ಉಡುಪಿಯ ಅನಾಥ ಬಾಲಕ ಈಗ ಸ್ವಿಸ್ ಸಂಸದ

By Suvarna Web DeskFirst Published Jan 15, 2018, 10:47 AM IST
Highlights

ಉಡುಪಿಯಲ್ಲಿ ಅನಾಥವಾಗಿದ್ದ ಶಿಶುವೊಂದು ವಿಶ್ವದ ಅತ್ಯಂತ ಹಳೆಯ ಸಂಸತ್ತುಗಳಲ್ಲಿ ಒಂದಾಗಿರುವ ಸ್ವಿಜರ್ಲೆಂಡ್ ಸಂಸತ್ತಿನ ಸದಸ್ಯನಾಗಿ ಇದೀಗ ಆ ದೇಶಕ್ಕೆ ತನ್ನ ಮಗಳು ಪ್ರಧಾನಿಯಾಗಬೇಕು, ಆ ಮೂಲಕ ಸ್ವಿಜರ್ಲೆಂಡ್‌ಗೆ ಭಾರತೀಯ ಮೂಲದ ಪ್ರಧಾನಿ ಸಿಗಬೇಕು ಎಂಬ ಹಂಬಲಿಸುತ್ತಿದ್ದಾರೆ.

ಉಡುಪಿ (ಜ.14): ಉಡುಪಿಯಲ್ಲಿ ಅನಾಥವಾಗಿದ್ದ ಶಿಶುವೊಂದು ವಿಶ್ವದ ಅತ್ಯಂತ ಹಳೆಯ ಸಂಸತ್ತುಗಳಲ್ಲಿ ಒಂದಾಗಿರುವ ಸ್ವಿಜರ್ಲೆಂಡ್ ಸಂಸತ್ತಿನ ಸದಸ್ಯನಾಗಿ ಇದೀಗ ಆ ದೇಶಕ್ಕೆ ತನ್ನ ಮಗಳು ಪ್ರಧಾನಿಯಾಗಬೇಕು, ಆ ಮೂಲಕ ಸ್ವಿಜರ್ಲೆಂಡ್‌ಗೆ ಭಾರತೀಯ ಮೂಲದ ಪ್ರಧಾನಿ ಸಿಗಬೇಕು ಎಂಬ ಹಂಬಲಿಸುತ್ತಿದ್ದಾರೆ.

ಅವರು ನಿಕ್ಲಾಸ್ ನಿಕ್ ಸ್ಯಾಮ್ಯುಯೆಲ್ ಗುಗ್ಗರ್. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿಕ್ ಗುಗ್ಗರ್ ‘ಕನ್ನಡ ಪ್ರಭ’ಕ್ಕೆ ಮಾತಿಗೆ ಸಿಕ್ಕರು. ತಮ್ಮ ಬಾಲ್ಯದ ದಿನಗಳಿಂದ ಹಿಡಿದು ಮಗಳ ಭವಿಷ್ಯದ ಬಗ್ಗೆ, ಭಾರತ- ಸ್ವಿಜರ್ಲೆಂಡ್‌ನ ಸಂಬಂಧ, ಸಂಸ್ಕೃತಿಗಳ ಬಗ್ಗೆ ಗುಗ್ಗರ್ ಹರಟಿದರು. ಅವರು ಆಡಿದ ಪ್ರತಿ ಶಬ್ದದಲ್ಲೂ ಭಾರತದ ಬಗೆಗಿನ ಗೌರವ, ಹೆಮ್ಮೆ, ಪ್ರೀತಿಯ ಲೇಪನವಿತ್ತು.

