ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿನ ಬೆನ್ನಲ್ಲೇ ಪ್ರಧಾನಿ ಮೋದಿ 'ಏಕ್ ಹೈ ತೊ ಸೇಫ್ ಹೈ' ಎಂಬ ಘೋಷಣೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಅವರು, ಪಕ್ಷವು ಜಾತಿಯ ವಿಷ ಬೀಜ ಬಿತ್ತುತ್ತಿದೆ ಎಂದು ಆರೋಪಿಸಿದರು.
ಪಿಟಿಐ ನವದೆಹಲಿ: ನಾವು ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ (ಏಕ್ ಹೈ ತೊ ಸೇಫ್ ಹೈ) ಎಂಬುದು ಇಂದು ದೇಶದ ಮಹಾಮಂತ್ರವಾಗಿದೆ. ಹರ್ಯಾಣಮಹಾರಾಷ್ಟ್ರ ಇದನ್ನು ಸಾಬೀತು ಪಡಿಸಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಒಳಗೊಂಡ ಮಹಾಯುತಿ ಕೂಟ ಜಯಭೇರಿ ಬಾರಿಸಿದ ಬೆನ್ನಲ್ಲೇ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, 'ಕಳೆದ 50 ವರ್ಷಗಳಲ್ಲಿ ಚುನಾವಣಾ ಪೂರ್ವ ಮೈತ್ರಿ ಇದೇ ಮೊದಲ ಬಾರಿ ಇಂತಹ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಎಲ್ಲಾ ದಾಖಲೆಗಳನ್ನು ಮುರಿದಿದೆ. ಬಿಜೆಪಿಗೆ ಸತತ 3ನೇ ಬಾರಿ ಜನಾದೇಶ ನೀಡಿದ 6ನೇ ರಾಜ್ಯ ಮಹಾರಾಷ್ಟವಾಗಿದೆ. ಇಂದು ರಾಜ್ಯದಲ್ಲಿ ಉತ್ತಮ ಆಡಳಿತ, ನಿಜವಾದ ಸಾಮಾಜಿಕ ನ್ಯಾಯ ಜಯಿಸಿದೆ ಹಾಗೂ ಸುಳ್ಳು, ವಂಚನೆ ಹೀನಾಯವಾಗಿ ಸೋತಿದೆ' ಎಂದು ಸಂತಸ ವ್ಯಕ್ತಪಡಿಸಿದರು.
ಈ ವೇಳೆ ವಿಪಕ್ಷವಾದ ಇಂಡಿಯಾ ಕೂಟವನ್ನು ಕಟುವಾಗಿ ಟೀಕಿಸಿರುವ ಅವರು, ಜನ 'ದೇಶ ಮೊದಲು' ಎನ್ನುವವರೊಂದಿಗೆ ಇದ್ದಾರೆ ಹೊರತು 'ಕುರ್ಚಿ ಮೊದಲು' ಎನ್ನುವವರೊಂದಿಗೆ ಅಲ್ಲ, ಆದರೆ ಇದನ್ನು ಅರ್ಥೈಸಿಕೊಳ್ಳುವಲ್ಲಿ ಇಂಡಿಯಾ ಕೂಟ ಸೋತಿದೆ. ಇಂದು ಕಾಂಗ್ರೆಸ್ ಪರಾವಲಂಬಿಯಾಗಿದ್ದು, ಸ್ವಂತ ಬಲದಲ್ಲಿ ಸರ್ಕಾರ ರಚಿಸಲು ಅಶಕ್ತವಾಗಿದೆ. ಕಾರಣ ಹಿಂದಿನ ಕಾಂಗ್ರೆಸ್ ಈಗ ಉಳಿದಿಲ್ಲ. 'ರಾಜ ಪರಿವಾರ'ಕ್ಕೆ ಮಾತ್ರವೇ ಕಾಂಗ್ರೆಸ್ ಅನ್ನು ಮುನ್ನಡೆಸಲು ಅವಕಾಶವಿದೆಯೇ ಹೊರತು, ಸಮರ್ಪಿತ ಕಾರ್ಯಕರ್ತರಿಗೂ ಮುಂದೆ ಬರಲಾಗದಂತಹ ವಾತಾವರಣವನ್ನು ಪಕ್ಷದಲ್ಲಿ ಸೃಷ್ಟಿಸಲಾಗಿದೆ. ಕಾಂಗ್ರೆಸ್ ಅಧಿಕಾರದ ಆಸೆಯಿಂದ ಜಾತಿಯ ವಿಷ ಹರಡುತ್ತಿದೆ. ಅದಕ್ಕೆ ತನ್ನ ಪರಿವಾರ ಮುಖ್ಯವೇ ಹೊರತು ಜನರಲ್ಲ ಎಂದರು.
