ಕೊಡಗಿನಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹ ಸಂಭವಿಸುವ ಮುನ್ನ ಇಲ್ಲಿ ನೀಡಿದ ಸಂದೇಶವೊಂದು 45 ಕುಟುಂಬಗಳನ್ನು ಕಾಪಾಡಿದೆ.
ಕೊಡಗು : ‘ಕೋಟೆ ಬೆಟ್ಟಕುಸಿಯುತ್ತಿದೆ ಎಂದು ಮಕ್ಕಂದೂರು ಗ್ರಾಮದ ಯುವಕ ಸಂದೇಶ್ ಅವರು ನೀಡಿದ ಮುನ್ನೆಚ್ಚರಿಕೆಯ ಸಂದೇಶದಿಂದ 45 ಕುಟುಂಬಗಳು ಜೀವ ಉಳಿಸಿಕೊಳ್ಳಲು ಸಹಕಾರಿಯಾಯಿತು. ಇಲ್ಲವಾದಲ್ಲಿ, 9 ಲಕ್ಷ ರು. ಮೌಲ್ಯದ, ಗೃಹಪ್ರವೇಶಕ್ಕಾಗಿ ಅಣಿಯಾಗಿದ್ದ ನೂತನ ಮನೆ ಹಾಗೂ 2 ಎಕರೆ ಜಮೀನಿನ ಜೊತೆಗೆ ಎಲ್ಲರ ಜೀವವೂ ಹೋಗುತ್ತಿತ್ತು’ ಎಂದು ಮಕ್ಕಂದೂರು ಗ್ರಾಪಂ ವ್ಯಾಪ್ತಿಯ ಎಮ್ಮೆತಾಳು ಗ್ರಾಮದ ಕೃಷಿಕ ರಾಮಣ್ಣ ನಾಯಕ್ ನೋವಿನ ಕಥೆ ಹೇಳಿಕೊಂಡಿದ್ದಾರೆ.
ಹಿಂದೆಂದೂ ಕಂಡರಿಯದ ಜಲ ಪ್ರವಾಹ ಹಾಗೂ ಭೂಕುಸಿತದಿಂದ ಮನೆ ಮಠಗಳನ್ನು ಕಳೆದುಕೊಂಡು ಅಕ್ಷರಶಃ ಬೀದಿ ಪಾಲಾಗಿರುವ ಎಮ್ಮೆತಾಳು ಗ್ರಾಮದ 45 ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ. ಮಕ್ಕಂದೂರು, ಮುಕ್ಕೊಡ್ಲು, ಮುಟ್ಲು, ಹಮ್ಮಿಯಾಲ, ತಂತಿಪಾಲ ಸೇರಿದಂತೆ 30ಕ್ಕೂ ಅಧಿಕ ಗ್ರಾಮಗಳು ಕೊಡಗಿನ ಮಹಾಮಳೆಯಲ್ಲಿ ನಾಶವಾಗಿವೆ.
undefined
ಗುಡ್ಡ ಕುಸಿಯುವ ಸಾಧ್ಯತೆಯ ಕುರಿತು ಅಂದು (ಆ.15ರಂದು ಬುಧವಾರ) ರಾತ್ರಿ ವೇಳೆಗೆ ಗ್ರಾಮದ ನಿವಾಸಿ ಸಂದೇಶ್ ಅವರಿಗೆ ಶಂಕೆ ಮೂಡಿದೆ. ಈ ಹಿನ್ನೆಲೆಯಲ್ಲಿ ರಾತ್ರಿಯೇ ಅವರು ಅಕ್ಕಪಕ್ಕದವರಿಗೆ ಮಾಹಿತಿ ನೀಡಿದರು. ಇದರಿಂದ ಎಚ್ಚೆತ್ತಕೊಂಡ ನೆರೆಹೊರೆಯ 45 ಕುಟುಂಬಗಳ ಸದಸ್ಯರು ಮುಂಜಾನೆಯೇ ಮನೆ ಖಾಲಿ ಮಾಡಿದರು. ಅಂದೇ (ಗುರುವಾರ) ಸಂಜೆ ಭಾರಿ ಭೂಕುಸಿತ ಸಂಭವಿಸಿದೆ.
