ಕೆಎಸ್‌ಆರ್‌ಟಿಸಿಯಲ್ಲಿ ಚಾಲಕರಿಗೆ ಇಂಧನ ಉಳಿಸಲು ಟ್ರೇನಿಂಗ್‌; 3 ಲಕ್ಷ ಲೀ. ಡೀಸೆಲ್‌ ಉಳಿಕೆ!

Published : Jul 03, 2018, 11:31 AM IST
ಕೆಎಸ್‌ಆರ್‌ಟಿಸಿಯಲ್ಲಿ ಚಾಲಕರಿಗೆ ಇಂಧನ ಉಳಿಸಲು ಟ್ರೇನಿಂಗ್‌; 3 ಲಕ್ಷ ಲೀ. ಡೀಸೆಲ್‌ ಉಳಿಕೆ!

ಸಾರಾಂಶ

- ಕೆಎಸ್‌ಆರ್‌ಟಿಸಿಯಲ್ಲಿ ಚಾಲಕರಿಗೆ ಇಂಧನ ಉಳಿಸಲು ಟ್ರೇನಿಂಗ್‌ - ಕಳೆದ ವರ್ಷ 1.68 ಕೋಟಿ ರು. ಮೌಲ್ಯದ ಡೀಸೆಲ್‌ ಉಳಿತಾಯ - ಸಿಮ್ಯುಲೇಟರ್‌ ತರಬೇತಿ ನೀಡಲಾಗುತ್ತದೆ  -ನಿತ್ಯ 6,10,000 ಲೀಟರ್‌ ಡೀಸೆಲ್‌ ಬಳಕೆ

ಬೆಂಗಳೂರು (ಜು. 03):  ಖರ್ಚು ವೆಚ್ಚ ಕಡಿಮೆ ಮಾಡಲು ನಾನಾ ಮಾರ್ಗ ಅನುಸರಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ತನ್ನ ಚಾಲಕರಿಗೆ ಅತ್ಯುತ್ತಮ ತರಬೇತಿ ನೀಡುವ ಮೂಲಕ ಕಳೆದ ಸಾಲಿನಲ್ಲಿ 1.68 ಕೋಟಿ ರು. ಮೌಲ್ಯದ ಮೂರು ಲಕ್ಷ ಲೀಟರ್‌ ಡೀಸೆಲ್‌ ಉಳಿಸಿದೆ.

ನಿಗಮ ಬಸ್‌ ಕಾರ್ಯಾಚರಣೆಗೆ ವೆಚ್ಚ ಮಾಡುವ ಮೊತ್ತದ ಪೈಕಿ ಶೇ.40ರಷ್ಟುಡೀಸೆಲ್‌ಗೆ ವ್ಯಯಿಸುತ್ತಿದೆ. ಹೀಗಾಗಿ ಡೀಸೆಲ್‌ ಉಳಿತಾಯಕ್ಕಾಗಿ ನಿಗಮದ ಚಾಲಕರಿಗೆ ಸೂಕ್ತ ತರಬೇತಿ ನೀಡಿದ ಪರಿಣಾಮ 2016-17ನೇ ಸಾಲಿನಲ್ಲಿ 59.73 ಲಕ್ಷ ರು. ಮೌಲ್ಯದ 99,373 ಲೀಟರ್‌ ಹಾಗೂ 2017-18ನೇ ಸಾಲಿನಲ್ಲಿ 1.68 ಕೋಟಿ ರು. ಮೌಲ್ಯದ ಮೂರು ಲಕ್ಷ ಲೀಟರ್‌ ಡೀಸೆಲ್‌ ಉಳಿತಾಯವಾಗಿದೆ. ಇಂಧನ ಉಳಿತಾಯದ ಬಗ್ಗೆ ಕಳೆದ ವರ್ಷ 4,199 ಮಂದಿ ಮತ್ತು ಅದರ ಹಿಂದಿನ ವರ್ಷ 978 ಚಾಲಕರಿಗೆ ತರಬೇತಿ ನೀಡಲಾಗಿತ್ತು. ಹಾಗಾಗಿ ಕಳೆದ ಎರಡು ವರ್ಷಗಳಲ್ಲಿ ಡೀಸೆಲ್‌ ಉಳಿತಾಯ ಪ್ರಮಾಣ ಏರಿಕೆಯಾಗಿದೆ ಎಂದು ನಿಗಮದ ಅಧಿಕಾರಿ ತಿಳಿಸಿದ್ದಾರೆ.

