ISRO Next Big Project : ಸಮುದ್ರದಲ್ಲಿ 6ಕಿಮೀ ಆಳಕ್ಕೆ ಮಾನವನನ್ನು ಕಳುಹಿಸಲಿದೆ ಇಸ್ರೋ!

By Suvarna News  |  First Published Dec 18, 2021, 5:07 PM IST

ಸಮುದ್ರದಾಳಕ್ಕೆ ಮಾನವನನ್ನು ಕಳುಹಿಸಲು ಸಿದ್ಧತೆ
ಏಕಕಾಲಕ್ಕೆ ನಡೆಯಲಿದೆ ಗಗನಯಾನ-ಸಮುದ್ರಯಾನ 
2024ರ ಕೊನೆಯಲ್ಲಿ ಸಮುದ್ರಯಾನ ಸಾಹಸ ನಡೆಯುವ ಸಾಧ್ಯತೆ
 


ನವದೆಹಲಿ (ಡಿ.18): ಬಾಹ್ಯಾಕಾಶದಲ್ಲಿ ಭಾರತದ್ದೇ ಆದ ನಿಲ್ದಾಣ ಕಟ್ಟುವ, ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಗಗನಯಾನ ಯೋಜನೆಗಳೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಲು ಅಣಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ, 2024ರ ಸುಮಾರಿಗೆ ಸಮುದ್ರದಲ್ಲಿ 6 ಕಿಲೋಮೀಟರ್ ಆಳಕ್ಕೆ ಮಾನವನ್ನು ಕಳುಹಿಸಿ ಅಧ್ಯಯನ ಮಾಡುವ ಯೋಜನೆಯನ್ನು ಸಂಸತ್ತಿನ ಮುಂದೆ ಇಡಲಾಗಿದೆ. ಕೇಂದ್ರ ಸರ್ಕಾರದ ಡೀಪ್ ಓಷನ್ ಮಿಷನ್ ನ (Deep Ocean Mission)ಭಾಗವಾಗಿ ಇಸ್ರೋ ಸಮುದ್ರದಲ್ಲಿ 6 ಸಾವಿರ ಮೀಟರ್ ಆಳಕ್ಕೆ ಮಾನವನ್ನು ಕಳುಹಿಸಲಿದೆ ಎಂದು ಸಂಸತ್ತಿಗೆ ತಿಳಿಸಲಾಗಿದೆ. ಇದಕ್ಕಾಗಿ ಇಸ್ರೋ, ಮಾನವಸಹಿತ ವೈಜ್ಞಾನಿಕ ಸಬ್ಮರ್ಸಿಬಲ್ ಅನ್ನು (Manned Scientific Submersible) ಅಭಿವೃದ್ಧಿಪಡಿಸಲಿದೆ ಎಂದು ವರದಿಯಾಗಿದೆ.

ನಮ್ಮಲ್ಲಿನ ಸಾಗರಗಳ ಆಳವನ್ನು ಅನ್ವೇಷಣೆ ಮಾಡಲು ಸಬ್ಮರ್ಸಿಬಲ್ (Submersible)ಕಾರಣವಾಗಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಡಾ.ಜಿತೇಂದ್ರ ಸಿಂಗ್ ( Science, Technology and Earth Sciences Minister Dr. Jitendra Singh), ಈ ಯೋಜನೆಯನ್ನು ಸಮುದ್ರಯಾನ (Samudrayaan)ಎನ್ನುವ ಹೆಸರಿನಿಂದ ಗುರುತಿಸಿದ್ದಾರೆ. ಜಿತೇಂದ್ರ ಸಿಂಗ್ ಅವರ ಪ್ರಕಾರ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯು (National Institute of Ocean Technology ) 500 ಮೀಟರ್‌ಗಳ ನೀರಿನ ರೇಟಿಂಗ್‌ಗಾಗಿ ಮಾನವಸಹಿತ ಸಬ್‌ಮರ್ಸಿಬಲ್ ಸಿಸ್ಟಮ್‌ಗಾಗಿ "ಸಿಬ್ಬಂದಿಗಳ ಗೋಳ" (Personnel Sphere) ವನ್ನು ಅಭಿವೃದ್ಧಿಪಡಿಸಿದ್ದು ಇದನ್ನು ಈಗಾಗಲೇ ಯಸಸ್ವಿಯಾಗಿ ಪರೀಕ್ಷೆ ಮಾಡಿದೆ.

Latest Videos

undefined


“ಸಮುದ್ರದಲ್ಲಿ 500 ಮೀ ನೀರಿನ ಆಳದವರೆಗೆ ಸಿಬ್ಬಂದಿ ಮಾಡ್ಯೂಲ್ ಆಗಿ ಇದನ್ನು ಬಳಸಲಾಗಿದೆ. 2.1 ಮೀ ವ್ಯಾಸದ ಸಿಬ್ಬಂದಿ ಗೋಳವನ್ನು ಸೌಮ್ಯವಾದ ಉಕ್ಕನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ ಮತ್ತು 2021 ರ ಅಕ್ಟೋಬರ್‌ನಲ್ಲಿ ಸಾಗರ್ ನಿಧಿ ಎಂಬ ಸಂಶೋಧನಾ ನೌಕೆಯನ್ನು ಬಳಸಿಕೊಂಡು ಬಂಗಾಳ ಕೊಲ್ಲಿಯಲ್ಲಿ 600 ಮೀ ನೀರಿನ ಆಳದವರೆಗೆ ಪರೀಕ್ಷಿಸಲಾಗಿದೆ" ಎಂದು ಜಿತೇಂದ್ರ ಸಿಂಗ್ ವಿವರಣೆ ನೀಡಿದ್ದಾರೆ. 

