ಕರ್ನಾಟಕದ 46 ಜಾತಿಗೆ ಕೇಂದ್ರೀಯ ಮೀಸಲಿಲ್ಲ

By Web DeskFirst Published Jun 12, 2019, 8:01 AM IST
Highlights

ರಾಜ್ಯದ 46 ಶೋಚನೀಯ ಜಾತಿಗೆ ಕೇಂದ್ರೀಯ ಮೀಸಲಿಲ್ಲ| ರಾಜ್ಯದ ಮೀಸಲು ಪಟ್ಟಿಯಲ್ಲಷ್ಟೇ ಸ್ಥಾನ| ಈ ಜಾತಿಗಳಿಗೆ ಮೀಸಲು ಕೊಡಿಸಲು ಪ್ರಸ್ತಾವಕ್ಕೆ ಸರ್ಕಾರ ಸಿದ್ಧತೆ

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು[ಜ.12]: ಕೇಂದ್ರ ಸರ್ಕಾರದ ಮೀಸಲಾತಿ ಪಟ್ಟಿಯಲ್ಲಿ ರಾಜ್ಯದ 46 ಅತಿ ಹಿಂದುಳಿದ ಹಾಗೂ ಶೋಚನೀಯ ಸ್ಥಿತಿಯಲ್ಲಿರುವ ಜಾತಿಗಳಿಗೆ ಯಾವುದೇ ಮೀಸಲಾತಿ ಕಲ್ಪಿಸಿಲ್ಲ. ಹೀಗಾಗಿ ಪ್ರವರ್ಗ-1ಕ್ಕೆ ಸೇರಿದ ಅಂತಹ 46 ಜಾತಿಗಳಿಗೆ ಕೇಂದ್ರ ಸರ್ಕಾರದ ಹಿಂದುಳಿದ ವರ್ಗದ ಮೀಸಲಾತಿ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಕೇಂದ್ರ ಸರ್ಕಾರದ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲಾತಿಯಿಂದ ರಾಜ್ಯದ 139 ಹಿಂದುಳಿದ ಜಾತಿಗಳು ಹೊರಗಿವೆ. ಅದರಲ್ಲೂ ಪ್ರಮುಖವಾಗಿ ರಾಜ್ಯದಲ್ಲಿ ತೀರಾ ಹಿಂದುಳಿದ ಜಾತಿಗಳು ಎಂದು ಗುರುತಿಸಿರುವ ಪ್ರವರ್ಗ- 1 ರಡಿ ಬರುವ 46 ಜಾತಿಗಳಿಗೆ ಕೇಂದ್ರ ಸರ್ಕಾರವು ಯಾವುದೇ ಮೀಸಲಾತಿ ಕಲ್ಪಿಸುತ್ತಿಲ್ಲ. ಈ ಜಾತಿಗಳನ್ನು ರಾಜ್ಯದಲ್ಲಿ ಅತಿ ಹಿಂದುಳಿದ ಜಾತಿಗಳಾಗಿ ಗುರುತಿಸಿದ್ದು, ಕೆನೆಪದರ ಆದಾಯ ಮಿತಿ ನೀತಿಯಿಂದಲೂ ಹೊರಗಿಡಲಾಗಿದೆ. ಇಂತಹ ಜಾತಿಗಳಿಗೆ ಮೀಸಲಾತಿ ನೀಡದಿರುವುದರಿಂದ ಕೇಂದ್ರದ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಆದ್ಯತೆ ಸಿಗದೆ ಅನ್ಯಾಯ ಆಗುತ್ತಿದೆ. ಹೀಗಾಗಿ 46 ಜಾತಿಗಳಿಗೆ ಮೀಸಲಾತಿ ಒದಗಿಸುವಂತೆ ಶಿಫಾರಸು ಮಾಡಲು ಅಗತ್ಯ ಸಿದ್ಧತೆ ನಡೆಸುತ್ತಿದೆ.

