ಕಾಂಗ್ರೆಸ್ ಪಕ್ಷ ರಾಜಸ್ಥಾನದ ಬನ್ಸ್ವಾರಾ ಲೋಕಸಭಾ ಕ್ಷೇತ್ರದಲ್ಲಿ ಅಡ್ಡಕತ್ತರಿಯಲ್ಲಿ ಸಿಲುಕಿದ ಸ್ಥಿತಿ ನಿರ್ಮಾಣವಾಗಿದೆ. ಬಹಳ ಅಪರೂಪ ಎನ್ನುವಂತೆ ಲೋಕಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗೆ ಮತ ಹಾಕದಂತೆ ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ.
ನವದೆಹಲಿ (ಏ.24): ಗ್ರ್ಯಾಂಡ್ ಓಲ್ಡ್ ಪಾರ್ಟಿ ಕಾಂಗ್ರೆಸ್ ಪಕ್ಷ ರಾಜಸ್ಥಾನದ ಬನ್ಸ್ವಾರಾ-ಡುಂಗ್ರಾಪುರ್ ಲೋಕಸಭಾ ಕ್ಷೇತ್ರದಲ್ಲಿ ಬಹಳ ವಿಚಿತ್ರ ಪರಿಸ್ಥಿತಿ ಎದುರಿಸುತ್ತಿದೆ. ಈ ಕ್ಷೇತ್ರದಲ್ಲಿ ಸ್ವತಃ ಕಾಂಗ್ರೆಸ್ ಪಕ್ಷವೇ, ತನ್ನ ಅಭ್ಯರ್ಥಿಗೆ ಮತ ಹಾಕಬೇಡಿ ಎಂದು ಪ್ರಚಾರ ಮಾಡುತ್ತಿದೆ. ಅದಕ್ಕೆ ಕಾರಣವೂ ಇದೆ. ಸಾಕಷ್ಟು ಗೊಂದಲಗಳ ನಡುವೆ, ನಾಮಪತ್ರವನ್ನು ವಾಪಾಸ್ ಪಡೆಯುವ ಒಂದು ದಿನ ಮುನ್ನ ಭಾರತ್ ಆದಿವಾಸಿ ಪಾರ್ಟಿ (ಬಿಎಪಿ) ಅಭ್ಯರ್ಥಿ ರಾಜ್‌ಕುಮಾರ್ ರೋಟ್‌ಗೆ ಬೆಂಬಲ ನೀಡಲು ಕಾಂಗ್ರೆಸ್ ನಿರ್ಧಾರ ಮಾಡಿತ್ತು. ಅದಕ್ಕೂ ಮುನ್ನ ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯಾಗಿ ಅರವಿಂದ್ ದಾಮೋರ್ ಅವರನ್ನು ಕಣಕ್ಕಿಳಿಸಿತ್ತು. ಬಿಎಪಿಯನ್ನು ಬೆಂಬಲಿಸುವ ಪಕ್ಷದ ಘೋಷಣೆಗೆ ಅನುಗುಣವಾಗಿ, ದಾಮೋರ್ ತಮ್ಮ ನಾಮಪತ್ರಗಳನ್ನು ಹಿಂಪಡೆಯಬೇಕಾಗಿತ್ತು ಆದರೆ ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕ ಮುಗಿಯುವವರೆಗೂ ದಾಮೋರ್ ನಾಪತ್ತೆಯಾಗಿದ್ದರು. ಆ ಬಳಿಕ ಮಾಧ್ಯಮಗಳ ಎದುರು ಕಾಣಿಸಿಕೊಂಡ ಅವರು ಆಗಿರುವ ಬೆಳವಣಿಗೆಯ ಬಗ್ಗೆ ಹೆಚ್ಚಿನ ಗಮನ ನೀಡದೇ, ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದರು.
ಹೆಚ್ಚೂ ಕಡಿಮೆ ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್-ಬಿಎಪಿ ಮೈತ್ರಿಕೂಟದ ನಡುವಿನ ನೇರಾನೇರ ಪೈಪೋಟಿಯಾಗಿ ಮಾರ್ಪಡಬೇಕಿತ್ತು. ಆದರೆ, ಈಗ ದಾಮೋರ್ ಕಾಂಗ್ರೆಸ್ನ್ ಮತಗಳನ್ನು ವಿಭಜಿಸುವ ಸಾಧ್ಯತೆ ಇದೆ. ಇದು ಬಿಜೆಪಿ ಅಭ್ಯರ್ಥಿ ಮಹೇಂದ್ರಜಿತ್ ಸಿಂಗ್ ಮಾಳವಿಯಾಗೆ ಸಣ್ಣ ಪ್ರಮಾಣದಲ್ಲಿ ಗೆಲುವಿನ ಸೂಚನೆ ನೀಡಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ನಾಯಕರು ಇಡೀ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗೆ ಯಾವುದೇ ಕಾರಣಕ್ಕೂ ಮತ ನೀಡಬೇಡಿ. ಬೆಂಬಲಿತ ಅಭ್ಯರ್ಥಿಯಾಗಿರುವ ರೋಟ್‌ಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಬಿಎಪಿ ಜೊತೆಗಿನ ಮೈತ್ರಿಗೆ ವಿರುದ್ಧವಾಗಿರುವ ಪಕ್ಷದ ಕೆಲವು ಮುಖಂಡರ ಬೆಂಬಲ ತನಗೆ ಇದೆ ಎಂದು ದಾಮೋರ್ ಹೇಳಿಕೊಂಡಿದ್ದಾರೆ. ಜಿಲ್ಲಾ ಮಟ್ಟದ ನಾಯಕ ವಿಕಾಸ್ ಬಮ್ನಿಯಾ ಮತ್ತು ಕಾಂಗ್ರೆಸ್ ಶಾಸಕ ಅರ್ಜುನ್ ಬಮ್ನಿಯಾ ಅವರ ಪುತ್ರ, ಪಕ್ಷವು ರೋಟ್‌ಗೆ ಬೆಂಬಲ ನೀಡುತ್ತಿದೆ ಎಂದು ತಿಳಿಸಿದ್ದಾರೆ.
"ನಮ್ಮ ನಿಲುವು ಸ್ಪಷ್ಟವಾಗಿದೆ, ನಾವು BAP ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ. ನಾವು ಜನರ ಭಾವನೆಗಳನ್ನು ಮತ್ತು ಪಕ್ಷದಿಂದ ಸ್ವೀಕರಿಸಿದ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ" ಎಂದು ಬಮ್ನಿಯಾ ಹೇಳಿದ್ದಾರೆ. ಮತ್ತೊಬ್ಬ ಸ್ಥಳೀಯ ಕಾಂಗ್ರೆಸ್ ಮುಖಂಡ, "ಕಾಂಗ್ರೆಸ್ ಅಭ್ಯರ್ಥಿಗೆ (ದಾಮೋರ್) ಮತ ಹಾಕದಂತೆ ನಾವು ಜನರನ್ನು ಸ್ಪಷ್ಟವಾಗಿ ಕೇಳುತ್ತಿದ್ದೇವೆ" ಎಂದು ಹೇಳಿದರು.
ಪ್ರಾಥಮಿಕವಾಗಿ ಈ ಕ್ಷೇತ್ರದಲ್ಲಿ ಮಾಳವಿಯಾ ಹಾಗೂ ರೋಟ್ ನಡುವೆ ಸ್ಪರ್ಧೆ ಏರ್ಪಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದೂ, ಪಕ್ಷದ ಸೂಚನೆಯನ್ನು ಅನುಸರಿಸಲು ದಾಮೋರ್ ನಿರಾಕರಿಸಿದ್ದು ಕಾಂಗ್ರೆಸ್‌ಗೆ ಮುಜುಗರ ತಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ದಕ್ಷಿಣ ರಾಜಸ್ಥಾನದಲ್ಲಿ ಸ್ಥಾಪಿಸಲಾದ BAP, ರೋಟ್ ಸೇರಿದಂತೆ ಮೂವರು ಶಾಸಕರನ್ನು ಹೊಂದಿದೆ. ಬನ್ಸ್ವಾರಾ-ಡುಂಗರ್‌ಪುರ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರವಾಗಿದ್ದು, ಶುಕ್ರವಾರ ಎರಡನೇ ಹಂತದ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬನ್ಸ್ವಾರಾದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು.
'ಮಧ್ಯಮ ವರ್ಗವದರು ಸ್ವಾರ್ಥಿಗಳು..' To 'ಪಿತ್ರಾರ್ಜಿತ ತೆರಿಗೆ' ಕಾಂಗ್ರೆಸ್‌ಗೆ Sam Pitroda ಸೆಲ್ಫ್ ಗೋಲ್!