ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೋರ್ವನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ಪೊಲೀಸ್ ಠಾಣೆಗೆ ಹೋಗಿ ಶರಣಾಗತನಾದ ಪತಿ, ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಘಟನೆ.
ಸಿಂಧನೂರು(ಏ.24): ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೋರ್ವನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ಪೊಲೀಸ್ ಠಾಣೆಗೆ ಹೋಗಿ ಶರಣಾಗತನಾದ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಬಳಗಾನೂರು ಗ್ರಾಮದ ಖಾದರ್‌ಪಾಷ (35) ಕೊಲೆಯಾದ ವ್ಯಕ್ತಿ. ಈತನು ಮಾರುತಿ ಎಂಬ ವ್ಯಕ್ತಿಯ ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಇದರಿಂದ ಅನುಮಾನಗೊಂಡ ಪತಿ ಮಾರುತಿ ಅನೇಕ ಬಾರಿ ಬುದ್ದಿವಾದ ಹೇಳಿದ್ದನು. ಆದಾಗ್ಯೂ ಕೇಳದೆ ಖಾದರ್ ಪಾಷ ತನ್ನ ಚಾಳಿ ಮುಂದುವರೆಸಿದ್ದನು.
ಇದರಿಂದ ರೊಚ್ಚಿಗೆದ್ದ ಮಾರುತಿ ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಖಾದರ್‌ಪಾಷನಿಗೆ ಮೊಬೈಲ್ ಕರೆ ಮಾಡಿ ನಿನ್ನ ಜೊತೆ ಮಾತನಾಡಬೇಕು ಬಾ ಎಂದು ಬಳಗಾನೂರು ಸಮೀಪದ ಹಳ್ಳದ ಹತ್ತಿರ ತುಗ್ಗಲದಿನ್ನಿಗೆ ಹೋಗುವ ದಾರಿಗೆ ಕರೆಯಿಸಿಕೊಂಡು ಏಕಾಏಕಿ ಮಚ್ಚಿನಿಂದ ಕುತ್ತಿಗೆ ಕಡಿದು ಕೊಲೆ ಮಾಡಿದ್ದು, ರಕ್ತದ ಮಡುವಿನಲ್ಲಿ ಖಾದರ್‌ಪಾಷ ಮೃತದೇಹ ಬಿದ್ದಿತ್ತು. ತದನಂತರ ಮಾರುತಿ ಬಳಗಾನೂರು ಪೊಲೀಸ್ ಠಾಣೆಗೆ ತೆರಳಿ ಖಾದರ್ ಪಾಷನನ್ನು ಕೊಲೆ ಮಾಡಿದ ಬಗ್ಗೆ ಒಪ್ಪಿಕೊಂಡು ಶರಣಾಗಿದ್ದಾನೆ.
ಅನೈತಿಕ ಸಂಬಂಧ ರಟ್ಟಾಗುತ್ತಿದ್ದಂತೆ ವಿದ್ಯುತ್ ಕಂಬ ಹತ್ತಿದ ಪತ್ನಿ, ಹೈಡ್ರಾಮಕ್ಕೆ ಗ್ರಾಮಸ್ಥರು ಸುಸ್ತು!
ಘಟನೆ ವಿಷಯ ತಿಳಿದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ಡಿವೈಎಸ್ಪಿ ಬಿ.ಎಸ್.ತಳವಾರ, ಸರ್ಕಲ್ ಇನ್ಸ್‌ಪೆಕ್ಟರ್ ಸುನೀಲಕುಮಾರ ಗ್ರಾಮಕ್ಕೆ ತೆರಳಿ ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು. ನಂತರ ಮೃತದೇಹವನ್ನು ಸಿಂಧನೂರಿನ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆಮಾಡಲಾಯಿತು. ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.