ಅಮೆರಿಕಕ್ಕೆ 4ನೇ ಸೇನಾಪಡೆ: ಬಾಹ್ಯಾಕಾಶಕ್ಕೆಂದೇ ಪಡೆ ಘೋಷಿಸಿದ ಟ್ರಂಪ್‌ ಸರ್ಕಾರ

By Web DeskFirst Published Aug 31, 2019, 8:20 AM IST
Highlights

ಅಮೆರಿಕಕ್ಕೆ 4ನೇ ಸೇನಾಪಡೆ| ಬಾಹ್ಯಾಕಾಶಕ್ಕೆಂದೇ ಪಡೆ ಘೋಷಿಸಿದ ಟ್ರಂಪ್‌ ಸರ್ಕಾರ| ಈ ರೀತಿ ಪ್ರತ್ಯೇಕ ಪಡೆ ರಚಿಸಿದ ಮೊದಲ ದೇಶ ಅಮೆರಿಕ| ಬಾಹ್ಯಾಕಾಶ ಸವಾಲಿಗೆ ಭಾರತವೂ ಈಗ ಸಿದ್ಧ

ವಾಷಿಂಗ್ಟನ್‌[ಆ.31]: ದೇಶದ ಭೂ, ಜಲ ಮತ್ತು ವಾಯುಗಡಿ ರಕ್ಷಣೆಗೆ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ಎಲ್ಲಾ ದೇಶಗಳಲ್ಲಿ ಇರುವುದು ಸಾಮಾನ್ಯ. ಆದರೆ ದೇಶದ ಬಾಹ್ಯಾಕಾಶ ಸಂಪತ್ತು ರಕ್ಷಿಸಲೆಂದೇ ಪ್ರತ್ಯೇಕ ಬಾಹ್ಯಾಕಾಶ ಪಡೆ ರಚಿಸುವುದಾಗಿ ಅಮೆರಿಕ ಘೋಷಣೆ ಮಾಡಿದೆ. ಈ ಮೂಲಕ ವಿಶ್ವದಲ್ಲೇ ಬಾಹ್ಯಾಕಾಶ ಸಂಪತ್ತು ರಕ್ಷಣೆಗೆ ಪ್ರತ್ಯೇಕ ಪಡೆ ರಚಿಸಿದ ಮೊದಲ ದೇಶವಾಗಿ ಹೊರಹೊಮ್ಮುವತ್ತ ಹೆಜ್ಜೆಹಾಕಿದೆ. ಇಂಥದ್ದೊಂದು ಪಡೆ ರಚನೆ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಹಿಂದೆ ಹಲವು ಬಾರಿ ಪ್ರಸ್ತಾಪ ಮಾಡಿದ್ದರಾದರೂ, ಶುಕ್ರವಾರ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕ ಪ್ರಾಬಲ್ಯ ಸಾಧಿಸಿದ್ದರೂ, ಚೀನಾ ಹಾಗೂ ರಷ್ಯಾದಿಂದ ಪದೇ ಪದೇ ಬೆದರಿಕೆ ಎದುರಿಸುತ್ತಿದೆ. ಅಲ್ಲದೇ ಭವಿಷ್ಯದಲ್ಲಿ ಯುದ್ಧಗಳು ಸಂಭವಿಸಿದರೆ ತನ್ನ ಉಪಗ್ರಹಗಳನ್ನು ರಕ್ಷಿಸಿಕೊಳ್ಳಲು ಹಾಗೂ ಕ್ಷಿಪಣಿ ದಾಳಿಗಳನ್ನು ಎದುರಿಸುವ ನಿಟ್ಟಿನಿಂದ ಪ್ರತ್ಯೇಕ ಬಾಹ್ಯಾಕಾಶ ಪಡೆ ರಚನೆಯ ಅಗತ್ಯವಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಪಡೆ ರಚನೆಯ ನಿರ್ಧಾರವನ್ನು ಅಧ್ಯಕ್ಷ ಟ್ರಂಪ್‌ ಘೋಷಿಸಿದ್ದಾರೆ. ಬಾಹ್ಯಾಕಾಶದಲ್ಲಿ ಅಮೆರಿಕದ ಆಸ್ತಿ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಬಾಹ್ಯಾಕಾಶ ಪಡೆಯ ರಚನೆಯು ಒಂದು ಐತಿಹಾಸಿಕ ನಿರ್ಧಾರ. ಬಾಹ್ಯಾಕಾಶದಲ್ಲಿ ಅಮೆರಿಕದ ಪ್ರಾಬಲ್ಯಕ್ಕೆ ಬೆದರಿಕೆ ಒಡ್ಡಲು ಯಾವತ್ತೂ ಸಾಧ್ಯವಿಲ್ಲ ಎಂದು ಟ್ರಂಪ್‌ ಗುಡುಗಿದ್ದಾರೆ.

