India Gate | ಹಾನಗಲ್‌ ಸೋಲು ಬೊಮ್ಮಾಯಿಗೇನು ಕಲಿಸಿತು?

By Suvarna News  |  First Published Nov 7, 2021, 2:47 PM IST

100 ದಿನದಲ್ಲಿ ಬೊಮ್ಮಾಯಿ ತಾವು ಒಳ್ಳೆ ಆಡಳಿತಗಾರ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಹಾನಗಲ… ಚುನಾವಣೆ ಬೊಮ್ಮಾಯಿ ಬಳಿ ಒಳ್ಳೆಯ ರಾಜಕೀಯ ತಂಡ ಇಲ್ಲ ಅನ್ನೋದನ್ನು ಎತ್ತಿ ತೋರಿಸಿದೆ. 


ಬೆಂಗಳೂರು (ನ. 07): ಬರೀ ಅದೃಷ್ಟಮಾತ್ರದಿಂದ ರಾತ್ರೋರಾತ್ರಿ ಕುರ್ಚಿ ಮೇಲೆ ಕುಳಿತುಕೊಳ್ಳಬಹುದು, ಬರೀ ಮಾತಿನ ಬಲದಿಂದ ಒಳ್ಳೆಯ ಹೆಸರು ಸಂಪಾದಿಸಬಹುದು. ಆದರೆ ಸರ್ಕಾರ ಮತ್ತು ಸಂಘಟನೆ ಮೇಲೆ ಪೂರ್ತಿ ಹಿಡಿತ ಇಲ್ಲದೆ ತಮ್ಮ ಹೆಸರಿನ ಮೇಲೆಯೇ ಮತ್ತೊಬ್ಬರಿಗೆ ವೋಟು ಹಾಕಿಸುವುದು ಅತ್ಯಂತ ಪ್ರಯಾಸದ ಕೆಲಸ ಮತ್ತು ಅದರ ಅವಶ್ಯಕತೆಗಳು ಬೇರೆ ಎಂದು ಶಿಗ್ಗಾಂವ್‌ ಬಂಕಾಪುರದ ಪಕ್ಕದಲ್ಲೇ ಇರುವ ಹಾನಗಲ್‌ ಮತದಾರರು ಬೊಮ್ಮಾಯಿ ಸಾಹೇಬರಿಗೆ ತೋರಿಸಿಕೊಟ್ಟಿದ್ದಾರೆ.

ಸಿಂದಗಿಯಲ್ಲಿ ಬಿಜೆಪಿ ದೊಡ್ಡ ಅಂತರದಿಂದ ಗೆದ್ದಿದೆಯಾದರೂ ಬೊಮ್ಮಾಯಿ ಅವರ ಪರೀಕ್ಷೆ ಇದ್ದಿದ್ದು ಸ್ವಂತ ಜಿಲ್ಲೆಯಲ್ಲಿ. ಕೇವಲ 16 ತಿಂಗಳ ಅಂತರದಲ್ಲಿ ವಿಧಾನಸಭಾ ಚುನಾವಣೆ ಇರುವಾಗ ಹೈಕಮಾಂಡ್‌ ಸೇನಾಧಿಪತಿ ಎಂದು ಆರಿಸಿರುವ ಬೊಮ್ಮಾಯಿ 12 ದಿನ ಒಂದೇ ಕ್ಷೇತ್ರದಲ್ಲೇ ಕುಳಿತು ಸಹ ಚುನಾವಣೆ ಗೆಲ್ಲದೇ ಇರುವುದು, ದೊಡ್ಡ ಚುನಾವಣೆಯನ್ನು ಗೆಲ್ಲಿಸಿ ಕೊಡುವ ಅವರ ಸಾಮರ್ಥ್ಯದ ಮೇಲೆ ಕಾರ್ಯಕರ್ತರಿಗೆ, ಶಾಸಕರಿಗೆ ಮತ್ತು ದಿಲ್ಲಿ ನಾಯಕರಿಗೆ ಪ್ರಶ್ನೆ ಮೂಡಿಸುವುದು ಸಹಜ.

Latest Videos

undefined

ಬೈ ಎಲೆಕ್ಷನ್ ಗೆಲ್ಲೋದು ಸಿಎಂಗೇಕೆ ಅನಿವಾರ್ಯ? ಸಿದ್ದು, ಬಿಎಸ್‌ವೈಗೆ ಚುನಾವಣೆಯಿಂದ ಏನು ಬೇಕಿದೆ.?