ಊರು ಬಿಟ್ಟದ್ದು ಹೇಗೆ?:
ಸಂದೇಶ ನೀಡಿದ ಮಾಹಿತಿ ಮೇಲೆ ಮನೆ ತೊರೆದ ಎಲ್ಲಾ ಕುಟುಂಬಗಳ ಪೈಕಿ ಕೆಲವು ವೃದ್ಧರನ್ನು ವಾಹನಗಳಲ್ಲಿ ಮಕ್ಕಂದೂರಿಗೆ ಕರೆತರಲಾಯಿತು. ಉಳಿದವರು ಬೆಳಗ್ಗೆ 7 ಗಂಟೆ ವೇಳೆಗೆ ಮೂರು ಕಿ.ಮೀ. ದೂರ ಮಕ್ಕಂದೂರು ಶಾಲೆಗೆ ನಡೆದುಕೊಂಡು ಬಂದರು. ಅಲ್ಲಿಂದ 43 ಕುಟುಂಬಗಳನ್ನು ವಾಹನಗಳಲ್ಲಿ ಮಡಿಕೇರಿಗೆ ಕೊಂಡೊಯ್ಯಲಾಯಿತು. ರಾಮಣ್ಣ ನಾಯಕ್, ದೇವಪ್ಪ ಅವರ ಕುಟುಂಬದವರು ಮಾತ್ರ ಸೋಮವಾರಪೇಟೆಯ ಬಜೆಗುಂಡಿ ಗ್ರಾಮದಲ್ಲಿರುವ ಸಹೋದರನ ಮನೆಗೆ ತೆರಳಿದರು. ಈ ಎರಡು ಕುಟುಂಬಗಳೂ ಈಗ ಮಡಿಕೇರಿಯ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಗೊಂಡಿವೆ.
ಸ್ಮಶಾನ ಮೌನ:
ಜಾನುವಾರುಗಳು ಸೇರಿದಂತೆ ಸಾಕುಪ್ರಾಣಿಗಳು ಆಹಾರವಿಲ್ಲದೆ ಮೃತಪಟ್ಟಿರುವುದರಿಂದ ಇಡೀ ಗ್ರಾಮದಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದ ಈ ಕುಟುಂಬಗಳ ಭವಿಷ್ಯ ಡೋಲಾಯಮಾನವಾಗಿದೆ. ಗ್ರಾಮದ ಸುಮಾರು 20 ಮನೆಗಳು ನೆಲಸಮವಾಗಿವೆ. ರಾಮಣ್ಣ ನಾಯಕ್ ಅವರ ಕುಟುಂಬಸ್ಥರಿಗೆ ಸೇರಿದ 7 ಮನೆಗಳೂ ನಾಶವಾಗಿವೆ. ಇಲ್ಲಿನ ಎರಡು ಕುಟುಂಬಗಳು ಸೋಮವಾರಪೇಟೆಯ ಕೊಡವ ಸಮಾಜದಲ್ಲಿ ಸ್ಥಾಪಿಸಿರುವ ಸಂತ್ರಸ್ತರ ಕೇಂದ್ರದಲ್ಲಿ ವಾಸ್ತವ್ಯ ಹೂಡಿದರೆ, ಉಳಿದ 43 ಕುಟುಂಬಗಳು ಮಡಿಕೇರಿಯ ಸಂತ್ರಸ್ತ ಕೇಂದ್ರದಲ್ಲಿ ದಿನ ದೂಡುತ್ತಿವೆ.
ಗೃಹಪ್ರವೇಶಕ್ಕೆ ಸಜ್ಜಾಗಿದ್ದ ಮನೆ ನೆಲಸಮ
ಸುಮಾರು 9 ಲಕ್ಷ ರು. ಖರ್ಚು ಮಾಡಿ ನೂತನ ಮನೆಯನ್ನು ಕಟ್ಟಿದೆವು. ಇನ್ನೇನು ಗೃಹಪ್ರವೇಶ ಮಾಡಬೇಕು ಎನ್ನುವಷ್ಟರಲ್ಲಿ ಹಳೆ ಮನೆ ಸಹಿತ ಎಲ್ಲವೂ ಭೂಮಿ ಪಾಲು ಆಗಿರುವುದರಿಂದ ಇಡೀ ಜೀವನವೇ ನರಕಸದೃಶವಾಗಿದೆ. ನಮ್ಮ ಆಟೋ ರಿಕ್ಷಾ ಮಾತ್ರ ಮಕ್ಕಂದೂರಿನಲ್ಲಿದ್ದರಿಂದ ಉಳಿದಿದೆ. ಇನ್ನೂ ಯಾರಿಗಾಗಿ ಬದುಕಬೇಕು ಹಾಗೂ ಹೇಗೆ ಬದುಕುವುದು ಎಂಬುದೇ ಚಿಂತೆಯಾಗಿದೆ. ಮುಂದೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನ ಭವಿಷ್ಯ ಹೇಗೆ ಎಂಬುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಕೃಷಿಕ ರಾಮಣ್ಣ ನಾಯಕ್. ಎಲ್ಲವೂ ಸರಿಯಾದ ಮೇಲೆ ಎಲ್ಲಿಗೆ ಹೋಗುವುದು ಎಂಬುದೇ ಚಿಂತೆಯಾಗಿದೆ ಎಂದು ದೇವಪ್ಪ ಅವರು ಗದ್ಗದಿತರಾಗುತ್ತಾರೆ.
ಮುರಳೀಧರ್ ಶಾಂತಳ್ಳಿ ಸೋಮವಾರಪೇಟೆ