
ಬೆಂಗಳೂರು (ಮೇ.03): ‘ನಾವು ಎಚ್.ಡಿ. ದೇವೇಗೌಡ ಅವರ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಪೆನ್‌ಡ್ರೈವ್ ಈ ಕುಟುಂಬದ ಆಸ್ತಿ, ದೇವೇಗೌಡರ ಕುಟುಂಬ ಈಗ ಜನರ ಬಾಯಲ್ಲಿ ‘ಪೆನ್‌ಡ್ರೈವ್ ಕುಟುಂಬ’ ಆಗಿದೆ. ಹೀಗಾಗಿ ಜೆಡಿಎಸ್ ಗುರುತು ತೆನೆ ಹೊತ್ತ ಮಹಿಳೆ ಇದ್ದ ಜಾಗದಲ್ಲಿ ಪೆನ್‌ಡ್ರೈವ್ ಹೊತ್ತ ಮಹಿಳೆ ಬರಬೇಕು’ ಎಂದು ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿರುವ ಅವರು, ‘ಜೆಡಿಎಸ್‌ನ ಮಿತ್ರ ಪಕ್ಷವಾದ ಬಿಜೆಪಿಯವರಿಂದಲೇ ಪೆನ್‌ಡ್ರೈವ್ ಬಿಡುಗಡೆಯಾಗಿದೆ. ಅವರನ್ನು ಟೀಕಿಸಲಾಗದೆ ಕುಮಾರಸ್ವಾಮಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅವರ ರೀತಿಯಲ್ಲಿ ನಾನು ಮಾಜಿ ಪ್ರಧಾನಿಗಳ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಏಕೆಂದರೆ ಅವರ ಅಭಿಮಾನಿಗಳಿಗೆ ಬೇಸರವಾಗುತ್ತದೆ’ ಎಂದು ತಿರುಗೇಟು ನೀಡಿದ್ದಾರೆ.
‘ಮೋದಿ ಮೋದಿ’ ಎನ್ನುತ್ತಿದ್ದ ಯುವಕರಿಗೆ ನಾಮ: ಸಿಎಂ ಸಿದ್ದರಾಮಯ್ಯ
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಪ್ರಧಾನಿಗಳು ಸಣ್ಣ, ಸಣ್ಣ ವಿಚಾರಕ್ಕೂ ಮಾಧ್ಯಮಗೋಷ್ಠಿ ನಡೆಸಿ ಹೇಳಿಕೆ ನೀಡಿ, ಪಿಟಿಷನ್ ಬರೆಯುತ್ತಾರಲ್ಲವೇ? ಅದೇ ರೀತಿ ಈ ವಿಚಾರವಾಗಿಯೂ ಹೇಳಿಕೆ ನೀಡಲಿ. ಜತೆಗೆ ನೂಲಿನಂತೆ ಸೀರೆ ಎನ್ನುವ ಮಾತನ್ನು ಅರ್ಥೈಸಲಿ ಎಂದು ಹೇಳಿದರು. ಸಂತ್ರಸ್ತರು ಹೇಳಿಕೆ ನೀಡುತ್ತಾರೆ ಇಲ್ಲ ಎನ್ನುವ ಮೊದಲು ಕೃತ್ಯಗಳನ್ನು ಎಸಗಿದವರನ್ನು ಮೊದಲು ಪ್ರಶ್ನಿಸಬೇಕಿದೆ. ಆ ಅಪರಾಧವನ್ನು ಸಮರ್ಥಿಸುವ ಹೇಳಿಕೆಗಳನ್ನು ನೋಡಬಾರದು ಎಂದು ಒತ್ತಾಯಿಸಿದರು.
ಎಚ್‌ಡಿಕೆ ಕೈವಾಡ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಬಿಡುಗಡೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿ ನಾಯಕರ ಕೈವಾಡವಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜ್ವಲ್ ಪೆನ್‌ಡ್ರೈವ್ ವಿಚಾರ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರಿಗೆ ಎಲ್ಲರಿಗಿಂತ ಮುಂಚೆಯೇ ಗೊತ್ತಿತ್ತು. ಈಗ ಪ್ರಕರಣದಿಂದ ನುಣುಚಿಕೊಳ್ಳಲು ಕಾಂಗ್ರೆಸ್ ಹಾಗೂ ಡಿ.ಕೆ. ಶಿವಕುಮಾರ್ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ.
ಪೆನ್‌ಡ್ರೈವ್ ವಿಚಾರ ಡಿಸಿಎಂ ಡಿಕೆಶಿ ಯಾಕೆ ಮುಚ್ಚಿಟ್ಟರು?: ವಿಜಯೇಂದ್ರ
ಪೆನ್ ಡ್ರೈವ್ ಬಿಡುಗಡೆಯಲ್ಲಿ ಕುಮಾರಸ್ವಾಮಿ ಹಾಗೂ ಮೈತ್ರಿ ನಾಯಕರ ಕೈವಾಡವಿರುವ ಕಾರಣದಿಂದಲೇ ಈ ರೀತಿಯ ಆರೋಪ ಮಾಡಲಾಗುತ್ತಿದೆ ಎಂದರು. ಕುಮಾರಸ್ವಾಮಿ ಅವರಿಗೆ ಶಿವಕುಮಾರ್‌ರನ್ನು ಸ್ಮರಿಸದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲ, ನಿದ್ದೆ ಬರುವುದಿಲ್ಲ. ನಾವು ಪೆನ್‌ಡ್ರೈವ್ ಬಿಡುಗಡೆ ಮಾಡುವುದಾಗಿದ್ದರೆ ಮತದಾನಕ್ಕೆ ವಾರ ಅಥವಾ ಹತ್ತು ದಿನ ಮುಂಚಿತವಾಗಿಯೇ ಬಿಡುಗಡೆ ಮಾಡಬಹುದಾಗಿತ್ತಲ್ಲವೇ? ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಎಲ್ಲರಿಗಿಂತ ಮುಂಚೆಯೇ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರಿಗೆ ತಿಳಿದಿತ್ತು. ಆದರೀಗ ಕಾಂಗ್ರೆಸ್ ಮೇಲೆ ಆರೋಪ ಮಾಡಿ ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.