ಯಡಿಯೂರಪ್ಪನವರ ಬಗ್ಗೆ ಎಷ್ಟೇ ಟೀಕೆ ಟಿಪ್ಪಣಿಗಳಿದ್ದರೂ ಅವರ ಹೆಸರ ಮೇಲೆ ವೋಟು ಬೀಳುತ್ತಿತ್ತು. ಅದೇಕೋ ಏನೋ ಜಾತಿ ಹೆಸರು ಹೇಳಿದರೂ ಸದಾನಂದಗೌಡ, ಜಗದೀಶ್‌ ಶೆಟ್ಟರ್‌, ನಂತರ ಈಗ ಬೊಮ್ಮಾಯಿ ಅವರ ಹೆಸರ ಮೇಲೆ ವೋಟು ಹಾಕಲು ಬಿಜೆಪಿ ಮತದಾರ ಉತ್ಸಾಹ ತೋರದೇ ಇರುವುದು ಕರ್ನಾಟಕ ಬಿಜೆಪಿಯ ಚಿಂತೆ ಮತ್ತಷ್ಟುಹೆಚ್ಚಿಸಿದೆ.

ಸೋಲಿಗೆ ಕಾರಣ ಏನು?

ಸ್ವತಃ ರಾಜ್ಯದ ಮುಖ್ಯಮಂತ್ರಿ ಹಾನಗಲ್‌ಗೆ ಹೋಗಿ ಕುಳಿತರೂ ಕಾಂಗ್ರೆಸ್‌ ಗೆಲ್ಲಲು ಮುಖ್ಯ ಕಾರಣ ಕೊರೋನಾ ಕಾಲದಲ್ಲಿ ದೊಡ್ಡ ಉದಾಸಿ ಅವರ ಅನುಪಸ್ಥಿತಿಯಲ್ಲಿ ಶ್ರೀನಿವಾಸ ಮಾನೆ ಜನರ ಜೊತೆ ಬೆರೆತ ರೀತಿ ಮತ್ತು ಮಾಡಿದ ಸಹಾಯ. ಬಿಜೆಪಿ ಎಷ್ಟೇ ಪ್ರಯತ್ನ ಮಾಡಿದರೂ ಗೆಲ್ಲದೆ ಇರಲು ಮುಖ್ಯ ಕಾರಣ ಉದಾಸಿ ಬೆನ್ನು ನೋವಿನಿಂದ ಆಸ್ಪತ್ರೆಗೆ ದಾಖಲಾದ ನಂತರವೂ ಪುತ್ರ ಶಿವಕುಮಾರ ಉದಾಸಿ ಮೈಚಳಿ ಬಿಟ್ಟು ಕ್ಷೇತ್ರದಲ್ಲಿ ಓಡಾಡದೇ ಇದ್ದಿದ್ದು.

ತಂದೆ ಇಟ್ಟುಕೊಂಡಿದ್ದ ಸಂಬಂಧಗಳನ್ನು ತಮ್ಮ ಹೆಸರಿನೊಂದಿಗೆ ನವೀಕರಿಸದೇ ಇದ್ದಿದ್ದು ದೊಡ್ಡ ಕಾರಣ. ಯಡಿಯೂರಪ್ಪ ಇದ್ದಿದ್ದರೆ ಆ ಅಂತರವನ್ನು ಸರಿತೂಗಿಸಲು ತಮ್ಮ ಹೆಸರಿನ ಮೇಲೆ 8ರಿಂದ 10 ಸಾವಿರ ವೋಟು ಹಾಕಿಸುತ್ತಿದ್ದರು. ಮುಂದೆನೋ ಗೊತ್ತಿಲ್ಲ, ಆದರೆ ಸದ್ಯಕ್ಕಂತೂ ಆ ಬೇರೆ ಕ್ಷೇತ್ರದಲ್ಲಿ ಬೇರೆ ಅಭ್ಯರ್ಥಿಗೆ ವೋಟು ಹಾಕಿಸುವ ಶಕ್ತಿ ಬೊಮ್ಮಾಯಿಗೆ ಇಲ್ಲ ಎನ್ನುವುದು ಸ್ಪಷ್ಟಆಗಿದೆ. ದಿಲ್ಲಿ ಹೈಕಮಾಂಡ್‌ ಸೇನಾಧಿಪತಿ ಯಾರು ಎನ್ನುವುದನ್ನು ನಿರ್ಧರಿಸಬಹುದು ಅಷ್ಟೆ, ಆದರೆ ಪ್ರಜಾಪ್ರಭುತ್ವದಲ್ಲಿ ಯುದ್ಧ ಗೆಲ್ಲಿಸುವುದು ಪ್ರಜೆಗಳ ಬೆಂಬಲ ಮಾತ್ರ ಅಲ್ಲವೇ?