ಸಿಮ್ಯುಲೇಟರ್‌ ತರಬೇತಿ:

ಕೆಎಸ್‌ಆರ್‌ಟಿಸಿ ನಿಗಮವು ಪೆಟ್ರೋಲಿಯಂ ಕನ್ಸರ್‌ವೇಶನ್‌ ರೀಸಚ್‌ರ್‍ ಅಸೋಸಿಯೇಷನ್‌ (ಪಿಸಿಆರ್‌ಎ) ಸಹಯೋಗದಲ್ಲಿ ಚಾಲಕರಿಗೆ ತರಬೇತಿ ನೀಡುತ್ತಿದೆ. ನಿಗಮದ ಎಲ್ಲ ಡಿಪೋಗಳಲ್ಲಿ ‘ಸಿಮ್ಯುಲೇಟರ್‌’ ಅಳವಡಿಸಿದ್ದು, ಅದರ ಮೂಲಕ ಚಾಲನಾ ತಂತ್ರಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಅತಿವೇಗದ ಚಾಲನೆ, ಅನವಶ್ಯಕವಾಗಿ ಬ್ರೇಕ್‌ ಒತ್ತದಿರುವುದು, ಸಿಗ್ನಲ್‌ಗಳಲ್ಲಿ ಬಸ್‌ನ ಇಂಜಿನ್‌ ಆಫ್‌ ಮಾಡುವುದು ಇತ್ಯಾದಿ ಅಂಶಗಳ ಬಗ್ಗೆ ತರಬೇತಿಯಲ್ಲಿ ಅರಿವು ಮೂಡಿಸಲಾಗುತ್ತದೆ.

ಸಾಮಾನ್ಯವಾಗಿ ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರತಿ ಲೀಟರ್‌ ಡೀಸೆಲ್‌ಗೆ ಸರಾಸರಿ 3.5 ಕಿ.ಮೀ. ಮತ್ತು ಸಾಮಾನ್ಯ ಬಸ್‌ಗಳಲ್ಲಿ 5.5 ಕಿ.ಮೀ ನಿಗದಿಯಾಗಿರುತ್ತದೆ. ಮಾರ್ಗ, ಪ್ರಯಾಣಿಕರ ಪ್ರಮಾಣದ ಆಧಾರದಡಿ ಒಂದೊಂದು ಮಾರ್ಗಕ್ಕೂ ಪ್ರತ್ಯೇಕವಾಗಿ ಕಿ.ಮೀ. ನಿಗದಿಯಾಗಿರುತ್ತದೆ. ಇದರಲ್ಲಿ ನಿಗದಿತ ಕಿ.ಮೀ. ಪೂರೈಸಿಯೂ ಡೀಸೆಲ್‌ ಉಳಿಸುವ ಐದು ಮಂದಿ ಚಾಲಕರನ್ನು ಪ್ರಶಂಸಿಸಿ, ವಿಶೇಷ ಭತ್ಯೆ ನೀಡಿ ಪ್ರೋತ್ಸಾಹಿಸಲಾಗುವುದು. ನಿಗಮದ ಎಲ್ಲ ಡಿಪೋಗಳಲ್ಲಿ ಪ್ರತಿ ತಿಂಗಳು ಇದೇ ಮಾದರಿ ಅನುಸರಿಸಲಾಗುತ್ತದೆ. ಡಿಪೋಗಳಲ್ಲಿ ತಿಂಗಳ ಅಂತ್ಯದಲ್ಲಿ ಚಾಲಕರ ಕಾರ್ಯಕ್ಷಮತೆ ಪರಿಶೀಲಿಸಲಾಗುತ್ತದೆ. ಈ ವೇಳೆ ನಿಗದಿತ ಮಿತಿ ಮೀರಿ ಇಂಧನ ವ್ಯಯಿಸುವ ಚಾಲಕರನ್ನು ಗುರುತಿಸಿ, ಅವರಿಗೆ ಸಿಮ್ಯುಲೇಟರ್‌ ತರಬೇತಿ ನೀಡಲಾಗುವುದು ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಕೆಎಸ್‌ಆರ್‌ಟಿಸಿ ನಿಗಮದಲ್ಲಿ 16 ವಿಭಾಗಗಳಿದ್ದು, 83 ಡಿಪೋಗಳಿವೆ. 2017-18ನೇ ಸಾಲಿನಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಹಾಗೂ ದಾವಣಗೆರೆ ವಿಭಾಗಗಳಲ್ಲಿ ಹೆಚ್ಚಿನ ಪ್ರಯಾಣದ ಡೀಸೆಲ್‌ ಉಳಿತಾಯವಾಗಿದೆ.

ಡೀಸೆಲ್‌ ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಚಾಲಕರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ಬಸ್‌ಗಳ ಕಾರ್ಯಾಚರಣೆಗೆ ವೆಚ್ಚವಾಗುವ ಮೊತ್ತದಲ್ಲಿ ಸುಮಾರು ಅರ್ಧದಷ್ಟುಡೀಸೆಲ್‌ಗೆ ವ್ಯಯವಾಗುತ್ತದೆ. ಹಾಗಾಗಿ ಡೀಸೆಲ್‌ ಉಳಿಸಿದಷ್ಟೂನಿಗಮಕ್ಕೆ ಲಾಭವಾಗಲಿದೆ.

- ಎಸ್‌.ಆರ್‌.ಉಮಾಶಂಕರ್‌, ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಆರ್‌ಟಿಸಿ 

-ಮೋಹನ್ ಹಂಡ್ರಂಗಿ  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

SSLC ಫಲಿತಾಂಶ ಪ್ರಗತಿ: ಮಧ್ಯರಾತ್ರಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಬಂದ BEO!
ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!