ಕರ್ನಾಟಕ Elections 2024: ಚಾಮರಾಜನಗರದಲ್ಲಿ ಮತದಾನ ಬಹಿಷ್ಕಾರ; ಇವಿಎಂ ಮಷಿನ್ ಪೀಸ್ ಪೀಸ್, ಪೊಲೀಸ್ ಮೇಲೂ ಕಲ್ಲು

By Sathish Kumar KH  |  First Published Apr 26, 2024, 4:56 PM IST

ಚಾಮರಾಜನಗರ ಜಿಲ್ಲೆಯಲ್ಲಿ 5 ಗ್ರಾಮಗಳಿಂದ ಮತದಾನ ಬಹಿಷ್ಕಾರ ಮಾಡಲಾಗಿದ್ದರೂ, ಚುನಾವಣಾ ಸಿಬ್ಬಂದಿ ಮನವೊಲಿಕೆ ಮಾಡಿದ್ದಕ್ಕೆ ಇವಿಎಂ ಮಷಿನ್ ಅನ್ನು ಒಡೆದು ಹಾಕಿದ್ದಾರೆ. ಇದನ್ನು ತಡೆಯಲು ಮುಂದಾದ ಪೊಲೀಸರ ಮೇಲೂ ಕಲ್ಲು ತೂರಿದ್ದಾರೆ.


ಚಾಮರಾಜನಗರ (ಏ.26): ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಲೋಕಸಭಾ ವ್ಯಾಪ್ತಿಯಲ್ಲಿನ ಕಾಡಂಚಿನ ಗ್ರಾಮಗಳಿಗೆ ಮೂಲ ಸೌಕರ್ಯಗಳನ್ನೇ ಒದಗಿಸುವುದಿಲ್ಲ. ಆದರೆ, ವೋಟ್ ಕೇಳಲು ಮಾತ್ರ ಬರುತ್ತೀರಾ ಎಂದು ಮತದಾನ ಬಹಿಷ್ಕಾರ ಮಾಡಿದ್ದಾರೆ. ಆದರೂ, ಚುನಾವಣಾ ಸಿಬ್ಬಂದಿ ಪಡಸಲನತ್ತ ಗ್ರಾಮದ ಇಬ್ಬರನ್ನು ಕರೆತಂದು ಮತ ಹಾಕಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ 5 ಗ್ರಾಮಗಳ ನಿವಾಸಿಗಳು ಮತದಾನ ಕೇಂದ್ರದೊಳಗೆ ನುಗ್ಗಿ ಇವಿಎಂ ಮಷಿನ್, ವಿವಿ ಪ್ಯಾಟ್ ಅನ್ನು ಒಡೆದು ಹಾಕಿದ್ದಾರೆ. ನಂತರ, ಲಾಠಿ ಪ್ರಹಾರ ಮಾಡಲು ಮುಂದಾದ ಪೊಲೀಸರ ಮೇಲೂ ಕಲ್ಲೆಸೆದು ಹೋಗಿದ್ದಾರೆ.

ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದರೂ ಮೂಲ ಸೌಕರ್ಯಗಳಿಲ್ಲದೇ ಬಳಲುತ್ತಿವೆ. ಜನಪ್ರತಿನಿಧಿಗಳು ಕೂಡ ಈ ಹಳ್ಳಿಗಳಿಗೆ ಎಂದೂ ಭೇಟಿ ಕೊಡುವುದಿಲ್ಲ. ಇಲ್ಲಿಗೆ ಹೋಗಿ ಮತಯಾಚನೆ ಮಾಡುವುದೂ ಇಲ್ಲ. ಇದರಿಂದಾಗಿ ಕಾಡಂಚಿನ ಇಂಡಿಗನತ್ತ, ತೇಕಣೆ, ಮೆಂದಾರೆ ಹಾಗೂ ತುಳಸಿಕೆರೆ ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕಾರ ಮಾಡಲಾಗಿತ್ತು. ಪಡಸಲನತ್ತ ಗ್ರಾಮದಲ್ಲಿ 85 ಮತದಾರರ ಪೈಕಿ ಕೇವಲ ಇಬ್ಬರು ಮತದಾನ ಮಾಡಿದ್ದಾರೆ. ಉಳಿದಂತೆ ಮತಗಟ್ಟೆಗಳತ್ತ ಯಾರೊಬ್ಬರೂ ಸುಳಿದಿಲ್ಲ.

