ಭಾರತದಲ್ಲಿ ಪುರುಷರ ಮದುವೆ ವಯಸ್ಸು 18ಕ್ಕೆ ಇಳಿಕೆ!?

Published : Sep 01, 2018, 12:50 PM ISTUpdated : Sep 09, 2018, 08:45 PM IST
ಭಾರತದಲ್ಲಿ ಪುರುಷರ ಮದುವೆ ವಯಸ್ಸು 18ಕ್ಕೆ  ಇಳಿಕೆ!?

ಸಾರಾಂಶ

ಎಲ್ಲ ಕಡೆ ಮಹಿಳೆಯ ತಾರತಮ್ಯದ ವಿಚಾರವೇ ಕೇಳಿ ಬರುತ್ತಿದ್ದರೆ ಇಲ್ಲೊಂದು ಕಡೆ ಪುರುಷ ತಾರತಮ್ಯದ ಮಾತು ಎದ್ದಿದೆ. ಪುರುಷರ ಮದುವೆ ವಯಸ್ಸನ್ನು 21 ರಿಂದ 18ಕ್ಕೆ ಇಳಿಕೆ ಮಾಡಬೇಕು ಎಂಬ ಶಿಫಾರಸು ಕೇಳಿಬಂದಿದೆ.

ನವದೆಹಲಿ[ಸೆ.1]  ಕಾನೂನು ವಿಚಾರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ 21ನೇ ಕಾನೂನು ಆಯೋಗದ ಅವಧಿ ಶುಕ್ರವಾರ ಪೂರ್ಣಗೊಂಡಿದೆ. ಅತ್ಯಂತ ವಿವಾದಾತ್ಮಕ ವಿಷಯವಾಗಿರುವ ಏಕರೂಪ ನಾಗರಿಕ ಸಂಹಿತೆ ಕುರಿತಂತೆ ಆಯೋಗ ಪರಿಪೂರ್ಣ ವರದಿಯನ್ನು ನೀಡುವ ಬದಲಿಗೆ ನಾಗರಿಕ ಸಂಹಿತೆ ಹಾಗೂ ಕೌಟುಂಬಿಕ ಕಾನೂನುಗಳ ಕುರಿತಂತೆ ಸಲಹಾ ಪತ್ರವೊಂದನ್ನು ಬಿಡುಗಡೆ ಮಾಡಿದೆ. ಏಕರೂಪ ನಾಗರಿಕ ಸಂಹಿತೆ ಕುರಿತು ಸಮಗ್ರ ವರದಿ ನೀಡಲು ತನಗೆ ಸಮಯವಿರಲಿಲ್ಲ ಎಂದಿರುವ ನಿವೃತ್ತ ನ್ಯಾಬಿ.ಎಸ್‌. ಚೌಹಾಣ್‌ ನೇತೃತ್ವದ ಆಯೋಗ, ಈ ಹಂತದಲ್ಲಿ ನಾಗರಿಕ ಸಂಹಿತೆ ಅಗತ್ಯವಿಲ್ಲ ಎಂದು ಶಿಫಾರಸು ಮಾಡಿದೆ.

ಇದೇ ವೇಳೆ, ವಿವಾಹವಾಗುವ ವಯಸ್ಸನ್ನು ಪುರುಷ ಹಾಗೂ ಮಹಿಳೆ ಇಬ್ಬರಿಗೂ ಸಮಾನವಾಗಿ 18 ಎಂದು ನಿಗದಿಗೊಳಿಸಬೇಕು. ಪತ್ನಿಗೆ 18 ವರ್ಷ ಹಾಗೂ ಪತಿಗೆ 21 ವರ್ಷ ಆಗಿರಬೇಕು ಎಂಬುದು ತಾರತಮ್ಯದಿಂದ ಕೂಡಿದೆ ಎಂದು ಹೇಳಿದೆ.

