ಆಲಮಟ್ಟಿಗೆ 6 ದಶಕ: ಇನ್ನೂ ಆಗಬೇಕಾದ್ದೇನು?

By Web DeskFirst Published Oct 17, 2019, 4:48 PM IST
Highlights

ಕೃಷ್ಣಾ ಮೇಲ್ದಂಡೆ ಕಾಮಗಾರಿ ಪೂರ್ಣವಾಗಿಲ್ಲ. ಆಲಮಟ್ಟಿಗಾಗಿ ಭೂಮಿ ಕಳೆದುಕೊಂಡ ವಿಜಯಪುರ, ಬಾಗಲಕೋಟೆಯ ಜನರಿಗೆ ತ್ಯಾಗದ ಫಲ ಇನ್ನೂ ದೊರಕಿಲ್ಲ. ಜಲಾಶಯದ ಎತ್ತರ ಏರಿಸುವ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಂಡಿಲ್ಲ. ‘ನಾರ್ವೆ ಗೋಡೆ’ ನೆನೆಗುದಿಗೆ ಬಿದ್ದಿದೆ. ಯೋಜನೆಯು ಕೊನೆಯ ಹಂತದಲ್ಲಿ ಕುಂಟುತ್ತಿದೆ.

ಬಿ.ಎಸ್‌.ಯಡಿಯೂರಪ್ಪ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದಾಗ ಕೃಷ್ಣಾ ಯೋಜನೆಗಳ ಅನುಷ್ಠಾನಕ್ಕೆ ಉಗ್ರ ಹೋರಾಟದ ಮಾಡಿದ ದಿನಗಳು ಕಣ್ಣಮುಂದೆ ಬರುತ್ತಿವೆ. ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಕೃಷ್ಣೆಗೆ ಬಾಗಿನ ಅರ್ಪಿಸುವ ಚಿತ್ರವೂ ನನ್ನೆದುರಿಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಹೋರಾಡಿದವರೇ ಅಧಿಕಾರಕ್ಕೆ ಬಂದು ಬಾಗಿನ ಅರ್ಪಿಸಿರುವುದು ಸಂತಸದ ವಿಚಾರ.

1959 ರಲ್ಲಿ ಆರಂಭವಾದ ಈ ಯೋಜನೆ ‘60’ರ ಷಷ್ಟ್ಯಬ್ದಿ ಪೂರ್ಣಗೊಳಿಸಿದೆ. ಆದರೆ, ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ಜನತೆಗೆ ಕೃಷ್ಣಾ ಯೋಜನೆಯ ತ್ಯಾಗದ ಫಲ ಇನ್ನೂ ಸಿಕ್ಕಿಲ್ಲ. ಅತ್ಯಂತ ನೋವಿನ ಸಂಗತಿ ಎಂದರೆ ಕುಡಿಯುವುದಕ್ಕೆ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಬೇಕು ಎಂದು ಮಹಾರಾಷ್ಟ್ರ ಸರ್ಕಾರದ ಮುಂದೆ ಕರ್ನಾಟಕ ಸರ್ಕಾರ ಮಂಡಿಯೂರಿ ಕುಳಿತು ಮನವಿ ಮಾಡಿಕೊಳ್ಳುವ ಪರಿಸ್ಥಿತಿ ಪ್ರತಿವರ್ಷವೂ ತಪ್ಪುತ್ತಿಲ್ಲ. ಕಳೆದ ವರ್ಷ ಇಡೀ ಸರ್ಕಾರವೇ ಮಹಾರಾಷ್ಟ್ರ ಸರ್ಕಾರದ ಎದುರು ಕೈಜೋಡಿಸಿ ಮನವಿ ಮಾಡಿದರೂ ಒಂದು ಹನಿ ನೀರು ಬಿಡಲಿಲ್ಲ. ಮುಂದೆ ಮಹಾಪೂರದ ಹಾವಳಿ ವಿಪರೀತವಾದಾಗ ನೀರು ಬೀಡಬೇಡಿರಿ ಎಂದರೂ ಕೇಳಲಿಲ್ಲ. ನಮ್ಮ ಬದುಕು ಕೊಚ್ಚಿ ಹೋಗುವಷ್ಟುನೀರು ಬಿಟ್ಟರು.