46 ಜಾತಿಗಳ ಶೋಚನೀಯ ಸ್ಥಿತಿ:

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪೈಕಿ ಪ್ರವರ್ಗ -1ಕ್ಕೆ ಸೇರಿರುವ ಜಾತಿಗಳನ್ನು ಶೋಚನೀಯ ಸ್ಥಿತಿಯಲ್ಲಿರುವ ಜಾತಿಗಳು ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ ಅಲೆಮಾರಿ, ಅರೆ ಅಲೆಮಾರಿ, ಬುಡಕಟ್ಟು ಲಕ್ಷಣಗಳಿರುವ ಪ್ರವರ್ಗ-1ರ 95 ಜಾತಿ ಹಾಗೂ 296 ಉಪ ಜಾತಿಗಳ ಆರ್ಥಿಕ ಹಾಗೂ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ತೀರಾ ಕೆಳಮಟ್ಟದಲ್ಲಿದೆ. ಹೀಗಾಗಿಯೇ ರಾಜ್ಯ ಸರ್ಕಾರವು ಈ ಜಾತಿಗಳಿಗೆ ಯಾವುದೇ ಕೆನೆಪದರ ಆದಾಯ ಮಿತಿ ನೀತಿಯನ್ನೂ ಅನುಸರಿಸದೆ ಯಾವುದೇ ಶುಲ್ಕ ವಿಧಿಸದೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ನೀಡುತ್ತಿದೆ. ಹೀಗಾಗಿ ಇಂತಹ ಜಾತಿಗಳ ಪಟ್ಟಿಸಿದ್ಧಪಡಿಸಿ ಅವುಗಳ ಇತ್ತೀಚೆಗಿನ ಮಾಹಿತಿಯನ್ನು ಒದಗಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಬಂಧಪಟ್ಟಇಲಾಖೆಗಳಿಗೆ ಆದೇಶ ಮಾಡಿದೆ.

ಕೇಂದ್ರ ಸರ್ಕಾರಕ್ಕೆ ತಿರುಗೇಟು?:

ಕೇಂದ್ರ ಸರ್ಕಾರವು ಆರ್ಥಿಕ ಹಿಂದುಳಿದ ಮೇಲ್ವರ್ಗದ ಅಭ್ಯರ್ಥಿಗಳಿಗೆ ಶೇ.10 ರಷ್ಟುಮೀಸಲಾತಿ ಕಲ್ಪಿಸಿ ಸಂವಿಧಾನ ತಿದ್ದುಪಡಿ ಮಾಡಿದೆ. ಇದರ ಅನ್ವಯ ರಾಜ್ಯದಲ್ಲೂ ಮೇಲ್ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಒತ್ತಡಕ್ಕೆ ರಾಜ್ಯ ಸರ್ಕಾರ ಸಿಲುಕಿದೆ. ಕೇಂದ್ರದ ಯಾವುದೇ ಮೀಸಲಾತಿ ಸೌಲಭ್ಯ ಪಡೆಯದ 144 ಜಾತಿಗಳನ್ನು ಗುರುತಿಸಿ ಈಗಾಗಲೇ ಪ್ರಮಾಣಪತ್ರ ವಿತರಣೆಯನ್ನು ರಾಜ್ಯ ಸರ್ಕಾರ ಶುರು ಮಾಡಿದೆ. ಈ ಪೈಕಿ ರಾಜ್ಯದಲ್ಲಿ 139 ಜಾತಿಗಳು ಈಗಾಗಲೇ ಒಬಿಸಿ ಮೀಸಲಾತಿ ಪಡೆಯುತ್ತಿವೆ. ಉಳಿದಂತೆ ಐದು ಜಾತಿಗಳಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಇಡಬ್ಲ್ಯೂಎಸ್‌ ಮೀಸಲಾತಿ ಸ್ಥಿತಿಗತಿ ಹೀಗಿರುವಾಗ ಈವರೆಗೂ ತಲೆಕೆಡಿಸಿಕೊಳ್ಳದ ಪ್ರವರ್ಗ-1ರ 46 ಜಾತಿಗಳಿಗೆ ಕೇಂದ್ರದ ಮೀಸಲಾತಿ ಕೊಡಿಸಲು ಇದೀಗ ಮುಂದಾಗಿದೆ. ರಾಜ್ಯ ಸರ್ಕಾರವು ಈವರೆಗೂ ಕೇಂದ್ರ ಸರ್ಕಾರದ ಮೀಸಲಾತಿಯಿಂದ ಹೊರಗಿರುವ 46 ಜಾತಿಗಳಿಗೆ ಮೀಸಲಾತಿ ಕಲ್ಪಿಸುವಂತೆ ಯಾವುದೇ ಶಿಫಾರಸು ಮಾಡಿರಲಿಲ್ಲ. ಇದೀಗ ಹಠಾತ್ತನೆ ಇಂತಹ ಕ್ರಮಕ್ಕೆ ಮುಂದಾಗುತ್ತಿರುವುದರಿಂದ ಇದು ಕೇಂದ್ರ ಸರ್ಕಾರದ ಕ್ರಮಕ್ಕೆ ತಿರುಗೇಟು ಎಂದು ಭಾವಿಸಲಾಗುತ್ತಿದೆ.

ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳನ್ನು ಕೇಳಿದರೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಯಾವುದೇ ಜಾತಿಗೆ ಮೀಸಲಾತಿ ನೀಡಿ ಎಂದು ಸ್ವಯಂ ಪ್ರೇರಿತವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಬರುವುದಿಲ್ಲ. ರಾಜ್ಯ ಸರ್ಕಾರವೂ ಇಂತಹ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಏಕೆಂದರೆ ಕೇಂದ್ರ ಮಟ್ಟದಲ್ಲಿ ಕೇಂದ್ರ ಹಿಂದುಳಿದ ವರ್ಗಗಳ ಆಯೋಗ ಇದೆ. ಅದು ಅಧ್ಯಯನ ಮಾಡಿ ಹಿಂದುಳಿದಿರುವಿಕೆ ಆಧಾರದ ಮೇಲೆ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಇನ್ನು ರಾಜ್ಯ ಸರ್ಕಾರ ಅಥವಾ ರಾಜ್ಯ ಹಿಂದುಳಿದ ವರ್ಗಗಳಿಗೆ ಯಾರಾದರೂ ಮನವಿ ನೀಡಿದರೆ ಅದನ್ನು ನಾವು ಕೇಂದ್ರಕ್ಕೆ ಕಳುಹಿಸಿಕೊಡುತ್ತಿದ್ದೆವು. ಈ 46 ಜಾತಿಗಳ ಬಗ್ಗೆ ಈವರೆಗೂ ಯಾವುದೇ ಮನವಿ ಬಾರದಿರುವ ಕಾರಣ ನಾವು ಶಿಫಾರಸು ಮಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರಕ್ಕೆ ಶಿಫಾರಸು ಮಾಡಲುದ್ದೇಶಿಸಿರುವ 46 ಜಾತಿ:

ಆಗಮುಡಿ, ಮುತ್ರಾಚ, ಬಾವಂದಿ, ಬೈರಾಗಿ, ದಾವಾರಿ, ಗುಸಾಯಿ, ಹೆಳೊವ, ನಂದಿವಾಳ, ಮೊಗೆರ, ಬಂದೆ-ಬೆಸ್ತರ, ಕಬ್ಬೆರ, ಖಾರ್ವಿ, ಕಿಳ್ಳಿಕ್ಯಾತ, ದೇವದಾಸಿ, ಬಸವಿ, ಬೊಗಂ, ಗಣಿಕ, ಕಲಾವಂತ, ಗೊಣಿಗ ಮನೆ, ಗೂರ್ಖಾ, ಲಾಡರು, ಯೆಳಗಲ್‌, ಮಲಯ, ಗೌರಿಗ, ಪಂಗುಯಲ್‌, ಪಂಗುಸಲ್‌, ಜೀನಗಾರ, ತೆವಾರ್‌, ಕಲಾರಿ, ಕಲ್ಲಾರ, ಕಲ್ಲು ಕುಟಿಗ ಉಪ್ಪಾರ, ಪಾಡಿ, ಡೆರಿಯ, ಸಾರಂತ, ಗೌಳಿ, ತೆಲುಗು ಗೌಡ, ಬಂಜಾರಿ, ಬ್ರಿಂಜಾರಿ, ವಂಜಾರ, ವಂಜಾರಿ, ಲಾಂಬಾಡಿ, ಗೊರೆ, ರೆಮೊಷಿ, ಪರದಿಸಿ, ಕಾಡುಗೊಲ್ಲ, ಹಟ್ಟಿಗೊಲ್ಲ,

click me!