ದೇಶದ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಬಡವರಿಗೆ ದೇಶದ ಸಂಪತ್ತಿನ ಮೇಲೆ ಅಧಿಕಾರವಿದೆ ಎಂದು ಮಾಜಿ ಪ್ರಧಾನಿ ಮನಮೋಹನಸಿಂಗ್ ಹೇಳಿದ್ದಾರೆ. ಅವರ ಆ ಹೇಳಿಕೆಯನ್ನು ಪ್ರಧಾನಿ ಮೋದಿ ತಿರುಚಿದ್ದಾರೆ. ಈ ಮೂಲಕ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ದೂರಿದ ಸಚಿವ ಎಂ.ಬಿ.ಪಾಟೀಲ
ವಿಜಯಪುರ(ಏ.24): ಪ್ರಧಾನಿ ಮೋದಿ ಈ ಮೂಲಕ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಎಡಿಟ್ ಮಾಡಿದ ವಿಡಿಯೋ ಹೇಳಿಕೆಯನ್ನು ತೆಗೆದುಕೊಂಡು ಕೆಳಮಟ್ಟಕ್ಕೆ ಇಳಿದಿದ್ದಾರೆ. ಫ್ಯಾಬ್ರಿಕೇಟೆಡ್ ಮಾಡಿಕೊಂಡು ಹೆಣ್ಣು ಮಕ್ಕಳ ತಾಳಿಗೆ ಹೋಲಿಸಿಕೊಂಡು ಮಾತನಾಡುವುದು ಸರಿಯಲ್ಲ ಎಂದು ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಬಡವರಿಗೆ ದೇಶದ ಸಂಪತ್ತಿನ ಮೇಲೆ ಅಧಿಕಾರವಿದೆ ಎಂದು ಮಾಜಿ ಪ್ರಧಾನಿ ಮನಮೋಹನಸಿಂಗ್ ಹೇಳಿದ್ದಾರೆ. ಅವರ ಆ ಹೇಳಿಕೆಯನ್ನು ಪ್ರಧಾನಿ ಮೋದಿ ತಿರುಚಿದ್ದಾರೆ. ಈ ಮೂಲಕ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ದೂರಿದರು. ಮಾಧ್ಯಮಗಳಲ್ಲಿ ಮನಮೋಹನ್ ಸಿಂಗ್ ಮಾತನಾಡಿರುವ ಅಸಲಿ ವಿಡಿಯೋ ಹಾಗೂ ಎಡಿಟ್ ವಿಡಿಯೋಗಳನ್ನು ತೋರಿಸಿ ಪ್ರಧಾನಿಯ ಮುಖವಾಡ ಕಳಚಿದ್ದಾರೆ. ಮನಮೋಹನ್ ಸಿಂಗ್ ಇಂಥ ಕೀಳು ಮಟ್ಟದ ಕೆಲಸ ಮಾಡಿಲ್ಲ. ಆ ಕೆಲಸವನ್ನು ಪ್ರಧಾನಮಂತ್ರಿ ಮೋದಿ ಮಾಡಿದ್ದಾರೆ. ಪ್ರಧಾನಿಯವರ ಹೇಳಿಕೆ ಕುರಿತು ತೀವ್ರವಾಗಿ ಖಂಡಿಸುತ್ತೇವೆ. ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ಮೋದಿ ಮುಖವಾಡ ಬಯಲು ಮಾಡಿದ ಚುನಾವಣೆ ಬಾಂಡ್: ಸಚಿವ ಎಂ.ಬಿ.ಪಾಟೀಲ್
ಪ್ರಧಾನಿಯವರ ಈ ಹೇಳಿಕೆ ಕುರಿತು ಚುನಾವಣಾ ಆಯೋಗ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಮುಖಂಡ ಸುರ್ಜೇವಾಲಾ ಅವರು ಏನೋ ಮಾತನಾಡಿದ್ದಾರೆಂದು ಚುನಾವಣಾ ಆಯೋಗ ಅವರಿಗೆ ಎರಡು ದಿನ ಬ್ಯಾನ್ ಮಾಡಿತ್ತು. ಅದೇ ರೀತಿ ಪ್ರಧಾನಿ ಅವರ ಮೇಲೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕೀಳು ಮಟ್ಟದ ಜಾಹೀರಾತು:
ಪಿಕ್ ಪ್ಯಾಕೆಟ್ ಕಾಂಗ್ರೆಸ್, 420 ಕಾಂಗ್ರೆಸ್, ಕಾಂಗ್ರೆಸ್ ಡೇಂಜರ್ ಎಂದು ಬಿಜೆಪಿ ಜಾಹೀರಾತು ವಿಚಾರ ಮಾತನಾಡಿದ ಸಚಿವ ಎಂ.ಬಿ.ಪಾಟೀಲ ಅವರು, ಬಿಜೆಪಿ ಯಾವ ಮಟ್ಟಕ್ಕೆ ಇಳಿದಿದೆ. ಬಹುಶಃ ಗ್ರಾಪಂನಲ್ಲೂ ಇಂತಹ ಮಟ್ಟಕೆ ಇಳಿದಿಲ್ಲ. ಚುನಾವಣೆ ಆಯೋಗ ಕೂಡ ಈ ಬಗ್ಗೆ ಗಮನ ಹರಿಸಬೇಕು. ಬಿಜೆಪಿ ಕೀಳುಮಟ್ಟದ ಪ್ರಚಾರ ಮಾಡುತ್ತಿದೆ. ಗ್ರಾಪಂ, ಮಹಾನಗರ ಸದಸ್ಯರು ಬಹಳ ಗೌರವದಿಂದ ನಡೆದುಕೊಳ್ಳುತ್ತಾರೆ. ಇಂತಹ ಕೀಳುಮಟ್ಟದ ಜಾಹೀರಾತು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇವೆ ಎಂದರು.