ಅಮೆರಿಕಕ್ಕೆ ಬಾಹ್ಯಾಕಾಶ ರಕ್ಷಣಾ ಪಡೆ ಹೊಸದೇನೂ ಅಲ್ಲ.ಬಾಹ್ಯಾಕಾಶ ಬಳಕೆಗೆ ಸಂಬಂಧಿಸಿದಂತೆ ಅಮೆರಿಕದ ಭೂಸೇನೆ, ವಾಯು ಪಡೆ ಹಾಗೂ ನೌಕಾ ಪಡೆಗಳ ಮಧ್ಯೆ ಸಮನ್ವಯ ಸಾಧಿಸುವ ಸಲುವಾಗಿ 1985ರಲ್ಲಿ ಅಮೆರಿಕ ಬಾಹ್ಯಾಕಾಶ ಪಡೆಯನ್ನು ಸ್ಥಾಪಿಸಲಾಗಿತ್ತು. ಆದರೆ, ಅದಕ್ಕೆ ಪ್ರತ್ಯೇಕ ಸ್ಥಾನಮಾನ ಕಲ್ಪಿಸಿರಲಿಲ್ಲ. 9/11 ದಾಳಿಯ ಬಳಿಕ ವಾಯು ಪಡೆಗೆ ಅಮೆರಿಕ ಹೆಚ್ಚಿನ ಗಮನ ನೀಡಿದ್ದರಿಂದ 2002ರಲ್ಲಿ ಬಾಹ್ಯಾಕಾಶ ಪಡೆ ತನ್ನ ಅಸ್ತಿತ್ವ ಕಳೆದುಕೊಂಡಿತ್ತು.

ಬಾಹ್ಯಾಕಾಶ ಪಡೆ ಏಕೆ?:

ಚೀನಾ ದೇಶವು ಕ್ಷಿಪಣಿಯ ಮೂಲಕ ಉಪಗ್ರಹಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದೆ. ಮತ್ತೊಂದೆಡೆ ಬಾಹ್ಯಾಕಾಶ ಆಧಾರಿತ ಲೇಸರ್‌ ಶಸ್ತ್ರಾಸ್ತ್ರ ತಯಾರಿಸುವ ಗುರಿಯನ್ನು ರಷ್ಯಾ ಹೊಂದಿದೆ. ಹೀಗಾಗಿ ಅಮೆರಿಕ ಬಾಹ್ಯಾಕಾಶದಲ್ಲಿ ಎದುರಾಗಬಹುದಾದ ಬೆದರಿಕೆ ಎದುರಿಸುವ ನಿಟ್ಟಿನಲ್ಲಿ ಪತ್ಯೇಕವಾದ ಪಡೆಯನ್ನು ರಚಿಸಿದೆ. ನೂತನ ಪಡೆ ಬಾಹ್ಯಾಕಾಶ ರಕ್ಷಣೆಗೆ ವಿಶೇಷ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಿದೆ. ಈ ಪಡೆಯು ಬಾಹ್ಯಾಕಾಶದಲ್ಲಿ ಸ್ಟಾರ್‌ ವಾರ್‌ ರೀತಿಯ ಸನ್ನಿವೇಶಕ್ಕೆ ಸಿದ್ಧತೆ ಕೈಗೊಳ್ಳಲಿದೆ. ಅಮೆರಿಕ ಬಾಹ್ಯಾಕಾಶ ಪಡೆ ದೇಶದ 11ನೇ ಪ್ರಾದೇಶಿಕ ಯುದ್ಧ ಪಡೆ ಎನಿಸಿಕ್ಳೊಲಿದ್ದು, ಸೇನೆಯ ಬಾಹ್ಯಾಕಾಶ ಕಾರ್ಯಾಚರಣೆಯನ್ನು ನಿಯಂತ್ರಿಸಲಿದೆ.

ಬಾಹ್ಯಾಕಾಶ ಸವಾಲಿಗೆ ಭಾರತವೂ ಈಗ ಸಿದ್ಧ

ಉಪಗ್ರಹಗಳು ದೇಶವೊಂದರ ವೈಜ್ಞಾನಿಕ, ಸಂಪರ್ಕ, ರಕ್ಷಣಾ ವ್ಯವಸ್ಥೆಯ ಜೀವನಾಡಿ. ಇವುಗಳ ಮೇಲೆ ದಾಳಿ ಆದರೆ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತದೆ. ಬಾಹ್ಯಾಕಾಶ ದಾಳಿ ಸವಾಲಿಗೆ ಭಾರತ ಈಗಾಗಲೇ ಸನ್ನದ್ಧವಾಗಿದ್ದು, ಇದೇ ವರ್ಷದ ಮಾಚ್‌ರ್‍ನಲ್ಲಿ ಉಪಗ್ರಹಛೇದಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಿತ್ತು.

click me!