ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಸರ್ಕಾರಕ್ಕೆ 117 ಕೋಟಿ ರು. ನಷ್ಟವಾಗಿದೆ. ಈ ಅವ್ಯವಹಾರದ ನೈತಿಕ ಹೊಣೆ ಹೊತ್ತು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ.
ಬೆಂಗಳೂರು (ಸೆ.22): ರಾಜ್ಯದ ವಿವಿಧ ವೈದ್ಯಕಿಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಸರಬರಾಜು ಮಾಡುವ ಉದ್ದೇಶದಿಂದ ವೈದ್ಯಕಿಯ ಶಿಕ್ಷಣ ನಿರ್ದೇಶನಾಲಯ (ಡಿಎಂಇ) ಕರೆದಿದ್ದ 176 ಕೋಟಿ ರು. ವೆಚ್ಚದ ಸುಸಜ್ಜಿತ 114 ಮಾಡ್ಯೂಲರ್ ಆಪರೇಷನ್ ಥಿಯೇಟರ್ (ಒಟಿ) ಉಪಕರಣ ಟೆಂಡರ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಸರ್ಕಾರಕ್ಕೆ 117 ಕೋಟಿ ರು. ನಷ್ಟವಾಗಿದೆ. ಈ ಅವ್ಯವಹಾರದ ನೈತಿಕ ಹೊಣೆ ಹೊತ್ತು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ.
ಅಲ್ಲದೆ, ಈ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು. ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶಸ್ತ್ರ ಚಿಕಿತ್ಸಾ ಕೊಠಡಿಗಳಲ್ಲಿ ರೋಗಿಗಳಿಗೆ ಸುಸಜ್ಜಿತ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ನಿರ್ದೇಶನಾಲಯ, 176 ಕೋಟಿ ರು. ವೆಚ್ಚದ ಮಾಡ್ಯೂಲರ್ ಆಪರೇಷನ್ ಥಿಯೇಟರ್ ಉಪಕರಣಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕಳೆದ ವರ್ಷ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
undefined
ರಾಜ್ಯದಲ್ಲಿ ಎಲ್ಲಾ ಬ್ರ್ಯಾಂಡ್ ತುಪ್ಪದ ಗುಣಮಟ್ಟ ಪರೀಕ್ಷೆ: ಸಚಿವ ದಿನೇಶ್ ಗುಂಡೂರಾವ್
ಪ್ರಸ್ತಾವನೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರ, ಒಟಿ ಉಪಕರಣ ಖರೀದಿಗೆ 176 ಕೋಟಿ ರು. ಮೊತ್ತದಲ್ಲಿ ಶೇ.60 ಸರ್ಕಾರದಿಂದ ಹಾಗೂ ಶೇ.40 ಸ್ವಾಯತ್ತ ಸಂಸ್ಥೆಗಳಲ್ಲಿ ಲಭ್ಯವಿರುವ ಆಂತರಿಕ ಸಂಪನ್ಮೂಲಗಳಿಂದ ಭರಿಸಿ ಯೋಜನೆ ಅನುಷ್ಠಾನಗೊಳಿಸಬೇಕು. ಅಲ್ಲದೆ, ಕರ್ನಾಟಕ ಸಾರ್ವಜನಿಕರ ಸಂಗ್ರಹಣೆಗಳಲ್ಲಿ ಪಾರದರ್ಶಕ (ಕೆಟಿಪಿಪಿ) ಕಾಯ್ದೆಯನ್ವಯ ಟೆಂಡರ್ ಪ್ರಕ್ರಿಯೆ ನಡೆಸಿ ಉಪಕರಣ ಖರೀದಿಸಿ, ಹೆಚ್ಚುವರಿ ಅನುದಾನಕ್ಕಾಗಿ ಯಾವುದೇ ಪ್ರಸ್ತಾವನೆ ಕಳುಹಿಸಬಾರದು ಎಂದು ಕೆಲ ಷರತ್ತು ವಿಧಿಸಿ ಒಪ್ಪಿಗೆ ನೀಡಿತ್ತು ಎಂದರು.
ಅದರಂತೆ, ಕಳೆದ ವರ್ಷ ನಿರ್ದೇಶನಾಲಯ ಟೆಂಡರ್ ಆಹ್ವಾನಿಸಿತ್ತು. 2024ರ ಮಾ.3ರಂದು ಟೆಂಡರ್ಗೆ ದಾಖಲೆ ಸಲ್ಲಿಸಲು ಪ್ರಕ್ರಿಯೆ ಆರಂಭವಾಯಿತು. ಮಾ.13ರಂದು ಪ್ರಿ-ಬಿಡ್ ಮೀಟಿಂಗ್ ನಡೆದರೆ, ಏ.1ರಂದು ದಾಖಲೆ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಏ.3ರಂದು ತಾಂತ್ರಿಕ ಬಿಡ್ ತೆರೆಯಲಾಯಿತು. ಆದರೆ, ನಿರ್ದೇಶನಾಲಯದ ಅಧಿಕಾರಿಗಳು, ಕೆಟಿಪಿಪಿ ನಿಯಮದಂತೆ ಟೆಂಡರ್ ನಡೆಸುವ ಬದಲು, ಎಂ/ಎಸ್.ಲಕ್ಷಣ್ಯಾ ವೆಂಚರ್ಸ್ ಪ್ರೈ.ಲಿ.ಗೆ ಅನುಕೂಲ ಮಾಡಿಕೊಡಲು ಟೆಂಡರ್ ಷರತ್ತುಗಳನ್ನೇ ಬದಲಿಸಿದ್ದರು. ಅದರಂತೆ, ಜೂ.12ರಂದು 176 ಕೋಟಿ ರು. ವೆಚ್ಚದ 114 ಮಾಡ್ಯೂಲರ್ ಆಪರೇಷನ್ ಥಿಯೇಟರ್ ಪೂರೈಸುವಂತೆ ಈ ಕಂಪನಿಗೆ ಕಾರ್ಯಾದೇಶ ಪತ್ರ ಸಿಕ್ಕಿತು ಎಂದು ವಿವರಿಸಿದರು.
