ಸಿಎಂ ಕುಮಾರಸ್ವಾಮಿ ಮೇಲೆ ಸಿದ್ದರಾಮಯ್ಯ ಸಿಟ್ಟಿಗೆ 4 ಕಾರಣಗಳು

By Web DeskFirst Published Sep 4, 2018, 11:47 AM IST
Highlights

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಸಿಟ್ಟಾಗಿದ್ದಾರೆ. ಕುಮಾರಸ್ವಾಮಿ ವಿರುದ್ಧದ ಸಿಟ್ಟಿಗೆ ನಿಜವಾದ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ ಸಿದ್ದರಾಮಯ್ಯ. ಏನದು ಕಾರಣ ಇಲ್ಲಿದೆ ನೋಡಿ. 

ಬೆಂಗಳೂರು (ಸೆ. 04): ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ರಾಹುಲ್ ಗಾಂಧಿ ಬಳಿ ದೂರು ನೀಡಿ ಹೋದ ನಂತರ ಹಾಲಿ ಮತ್ತು ಮಾಜಿಗಳ ನಡುವೆ ಕದನ ವಿರಾಮ ಜಾರಿಗೆ ತರಲು ಸ್ವತಃ ರಾಹುಲ್ ಗಾಂಧಿ ಅವರು ಅಹ್ಮದ್ ಪಟೇಲ್ ಮತ್ತು ಗುಲಾಂ ನಬಿ ಆಜಾದ್ರಿಗೆ ಜವಾಬ್ದಾರಿ ನೀಡಿದ್ದಾರೆ.

ಈ ಇಬ್ಬರ ಎದುರು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ವಿರುದ್ಧದ ತನ್ನ ಸಿಟ್ಟಿನ ನಿಜವಾದ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

Latest Videos

1. ಸಿದ್ದು ನಮ್ಮ ಮುಖ್ಯಮಂತ್ರಿ ಎಂದು ಸಚಿವ ಪುಟ್ಟರಂಗ ಶೆಟ್ಟಿ ಹೇಳಿಕೆ ನೀಡಿದ ನಂತರ ಫೋನಾಯಿಸಿದ ಕುಮಾರಸ್ವಾಮಿ, ‘ನೀನು ಯಾವ ಸೀಮೆ ಮಂತ್ರಿನಯ್ಯಾ?’ ಎಂದು ಬೈದಿದ್ದರಂತೆ. ಇದು ಸಿದ್ದರಾಮಯ್ಯ ಅವರನ್ನು ವಿಪರೀತವಾಗಿ ಕೆರಳಿಸಿತ್ತು. ಈ ಘಟನೆಯಿಂದ ಸಿಟ್ಟಾಗಿಯೇ, ‘ಜನ ಆಶೀರ್ವಾದ ಮಾಡಿದರೆ ಮರಳಿ ಮುಖ್ಯಮಂತ್ರಿ’ ಎಂದು ಸಿದ್ದು ಹೇಳಿಕೆ ನೀಡಿದ್ದರಂತೆ.

2.  ತನ್ನ ಆಪ್ತ ಅಧಿಕಾರಿ ದಯಾನಂದರನ್ನು ಮುಂದಿನ ಜಾಗ ತೋರಿಸದೇ ವರ್ಗಾವಣೆ ಮಾಡಿದ್ದು ಸಿದ್ದುಗೆ ಬೇಸರ ತರಿಸಿತ್ತಂತೆ.

3. ಸಾಲ ಮನ್ನಾ ವಿಷಯವನ್ನು ತನ್ನ ಎದುರು ಪ್ರಸ್ತಾಪಿಸದೇ ನೇರವಾಗಿ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದು ಸಿದ್ದರಾಮಯ್ಯ ಅವರನ್ನು ವಿಪರೀತವಾಗಿ ಅಸಮಾಧಾನಕ್ಕೆ ದೂಡಿತ್ತಂತೆ. ಸಿದ್ದು ಧರ್ಮಸ್ಥಳದ ಶಾಂತಿವನದಲ್ಲಿ ಆಡಿದ ಮಾತು ಇದಕ್ಕೆ ಪ್ರತಿಕ್ರಿಯೆ ರೂಪದ್ದು.

ಸಿದ್ದು ದಿಲ್ಲಿಯಲ್ಲಿ ಆಪ್ತರ ಎದುರು ಹೇಳಿಕೊಂಡಿರುವ ಪ್ರಕಾರ, ರಾಹುಲ್ ಕೂಡ ನೇರವಾಗಿ ಸಾಲ ಮನ್ನಾಗೆ ಒಪ್ಪಿಗೆ ಕೊಡದೆ ಸಮನ್ವಯ ಸಮಿತಿಯಲ್ಲಿ ಚರ್ಚಿಸಿ. ಸಿದ್ದು, ಖರ್ಗೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಹೇಳಿ
ಕಳುಹಿಸಬೇಕಿತ್ತು. ಇದರರ್ಥ ಸಿದ್ದು ಸಿಟ್ಟಿನ ಕಾಲು ಭಾಗ ಹೈಕಮಾಂಡ್ ಮೇಲೂ ಇದೆ.

4.  ಮುಖ್ಯಮಂತ್ರಿಗಳಿಗೆ ಮಾಜಿ ಮುಖ್ಯಮಂತ್ರಿಯಾಗಿ ಎಷ್ಟು ಪತ್ರ ಬರೆದರೂ ಕನಿಷ್ಠ ಸೌಜನ್ಯಕ್ಕೂ ಕುಮಾರಸ್ವಾಮಿ ವಾಪಸ್ ಪತ್ರ ಬರೆದಿಲ್ಲ ಮತ್ತು ಫೋನ್ ಮಾಡಿ ವಿಷಯ ಹೀಗಿದೆ ಎಂದು ತಿಳಿಸಿಲ್ಲ. ಒಂದೇ ಪಕ್ಷದ ಸರ್ಕಾರವನ್ನು ಕುಮಾರಸ್ವಾಮಿ ನಡೆಸುತ್ತಿಲ್ಲ, ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದಾರೆ ಎಂದು ನೆನಪು ಮಾಡಿಕೊಡದೇ ಇದ್ದರೆ ದೇವೇಗೌಡರು ಮತ್ತು ಮಕ್ಕಳು ನಮ್ಮನ್ನು ಕ್ಯಾರೇ ಅನ್ನೋದಿಲ್ಲ, ನಾವು ರಾಜಕೀಯ ಮಾಡೋದು ಹೇಗೆ ಎಂದು ಸಿದ್ದು ದಿಲ್ಲಿ ನಾಯಕರಿಗೆ ಕೇಳಿದ್ದಾರೆ.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ  ಕ್ಲಿಕ್ ಮಾಡಿ 
 
 

click me!