ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ರೈಲ್ವೆ ಹಳಿಗಳಲ್ಲಿ ಡಿಟೊನೇಟರ್‌ಗಳು ಪತ್ತೆಯಾದ ಪ್ರಕರಣದಲ್ಲಿ ರೈಲ್ವೆ ಉದ್ಯೋಗಿಯನ್ನು ಬಂಧಿಸಲಾಗಿದೆ. ಈ ಘಟನೆಯ ಹಿಂದಿನ ಉದ್ದೇಶ ಮತ್ತು ಸಂಭಾವ್ಯ ಬೆದರಿಕೆಯನ್ನು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ.
ಉತ್ತರ ಪ್ರದೇಶದ ಕಾನ್ಪುರ ಹಾಗೂ ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿ ರೈಲ್ವೆ ಹಳಿಯಲ್ಲಿ ಡಿಟೊನೇಟರ್‌ಗಳು ಪತ್ತೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರೈಲ್ವೆ ಉದ್ಯೋಗಿಯನ್ನು ಬಂಧಿಸಿದ್ದಾರೆ. ಬುರ್ಹಾನ್‌ಪುರದ ರೈಲ್ವೆ ಟ್ರ್ಯಾಕ್‌ನ ಮೇಲೆ 10 ಡಿಟೊನೇಟರ್‌ಗಳನ್ನು ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಉದ್ಯೋಗಿ ಶಬೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರೈಲ್ವೆ ಉದ್ಯೋಗಿಯಾಗಿರುವ ಈತನ ಈ ಕೃತ್ಯವೂ ಕೀಟಲೆ ಮಾಡುವುದಕ್ಕಾಗಿ ನಡೆಸಿದ್ದೆ ಅಥವಾ ಇದರ ಹಿಂದೆ ಬೃಹತ್ ಸಂಚು ರೂಪಿಸಲ್ಪಟ್ಟಿದೆಯೇ ಎಂಬ ಬಗ್ಗೆ ಎನ್‌ಐಎ,ಎಟಿಎಸ್, ಆರ್‌ಪಿಎಫ್ ಪೊಲೀಸರು ಹಾಗೂ ರೈಲ್ವೆ ಸಚಿವಾಲಯದವರು ತನಿಖೆ ನಡೆಸುತ್ತಿದ್ದಾರೆ. ಬುರ್ಹಾನ್‌ಪುರದ ನೇಪಾನಗರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಸಗ್ಫಾತ ಎಂಬ ಜಾಗದಲ್ಲಿ ನಿನ್ನೆ ಈ ಘಟನೆ ನಡೆದಿತ್ತು.
ಮೊನ್ನೆ ಸೆಪ್ಟೆಂಬರ್ 18 ರಂದು ಯೋಧರನ್ನು ಹೊಂದಿದ್ದ ಜಮ್ಮು ಕಾಶ್ಮೀರದಿಂದ ಕರ್ನಾಟಕಕ್ಕೆ ಹೋಗುತ್ತಿದ್ದ ಸೇನೆಯ ವಿಶೇಷ ರೈಲು ಈ ಟ್ರ್ಯಾಕ್‌ನಲ್ಲಿ ಸಾಗುವ ವೇಳೆ ಸ್ಫೋಟವೊಂದು ಸಂಭವಿಸಿತ್ತು. ಆದರೆ ಇದಕ್ಕೂ ಮೊದಲೇ ಲೋಕೋ ಪೈಲಟ್ ರೈಲು ನಿಲ್ಲಿಸಿ ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿದ್ದರಿಂದ ಭಾರಿ ಅನಾಹುತವೊಂದು ತಪ್ಪಿ ಹೋಗಿತ್ತು. ಅಲ್ಲಿ ಒಟ್ಟು 10 ಡಿಟೊನೇಟರ್‌ಗಳನ್ನು ಇಡಲಾಗಿತ್ತು.
ಹಳಿ ಮೇಲೆ ಫಾಗ್ ಡಿಟೋನೇಟರ್ ಸ್ಫೋಟ, ಸಿಲಿಂಡರ್ ಪತ್ತೆ; ಕರ್ನಾಟಕದತ್ತ ಬರುತ್ತಿದ್ದ ಯೋಧರ ರೈಲು ಪಾರು
ಇದಾದ ನಂತರ ಎಟಿಎಸ್, ಎನ್‌ಐಎ, ರೈಲ್ವೆ, ಲೋಕೋ ಪೊಲೀಸ್ ಸೇರಿದಂತೆ ಇತರ ತನಿಖಾ ಏಜೆನ್ಸಿಗಳು ಈಗ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿವೆ. ಸೇನೆಯ ಅಧಿಕಾರಿಗಳು ಕೂಡ ಈ ತನಿಖೆಯಲ್ಲಿ ಭಾಗಿಯಾಗಿದ್ದು, ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಕೂಡ ಕೆಲ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ರೈಲ್ವೆಯ ಅಧಿಕಾರಿಗಳ ಪ್ರಕಾರ ಈ ಡಿಟೋನೇಟರ್‌ಗಳನ್ನು ರೈಲ್ವೆಯ ಮಮೂಲಿ ಪ್ರಕ್ರಿಯೆಯಂತೆಯೇ ಇಡಲಾಗಿದೆ.
ಸೆಂಟ್ರಲ್ ರೈಲ್ವೆಯ ಪಿಆರ್‌ಒ ಅಧಿಕಾರಿಯ ಪ್ರಕಾರ ಈ ಡಿಟೊನೇಟರ್‌ಗಳು ರೈಲ್ವೆ ಸಿಬ್ಬಂದಿಯೇ ಬಳಸುವ ಡಿಟೊನೇಟರ್‌ಗಳಾಗಿವೆ. ಆದರೆ ಇಲ್ಲಿ ಡಿಟೋನೇಟರ್‌ಗಳನ್ನು ಇಟಟಿರುವುದಕ್ಕೇ ಯಾವುದೇ ಮಹತ್ವದ ಕಾರಣಗಳಿಲ್ಲ, ಸಾಮಾನ್ಯವಾಗಿ ಇವುಗಳನ್ನು ಸಿಗ್ನಲ್ ಕಾಣದೇ ಇದ್ದಾಗ ರೈಲು ನಿಲ್ಲಿಸಲೇಬೇಕು ಎನ್ನುವಂತಹ ಅನಿವಾರ್ಯತೆಗಳಿದ್ದಾಗ ಬಳಸಲಾಗುತ್ತದೆ, ಇವು ದೊಡ್ಡದಾದ ಸದ್ದು ಮಾಡುತ್ತವೆ. ಈ ಮೂಲಕ ರೈಲ್ವೆ ಚಾಲಕರಿಗೆ ಸೂಚನೆ ನೀಡುತ್ತದೆ. ದಟ್ಟ ಮಂಜು ಇರುವಾಗ ಸಿಗ್ನಲ್‌ಗಳು ಚಾಲಕರಿಗೆ ಕಾಣುವುದಿಲ್ಲ. ಆಗ ಫಾಗ್ ಡಿಟೋನೇಟರ್‌ಗಳನ್ನು ರೈಲ್ವೆ ಸಿಬ್ಬಂದಿಯು ಸ್ಫೋಟಿಸಿ, ಸಿಗ್ನಲ್ ಸಮೀಪಿಸುತ್ತಿದೆ ಎಂದು ಚಾಲಕರಿಗೆ ಸೂಚನೆ ನೀಡುತ್ತಾರೆ. ಆದರೆ ಈಗ ಮಂಜು ಇಲ್ಲದ ವೇಳೆ ಇವನ್ನು ಯಾಕೆ ಇರಿಸಿದ್ದಾರೆ ಗೊತ್ತಾಗಿಲ್ಲ, ಮೇಲಾಗಿ ಇವು ಎಕ್ಸ್‌ಪೈರಿ ಆದ ಡಿಟೋನೇಟರ್‌ಗಳು ಎಂದು ವರದಿಯಾಗಿದೆ.
ಈ ಡಿಟೊನೇಟರ್‌ಗಳು ಸ್ಟೇಷನ್ ಮಾಸ್ಟರ್ ಲೋಕೋ ಪೈಲಟ್, ಕೀಮೆನ್, ಟ್ರ್ಯಾಕ್ ಸೇಫ್ಟಿ ಆಫೀಸರ್ ಸೇರಿದಂತೆ ಬಹುತೇಕ ರೈಲ್ವೆ ಉದ್ಯೋಗಿಗಳಿಗೆ ಸುಲಭವಾಗಿ ಸಿಗುತ್ತದೆ. ಇವುಗಳು ರೈಲ್ವೆ ಟ್ರ್ಯಾಕ್‌ಗೆ ಯಾವುದೇ ಹಾನಿ ಮಾಡುವುದಿಲ್ಲ, ಆದರೆ ರೈಲು ಇದರ ಮೇಲೆ ಹೋದರೆ ದೊಡ್ಡದಾದ ಸದ್ದು ಮಾಡುತ್ತದೆ.
ಮತ್ತೆ ರೈಲು ಹಳಿ ತಪ್ಪಿಸಲು ಯತ್ನ: ಸಿಮೆಂಟ್ ಬ್ಲಾಕ್ ಇಟ್ಟು ಕಿಡಿಗೇಡಿಗಳ ದುಷ್ಕೃತ್ಯ