ಯೋಜನೆಗೆ ಸಿಬ್ಬಂದಿಯ ಕೊರತೆ

ಕೃಷ್ಣಾ ಮೇಲ್ದಂಡೆ ಯೋಜನೆಗೆ ನಿಗದಿಪಡಿಸಿದ ಅರ್ಧದಷ್ಟು ಸಿಬ್ಬಂದಿ ಕೂಡ ಈಗ ಇಲ್ಲ. ಈಗ ಇರುವ ಸಿಬ್ಬಂದಿಯಲ್ಲಿ ಸುಮಾರು 1/3 ಜನರು ನಿಯೋಜನೆಯ ಮೇಲೆ ಬಂದಿದ್ದಾರೆ. ಕೇಂದ್ರ ಸ್ಥಾನದಲ್ಲಿ ನಿರ್ಧಾರ ಕೈಗೊಳ್ಳಬಹುದಾದ ಒಬ್ಬ ಅಧಿಕಾರಿಯೂ ಇಲ್ಲ. ಬೆಳಗಾವಿ-ಬೆಂಗಳೂರು ನಿರ್ದೇಶನಗಳಿಗೆ ಕಾಯಬೇಕಾಗಿದೆ. ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ನೇಮಕಕ್ಕೆ ಮೊದಲು ಆದ್ಯತೆ ಕೊಡಬೇಕಾದ ಅಗತ್ಯವಿದೆ.

BB7: ಗೆದ್ದರೆ ಎಲ್ಲವನ್ನೂ ಉತ್ತರ ಕರ್ನಾಟಕ ಸಂತ್ರಸ್ತರೊಗೆ ನೀಡ್ತೇನೆ’ ಸ್ವಾಮೀಜಿ ಘೋಷಣೆ

ರಾಜ್ಯ ಸರ್ಕಾರ 2013ರಲ್ಲಿ ಪುನರ್‌ವಸತಿ ಪುನರ್‌ ನಿರ್ಮಾಣ ಮಾರ್ಗಸೂಚಿ ಕಾನೂನು ಜಾರಿಗೆ ತಂದಿದೆ. ಭೂಸ್ವಾಧೀನದಿಂದ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಪೂರ್ಣ ಪರಿಹಾರ ಕೊಡಬೇಕು. ಅವರನ್ನು ನಿಗದಿಪಡಿಸಿದ ಬೇರೊಂದು ಸ್ಥಳಕ್ಕೆ ಕಡ್ಡಾಯವಾಗಿ ಸ್ಥಳಾಂತರ ಮಾಡಬೇಕು. ಸಂತ್ರಸ್ತರಿಗೆ ಹೊಸ ನಿವೇಶನದಲ್ಲಿ ಎಲ್ಲ ಮೂಲಭೂತ ಸೌಕರ್ಯ ಒದಗಿಸಬೇಕು. ಈ ಕೆಲಸ ಪೂರ್ಣಗೊಂಡ 6 ತಿಂಗಳ ನಂತರ ನೀರು ನಿಲ್ಲಿಸಬೇಕು ಎಂಬುದನ್ನು 2013ರ ಕಾನೂನಿನಲ್ಲಿ ಕಡ್ಡಾಯಗೊಳಿಸಲಾಗಿದೆ.

ನೀರು 525ಕ್ಕೆ ಎತ್ತರಕ್ಕೆ ನಿಲ್ಲಿಸಿದರೆ 20 ಹಳ್ಳಿಗಳು ಪೂರ್ಣ ಮುಳುಗಲಿವೆ ಎಂದು ಗುರುತಿಸಲಾಗಿದೆ. ಇವರೆಲ್ಲರಿಗೂ 2013ರ ಕಾನೂನು ಅನ್ವಯವಾಗುತ್ತದೆ. ಸರ್ಕಾರ ಈ ಕಾನೂನು ಪಾಲನೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಈ ಕಾನೂನನ್ನು ಸರಿಯಾಗಿ ಪಾಲಿಸದೇ ಇರುವುದರಿಂದ ವಲ್ಡ್‌ರ್‍ ಬ್ಯಾಂಕ್‌ ಮಂಜೂರು ಮಾಡಿದ ಹಣ ಬಿಡುಗಡೆ ಮಾಡುವುದನ್ನು ನಿಲ್ಲಿಸಿದೆ. ಸಂತ್ರಸ್ತರ ಸಮಸ್ಯೆಯನ್ನು ತೃಪ್ತಿಕರವಾಗಿ ಬಗೆಹರಿಸಬೇಕೆಂದು ತಾಕೀತು ಮಾಡಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು.