ಪುರುಷ- ಮಹಿಳೆ ನಡುವಣ ‘ಲಿವ್‌ ಇನ್‌’ ರೀತಿಯ ಅಲ್ಪಾವಧಿ ಸಂಬಂಧದಿಂದ ಜನಿಸುವ ಅಕ್ರಮ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡುವ ಸಂಬಂಧ ಕಾನೂನು ರೂಪಿಸುವ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದೆ.

ತ್ರಿವಳಿ ತಲಾಖ್‌ ನಿಷೇಧಿಸಲು ಪ್ರತ್ಯೇಕ ಕಾನೂನು ಬೇಕಾಗಿಲ್ಲ. ಏಕಪಕ್ಷೀಯವಾಗಿ ವಿಚ್ಛೇದನ ನೀಡುವವರಿಗೆ ಗೃಹ ಹಿಂಸೆ ಕಾನೂನು ಮತ್ತಿತರ ಶಾಸನಗಳ ಮೂಲಕ ಶಿಕ್ಷೆ ವಿಧಿಸಬಹುದು ಎಂದು ಶಿಫಾರಸು ಮಾಡಿದೆ.

ಬಹುಪತ್ನಿಯರನ್ನು ಹೊಂದಲು ಇಸ್ಲಾಂನ ಬಹುಪತ್ನಿತ್ವ ಅವಕಾಶ ನೀಡುತ್ತದೆ. ಇದು ತಾರತಮ್ಯದಿಂದ ಕೂಡಿದೆ. ಏಕೆಂದರೆ, ಮುಸ್ಲಿಮರಿಗೆ ಮಾತ್ರವೇ ಇದರಡಿ ಅವಕಾಶವಿದೆ. ಇಸ್ಲಾಂನಲ್ಲಿ ಬಹುಪತ್ನಿತ್ವ ಇದ್ದರೂ, ಭಾರತೀಯ ಮುಸ್ಲಿಮರು ಅದನ್ನು ಅಪರೂಪಕ್ಕೆ ಬಳಸುತ್ತಾರೆ. ಆದರೆ ಮತ್ತೊಂದು ವಿವಾಹವನ್ನು ಸಕ್ರಮಗೊಳಿಸುವ ಉದ್ದೇಶದಿಂದ ಬೇರೆ ಧರ್ಮದವರು ಇಸ್ಲಾಂಗೆ ಮತಾಂತರಗೊಳ್ಳುತ್ತಿದ್ದಾರೆ. ಇದೊಂದು ಸಾಮಾಜಿಕ ಪಿಡುಗು ಎಂದು ಹೇಳಿದೆ.

ಕುಟುಂಬಕ್ಕೆ ಸಂಬಂಧಿಸಿದ ಎಲ್ಲ ವೈಯಕ್ತಿಕ ಕಾನೂನುಗಳನ್ನು ಎಷ್ಟುಸಾಧ್ಯವೋ ಅಷ್ಟುಸಂಹಿತೆ ಮಾಡಬೇಕು. ಈ ಸಂಹಿತೆ ರೂಪದ ಕಾನೂನಿನಲ್ಲಿ ದೋಷಗಳು ನುಸುಳಿದ್ದರೆ, ಅದನ್ನು ತಿದ್ದುಪಡಿ ಮೂಲಕ ಸರಿಪಡಿಸಬಹುದು ಎಂದು ಹೇಳಿರುವ ಆಯೋಗ, ವೈವಿಧ್ಯತೆಯನ್ನು ಉಳಿಸಿ, ಮಹಿಳೆಯರನ್ನು ರಕ್ಷಿಸುವಂತೆ ಸಲಹೆ ಮಾಡಿದೆ.