ರಾಹುಲ್‌ಗೆ ಚಾಟಿ: ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿ, 'ಆ ಪಕ್ಷವು ಉತ್ತರಕ್ಕೆ ಹೋದಾಗ ದಕ್ಷಿಣಕ್ಕೆ ಅವಮಾನ ಮಾಡುತ್ತದೆ ಹಾಗೂ ದಕ್ಷಿಣಕ್ಕೆ ಹೋದಾಗ ಉತ್ತರಕ್ಕೆ ಅವಮಾನ ಮಾಡುತ್ತದೆ. ಸಾಲದೆಂಬಂತೆ ವಿದೇಶದಲ್ಲಿ ಭಾರತವನ್ನೇ ಅವಮಾನಿಸುತ್ತದೆ' ಎಂದರು.
ಕರ್ನಾಟಕ 'ಕೈ' ಗ್ಯಾರಂಟಿ, ವಕ್ಫಗೆ ಪ್ರಹಾರ
'ಕೊಟ್ಟ ಭರವಸೆ ಈಡೇರಿಸಲಾಗದೆ ಕಾಂಗ್ರೆಸ್ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲದಲ್ಲಿ ಒದ್ದಾಡುತ್ತಿರುವುದನ್ನು ಜನ ಗಮನಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು. ಇಲ್ಲದೆ, ಜಮ್ಮು ಕಾಶ್ಮೀರದಲ್ಲಿ ರದ್ದಾದ 370ನೇ ವಿಧಿಯನ್ನು ಮರುಸ್ಥಾಪಿಸಲು ಯಾವ ಶಕ್ತಿಗೂ ಸಾಧ್ಯ ವಿಲ್ಲ, ಕಾರಣ, ಜನರು ಅಂಬೇಡ್ಕರ್ ಅವರ ಸಂವಿಧಾನವನ್ನಷ್ಟೇ ಒಪ್ಪಿಕೊಳ್ಳುತ್ತಾರೆ. ಎಂದರು. ಅಲ್ಲದೆ, ವಕ್ಫ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ವಕ್ಫ ಮಂಡಳಿ ಕಾಂಗ್ರೆಸ್ ಓಲೈಕೆ ರಾಜಕೀಯಕ್ಕೆ ಸಾಕ್ಷಿ. ಅಂಬೇಡ್ಕರರ ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ' ಎಂದರು.
ಮೋದಿ ಇದರೆ ಎಲ್ಲವೂ ಸಾಧ್ಯ
ಪ್ರಧಾನಿ ನರೇಂದ್ರ ಮೋದಿ ಇದ್ದರೆ ಎಲ್ಲವೂ ಸಾಧ್ಯವಾಗುತ್ತದೆ. ಆದ್ದರಿಂದಲೇ ಬಿಜೆಪಿ, ಶಿವಸೇನೆ (ಶಿಂಧೆ ಬಣ) ಹಾಗೂ ಎನ್‌ಸಿಪಿ (ಅಜಿತ್ ಬಣ) ಮೈತ್ರಿಯ ಮಹಾಯುತಿ 288 ವಿಧಾನಸಭಾ ಸ್ಥಾನಗಳಲ್ಲಿ 210ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಲು ಸಾಧ್ಯವಾಗಿದೆ. ಮೋದಿ ಅವರ ಏಕ್ ಹೈ ತೋ ಸೇಫ್ ಹೈ ಘೋಷಣೆಯೂ ಫಲ ನೀಡಿದೆ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಸುಳ್ಳಿನ ಅಂಗಡಿ ಬಂದ್
ಜನ ಸುಳ್ಳಿನ ಅಂಗಡಿ ಮುಚ್ಚಿದ್ದಾರೆ. ಭ್ರಮೆ ಮತ್ತು ಸುಳ್ಳುಗಳ ನಡುವೆ ಜನ ಮಹಾಯುತಿಗೆ ಇಷ್ಟೊಂದು ದೊಡ್ಡ ಮಟ್ಟಿದ ಗೆಲುವು ನೀಡುವ ಮೂಲಕ ಜನರು ಸಂವಿಧಾನದ ನಕಲಿ ಹಿತೈಷಿಗಳ ಸುಳ್ಳಿನ ಅಂಗಡಿಯನ್ನು ಮುಚ್ಚಿದ್ದಾರೆ. ಈ ಐತಿಹಾಸಿಕ ಜನಾದೇಶಕ್ಕಾಗಿ ಮಹಾರಾಷ್ಟ್ರದ ಜನತೆಗೆ ಹೃತ್ತೂರ್ವಕ ಕೃತಜ್ಞತೆಗಳು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮೋದಿ ದೂರದೃಷ್ಟಿ ಈ ಗೆಲುವಿಗೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಆಲೋಚನೆಗಳಿಂದಲೇ ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟಕ್ಕೆ ಈ ಐತಿಹಾಸಿಕ ಗೆಲುವು ಸಾಧ್ಯವಾಗಿದೆ. ಈ ಗೆಲುವಿಗಾಗಿ ಮಹಾಯುತಿ ನಾಯಕರು, ಕಾರ್ಯಕರ್ತರು ಶ್ರಮಿಸಿದ್ದಾರೆ. ಅವರಿಗೆಲ್ಲಾ ನನ್ನ ಹೃದಯ ಪೂರ್ವಕ ಧನ್ಯವಾದಗಳು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಅಭಿವೃದ್ಧಿಗೆ ಸಿಕ್ಕ ವಿಜಯ
ಇದು ಅಭಿವೃದ್ಧಿಗೆ ಸಿಕ್ಕ ಜಯ! ಉತ್ತಮ ಆಡಳಿತಕ್ಕೆ ಸಿಕ್ಕ ಜಯ! ಒಟ್ಟಾಗಿ ನಾವು ಇನ್ನೂ ಎತ್ತರಕ್ಕೆ ಏರುತ್ತೇವೆ! ಎನ್‌ಡಿಎಗೆ ಐತಿಹಾಸಿಕ ಜನಾದೇಶ ನೀಡಿದ್ದಕ್ಕಾಗಿ ಮಹಾರಾಷ್ಟ್ರದ ನನ್ನ ಸಹೋದರಿಯರು ಮತ್ತು ಸಹೋದರರಿಗೆ, ವಿಶೇಷವಾಗಿ ರಾಜ್ಯದ ಯುವಕರು ಮತ್ತು ಮಹಿಳೆಯರಿಗೆ ಹೃತ್ತೂರ್ವಕ ಕೃತಜ್ಞತೆಗಳು. ನಮ್ಮ ಮೈತ್ರಿಯು ಮಹಾರಾಷ್ಟ್ರದ ಪ್ರಗತಿಗೆ ಶ್ರಮಿಸುತ್ತದೆ ಎಂದು ನಾನು ಜನರಿಗೆ ಭರವಸೆ ನೀಡುತ್ತೇನೆ. ಜೈ ಮಹಾರಾಷ್ಟ್ರ!
ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಐತಿಹಾಸಿಕ ದಿನ: ನಡ್ಡಾ
ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತ್ತು ವಿವಿಧ ರಾಜ್ಯಗಳ ಉಪಚುನಾವಣೆಗಳಲ್ಲಿ ತಮ್ಮ ಪಕ್ಷದ ಗೆಲುವು 'ಐತಿಹಾಸಿಕ' ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ತಾ ಅವರು ಶ್ಲಾಘಿಸಿದರು ಮತ್ತು ವಿಪಕ್ಷಗಳ ವಿಭಜನೆ ರಾಜಕೀಯವನ್ನು ತಿರಸ್ಕರಿಸಿ ದೇಶದ ಅಭಿವೃದ್ಧಿಯ ಪ್ರಧಾನಿ ಅವರ ದೃಷ್ಟಿಗೆ ಜನರು ಮುದ್ರೆ ಹಾಕಿದ್ದಾರೆ. ಇದು ಐತಿಹಾಸಿಕ ದಿನ ಎಂದು ಹೇಳಿದರು. ಚುನಾವಣಾ ಫಲಿತಾಂಶದ ನಂತರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ, ಜಾರ್ಖಂಡ್‌ನಲ್ಲಿ ಜನಾದೇಶವನ್ನು ಒಪ್ಪಿಕೊಂಡರು ಮತ್ತು ತಮ್ಮ ಪಕ್ಷವು ರಾಜ್ಯದಲ್ಲಿ 'ರಚನಾತ್ಮಕ ವಿರೋಧ' ಪಾತ್ರವನ್ನು ವಹಿಸುತ್ತದೆ ಮತ್ತು 'ಕೊನೆಯ ಉಸಿರು ಇರುವವರೆಗೂ' ಬಾಂಗ್ಲಾದೇಶದ ಒಳನುಸುಳುವಿಕೆಯ ವಿರುದ್ಧ ಹೋರಾಡುತ್ತದೆ ಎಂದು ಪ್ರತಿಪಾದಿಸಿದರು.
ಮಹಾರಾಷ್ಟ್ರದಲ್ಲಿ ಐತಿಹಾಸಿಕ ಜಯಭೇರಿ: ಎನ್‌ಡಿಎ ಮಹಾರಾಜ
ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಗಿಂತ ಕಲ್ಪನಾ ಸೊರೆನ್ ಆಗರ್ಭ ಶ್ರೀಮಂತೆ!