ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ತುಂಬಾ ಕೇವಲವಾಗಿ ಮಾತನಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗ್ಯಾರಂಟಿ ತಗೋಬೇಡಿ ಅಂತ ಜನರಿಗೆ ಕರೆ ಕೊಟ್ಟು ನೋಡಲಿ.
ಶಿವಮೊಗ್ಗ (ಮಾ.02): ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ತುಂಬಾ ಕೇವಲವಾಗಿ ಮಾತನಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗ್ಯಾರಂಟಿ ತಗೋಬೇಡಿ ಅಂತ ಜನರಿಗೆ ಕರೆ ಕೊಟ್ಟು ನೋಡಲಿ. ಆಗ ಅವರಿಗೆ ಗೊತ್ತಾಗುತ್ತೆ ಪ್ರತಿಕ್ರಿಯೆ ಯಾವ ರೀತಿ ಇರುತ್ತೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಎಸೆದರು. ನಗರದ ಅಲ್ಲಮ್ಮಪ್ರಭು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿವತಿಯಿಂದ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ ಮೇಲೆ ಗ್ಯಾರಂಟಿ ಕೊಟ್ಟಿಲ್ಲ. ನೀತಿ ಮೇಲೆ ಗ್ಯಾರಂಟಿ ಕೊಟ್ಟಿದ್ದೇವೆ ಎಂದ ಅವರು ಕಾಂಗ್ರೆಸ್ ಸರ್ಕಾರ ಇರುವವರೆಗೂ ಐದು ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದು ಪುನರುಚ್ಛರಿಸಿದರು. ಬದುಕಿನ ಹಕ್ಕಿಗೆ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಗ್ಯಾರಂಟಿ, ವಾರಂಟಿ, ಕ್ವಾಲಿಟಿ ಎಲ್ಲ ನಿರಂತರವಾಗಿರುತ್ತದೆ. ಐದು ಬೆರಳು ಸೇರಿ ಮುಷ್ಟಿಯಾಯ್ತು, ಐದು ಗ್ಯಾರಂಟಿ ಸೇರಿ ಕೈಗಟ್ಟಿಯಾಯ್ತು. ಗ್ಯಾರಂಟಿ ಯೋಜನೆಯಿಂದ ಜನರ ಖುಷಿ ನೋಡುತ್ತಿರುವ ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಇಂದಿನ ಕಾರ್ಯಕ್ರಮಕ್ಕೆ ಬಿಜೆಪಿಯ ಯಾವ ಜನಪ್ರತಿನಿಧಿಯೂ ಬರಲಿಲ್ಲ ಎಂದು ಛೇಡಿಸಿದರು.
ಸಿಎಂ ಸಿದ್ದರಾಮಯ್ಯ ಹಠದಿಂದ ಜಾತಿ ಜನಗಣತಿ ವರದಿ ಸ್ವೀಕಾರ: ಶಾಸಕ ಆರಗ ಜ್ಞಾನೇಂದ್ರ ಆರೋಪ
ಅರಳಿದ ಕಮಲ ಮುದುಡಿ ಹೋಯ್ತು, ತೆನೆ ಹೊತ್ತ ಕುಮಾರಣ್ಣ ತೆನೆ ಎಸೆದು ಬಿಜೆಪಿ ಜೊತೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಎಲ್ಲಾ ವರ್ಗದ ಜನರ ಬಗ್ಗೆ ಚಿಂತನೆ ಮಾಡುತ್ತದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಸರ್ಕಾರದವರು ಏನೇ ಟೀಕೆ ಮಾಡಬಹುದು. ನಿಮಗೆ ವೋಟು ಹಾಕದಿದ್ದರೇ ಗ್ಯಾರಂಟಿ ನಿಲ್ಲಬಹುದು ಎಂದು ಹೇಳಬಹುದು. ಆದರೆ, ಕಾಂಗ್ರೆಸ್ ಸರ್ಕಾರ ಗಟ್ಟಿಯಾಗಿದೆ. ಈ ಐದು ವರ್ಷವಲ್ಲ, ಇನ್ನೊಂದು ಸಲ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರು ಬದುಕಿನ ಮೇಲೆ ರಾಜಕೀಯ ಮಾಡಲ್ಲ, ಭಾವನೆಯ ಮೇಲೆ ರಾಜಕೀಯ ಮಾಡುತ್ತಾರೆ. ದೇವಸ್ಥಾನ ಯಾರ ಹಕ್ಕು, ಆಸ್ತಿಯಲ್ಲ. ರಾಮಮಂದಿರ ವಿಚಾರ ಇಟ್ಟುಕೊಂಡು ಬಿಜೆಪಿ ಚುನಾವಣೆ ಪ್ರಚಾರಕ್ಕೆ ಮುಂದಾಗಿದೆ. ಅಯೋಧ್ಯೆಯಲ್ಲಿ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟವರು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು. ಬಿಜೆಪಿಯವರು ಜನರ ಭಾವನೆ, ಧರ್ಮದ ಮೇಲೆ ರಾಜಕಾಣರಣ ಮಾಡಿದರೆ, ಕಾಂಗ್ರೆಸ್ ಪಕ್ಷ ಬಡವರ ಬದುಕಿನ ಮೇಲೆ ರಾಜಕಾರಣ ಮಾಡುತ್ತದೆ. ರಾಜಕಾರಣದಲ್ಲಿ ಧರ್ಮ ಇರಬಾರದು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಟಾಂಗ್ ನೀಡಿದರು.