ಏಕರೂಪ ನಾಗರಿಕ ಸಂಹಿತೆ ವರದಿ ಇಲ್ಲ: ಏಕರೂಪ ನಾಗರಿಕ ಸಂಹಿತೆ ಕುರಿತಂತೆ ಪರಿಶೀಲನೆ ನಡೆಸಲು 2016ರ ಜೂ.17ರಂದು ಕಾನೂನು ಸಚಿವಾಲಯ ಕಾನೂನು ಆಯೋಗಕ್ಕೆ ಸೂಚನೆ ಕೊಟ್ಟಿತ್ತು. ಆದರೆ ಏಕರೂಪ ನಾಗರಿಕ ಸಂಹಿತೆ ವಿಶಾಲವಾದ ವಿಚಾರ. ಅದರ ಸಂಭಾವ್ಯ ಪರಿಣಾಮಗಳ ಪರೀಕ್ಷೆ ಭಾರತದಲ್ಲಿ ನಡೆದಿಲ್ಲ. ಹೀಗಾಗಿ ಎರಡು ವರ್ಷಗಳಲ್ಲಿ ನಡೆದ ಸಮಾಲೋಚನೆ ಹಾಗೂ ವಿವರವಾದ ಸಂಶೋಧನೆ ಬಳಿಕ ಕೌಟುಂಬಿಕ ಕಾನೂನಿನ ಕುರಿತಂತೆ ಸಲಹಾ ಪತ್ರ ನೀಡುತ್ತಿರುವುದಾಗಿ ಆಯೋಗ ವರದಿಯಲ್ಲಿ ತಿಳಿಸಿದೆ.

ಹೀಗಾಗಿ ಈ ಹಿಂದೆ ವ್ಯಾಪಕ ಚರ್ಚೆಯಾಗಿದ್ದ ಏಕರೂಪ ನಾಗರಿಕ ಸಂಹಿತೆ ವಿಚಾರವನ್ನು ಮುಂದೆ ರಚನೆಯಾಗಲಿರುವ 22ನೇ ಕಾನೂನು ಆಯೋಗ ಪರಿಶೀಲಿಸಬೇಕಾಗುತ್ತದೆ.

ಇನ್ನಿತರ ಪ್ರಮುಖ ಸಲಹೆಗಳು

- ಮದುವೆ ಕನಿಷ್ಠ ವಯೋಮಿತಿ ಪುರುಷ, ಮಹಿಳೆ ಇಬ್ಬರಿಗೂ 18 ಇರಲಿ

- ಲಿವ್‌ ಇನ್‌ ಸಂಬಂಧದಲ್ಲಿ ಹುಟ್ಟುವ ಮಕ್ಕಳಿಗೂ ಆಸ್ತಿಯಲ್ಲಿ ಪಾಲು ಕೊಡಿ

- ಏಕರೂಪ ನಾಗರಿಕ ಸಂಹಿತೆ ಅಗತ್ಯ ಇಲ್ಲ

- ಇದರ ಬದಲು ಈಗಿರುವ ಕಾನೂನುಗಳಿಗೆ ಬಲ ತುಂಬುವುದು ಅಗತ್ಯ

- ತ್ರಿವಳಿ ತಲಾಖ್‌ ನಿಷೇಧಿಸಲು ಪ್ರತ್ಯೇಕ ವಿಶೇಷ ಕಾನೂನು ಬೇಕಾಗಿಲ್ಲ

- ಸಂಹಿತೆ ಕುರಿತ ಪರಿಶೀಲನೆ ಮುಂದಿನ ಆಯೋಗದ ವಿವೇಚನೆಗೆ

- ಏಕಪಕ್ಷೀಯವಾಗಿ ವಿಚ್ಛೇದನ ನೀಡುವವರಿಗೆ ಗೃಹ ಹಿಂಸೆ ಕಾನೂನು ಮತ್ತಿತರ ಶಾಸನಗಳ ಮೂಲಕ ಶಿಕ್ಷೆ ವಿಧಿಸಬಹುದು

- ಬಹುಪತ್ನಿತ್ವದ ಬಗ್ಗೆಯೂ ಅಸಮಾಧಾನ

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!