1970ರ ಮೇ 1ರಂದು ಉಡುಪಿಯ ಬಾಸೆಲ್ ಮಿಷನ್ ಅಸ್ಪತ್ರೆಯಲ್ಲಿ ಗುಗ್ಗರ್ ಜನಿಸಿದ್ದರು. ಮಗು ಹುಟ್ಟಿದೊಡನೆಯೆ ತಾಯಿ ಅವರನ್ನು ತೊರೆದಿದ್ದರು. ಬಳಿಕ ಕೇರಳದ ತಲಶ್ಯೇರಿಯಲ್ಲಿ ಅನಾಥಶ್ರಮ ನಡೆಸುತ್ತಿದ್ದ ಸ್ವಿಸ್ ದಂಪತಿ ಫ್ರಿಟ್ಸ್ ಗುಗ್ಗರ್ ಮತ್ತು ಎಲಿಜಬೆತ್ ಗುಗ್ಗರ್ ದತ್ತು ಪಡೆದರು. ಕೆಲ ವರ್ಷಗಳ ನಂತರ ಆ ಮಗುವನ್ನು ಕರೆದುಕೊಂಡು ಗುಗ್ಗರ್ ದಂಪತಿ ಸ್ವಿಜರ್ಲೆಂಡ್‌ಗೆ ತೆರಳಿದರು. ಸ್ವಿಜರ್ಲೆಂಡ್‌ನಲ್ಲೇ ಬೆಳೆದ ನಿಕ್, ಕಳೆದ ಡಿಸೆಂಬರ್‌ನಲ್ಲಿ ನಡೆದ ಸ್ವಿಸ್ ನ್ಯಾಷನಲ್ ಕೌನ್ಸಿಲ್ ಚುನಾವಣೆಗೆ ಇವಾಂಜಿಕಲ್ ಪೀಪಲ್ಸ್ ಪಾರ್ಟಿ ಸದಸ್ಯರಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.

ನೀವು ನಿಮ್ಮ ತಾಯಿಯನ್ನು ಹುಡುಕುವ ಪ್ರಯತ್ನ ಮಾಡಿದ್ದೀರಾ?

ನಾನು ನನ್ನ ತಾಯಿಯನ್ನು ಯಾವತ್ತೂ ಹುಡುಕುವ ಪ್ರಯತ್ನ ಮಾಡಿಲ್ಲ. ನನ್ನ ತಾಯಿ ನನಗೆ ಜನ್ಮ ನೀಡಿದ ಸಂದರ್ಭದಲ್ಲಿ ತನ್ನ ಗುರುತನ್ನು ಬಹಿರಂಗಪಡಿಸಬಾರದು ಎಂದು ವೈದ್ಯರಿಗೆ ಷರತ್ತು ಹಾಕಿದ್ದರಂತೆ. ಯಾವುದೇ ತಾಯಿಗೆ ತನ್ನ ಮಗುವನ್ನು ದೂರ ಮಾಡುವುದು ಸುಲಭವಲ್ಲ. ಆಕೆಯ ಈ ನಿರ್ಧಾರಕ್ಕೆ ಬಲವಾದ ಕಾರಣಗಳಿರಬಹುದು.

ನನಗೆ ಆಕೆಯ ನಿರ್ಧಾರವನ್ನು ಒಪ್ಪಿಕೊಳ್ಳುವುದು ಸುಲಭವಲ್ಲ. ಆದರೂ ನಾನು ಇದನ್ನು ಅರ್ಥ ಮಾಡಿಕೊಳ್ಳಬಲ್ಲೆ. ಆಕೆಯ ತೀರ್ಮಾನವನ್ನು ಸ್ವೀಕರಿಸುತ್ತೇನೆ. ನಾನು ಯಾರು? ನನ್ನನ್ನು ದತ್ತು ಸ್ವೀಕರಿಸುವ ಸ್ಥಿತಿ ಏಕೆ ಬಂತು? ಇದೆಲ್ಲವೂ ಗಂಭೀರ ಪ್ರಶ್ನೆಗಳೇ. ಆದರೆ ನನಗೆ ಈಗ ಇಡೀ ಜಗತ್ತೇ ಪಾಲಕರು. ನನ್ನ ಪಾಲಕರು ಜಗತ್ತಿನಾದ್ಯಂತ ಇದ್ದಾರೆ. ನನ್ನ ಸ್ವಿಸ್ ಕುಟುಂಬ ಅತ್ಯುತ್ತಮವಾಗಿದೆ.