ರಾಷ್ಟ್ರೀಯ ಯೋಜನೆ ಆಗಬೇಕೆ?

ಆಲಮಟ್ಟಿಯೋಜನೆ ದೇಶದ ಬೃಹತ್‌ ಯೋಜನೆ. ಬಹಳಷ್ಟುಹಣ ಹೂಡುವುದು ಅವಶ್ಯವಿದೆ. ಆದ್ದರಿಂದ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೆಲವರು ಸಲಹೆ ಮಾಡಿದ್ದಾರೆ. ಇದರಿಂದ ಆಗುವ ಅನುಕೂಲ-ಅನನುಕೂಲತೆ ಬಗ್ಗೆ ಚರ್ಚಿಸುವ ಅಗತ್ಯವಿದೆ. ಮುಕ್ತಾಯದ ಹಂತದಲ್ಲಿರುವ ಈ ಯೋಜನೆ ಕೇಂದ್ರಕ್ಕೆ ಹಸ್ತಾಂತರಿಸುವುದರಿಂದ ರಾಜ್ಯದ ಹಕ್ಕು ಮೊಟಕುಗೊಳ್ಳುತ್ತದೆ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಮುಂದೆ ಕೈಜೋಡಿಸಿ ನಿಲ್ಲಬೇಕಾಗುತ್ತದೆ.

ಹೀಗಾಗಿ ರಾಜ್ಯ ಸರ್ಕಾರವೇ ಈ ಯೋಜನೆಯನ್ನು ಪೂರ್ಣಗೊಳಿಸುವುದು ಒಳ್ಳೆಯದು. ಇದಕ್ಕೆ ಬೇಕಾಗುವ ಸಂಪನ್ಮೂಲಗಳನ್ನು ಸರ್ಕಾರ ಬಾಂಡ್‌ಗಳ ಮೂಲಕ, ಬ್ಯಾಂಕ್‌ಗಳ ಮೂಲಕ, ರೈತರ ಸಹಭಾಗಿತ್ವದ ಮೂಲಕ ಸಂಗ್ರಹಿಸಬೇಕು. ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಿದರೆ, ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಕೂಡ ಪಡೆಯಬಹುದಾಗಿದೆ.

ಕಾವೇರಿಯ ಸಾಂಸ್ಕೃತಿಕ ಶಕ್ತಿ ಕೃಷ್ಣೆಗಿಲ್ಲ?

ಕಾವ್ಯ, ಸಾಹಿತ್ಯ, ಕಲೆ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರುತ್ತವೆ. ಕಾವ್ಯಕ್ಕೆ ಜನಾಂಗವನ್ನು ಎದ್ದು ನಿಲ್ಲಿಸುವ, ಹೋರಾಟಕ್ಕೆ ಸಿದ್ಧಗೊಳಿಸುವ ಬಲವಾದ ಶಕ್ತಿಯಿದೆ. ಕಾವೇರಿ ನದಿಯ ವಿಷಯದಲ್ಲಿ ಸಾಂಸ್ಕೃತಿಕ ವಲಯ ಸ್ಪಂದಿಸಿದ ರೀತಿಯಲ್ಲಿ ಕೃಷ್ಣೆಯ ಬಗ್ಗೆ ಸ್ಪಂದಿಸಿಲ್ಲ. ಕಾವೇರಿ ಜೀವನದಿಯಾಗಿರುವಂತೆ ಕೃಷ್ಣೆ ಕೂಡ ಜೀವನದಿಯೇ. ಕಾವೇರಿ ಕುರಿತು ಹಾಡು, ನಾಟಕ, ಚಲನಚಿತ್ರ ಕಾದಂಬರಿಗಳು ದೊಡ್ಡ ಪ್ರಮಾಣದಲ್ಲಿ ಬಂದಿವೆ. ಡಾ