ಈ ಟೆಂಡರ್ನಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 117 ಕೋಟಿ ರು. ನಷ್ಟವಾಗಿದೆ. ಕೇರಳ ವೈದ್ಯಕಿಯ ಸೇವಾ ನಿಗಮದಲ್ಲಿ ಎಂ/ಎಸ್. ಕ್ರಿಯೇಟಿವ್ ಹೇಲ್ತ್ಟೆಕ್ ಪ್ರೈ.ಲಿ. ಪ್ರತಿ ಮಾಡ್ಯೂಲರ್ ಆಪರೇಷನ್ ಥಿಯೇಟರ್ಗೆ 49,90,740 ರು.ಗಳಂತೆ (ಜಿಎಸ್ಟಿ ಸೇರಿ) 50 ಉಪಕರಣಗಳನ್ನು ಪೂರೈಕೆ ಮಾಡಿದೆ. ಈ ಉಪಕರಣಕ್ಕೆ ಆ ಕಂಪನಿ ಮೂರು ವರ್ಷ ವಾರೆಂಟಿ ನೀಡಿದೆ. ಅದೇ ರೀತಿ, ಬೆಳಗಾವಿ ಸ್ಮಾರ್ಟ್ ಸಿಟಿ ಲಿ., ಬಿಐಎಂಎಸ್ ಆಸ್ಪತ್ರೆಯ ಟ್ರಮಾ ಸೆಂಟರ್ಗೆ ಪೂರೈಸುವಂತೆ ಪ್ರತಿ ಮಾಡ್ಯೂಲರ್ ಆಪರೇಷನ್ ಥಿಯೇಟರ್ಗೆ 1.10 ಕೋಟಿ ರು.ಗಳಂತೆ ಶಿವೋನ್ ಇಂಡಿಯಾ ಕಂಪನಿಗೆ ಕಾರ್ಯಾದೇಶ ಪತ್ರ ಕೊಟ್ಟಿದೆ.
ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎನ್ನುವುದು ಬಿಜೆಪಿಯವರ ಭ್ರಮೆ: ಸಚಿವ ಶಿವರಾಜ ತಂಗಡಗಿ
ಆದರೆ, ವೈದ್ಯಕಿಯ ಶಿಕ್ಷಣ ನಿರ್ದೇಶನಾಲಯ, ಎಂ/ಎಸ್. ಲಕ್ಷಣ್ಯಾ ವೆಂಚರ್ಸ್ ಪ್ರೈ.ಲಿ.ಗೆ ಪ್ರತಿ ಮಾಡ್ಯೂಲರ್ ಒಟಿಗೆ 1,29,66,101 ಮತ್ತು 23,33,898 ಜಿಎಸ್ಟಿ ಶುಲ್ಕ ಸೇರಿ ಒಟ್ಟು 1,52,99,999 ರು.ನಂತೆ 114 ಉಪಕರಣ ಪೂರೈಸುವಂತೆ ಕಾರ್ಯಾದೇಶ ಪತ್ರ ಕೊಟ್ಟಿದೆ. ಕೇರಳ ವೈದ್ಯಕಿಯ ಸೇವಾ ನಿಗಮದಲ್ಲಿ ಉಪಕರಣ ಖರೀದಿಗೆ ಹೋಲಿಸಿದರೆ, ನಿರ್ದೇಶನಾಲಯವು ಪ್ರತಿ ಒಟಿ ಉಪಕರಣಕ್ಕೆ ಒಂದು ಕೋಟಿ ರು. ಅಧಿಕ ಹಣ ಕೊಟ್ಟು ಖರೀದಿಸಿದೆ. ಇದರಿಂದಾಗಿ ಸರ್ಕಾರಕ್ಕೆ ಬರೋಬ್ಬರಿ 117 ಕೋಟಿ ರು. ನಷ್ಟವಾಗಿದೆ. ಟೆಂಡರ್ನಲ್ಲಿ ಹತ್ತಾರು ಕೋಟಿ ಕಿಕ್ ಬ್ಯಾಕ್ ಸಂದಾಯವಾಗಿದೆ. ಇದರಲ್ಲಿ ನಿರ್ದೇಶನಾಲಯದ ಉನ್ನತ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ರವಿಕುಮಾರ್ ಆರೋಪಿಸಿದರು.