ಪ್ರಧಾನಿ ಅಭ್ಯರ್ಥಿ ಆಯ್ಕೆ ಹೈಕಮಾಂಡ್‌ಗೆ ಬಿಟ್ಟದ್ದು, ಕಾಂಗ್ರೆಸ್‌ನಲ್ಲಿ ಚುನಾವಣೆ ಪೂರ್ವದಲ್ಲಿಯೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡುವ ಪದ್ಧತಿ ಇಲ್ಲ. ಈ ಹಿಂದೆ ಅವಕಾಶ ಇದ್ದಾಗಲೂ ಸೋನಿಯಾ ಗಾಂಧಿ ಅವರು ಪ್ರಧಾನಿಯಾಗದೇ ಮನಮೋಹನ್ ಸಿಂಗ್ ಅವರಿಗೆ ಅವಕಾಶ ಕಲ್ಪಿಸಿದರು. ಆ ಮೂಲಕ ತ್ಯಾಗ ಮಾಡಿದರು. ನಮಗೆ ಪ್ರಧಾನಿ ಯಾರಾಗಬೇಕೆಂಬುದಕ್ಕಿಂತ ಪ್ರಜಾಪ್ರಭುತ್ವ ಉಳಿಯಬೇಕೆಂಬುದೇ ಮಹತ್ವದ್ದು ಎಂದರು.
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಹಿನ್ನಡೆ ಇಲ್ಲ. ಜನ ಪ್ರಬುದ್ಧರಿದ್ದಾರೆ. ನೇಹಾಳ ಕೊಲೆ ಪ್ರಕರಣದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತದೆ ಎಂದು ಯಾರು ಹೇಳಿದರು? ಸಮೀಕ್ಷೆ ನಡೆಸಿದ್ದೀರಾ? ಅಂಥ ಯಾವುದೇ ಹಿನ್ನಡೆ ಆಗುವುದಿಲ್ಲ. ಬಿಜೆಪಿಯವರು ಚುನಾವಣೆಯ ಕಾರಣದಿಂದ ಹಾಗೆ ಮಾತನಾಡುತ್ತಿದ್ದಾರೆ. ಬಿಜೆಪಿಯವರಿಗೆ ಬದುಕು ಕಟ್ಟಿಕೊಡುವ ಕೆಲಸ ಇಲ್ಲ. ಭಾವನೆಗಳನ್ನು ಕೆರಳಿಸುವ ಕೆಲಸ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಗಾಳಿ ಬೀಸುತ್ತಿದೆ: ಸಚಿವ ಎಂ.ಬಿ.ಪಾಟೀಲ್
ನೇಹಾ ಹಿರೇಮಠ ಕೊಲೆಯ ಆರೋಪಿಗೆ ಗೆಲ್ಲು ಶಿಕ್ಷೆ ಆಗಬೇಕು. ಇಂಥ ಘಟನೆಗಳ ಪ್ರಕರಣಗಳನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳಲ್ಲಿ ಹಾಕಿ ತ್ವರಿತ ನ್ಯಾಯ ನೀಡಬೇಕು. ತಪ್ಪಿತಸ್ಥ ಆರೋಪಿಗೆ ಕಠಿಣ ಮತ್ತು ಗಲ್ಲು ಶಿಕ್ಷೆ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಿ ವಿಶೇಷ ಕಾನೂನು ಜಾರಿ ಮಾಡಬೇಕು. ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಬೇಕು. ನೇಹಾ ಕೊಲೆ ಪ್ರಕರಣ ಒಂದೇ ಕೇಸಲ್ಲ ಇದೇ ರೀತಿ ಇತರೆ ಪ್ರಕರಣಗಳು ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಗಳನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ಮಾಡಬೇಕು ಎಂದು ಎಂಬಿಪಿ ಆಗ್ರಹಿಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.26ರಂದು ವಿಜಯಪುರಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದು, ಪಕ್ಷದ ಅಭ್ಯರ್ಥಿ ರಾಜು ಅಲಗೂರ ಪರ ಬಹಿರಂಗ ಪ್ರಚಾರ, ಸಭೆ ನಡೆಸಲಿದ್ದಾರೆ ಎಂದು ಹೇಳಿದರು.