ವಿಜಯೇಂದ್ರ ಮಂತ್ರಿಯಾಗುತ್ತಾರಾ?

ಅದೇನೋ ಗೊತ್ತಿಲ್ಲ, ಯಡಿಯೂರಪ್ಪ ಯಾರಿಗೆ ಅಧಿಕಾರ ಬಿಟ್ಟುಕೊಡುತ್ತಾರೋ ಅವರು ಸ್ವಂತ ಜಿಲ್ಲೆಯಲ್ಲೇ ಮೊದಲ ಚುನಾವಣೆ ಸೋಲುವುದು ವಾಡಿಕೆಯಂತಾಗುತ್ತಿದೆ. 2011ರಲ್ಲಿ ಸದಾನಂದಗೌಡ ಉಡುಪಿ ಸೋತರು, 2021ರಲ್ಲಿ ಬೊಮ್ಮಾಯಿ ಹಾನಗಲ್ ಸೋತಿದ್ದಾರೆ. ಹೀಗಾಗಿ ಯಡಿಯೂರಪ್ಪರನ್ನು ಇಳಿಸಿದ್ದು ಎಷ್ಟುಸರಿ ಎಂಬ ಚರ್ಚೆ ಬಿಜೆಪಿ ಒಳಗಡೆ ನಡೆಯುವುದು ಸ್ವಾಭಾವಿಕ. ಈಗ ಹೇಗಾದರೂ ಮಾಡಿ ವಿಜಯೇಂದ್ರರನ್ನು ಕ್ಯಾಬಿನೆಟ್‌ ಮಂತ್ರಿ ಮಾಡಿದರೆ ಮಾತ್ರ 2023ರಲ್ಲಿ ಲಿಂಗಾಯತ ಮತಗಳು ಕ್ರೋಢೀಕರಣಗೊಳ್ಳುತ್ತವೆ ಎಂಬ ತರ್ಕದ ಚರ್ಚೆಗಳು ಶುರುವಾಗಿವೆ.

ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ? ಹೀಗಿದೆ ನೋಡಿ ಕಾಂಗ್ರೆಸ್ ಲೆಕ್ಕಾಚಾರ!

ಯಡಿಯೂರಪ್ಪ ಬಿಜೆಪಿಗೆ ನಷ್ಟಉಂಟುಮಾಡುವ ಮನಸ್ಥಿತಿಯಲ್ಲಿ ಇಲ್ಲ. ಆದರೆ ಬಿಎಸ್‌ವೈ ಅವರಂತೆ ವೋಟು ಹಾಕಿಸುವ ಕ್ಷಮತೆಯನ್ನೂ ಯಾರೂ ತೋರುತ್ತಿಲ್ಲ ಅನ್ನುವುದೇ ವಿಜಯೇಂದ್ರರಿಗೆ ಅಧಿಕಾರ ಕೊಡಿ ಎನ್ನುವ ಚರ್ಚೆಗೆ ನಾಂದಿ ಹಾಡಬಹುದು. ಕರ್ನಾಟಕ ಬಿಜೆಪಿಯಲ್ಲಿ ತಮ್ಮಂತೆ ವೋಟು ಹಾಕಿಸುವವರು ಯಾರೂ ಇಲ್ಲ ಅನ್ನೋದು ಯಡಿಯೂರಪ್ಪ ಸಾಮರ್ಥ್ಯ ಮತ್ತು ಅನಿವಾರ್ಯತೆಗೆ ದೊಡ್ಡ ಕಾರಣ ನೋಡಿ.