ರಾಜ್‌ಕುಮಾರ್‌ ಹಾಡಿದ ಕೊಡಗಿನ ಕಾವೇರಿ ಹಾಡು ಅಲ್ಲಿಯವರನ್ನೆಲ್ಲ ಒಂದು ಮಂತ್ರದಂಡದಲ್ಲಿ ಕಟ್ಟಿಹಾಕಿದೆ. ಉತ್ತರ ಕರ್ನಾಟಕದ ಬರಹಗಾರರು ಕೃಷ್ಣೆ ಕುರಿತು ಅಷ್ಟಿಷ್ಟುಬರೆದಿದ್ದಾರೆ. ಆದರೆ ಈ ಸಾಹಿತ್ಯವೆಲ್ಲ ಗೋಳಿನ ಕಥೆಯಾಗಿದೆ. ‘ಕೃಷ್ಣೆಯ ಕಣ್ಣೀರು’ ‘ಮುಳುಗಿದ ಬದುಕು’ ‘ಬರಿದಾದಳು ಕೃಷ್ಣೆ’ ಎಂಬ ಕೃತಿಗಳು ಬಂದಿವೆ. ಇವೆಲ್ಲ ಋುಣಾತ್ಮಕ ವಿಷಯಗಳನ್ನು ಹೇಳುತ್ತಿವೆ. ಪ್ರೀತಿ, ಗೌರವ, ಆತ್ಮವಿಶ್ವಾಸ ಹೆಚ್ಚಿಸುವ ಸಾಹಿತ್ಯ ಕೃಷ್ಣಾ ನದಿಯ ಕುರಿತು ಬರುವ ಅವಶ್ಯವಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಜನರ ಆಲೋಚನೆ ಮತ್ತು ಹೋರಾಟಕ್ಕೆ ಹೊಸ ಆಯಾಮ ದೊರೆಯಲಿದೆ.

ನೆರೆ ಪೀಡಿತ ಮಕ್ಕಳ ಶಿಕ್ಷಣ; Big 3 ಅಭಿಯಾನಕ್ಕೆ ಕನ್ನಡಿಗರ ಪಣ

ನಾರ್ವೆ ಮಾದರಿ ಗೋಡೆ ಚರ್ಚೆ

ಆಲಮಟ್ಟಿಜಲಾಶಯದ ಈಗಿರುವ ಎತ್ತರವು 519.60 ಮೀಟರಿನಿಂದ 524.256 ಮೀಟರಿಗೆ ಹೆಚ್ಚಿಸುವ ಪ್ರಶ್ನೆ ಕೇವಲ ಪ್ರಶ್ನೆಯಾಗಿಯೇ ಉಳಿದಿದೆ. ಎತ್ತರ ಹೆಚ್ಚಿಸುವುದರಿಂದ 20 ಹಳ್ಳಿಗಳು ಪೂರ್ಣ ಮುಳುಗುತ್ತವೆ. ಇದನ್ನು ತಪ್ಪಿಸುವುಕ್ಕೆ ನಾರ್ವೆ ದೇಶದ ಮಾದರಿಯಲ್ಲಿ ತಡೆಗೊಡೆ ನಿರ್ಮಿಸುವ ಸಲಹೆ ಹಾಗೂ ವರದಿ ರಾಜ್ಯ ಸರ್ಕಾರದ ಪರಿಶೀಲನೆಯಲ್ಲಿದೆ. ನಾರ್ವೆ ಮಾದರಿ ಒಂದು ವಿನೂತನ ಮಾರ್ಗವಾಗಿದೆ. ನಾಲ್ಕು ವರ್ಷಗಳ ಹಿಂದೆ ನಾರ್ವೆ ದೇಶದ 4 ತಜ್ಞರು ಆಲಮಟ್ಟಿಗೆ ಆಗಮಿಸಿ ಸತತ 16 ವಾರ ಅಧ್ಯಯನ ಮಾಡಿ ತಡೆಗೋಡೆ ನಿರ್ಮಿಸುವ ವರದಿಯನ್ನು ಸರ್ಕಾರಕ್ಕೆ ನೀಡಿದ್ದಾರೆ.

ಇದರಿಂದ ಫಲವತ್ತಾದ ಭೂಮಿ ಮುಳುಗಡೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸ್ಥಳಾಂತರ ತಪ್ಪಿಸಬಹುದು. ನಾರ್ವೆ ಗೋಡೆ ನಿರ್ಮಾಣಕ್ಕೆ ಕೇವಲ 247 ಕೋಟಿ ತಗಲುವುದು. ಇದರಿಂದ ಸರ್ಕಾರಕ್ಕೆ 5,39,397 ಕೋಟಿ ರು. ಉಳಿತಾಯವಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.

