಧಾನಸಭೆಯ ಒಟ್ಟು ಬಲದ ಕನಿಷ್ಠ ಶೇ.10ರಷ್ಟು ಸ್ಥಾನ ಪಡೆದರೆ ಮಾತ್ರ ಆ ಪಕ್ಷಕ್ಕೆ ಅಧಿಕೃತ ವಿಪಕ್ಷ ಸ್ಥಾನ ಮತ್ತು ಅದರ ನಾಯಕನಿಗೆ ಅಧಿಕೃತ ವಿಪಕ್ಷ ನಾಯಕ ಸ್ಥಾನಮಾನ ಸಿಗುತ್ತದೆ. ಅಧಿಕೃತ ವಿಪಕ್ಷ ನಾಯಕ ಸಂಪುಟ ದರ್ಜೆ ಸ್ಥಾನಮಾನ ಹೊಂದಿರುತ್ತಾರೆ. ಈ ಸ್ಥಾನಮಾನ ಪಡೆಯಲು ಪಕ್ಷವೊಂದು 29 ಸ್ಥಾನ ಪಡೆಯಬೇಕು.
ಆದರೆ ಪ್ರಸಕ್ತ ಚುನಾವಣೆಯಲ್ಲಿ ವಿಪಕ್ಷಗಳ ಪೈಕಿ ಶಿವಸೇನೆ ಗರಿಷ್ಠ 21 ಸ್ಥಾನ ಗೆದ್ದಿದೆ. ಅಘಾಡಿ ಕೂಟದ ಕಾಂಗ್ರೆಸ್, ಶರದ್ ಬಣದ ಸಾಧನೆ ಇದಕ್ಕಿಂತಲೂ ಕಡಿಮೆ. ಹೀಗಾಗಿ ವಿಪಕ್ಷಗಳಿಗೆ ಈ ಬಾರಿ ಸ್ಥಾನಮಾನ ತಪ್ಪುವುದು ಖಚಿತ. 1960ರಲ್ಲಿ ರಾಜ್ಯ ವಿಧಾನಸಭೆ ರಚನೆಯಾದ ಬಳಿಕ ಹೀಗಾಗಿದ್ದು ಇದೇ ಮೊದಲು.
ಅನಿರೀಕ್ಷಿತ
ಮಹಾರಾಷ್ಟ್ರ ಫಲಿತಾಂಶ ಗ್ರಹಿಸಲಾಗದ್ದು, ಲೋಕಸಭಾ ಚುನಾವಣೆ ನಂತರದ 4 ತಿಂಗಳಲ್ಲಿ ಸ್ಥಿತಿ ತೀವ್ರ ಬದಲಾಗಿದೆ. ಕೋವಿಡ್ ವೇಳೆ ನನ್ನ ಮಾತು ಆಲಿಸಿದ ಜನತೆಯಿಂದ ಇದನ್ನು ಊಹಿಸಿರಲಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮೈತ್ರಿಕೂಟ 200ಕ್ಕಿಂತ ಹೆಚ್ಚು ಮಹಾ ಸೀಟು ಗೆದ್ದಿದ್ದು ಇದೇ ಮೊದಲು
ಮುಂಬೈ: ಮಹಾಯುತಿ ಮೈತ್ರಿಕೂಟ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 200ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಹೊಸದೊಂದು ದಾಖಲೆ ಸ್ಥಾಪಿಸಿದೆ. ಇದುವರೆಗಿನ ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಯಾವುದೇ ಮೈತ್ರಿಕೂಟ ಕೂಡಾ 200ಕ್ಕಿಂತ ಹೆಚ್ಚು ಸ್ಥಾನ ಗೆದ್ದ ಉದಾಹರಣೆಯೇ ಇರಲಿಲ್ಲ. ಇದೀಗ 230ಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಮಹಾಯುತಿ ಮೈತ್ರಿಕೂಟ ತನ್ನದೇ ಆದ ಹೊಸ ದಾಖಲೆ ಬರೆದಿದೆ. 2005ರಲ್ಲಿ ಯುಪಿಎ 140 ಹಾಗೂ ಎನ್‌ಡಿಎ 116 ಸ್ಥಾನ, 2009ರಲ್ಲಿ ಯುಪಿಎ 144 ಹಾಗೂ ಎನ್‌ಡಿಎ 90, 2014ರಲ್ಲಿ ಯುಪಿಎ 83 ಹಾಗೂ ಎನ್‌ಡಿಎ 185, 2019ರಲ್ಲಿ ಯುಪಿಎ 98 ಮತ್ತು ಎನ್‌ಡಿಎ ಕೂಟ 161 ಸ್ಥಾನ ಗೆದ್ದಿದ್ದವು.
ಬಿಜೆಪಿಗೆ ಹರ್ಯಾಣ ನಂತರ ಅಚ್ಚರಿ ಗೆಲುವು
ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಸಾಧಿಸಿದ ಗೆಲುವು ಹರ್ಯಾಣ ನಂತರದ ಅಚ್ಚರಿಯ ಜಯವಾಗಿದೆ. ಹರ್ಯಾಣದಲ್ಲಿ ಆಡಳಿತ ವಿರೋಧಿ ಅಲೆ ಇದ್ದ ಕಾರಣ ಬಿಜೆಪಿಗೆ ಆತಂಕ ಇದ್ದೇ ಇತ್ತು. ಅದನ್ನು ಮೆಟ್ಟಿ ನಿಂತು ಪಕ್ಷ ಜಯಿಸಿತ್ತು. ಮಹಾರಾಷ್ಟ್ರದಲ್ಲೂ ಆಡಳಿತ ವಿರೋಧಿ ಅಲೆ ಆತಂಕ ಹಾಗೂ ಲೋಕಸಭೆ ಚುನಾವಣೆಯಲ್ಲಿ ಆದ ಹಿನ್ನಡೆಯ ಆತಂಕ ಬಿಜೆಪಿಗೆ ಇತ್ತು. ಆದರೆ ಇದನ್ನೆಲ್ಲ ಮೀರಿ ಪಕ್ಷ ಅಭೂತಪೂರ್ವ ಜಯ ಸಾಧಿಸಿದೆ.
ರಾಜ್ ಠಾಕ್ರೆ ಧೂಳೀಪಟ!
ಮುಂಬೈ: ಕರ್ನಾಟಕದ ಜೊತೆಗೆ ಸದಾ ಗಡಿ ಜಗಳ ತೆಗೆಯುವ ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ ಪಕ್ಷ ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಒಂದೂ ಸೀಟು ಗೆಲ್ಲದೆ ಧೂಳೀಪಟ ವಾಗಿದೆ. ಸ್ವತಃ ರಾಜ್ ಠಾಕ್ರೆಯ ಮಗ ಕೂಡ ಸೋತಿದ್ದಾರೆ.
ಇದನ್ನು ಓದಿ: ಫೀನಿಕ್ಸ್‌ನಂತೆ ಎದ್ದು ಬಂದ ಹೇಮಂತ ಸೊರೇನ್: ಜಾರ್ಖಂಡ್‌ನಲ್ಲಿ ಬಿಜೆಪಿ ಸೋಲಿಗೆ ಕಾರಣವೇನು?
ಇದನ್ನು ಓದಿ: ಸತತ 3ನೇ ಸಲ ಬಿಜೆಪಿಗೆ ಜನಾದೇಶ ನೀಡಿದ 6ನೇ ರಾಜ್ಯ ಮಹಾರಾಷ್ಟ್ರ