ವೋಟು ಹಾಕಿಸುವ ಕ್ಷಮತೆ

ಚುನಾವಣೆಯಲ್ಲಿ ವೋಟು ಹಾಕಿಸುವವ ಮಾತ್ರ ರಾಜಕಾರಣದಲ್ಲಿ ಜನನಾಯಕ ಆಗುತ್ತಾನೆ. ಬರೀ ಕುರ್ಚಿ ಮೇಲೆ ಕುಳಿತಿದ್ದಾರೆ ಎಂದೋ, ದೊಡ್ಡ ಜಾತಿಗಳ ಬೆಂಬಲ ಇದೆ ಎಂದೋ ಅಥವಾ ಸಂಘಟನೆಯಲ್ಲಿ ಹಿರಿಯರು ಎಂದೋ ಜನನಾಯಕ ಎನಿಸಿಕೊಳ್ಳಲು ಸಾಧ್ಯವಿಲ್ಲ. 1983ರಲ್ಲಿ ದೇವರಾಜ್‌ ಅರಸರಂಥ ಜನನಾಯಕನನ್ನು ಬದಲಿಸಿ ಗುಂಡೂರಾಯರನ್ನು ತಂದಾಗ ಜನ ಕೈಹಿಡಿಯಲಿಲ್ಲ. 1994ರಲ್ಲಿ ವೀರೇಂದ್ರ ಪಾಟೀಲ… ಮತ್ತು ಬಂಗಾರಪ್ಪರನ್ನು ಬದಲಿಸಿ ವೀರಪ್ಪ ಮೊಯ್ಲಿ ಅವರನ್ನು ತಂದರೂ ಜನ ಕೈಹಿಡಿಯಲಿಲ್ಲ.

ಇನ್ನು 2013ರಲ್ಲಿ ಯಡಿಯೂರಪ್ಪರನ್ನು ಬದಲಿಸಿ ಸದಾನಂದಗೌಡ, ನಂತರ ಜಗದೀಶ್‌ ಶೆಟ್ಟರ್‌ರಂಥ ಪ್ರಬಲ ಜಾತಿಗಳ ನಾಯಕರನ್ನು ತಂದಾಗಲೂ ಜನ ಉತ್ಸಾಹ ತೋರಲಿಲ್ಲ. ಈಗ ಬೊಮ್ಮಾಯಿ 100 ದಿನದಲ್ಲಿ ಒಳ್ಳೆ ಹೆಸರು ತೆಗೆದುಕೊಂಡರೂ ಅದು ಮತಗಳಾಗಿ ಪರಿವರ್ತನೆ ಸದ್ಯಕ್ಕಂತೂ ಆಗಿಲ್ಲ. ಬರೀ ಜಾಣ್ಮೆ, ಬೌದ್ಧಿಕ ಶಕ್ತಿ ಮತ್ತು ಪ್ರಬಂಧನ ಸಾಮರ್ಥ್ಯದಿಂದ ಚುನಾವಣೆ ಗೆಲ್ಲಲು ಆಗುವುದಿಲ್ಲ. ಅದಕ್ಕೆ ಜನರಿಗೆ ಇವ ನಮ್ಮವ ಅನಿಸುವಂತೆ ಕೆಲಸ ಮಾಡುವುದೇ ಇರುವ ದಾರಿ.

ಬೊಮ್ಮಾಯಿಗೊಂದು ತಂಡ ಬೇಕು

100 ದಿನದಲ್ಲಿ ಬೊಮ್ಮಾಯಿ ತಾವು ಒಳ್ಳೆ ಆಡಳಿತಗಾರ ಅನ್ನೋದನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆ. ಆದರೆ ಹಾನಗಲ್ ಚುನಾವಣೆ ಬೊಮ್ಮಾಯಿ ಬಳಿ ಒಳ್ಳೆ ರಾಜಕೀಯ ತಂಡ ಇಲ್ಲ ಅನ್ನೋದನ್ನು ಎತ್ತಿ ತೋರಿಸಿದೆ. ಹೋಬಳಿಗೊಬ್ಬ ಮಂತ್ರಿ ಬಂದು ಕೂತರೂ ಉಪಚುನಾವಣೆಯ ಸಣ್ಣ ಸಣ್ಣ ಪ್ರಬಂಧನ ಮಾಡುವ ಅನಿವಾರ್ಯತೆ ಮುಖ್ಯಮಂತ್ರಿ ತಲೆ ಮೇಲಿತ್ತು. ಚುನಾವಣೆಯ ಮುಂಚಿನ ಒಂದು ವಾರ ಬೊಮ್ಮಾಯಿ 100 ಕೇಜಿ ಭಾರ ಹೊತ್ತುಕೊಂಡು ತಿರುಗುತ್ತಿದ್ದಾರೇನೋ ಎಂದು ಅವರನ್ನು ಭೇಟಿ ಆದವರಿಗೆಲ್ಲಾ ಅನ್ನಿಸುತ್ತಿತ್ತು. ಬೊಮ್ಮಾಯಿ ನಿಧಾನವಾಗಿ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎನ್ನುವುದು ಹೌದಾದರೂ ಆರ್‌ಎಸ್‌ಎಸ್‌ ಹಿನ್ನೆಲೆಯ ಬಿಜೆಪಿಯ ಸಂಘಟನೆ ಬೊಮ್ಮಾಯಿ ಹಿಡಿತದಲ್ಲಿಲ್ಲ.

