ಮತ್ತೆ ನಾಲಿಗೆ ಹರಿಬಿಟ್ಟ ಒವೈಸಿ: ಮುಸ್ಲಿಂ ಅಭ್ಯರ್ಥಿಗೆ ಓಟ್ ಮಾಡಲು ಕರೆ!

Jun 25, 2018, 10:15 PM IST

ಹೈದರಾಬಾದ್(ಜೂ.25): ಮುಸ್ಲಿಮರು ಚುನಾವಣೆಗಳಲ್ಲಿ ಕೇವಲ ಮುಸ್ಲಿಂ ಅಭ್ಯರ್ಥಿಗಳಿಗೆ ಮಾತ್ರ ಮತ ನೀಡಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಜಾತ್ಯಾತೀತತೆ ಉಳಿಯಬೇಕಾದರೆ ದೇಶದ ಮುಸ್ಲಿಮರೆಲ್ಲಾ ಒಂದಾಗಬೇಕು ಮತ್ತು ಚುನಾವಣೆಗಳಲ್ಲಿ ಕೇವಲ ಮುಸ್ಲಿಂ ಅಭ್ಯರ್ಥಿಗಳಿಗೆ ಮಾತ್ರ ಮತ ನೀಡಬೇಕು ಎಂದು ಒವೈಸಿ ಹೇಳಿದ್ದಾರೆ.

ಕಳೆದ 70 ವಷರ್ಷಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ಮುಸ್ಲಿಮರನ್ನು ಕೇವಲ ಮತಬ್ಯಾಂಕ್ ಗಳಂತೆ ಬಳಕೆ ಮಾಡಿವೆಯೇ ಹೊರತು ಸಮುದಾಯದ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡಿಲ್ಲ ಎಂದು ಒವೈಸಿ ಗುಡುಗಿದ್ದಾರೆ. ದೇಶದ ಜಾತ್ಯಾತೀತತೆ, ಅಲ್ಪಸಂಖ್ಯಾತರ ಭದ್ರತೆ, ಸಾಮಾಜಿಕ ಹಕ್ಕುಗಳಿಗಾಗಿ ದೇಶದ ಸಮಸ್ತ ಮುಸ್ಲಿಮರೆಲ್ಲಾ ಒಂದಾಗಿ ಹೋರಾಡುವ ಕಾಲ ಬಂದಿದೆ. ಯಾವುದೇ ಕಾರಣಕ್ಕೂ ಜಾತ್ಯಾತೀತತೆಯ ಸೋಗು ಹಾಕಿರುವ ರಾಜಕೀಯ ಪಕ್ಷಗಳನ್ನು ನಂಬಬೇಡಿ ಎಂದು ಒವೈಸಿ ಕರೆ ನೀಡಿದ್ದಾರೆ.

ಇನ್ನು ಒವೈಸಿ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ಸಮಾಜವನ್ನು ಒಡೆಯುವ ಕೆಲಸದಲ್ಲಿ ಒವೈಸಿ ನಿಸ್ಸೀಮರು ಎಂದು ಕಾಂಗ್ರೆಸ್ ಕಿಡಿಕಾರಿದೆ. ಇನ್ನು ಮುಸ್ಲಿಮರನ್ನು ಹಿಂದುಗಳ ವಿರುದ್ದ ಎತ್ತಿ ಕಟ್ಟುವ ಒವೈಸಿ ರಾಜಕಾರಣ ದೇಶವನ್ನು ಅಪಾಯದ ಅಂಚಿಗೆ ತಳ್ಳಲಿದೆ ಎಂದು ಬಿಜೆಪಿ ಹರಿಹಾಯ್ದಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..