Gaganyaan 2023: ಗಗನಯಾನಕ್ಕೂ ಮುನ್ನ ಮೊದಲ ಮಾನವ ರಹಿತ ಮಿಷನ್ ಉಡಾವಣೆ!
"6,000 ಮೀಟರ್ ನೀರಿನ ಆಳದ ರೇಟಿಂಗ್‌ಗಾಗಿ ಮಾನವಸಹಿತ ಸಬ್‌ಮರ್ಸಿಬಲ್ ಸಿಸ್ಟಮ್‌ಗಾಗಿ ಒಂದು ಟೈಟಾನಿಯಂ ಮಿಶ್ರಲೋಹ ಸಿಬ್ಬಂದಿ ಗೋಳವು ತಿರುವನಂತಪುರದಲ್ಲಿರುವ ಇಸ್ರೋ,  ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (Vikram Sarabhai Space Centre) ಸಹಯೋಗದೊಂದಿಗೆ ಅಭಿವೃದ್ಧಿ ಹಂತದಲ್ಲಿದೆ" ಎಂದು ಅವರು ಹೇಳಿದರು. 2024ರ ವೇಳೆಯಲ್ಲಿಯೇ ಈ ಯೋಜನೆ ಜಾರಿಗೆ ಬರಲಿದೆ. ಅದೇ ಸಮಯದಲ್ಲಿ ಮಾನವಸಹಿತ ಬಾಹ್ಯಾಕಾಶ ಯಾನ "ಗಗನಯಾನ" ವನ್ನು ಇಸ್ರೋ ಕೈಗೊಳ್ಳಲಿದ್ದು ಅದಕ್ಕಾಗಿ ಸಕಲ ರೀತಿಯ ಸಂಶೋಧನೆಗಳು, ಪರಿಕರಗಳ ಜೋಡಣೆಯ ಕಾರ್ಯಗಳು ನಡೆಯುತ್ತಿವೆ. ಡೀಪ್ ಓಷನ್ ಮಿಷನ್ ಗಾಗಿ 4,100 ಕೋಟಿ ರೂಪಾಯಿಗಳ ನಿಧಿಯನ್ನು ಮೀಸಲಿಡಲಾಗಿದೆ.

ISRO Technology: ಬರಲಿದೆ ತನ್ನನ್ನು ತಾನೇ ಭಕ್ಷಿಸೋ ರಾಕೆಟ್!
ಗಗನಯಾನ ಯೋಜನೆಗೆ (gaganyaan programme) 10,000 ಕೋಟಿ ರೂಗಳನ್ನು ಮೀಸಲಿಡಲಾಗಿದೆ. ಕನಿಷ್ಟ ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಸ್ರೋದ ಈ ಮಹತ್ವಾಕಾಂಕ್ಷೆಯ ಯೋಜನೆ ನಾಲ್ಕು ಮಂದಿ ಗಗನಯಾನಿಗಳು ಆಯ್ಕೆಯಾಗಿದ್ದು, ಇವರೆಲ್ಲರೂ ರಷ್ಯಾದಲ್ಲಿ(Russia) ತಮ್ಮ ತರಬೇತಿಯನ್ನು  ಪೂರ್ಣಗೊಳಿಸಿದ್ದಾರೆ. ರಷ್ಯಾದ ಸ್ಟಾರ್ ಸಿಟಿಯಲ್ಲಿರುವ ಜಿಸಿಟಿಸಿ ಕೇಂದ್ರದಲ್ಲಿ 2020ರ ಫೆಬ್ರವರಿಯಿಂದಲೇ ಇವರಿಗೆ ತರಬೇತಿ ನೀಡಲಾಗಿದ್ದು 2021ರ ಮಾರ್ಚ್‌ನಲ್ಲಿ ಇವರ ತರಬೇತಿ ಪೂರ್ಣಗೊಂಡಿದೆ. ತರಬೇತಿ ಪಡೆದವರಲ್ಲಿ ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಹಾಗೂ ಮೂವರು ವಿಂಗ್‌ ಕಮಾಂಡರ್‌ಗಳು ಇದ್ದಾರೆ. ಇವರಿಗೆ ತರಬೇತಿ ನೀಡುವ ಸಂಬಂಧ ಭಾರತ ಹಾಗೂ ರಷ್ಯಾ 2019 ಜೂನ್‌ನಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ರಷ್ಯನ್ ಸ್ಟೇಟ್ ಸ್ಪೇಸ್ ಕೋ ಆಪರೇಷನ್  - ರಾಸ್ಕೋಸ್ಮೋಸ್ ಈ ವಿಚಾರವನ್ನು ಬಹಿರಂಗಪಡಿಸಿತ್ತು.

click me!