2023 ಹತ್ತಿರ ಬಂದಂತೆಲ್ಲಾ ಇವತ್ತು ಬೊಮ್ಮಾಯಿ ಸುತ್ತಮುತ್ತ ಓಡಾಡುವ ಸಚಿವರು ತಮ್ಮ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗುತ್ತಾ ಹೋಗುತ್ತಾರೆ. ಆಗ ಈಡೀ ರಾಜ್ಯ ಗೊತ್ತಿರುವ, ಸಂಘಟನೆ ಮೇಲೆ ಹಿಡಿತ ಇರುವ, ರಾಜಕೀಯ ಪ್ರಬಂಧನ ಗೊತ್ತಿರುವ ತಂಡ ಬೇಕು. ಸದ್ಯಕ್ಕಂತೂ ಅದು ಬೊಮ್ಮಾಯಿ ಸುತ್ತಮುತ್ತ ಕಾಣುತ್ತಿಲ್ಲ ಬಿಡಿ.

ಸಿದ್ದರಾಮಯ್ಯ ಮುಂದೆ ಮುಂದೆ

2013ರಲ್ಲಿ ಗುಜರಾತ್‌ನಿಂದ ದಿಲ್ಲಿಗೆ ಬಂದ ನರೇಂದ್ರ ಮೋದಿ ಅನುಸರಿಸಿದ ತಂತ್ರ ಎಂದರೆ ಏನೇ ಆಗಲಿ ರಾಜಕಾರಣದಲ್ಲಿ ಮೊದಲ ಬಾಣ ತಾವೇ ಹೊಡೆಯುವುದು, ವಿರೋಧಿಗಳು ಆ ಬಾಣಕ್ಕೆ ತತ್ತರಗೊಂಡು ಸಾವರಿಸಿಕೊಂಡು ಪ್ರತಿಯಾಗಿ ಬಾಣ ಹೊಡೆಯುವುದರಲ್ಲಿ ಇನ್ನೊಂದು ಹೊಸ ಬಾಣ ಬಿಡುವುದು. ಅರ್ಥ ಏನು ಎಂದರೆ; ರಾಜಕೀಯ ಚರ್ಚೆಗಳನ್ನು ತಾವು ಆರಂಭಿಸುವುದು, ಪ್ರತಿಯಾಗಿ ಉತ್ತರ ಬರುವಷ್ಟರಲ್ಲಿ ಹಳೇ ಚರ್ಚೆ ಮುಗಿಸಿ ಹೊಸದು ಆರಂಭಿಸುವುದು. ಮೋದಿ ಎಂದರೆ ಉರಿದು ಬೀಳುವ ಸಿದ್ದರಾಮಯ್ಯ ಅವರು ಈಗ ಅದನ್ನೇ ಮಾಡುತ್ತಿದ್ದಾರೆ.