ಬಿಜೆಪಿ ಸ್ನೇಹಿತರಿಗೆ ಕೇಳುವುದಿಷ್ಟೆ ನಿಮಗೆ ನಾಲ್ಕು ವರ್ಷ ಅಧಿಕಾರ ಇತ್ತಲ್ಲ, ನೀವು ಈ ರಾಜ್ಯದ ಜನರಿಗೆ ನೀಡಿದ ಕಾರ್ಯಕ್ರಮ ಏನು ಎಂಬುದನ್ನು ನೀವು ಹೇಳಬೇಕು. ನಾನು ಇಷ್ಟೆಲ್ಲಾ ಯೋಜನೆಗಳನ್ನು ಹೇಳುತ್ತೇನೆ. ಆದರೆ, ನಿಮ್ಮ ಶಾಸಕ ಆರಗ ಜ್ಞಾನೇಂದ್ರ ಇದು 420 ಗ್ಯಾರಂಟಿ ಎಂದು ಹೇಳುತ್ತಾರೆ. ಆರಗ ಜ್ಞಾನೇಂದ್ರ ನಿನಗೆ ಜ್ಞಾನ ಇದ್ಯಾ, ಅರೆ ಜ್ಞಾನ ಎಂದು ಟೀಕಿಸಿದರು. ಅಧಿಕಾರ ಇದ್ದಾಗ ಏನೂ ಮಾಡಲಾಗದೇ ಇರುವುವರು ಇಲ್ಲದಿದ್ದಾಗ ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಎಂದು ಹೇಳುತ್ತಾರೆ. ಅದು ಸಾಧ್ಯವಾ? ಯಡಿಯೂರಪ್ಪನವರು ಸೀರೆ, ಸೈಕಲ್ ಕೊಟ್ಟರು, ಅಮೇಲೆ ಯಾಕೆ ನಿಲ್ಲಿಸಿದ್ದೀರಿ ಎಂದು ಪ್ರಶ್ನೆ ಮಾಡಿದರು.
ಸಭೆಯಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಕಾಂಗ್ರೆಸ್ ವಕ್ತಾರ ನಿಕೇತರಾಜ್ ಮೌರ್ಯ,ಆಯನೂರು ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಮುಖಂಡರಾದ ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಎಸ್ಪಿ ದಿನೇಶ್, ಎನ್.ರಮೇಶ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ಎಸ್ಪಿ ಮಿಥುನ್ ಕುಮಾರ್ ಜಿ.ಕೆ. ಸೇರಿದಂತೆ ಅಧಿಕಾರಿಗಳಿದ್ದರು.