ನಾರ್ವೆ ಮಾದರಿಯ ಗೋಡೆ ನಿರ್ಮಾಣ ಸರಿಯಾದ ಕ್ರಮ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ, ವರದಿಯ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಕೊಂಡಿಲ್ಲ. ನಾಲ್ಕು ವರ್ಷಗಳು ಕಳೆದರೂ ಸರ್ಕಾರ ಸ್ಪಷ್ಟನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಾಗಿಲ್ಲವೆಂಬುದು ನೋವಿನ ಸಂಗತಿ. ನಾರ್ವೆ ಮಾದರಿಯ ಗೋಡೆ ಪ್ರಯೋಗವನ್ನು ರಷ್ಯಾ, ಜಪಾನ್‌ ವಿವಿಧ ದೇಶಗಳಲ್ಲಿ ಮಾಡಲಾಗಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು.

ಕರ್ನಾಟಕ ಸರ್ಕಾರದ ಮುಂದಿರುವ ಜಲ ವಿವಾದಗಳನ್ನು ಸಮರ್ಥವಾಗಿ ನಿಭಾಯಿಸಲು ಕಾನೂನ ತಜ್ಞರ ಒಂದು ಪಡೆ ರಚಿಸುವ ಅವಶ್ಯವಿದೆ. ಕಾನೂನು ಸಮರ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಹಿಂದೆ ಕೆಲವು ನ್ಯಾಯವಾದಿಗಳು ರಾಜೀನಾಮೆ ಕೊಟ್ಟು ಹೊರಬಂದಿದ್ದುಂಟು. ಇಂತಹ ಅಚಾತುರ್ಯಗಳಿಗೆ ಅವಕಾಶ ಕೊಡಬಾರದು. ಕೇಂದ್ರ ಸರ್ಕಾರ ಆದೇಶ ಹೊರಡಿಸುವುದಕ್ಕೆ ವಿಳಂಬ ಮಾಡುತ್ತಿರುವುದು ತಮಗೆ ತಿಳಿದ ಸಂಗತಿಯಾಗಿದೆ. ನ್ಯಾಯಾಧಿಕರಣದ ತೀರ್ಪಿನ (2010) ಗೆಜೆಟ್‌ ಪ್ರಕಟಣೆಗೆ ತಕ್ಷಣ ಕ್ರಮ ಕೈಕೊಳ್ಳಬೇಕು.

ಭೂಮಿ ಕಳೆದುಕೊಂಡವರಿಗೆ ನೀರೂ ಇಲ್ಲ!

ಆಲಮಟ್ಟಿಯೋಜನೆಗೆ ಈಗಾಗಲೇ ಹಂತ-1 ಮತ್ತು ಹಂತ-2ರಲ್ಲಿ ಭೂಮಿ, ಮನೆ ಕಳೆದುಕೊಂಡವರಿಗೆ ಈ ಯೋಜನೆಯಿಂದ ನೀರಾವರಿ ಸೌಲಭ್ಯ ಸಿಕ್ಕಿಲ್ಲ. ಕುಡಿಯುವುದಕ್ಕೂ ನೀರು ಕೊಟ್ಟಿಲ್ಲ. ಜಲಾಶಯದ ಕೆಳಭಾಗದಲ್ಲಿ ಬರುವ ಕಲಬುರ್ಗಿ, ಯಾದಗಿರಿ ಸೇರಿದಂತೆ 7 ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ದೊರೆತಿದೆ. ಭೂಮಿ ಕಳೆದುಕೊಂಡವರು ತ್ಯಾಗಿಗಳು ಎಂಬ ಗೌರವ ಪಡೆದುಕೊಂಡು ಕಷ್ಟಅನುಭವಿಸುತ್ತಿದ್ದಾರೆ. ಭೂಮಿ ಕಳೆದುಕೊಂಡ ಎಲ್ಲ ರೈತರಿಗೆ ಹಾಗೂ ಈ ಜಿಲ್ಲೆಗಳ ಒಣಬೇಸಾಯ ಭೂಮಿಗೆ ಪರ್ಯಾಯವಾಗಿ ನೀರಾವರಿ ಸೌಲಭ್ಯ ಕಲ್ಪಿಸುವುದು ತೀರ ಅವಶ್ಯಕವಾಗಿದೆ.