ರಾಜಕೀಯ ಚರ್ಚೆಗಳನ್ನು ಸಿದ್ದು ತಾವೇ ಆರಂಭಿಸುತ್ತಿದ್ದಾರೆ. ಬಿಜೆಪಿ ನಾಯಕರು ಉತ್ತರ ಕೊಡುವುದರೊಳಗೆ ಇನ್ನೊಂದು ಟೀಕೆ ಟಿಪ್ಪಣಿ ಆರೋಪ ಮಾಡಿ ಧೂಳು ಎಬ್ಬಿಸುತ್ತಿದ್ದಾರೆ. ಯಡಿಯೂರಪ್ಪ ಅಧಿಕಾರದಿಂದ ಇಳಿದ ಬಳಿಕ ಜನಪ್ರಿಯತೆ ಮತ್ತು ವೋಟ್‌ಬ್ಯಾಂಕ್‌ನಲ್ಲಿ ಸರಿಸಮನಾದ ನಾಯಕ ಯಾರೂ ಇಲ್ಲ. ಹೀಗಾಗಿ ಉತ್ತರ ಕೊಡಲು ಬಿಜೆಪಿಗೆ ಕಷ್ಟಆಗುತ್ತಿದೆ ಎಂದು ಗೊತ್ತಿರುವುದರಿಂದ ಸಿದ್ದು ಹೊಸ ಹೊಸ ಬಾಣ ಬಿಡುತ್ತಲೇ ಇದ್ದಾರೆ. ತಮ್ಮ ಪಕ್ಷವೇ ಅಧಿಕಾರ ನಡೆಸುತ್ತಿದ್ದರೂ ಹೇಳಿಕೊಳ್ಳಲು ಏನೂ ಇಲ್ಲ ಎನ್ನುವ ರೀತಿಯಲ್ಲಿ ಬಿಜೆಪಿ ನಾಯಕರು ಸಿದ್ದು ಕೇಳಿದ ಪ್ರಶ್ನೆಗೆ ಉತ್ತರ ಕೊಡುವುದರಲ್ಲೇ ಸಮಯ ಹಾಕುತ್ತಿದ್ದಾರೆ. ಹೊಸ ರಾಜಕಾರಣದ ಪರಿಭಾಷೆ ಏನಪ್ಪಾ ಎಂದರೆ, ಮೊದಲು ಚರ್ಚೆ ಶುರು ಮಾಡಿದವರಿಗೆ ಲಾಭ ಜಾಸ್ತಿ. ಮೋದಿ, ಕೇಜ್ರಿವಾಲ್‌ರ ಸಾಮರ್ಥ್ಯ ಅದೇ ತಾನೇ.

ಆರೆಸ್ಸೆಸ್‌ ಸಭೆಗೆ ನೋ ಎಂಟ್ರಿ

ದೇಶದ ಆರ್‌ಎಸ್‌ಎಸ್‌ ವರಿಷ್ಠರೆಲ್ಲಾ ಧಾರವಾಡದಲ್ಲಿ ಒಂದು ವಾರ ಕುಳಿತಿದ್ದರೂ ಒಂದೇ ಒಂದು ನಿಮಿಷ ರಾಜಕಾರಣಿಗಳಿಗೆ ಭೇಟಿಗೆ ಸಮಯ ಕೊಟ್ಟಿಲ್ಲ. ಮೋಹನ್‌ ಭಾಗವತ್‌, ದತ್ತಾತ್ರೇಯ ಹೊಸಬಾಳೆ ಎಲ್ಲರೂ ಬಂದಿದ್ದರೂ ಹುಬ್ಬಳ್ಳಿಯಲ್ಲೇ ಇದ್ದ ಬೊಮ್ಮಾಯಿ, ಯಡಿಯೂರಪ್ಪ, ಪ್ರಹ್ಲಾದ್‌ ಜೋಶಿ ಸೇರಿದಂತೆ ಬಿಜೆಪಿ ನಾಯಕರಿಗೆ ಭೇಟಿ ಸಾಧ್ಯ ಆಗಲೇ ಇಲ್ಲ. ಯಾರೂ ಬರಬೇಡಿ ಎಂದು ಸಂಘದ ಪ್ರಮುಖರು ಸೂಚನೆಯನ್ನೇ ಕೊಟ್ಟಿದ್ದರಂತೆ. ಈ ನಾಯಕರೆಲ್ಲ ಬಂದುಬಿಟ್ಟರೆ ‘ಬಿಜೆಪಿ ಒಳಜಗಳ ಸಂಘದ ಅಂಗಳಕ್ಕೆ’ ಎಂದೆಲ್ಲ ಮಾಧ್ಯಮಗಳು ಸುದ್ದಿ ಮಾಡುತ್ತವೆ; ಸುಮ್ಮನೆ ರಗಳೆಯೇ ಬೇಡ ಎಂದು ಸ್ಥಳೀಯ ಆರ್‌ಎಸ್‌ಎಸ್‌ ನಾಯಕರು ಗೇಟ್‌ ಒಳಗೆ ಯಾರನ್ನೂ ಬಿಟ್ಟಿಲ್ಲ. ಈ ನಿರ್ಣಯದಿಂದ ಪಾಪ ದಿಢೀರ್‌ ಸ್ವಯಂಸೇವಕರಾಗುವ ಅಧಿಕಾರಸ್ಥ ಮಂದಿಗೆ ಎಷ್ಟುನಿರಾಸೆ ಆಗಿರಬಹುದು.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

 

click me!