Tap to resize

Latest Videos

undefined

Breaking: ಮತದಾನ ಮಾಡಿ ಬಂದ ವ್ಯಕ್ತಿ ಹೃದಯಾಘಾತದಿಂದ ಸಾವು: ಬೆಂಗಳೂರು ಮಹಿಳೆಗೆ ಹೃದಯ ಸ್ತಂಭನ

ಇನ್ನು ಸರ್ಕಾರದಿಂದ ಚುನಾವಣಾ ಗುರುತಿನ ಚೀಟಿ ಪಡೆದ ಎಲ್ಲ ಜನರಿರುವ ಸ್ಥಳಗಳಿಗೆ ತೆರಳಿ ಮತದಾನ ಮಾಡುವುದಕ್ಕೆ ಅವಕಾಶ ನೀಡಲಾಗುತ್ತದೆ. ಹೀಗೆ, ಮತದಾನ ಮಾಡಿಸಿಕೊಳ್ಳಲು ತೆರಳಿದ್ದ ಚುನಾವಣಾ ಸಿಬ್ಬಂದಿ ಮಧ್ಯಾಹ್ನದವರೆಗೆ ಕಾದರೂ ಒಬ್ಬರೂ ಬಂದು ಮತ ಹಾಕಿಲ್ಲ. ಹೀಗಾಗಿ, ಸೀದಾ ಕಾಡಂಚಿನ ಗ್ರಾಮದೊಳಗೆ ತೆರಳಿದ ಚುನಾವಣಾ ಸಿಬ್ಬಂದಿ ಒಂದೆರಡು ಗಂಟೆ ಕೈಗೆ ಸಿಕ್ಕವರಿಗೆ ಮತದಾನದ ಜಾಗೃತಿ ಮೂಡಿಸಿ ಗ್ರಾಮದ 85 ಜನರ ಪೈಕಿ ಕೇವಲ 2 ಜನರಿಂದ (ಇಬ್ಬರಿಂದ) ಮಾತ್ರ ಮತದಾನ ಮಾಡಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಐದೂ ಗ್ರಾಮಗಳ ಗ್ರಾಮಸ್ಥರು ಮತದಾನ ಕೇಂದ್ರದತ್ತ ಆಗಮಿಸಿ ಚುನಾವಣಾ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಗ್ರಾಮಕ್ಕೆ ಕನಿಷ್ಠ ಮೂಲಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಮರೀಚಿಕೆಯಾಗಿದೆ. ಈಗಾಗಲೇ ಮತದಾನ ಬಹಿಷ್ಕರಿಸುವುದಾಗಿ ಘೋಷಣೆ ಮಾಡಿದ್ದೆವು. ಆದರೂ, ಯಾವೊಂದು ಭರವಸೆ ಸಿಗದೇ ಇರುವ ಹಿನ್ನೆಲೆಯಲ್ಲಿ ಮತದಾನವನ್ನು ಬಹಿಷ್ಕಾರ ಮಾಡುತ್ತಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಗ್ರಾಮಸ್ಥರನ್ನು ತಡೆದು ಮತದಾನ ಕೇಂದ್ರದೊಳಗೆ ಹೋಗುವುದನ್ನು ತಡೆದಿದ್ದಾರೆ. 

ಕರ್ನಾಟಕ 2024 Election News ಸ್ಟ್ರೆಚರ್‌ನಲ್ಲಿ ಮತಗಟ್ಟೆಗೆ ಬಂದು ವೋಟ್‌ ಮಾಡಿದ ಬೆಂಗಳೂರಿನ ವೃದ್ಧೆ!

ಈ ವೇಳೆ ಆಕ್ರೋಶಗೊಂಡ ಗ್ರಾಮಸ್ಥರು ಇವಿಎಂ, ಮೇಜು ಕುರ್ಚಿ ಮತಗಟ್ಟೆ ಸಾಮಗ್ರಿಗಳನ್ನು ಧ್ವಂಸ ಮಾಡಿದ್ದಾರೆ. ಇದನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರು ಮತ್ತಷ್ಟು ಆಕ್ರೋಶಗೊಂಡಿದ್ದು, ಭದ್ರತೆಗಾಗಿ ಬಂದಿದ್ದ ಚುನಾವಣಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ. ಸಾರ್ವಜನಿಕರು ಸೇರಿ ಅಧಿಕಾರಿಗಳಿಗೂ ಗಾಯಗಳಾಗಿವೆ. 

click me!