ತೆಲಂಗಾಣ ಮಾದರಿ ಜಲಯಜ್ಞ ಬೇಕು

ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ತಮ್ಮ ಬಜೆಟ್‌ನಲ್ಲಿ ಕೃಷಿ, ನೀರಾವರಿ, ಗ್ರಾಮೀಣ ಅಭಿವೃದ್ಧಿಗೆ ಶೇ.60ರಷ್ಟುಹಣ ಮೀಸಲಿಟ್ಟಿದ್ದಾರೆ. ಮಹತ್ವದ ನೀರಾವರಿ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಜಾರಿಗೊಳಿಸುತ್ತಿದ್ದಾರೆ. ಅವರು ರೂಪಿಸಿದ ಕಾಳೇಶ್ವರಂ ಯೋಜನೆ ವಿಶ್ವದ ಅತಿ ದೊಡ್ಡ ಯೋಜನೆಯಾಗಿದೆ. ಸುಮಾರು 45 ಲಕ್ಷ ಎಕರೆ ನೀರಾವರಿ ಹಾಗೂ ಹೈದರಾಬಾದ್‌ ನಗರವೂ ಸೇರಿದಂತೆ ಸಾವಿರಾರು ಹಳ್ಳಿಗಳಿಗೆ ಕುಡಿಯುವ ನೀರನ್ನು ಈ ಯೋಜನೆ ಪೂರೈಸಲಿದೆ. ಈ ಯೋಜನೆಯಿಂದ ಒಂದೇ ಒಂದು ಹಳ್ಳಿ ಮುಳುಗಡೆಯಾಗಿಲ್ಲ.

ಕಾಲುವೆ ಹಾಗೂ ಬ್ಯಾರೇಜ್‌ ನಿರ್ಮಾಣಕ್ಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ನದಿಯಲ್ಲಿಯೇ ನೀರು ನಿಲ್ಲಿಸುವ ವಿನೂತನ ತಂತ್ರಜ್ಞಾನ ಜಾರಿ ಮಾಡಲಾಗಿದೆ. ನಮ್ಮ ರಾಜ್ಯದಲ್ಲೂ ಮುಖ್ಯಮಂತ್ರಿಗಳು ಹೊಸ ತಂತ್ರಜ್ಞಾನ ಅಭ್ಯಾಸ ಮಾಡಲು ನೀರಾವರಿ ಇಂಜಿನಿಯರ್‌ಗಳಿಗೆ ತಿಳಿಸಿ ಹೇಳುವ ಅಗತ್ಯವಿದೆ. ನೀರು ಕೊಡುವುದನ್ನು ಒಂದು ಯಜ್ಞವಾಗಿ ಪರಿವರ್ತಿಸಬೇಕು.

ಸುಮಾರು 50 ವರ್ಷಗಳ ಹಳೆಯದಾದ ತಂತ್ರಜ್ಞಾನಕ್ಕೆ ಇಂಜಿನಿಯರ್‌ಗಳು ಜೋತುಬೀಳದೆ, ಹೊಸದನ್ನು ಕಲಿತುಕೊಳ್ಳಲು ತಜ್ಞರು ಎಂದು ಕರೆಸಿಕೊಳ್ಳುವವರಿಗೆ ಕಿವಿಹಿಂಡಿ ಹೇಳುವುದು ಅವಶ್ಯವಿದೆ. ಕರ್ನಾಟಕಕ್ಕೆ ದೊರೆತ ಪೂರ್ಣ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಕ್ಕೆ ಕಟ್ಟುನಿಟ್ಟಿನ ಹೊಸ ವೈಜ್ಞಾನಿಕ ಚಿಂತನೆಯ ಮಾರ್ಗಗಳನ್ನು ಶೋಧಿಸಿ ಕಾರ್ಯರೂಪಕ್ಕೆ ತರುವುದು ಅವಶ್ಯವಿದೆ.

- ಸಂಗಮೇಶ್ ಆರ್ ನಿರಾಣಿ ಮುಧೋಳ 

 

click me!