ಭಾರತೀಯರಾದ ನಿಮ್ಮನ್ನು ಸ್ವಿಜರ್ಲೆಂಡ್ ಹೇಗೆ ಸ್ವೀಕರಿಸಿತು?

ನನ್ನ ಸ್ವಿಸ್ ಕುಟುಂಬ ನಾನು ಭಾರತೀಯನೆಂಬ ಹೆಮ್ಮೆಯನ್ನು ನನ್ನಲ್ಲಿ ತುಂಬಿತು. ನೀನು ಭಾರತೀಯನಾಗಿರುವುದಕ್ಕೆ ಗರ್ವ ಪಡುವ ವಾತಾವರಣವನ್ನು ಸೃಷ್ಟಿಸಿತು. ನಾನು ಕಿಂಡರ್ ಗಾರ್ಟನ್‌ಗೆ ಹೋಗುವಾದ ಅದೂ 70ರ ದಶಕದಲ್ಲಿ ನನ್ನ ಕಂದು ಬಣ್ಣವನ್ನು ಕಂಡು ಸಹಪಾಠಿಗಳು ಅಚ್ಚರಿ ವ್ಯಕ್ತಪಡುತ್ತಿದ್ದರು. ಶ್ವೇತ ವರ್ಣದ ತಂದೆ- ತಾಯಿಗಳಿಗೆ ಕಂದು ಬಣ್ಣದ ಮಗು ಅವರ ಕುತೂಹಲಕ್ಕೆ ಕಾರಣವಾಗಿತ್ತು. ಆಗ ಬೆಳ್ಳಗೆ ಆಗಬೇಕು ಎಂದು ತುಂಬಾನೇ ಹಾಲು ಕುಡಿಯುತ್ತಿದ್ದೆ (ನಗು). ಇದೆಲ್ಲವೂ ಸರಳವಾಗಿರಲಿಲ್ಲ. ಆದರೆ ಸ್ವಿಸ್ ನನ್ನನ್ನು ಸಂಪೂರ್ಣವಾಗಿ ಸ್ವೀಕರಿಸಿದೆ. ಅದಕ್ಕೆ ನಾನು ಅಲ್ಲಿ ಸಂಸದನಾಗಿ ಆಯ್ಕೆ ಆಗಿರುವುದೇ ಸಾಕ್ಷಿ.

ಭಾರತ ಮತ್ತು ಸ್ವಿಸ್ ಸಂಸ್ಕೃತಿಯ ಮಧ್ಯೆ ಏನು ವ್ಯತ್ಯಾಸವಿದೆ?

ಭಾರತದಲ್ಲಿ ಕೌಟುಂಬಿಕ ಮೌಲ್ಯಗಳಿಗೆ ಆದ್ಯತೆ ಇದೆ. ವೃದ್ಧರನ್ನು ಮನೆಯಲ್ಲಿಯೇ ನೋಡಿಕೊಳ್ಳಲಾಗುತ್ತದೆ. ಕೌಟುಂಬಿಕ ಬಾಂಧವ್ಯವಿದೆ. ಆದರೆ ಸ್ವಿಸ್‌ನಲ್ಲಿ ವೃದ್ಧರನ್ನು ವೃದ್ಧಾ ಶ್ರಮಗಳಿಗೆ ಸೇರಿಸಲಾಗುತ್ತದೆ. ಆದರೆ ಸ್ವಿಸ್ ನಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳು, ವಿಮಾ ಯೋಜನೆಗಳು ಇವೆ. ಅಷ್ಟೇ ಅಲ್ಲದೆ ಸ್ವಿಸ್‌ನಲ್ಲಿನ ಸ್ವಿಸ್ ಚಾಕಲೇಟ್‌ಗಳು ಅದ್ಭುತ.

click me!