ಕ್ವಾಟ್ರಸ್ ಕಥೆ ಬಿಚ್ಚಿಟ್ಟ ಡಿಕೆಶಿ: ಶಿವಪ್ಪನಾಯಕ ಆಳಿದ ನಾಡು, ಕುವೆಂಪು ಅವರ ಜನ್ಮ ಬೀಡು, ಸಮಾಜವಾದಿ ಚಿಂತಕರ ಬೀಡಿನಲ್ಲಿ ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಕೋಣಂದೂರು ಲಿಂಗಪ್ಪರವರ ಹೋರಾಟವನ್ನು ನನ್ನ ವಿದ್ಯಾರ್ಥಿ ಜೀವನದಲ್ಲಿ ನೋಡಿದ್ದೇನೆ. ಚಿಕ್ಕ ಜಿಲ್ಲೆಯಾದರೂ ಅತಿಹೆಚ್ಚು ಮುಖ್ಯಮಮಂತ್ರಿಗಳನ್ನು ನೀಡಿರುವ ನಾಡು ಶಿವಮೊಗ್ಗ. ನಾನು ಬಂಗಾರಪ್ಪ ಅವರ ಶಿಷ್ಯ. ನಾನು ಇರುವ ಕ್ರಾಟ್ರಸ್ ಅನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಇದೆ. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರು ಇದ್ದರು ಎನ್ನುವ ಕಾರಣಕ್ಕೆ ಆಯ್ದುಕೊಳ್ಳಲಿಲ್ಲ. ಬಂಗಾರಪ್ಪನವರು ಇದ್ದ ಸಂದರ್ಭದಲ್ಲಿ ಅಲ್ಲಿಯೇ ಅವರಿಗಾಗಿ ಮಾವಿನ ಮರದ ಕೆಳಗೆ ನಾಲ್ಕು ವರ್ಷ ಕಾಯ್ತಾ ಕುತ್ಕೋತಿದ್ದೆ. ಬಂಗಾರಪ್ಪ ಕಾಂಗ್ರೆಸ್ ಅಧ್ಯಕ್ಷರಾಗಿದ್ರು. ರೆವಿನ್ಯೂ ಮಿನಿಸ್ಟ್ರು ಆಗಿದ್ರು. ಆ ಮನೆಗೆ ಹೋಗುವುದಕ್ಕೆ ಸಿಕ್ಕ ಭಾಗ್ಯದ ಕಾರಣಕ್ಕೆ ಆ ಕ್ವಾಟ್ರಸ್‌ಗೆ ಈಗ ಹೋಗಿದ್ದೇನೆ. ಮೊನ್ನೆ ಪೂಜೆ ಸಹ ಮಾಡಿದ್ದೇನೆ ಎಂದು ಕ್ವಾಟ್ರಸ್ ಕಥೆ ಬಿಚ್ಚಿಟ್ಟರು.
ಅನುಭವಿ ಶಾಸಕರ ಕ್ಷೇತ್ರದಲ್ಲಿ ಬಂದು ನಾನೇನು ಮಾಡಲಿ?: ಸಚಿವ ಮಂಕಾಳ ವೈದ್ಯ
ಭೂಮಿ ಹಕ್ಕಿನ ಮಾನ್ಯತೆ ಮಿತಿ 25ಕ್ಕೆ: ಅರಣ್ಯ ಭೂಮಿ ಹಕ್ಕಿನ ಅರ್ಜಿ ಮಾನ್ಯತೆ ಮಿತಿಯನ್ನು 25 ವರ್ಷಕ್ಕೆ ಇಳಿಸಬೇಕು ಎಂದು ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಶರಾವತಿ ಮುಳುಗಡೆ ಸಂತ್ರಸ್ಥರ ರಕ್ಷಣೆ ಸರ್ಕಾರದ ಕರ್ತವ್ಯ, ಬದ್ಧತೆಯೂ ಹೌದು, ಅರಣ್ಯ ಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಅವಕಾಶ ನೀಡುವುದಿಲ್ಲ. ಇದು ಸರ್ಕಾರದ ಜವಾಬ್ದಾರಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು. ರಾಜ್ಯದಲ್ಲಿ ಎರಡ್ಮೂರು ಪಂಚಾಯಿತಿ ಸೇರಿಸಿ ಒಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲಿದ್ದೇವೆ. ಒಂದೊಂದು ಶಾಲೆಗೂ 5 ಕೋಟಿ ರು. ಹಣ ಹಾಕಿ ಅತ್ಯುತ್ತಮ ಶಿಕ್ಷಣ ನೀಡಲಿದ್ದೇವೆ. ದತ್ತು ಆಧಾರಿತ ಯೋಜನೆ ಇದು. ಆರ್ಥಿಕವಾಗಿ ಹಿಂದುಳಿದವರ ಮಕ್ಕಳಿಗೆ ಶಿಕ್ಷಣ ದೊಡ್ಡ ಕನಸು. ಇಂಥ ಕಷ್ಟಗಳನ್ನು ನೋಡಿ ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು.