ರಾಜ್ಯದಲ್ಲಿ ಎಲ್ಲಾ ಬ್ರ್ಯಾಂಡ್‌ ತುಪ್ಪದ ಗುಣಮಟ್ಟ ಪರೀಕ್ಷೆ: ಸಚಿವ ದಿನೇಶ್‌ ಗುಂಡೂರಾವ್‌

By Kannadaprabha News  |  First Published Sep 23, 2024, 6:30 PM IST

ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಜನ್ಯ ಕೊಬ್ಬು ಬಳಕೆ ವರದಿಯಾದ ಬೆನ್ನಲ್ಲೇ ರಾಜ್ಯದಲ್ಲಿ ಕೆಎಂಎಫ್‌ ನಂದಿನಿ ತುಪ್ಪ ಹೊರತುಪಡಿಸಿ ಉಳಿದ ಬ್ರ್ಯಾಂಡ್‌ಗಳ ತುಪ್ಪ ಪರಿಶೀಲನೆ ನಡೆಸುವಂತೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದ್ದಾರೆ.


ಬೆಂಗಳೂರು (ಸೆ.22): ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಜನ್ಯ ಕೊಬ್ಬು ಬಳಕೆ ವರದಿಯಾದ ಬೆನ್ನಲ್ಲೇ ರಾಜ್ಯದಲ್ಲಿ ಕೆಎಂಎಫ್‌ ನಂದಿನಿ ತುಪ್ಪ ಹೊರತುಪಡಿಸಿ ಉಳಿದ ಬ್ರ್ಯಾಂಡ್‌ಗಳ ತುಪ್ಪ ಪರಿಶೀಲನೆ ನಡೆಸುವಂತೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದ್ದಾರೆ. ರಾಜ್ಯಕ್ಕೆ ಹೊರ ರಾಜ್ಯದಿಂದ ಬರುತ್ತಿರುವ ಹಾಗೂ ರಾಜ್ಯದಲ್ಲೇ ಉತ್ಪಾದನೆಯಾಗುತ್ತಿರುವ ನಂದಿನಿ ಹೊರತಾದ ತುಪ್ಪಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು. ಗುಣಮಟ್ಟದ ಬಗ್ಗೆ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿ ಲಡ್ಡು ಸುದ್ದಿ ಬಳಿಕ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಮುಂದೊಂದು ದಿನ ಪ್ರಸಾದವನ್ನು ಸ್ವೀಕರಿಸದೆ ಇರುವ ಪರಿಸ್ಥಿತಿಗೆ ಹೋಗಬಹುದು. ಹೀಗಾಗಿ ಎಲ್ಲ ರೀತಿಯಲ್ಲೂ ಪರಿಶೀಲನೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಮಾರಾಟವಾಗುತ್ತಿರುವ ತುಪ್ಪಗಳ ಗುಣಮಟ್ಟ ಪರೀಕ್ಷೆಗೆ ಆಹಾರ ಸುರಕ್ಷತಾ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಮಾದರಿಗಳ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

Tap to resize

Latest Videos

ಕಾಂಗ್ರೆಸ್ ಅಧಿಕಾರವಿರುವ ಎಲ್ಲೆಡೆಯೂ ದೇಶದ್ರೋಹಿಗಳಿಗೆ ವಿಶೇಷ ಶಕ್ತಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ತಿರುಪತಿಯಲ್ಲಿ ಆದ ರೀತಿ ಕೊಬ್ಬಿನ ಅಂಶಗಳು ರಾಜ್ಯದಲ್ಲಿನ ತುಪ್ಪದಲ್ಲೂ ಬಳಕೆ ಆಗುತ್ತಿದೆಯೇ ಎಂಬುದನ್ನು ನೋಡುತ್ತಿದ್ದೇವೆ. ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ತುಪ್ಪ ಬರುತ್ತಿದೆ. ಹೀಗಾಗಿ ಎಲ್ಲವನ್ನೂ ಪರಿಶೀಲಿಸಲು ತಿಳಿಸಿದ್ದೇನೆ. ಆಂಧ್ರಪ್ರದೇಶ ಮುಖ್ಯಮಂತ್ರಿ ತುಪ್ಪದಲ್ಲಿ ಬೇರೆ ಬೇರೆ ಪ್ರಾಣಿಗಳ ಕೊಬ್ಬಿನ ಅಂಶ ಇದೆ ಎಂದು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ದೇವರ ಬಗ್ಗೆ ಶ್ರದ್ಧೆ ಇರುವವರಿಗೆ ಈ ವಿಚಾರ ಬಹಳ ಆಘಾತಕಾರಿ. ಹೀಗಾಗಿ ರಾಜ್ಯದಲ್ಲೂ ಪರಿಶೀಲನೆಗೆ ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಆತ್ಮಹತ್ಯೆ ತಡೆಗಾಗಿ ನೀತಿ: ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ನಿಮ್ಹಾನ್ಸ್ ಸಹಯೋಗದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ನೀತಿ ರೂಪಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ವಿಶ್ವ ಆತ್ಮಹತ್ಯೆ ತಡೆ ದಿನ ನಿಮಿತ್ತ ಮಂಗಳವಾರ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಆತ್ಮಹತ್ಯೆ ತಡೆಗಟ್ಟುವಿಕೆ ಕೇಂದ್ರ’ (ಎನ್‌- ಸ್ಪೈರ್ಟ್) ಉದ್ಘಾಟಿಸಿ ಅವರು ಮಾತನಾಡಿದರು.

ಒತ್ತಡ, ಖಿನ್ನತೆ, ದುಷ್ಚಟ ಸೇರಿ ನಾನಾ ಕಾರಣಗಳಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ನಿಮ್ಹಾನ್ಸ್ ಸಹಯೋಗದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ನೀತಿ ಸಹ ರೂಪಿಸುತ್ತಿದೆ. ನಿಮ್ಹಾನ್ಸ್ ಸಂಸ್ಥೆ ಕೇಂದ್ರ ಸರ್ಕಾರದ್ದೇ ಆದರೂ, ರಾಜ್ಯ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಆತ್ಮಹತ್ಯೆಯ ಮಾಡಿಕೊಳ್ಳುವ ಮುನ್ನ ಆ ವ್ಯಕ್ತಿಗಳಲ್ಲಿ ಆಗುವ ಬದಲಾವಣೆಗಳು ಹಾಗೂ ಅದಕ್ಕೆ ಪ್ರಚೋದನೆ ನೀಡುವ ಅಂಶಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಅಗತ್ಯವಿದೆ. 

ವರ್ಷದೊಳಗಾಗಿ ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರಸ್ಟ್ ಗೇಟ್ ಅಳವಡಿಕೆ: ಡಿ.ಕೆ.ಶಿವಕುಮಾರ್

ಈ ನಿಟ್ಟಿನಲ್ಲಿ ಈಗಾಗಲೇ ಟೆಲಿ ಮನಸ್ ಮುಖಾಂತರ ಲಕ್ಷಾಂತರ ಜನರಿಗೆ ಮಾನಸಿಕ ಆರೋಗ್ಯ ಸಂಬಂಧ ಸಲಹೆ ನೀಡಲಾಗಿದೆ. ಇದಲ್ಲದೆ ಜಾಗೃತಿ ಕಾರ್ಯಕ್ರಮದ ಮೂಲಕ ಅತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ನಿಮ್ಹಾನ್ಸ್‌ ಮೂಲಕ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು. ಶಿಕ್ಷಣ ಇಲಾಖೆಯಿಂದ ಮಾನಸಿಕ ಆರೋಗ್ಯ ಮತ್ತು ಚಿಕಿತ್ಸೆ ಕುರಿತು ಬಹುಭಾಷಾ ಪೋಸ್ಟರ್‌ ಹಾಗೂ ಇನ್ಫೋಗ್ರಾಫಿಕ್ ವಿಡಿಯೋ ಬಿಡುಗಡೆ ಮಾಡಲಾಯಿತು. ನಿಮ್ಹಾನ್ಸ್‌ ನಿರ್ದೇಶಕಿ ಡಾ। ಪ್ರತಿಮಾ ಮೂರ್ತಿ ಉಪಸ್ಥಿತರಿದ್ದರು.

click me!