ವಕೀಲರ ವಿರುದ್ಧ ಸಿಡಿದೆದ್ದ ದಿಲ್ಲಿ ಪೊಲೀಸರು; ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ

By Kannadaprabha NewsFirst Published Nov 6, 2019, 10:02 AM IST
Highlights

ದೆಹಲಿಯಲ್ಲಿ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ಮಾಡಿದ ಕಾನೂನು ರಕ್ಷಕರು | ಹಲ್ಲೆಕೋರ ವಕೀಲರ ಗುಂಪಿನ ವಿರುದ್ಧ ಕ್ರಮಕ್ಕೆ ಆಗ್ರಹ | ಎಲ್ಲ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕ ನಂತರ 11 ತಾಸಿನ ಪ್ರತಿಭಟನೆ ವಾಪಸ್‌ | ಪ್ರತಿಭಟನೆಗೆ ಕುಟುಂಬದ ಸದಸ್ಯರೂ ಸಾಥ್‌

ನವದೆಹಲಿ (ನ. 06): ವಕೀಲರ ಗುಂಪುಗಳು ಮಾಡಿದ ಹಲ್ಲೆಯಿಂದ ಸಿಡಿದೆದ್ದಿರುವ ದಿಲ್ಲಿ ಪೊಲೀಸರು ಮಂಗಳವಾರ ಕಂಡು ಕೇಳರಿಯದ ಪ್ರತಿಭಟನೆ ನಡೆಸಿದರು. ಕಾನೂನು-ಸುವ್ಯವಸ್ಥೆ ರಕ್ಷಿಸಬೇಕಾದ ಪೊಲೀಸರು ಕರ್ತವ್ಯಕ್ಕೆ ಹಾಜರಾಗದೇ ಈ ರೀತಿ ಮುಷ್ಕರ ನಡೆಸಿದ್ದು, ದೇಶದಲ್ಲೇ ಅಪರೂಪದ ಘಟನೆ. ಆದರೆ ಬೇಡಿಕೆ ಈಡೇರಿಸುವ ಭರವಸೆಯು ಉನ್ನತ ಪೊಲೀಸ್‌ ಅಧಿಕಾರಿಗಳಿಂದ ಬಂದ ನಂತರ 11 ತಾಸಿನ ಪ್ರತಿಭಟನೆಯನ್ನು ಧರಣಿ ನಿರತರು ಮಂಗಳವಾರ ರಾತ್ರಿ ಹಿಂಪಡೆದರು.

ಕೇಂದ್ರ ಗೃಹ ಸಚಿವಾಲಯದ ಅಧೀನಕ್ಕೆ ಒಳಪಡುವ 80 ಸಾವಿರ ಪೊಲೀಸರನ್ನು ಹೊಂದಿರುವ ದಿಲ್ಲಿ ಪೊಲೀಸ್‌ ಪಡೆಯ ಸಾವಿರಾರು ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಪೊಲೀಸ್‌ ಮುಖ್ಯ ಕಚೇರಿ ಹಾಗೂ ಇಂಡಿಯಾ ಗೇಟ್‌ ಬಳಿ ಇಡೀ ದಿನ ಪ್ರತಿಭಟನೆ ಮಾಡಿದರು.

ಮಾಲಿನ್ಯದಿಂದ ದಿಲ್ಲಿ ಮತ್ತಷ್ಟು ಚೇತರಿಕೆ; ಮಳೆ ಬಂದರೆ ಸಹಜ ಸ್ಥಿತಿಗೆ

‘ಹಲ್ಲೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ನಿಮ್ಮ ಎಲ್ಲ ಅಹವಾಲು ಆಲಿಸಲಾಗುವುದು. ಮುಷ್ಕರದಿಂದ ಹಿಂದೆ ಸರಿಯಿರಿ. ನಿಮ್ಮ ಮೇಲೆ ಹಲ್ಲೆ ಮಾಡಿದ ವಕೀಲರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್‌ ಆಯುಕ್ತರ ಅಮೂಲ್ಯ ಪಟ್ನಾಯಕ್‌ ಹಾಗೂ ಉಪ ಆಯುಕ್ತರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಹೇಳಿದರು.

ಆದರೆ, ‘ನಮಗೆ ನ್ಯಾಯ ಬೇಕು’, ‘ಕಿರಣ್‌ ಬೇಡಿ ಸಿಂಹಿಣಿ. ನಮಗೆ ಕಿರಣ್‌ ಬೇಡಿ ಅವರಂಥ ಪೊಲೀಸ್‌ ಆಯುಕ್ತರು ಬೇಕು’ ಹಾಗೂ ‘ಗೋ ಬ್ಯಾಕ್‌’ ಎಂದು ಒಂದು ಹಂತದಲ್ಲಿ ಕೂಗಿದ ಪೊಲೀಸರು, ತಮ್ಮ ಎಲ್ಲ ಬೇಡಿಕೆ ಈಡೇರಿಸುವ ವರೆಗೆ ಮುಷ್ಕರದಿಂದ ಹಿಂದೆ ಸರಿಯಲು ನಿರಾಕರಿಸಿದರು. ಆದರೆ ಎಲ್ಲ ಬೇಡಿಕೆ ಈಡೇರಿಸುವ ಬಗ್ಗೆ ಉನ್ನತ ಪೊಲೀಸ್‌ ಅಧಿಕಾರಿಗಳಿಂದ ಬಂದ ಹಿನ್ನೆಲೆಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಪ್ರತಿಭಟನೆ ಹಿಂಪಡೆದರು.

ಇನ್ನೊಂದೆಡೆ ‘ಈ ರೀತಿಯ ಘಟನೆ ವಕೀಲರ ಗೌರವ ತಗ್ಗಿಸಿದೆ. ಹಲ್ಲೆಕೋರ ವಕೀಲರನ್ನು ಗುರುತಿಸಬೇಕು’ ಎಂದು ವಿವಿಧ ವಕೀಲರ ಮಂಡಳಿಗೆ ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಮನವಿ ಮಾಡಿದೆ.

ಪೊಲೀಸರು, ಕುಟುಂಬಸ್ಥರ ಆಕ್ರೋಶ:

‘ಪೊಲೀಸರು ನಾಗರಿಕರ ರಕ್ಷಕರು. ಆದರೆ ದಿಲ್ಲಿಯಲ್ಲಿ ಪೊಲೀಸರೇ ಸುರಕ್ಷಿತವಾಗಿಲ್ಲ. ಅವರನ್ನು ಹೊಡೆಯಲಾಗುತ್ತಿದೆ. ನಮಗೆ ಯಾವುದೇ ಹಕ್ಕೇ ಇಲ್ಲವೇ? ನಮಗೇ ಸುರಕ್ಷತೆ ಇಲ್ಲವೇ?’ ಎಂದು ಪ್ರತಿಭಟನಾನಿರತ ಪೊಲೀಸರು ಹಾಗೂ ಅವರ ಕುಟುಂಬಸ್ಥರು ಪ್ರಶ್ನಿಸಿದರು. ‘ಖಾಕಿ ಗೌರವ ರಕ್ಷಣೆಯಾಗಬೇಕು. ಆ ಬಳಿಕವೇ ನಾವು ಕರ್ತವ್ಯಕ್ಕೆ ಹೋಗುತ್ತೇವೆ. ನಾವೇನು ಪಂಚಿಂಗ್‌ ಬ್ಯಾಗ್‌ಗಳಾ? ನಾವೂ ಸಮವಸ್ತ್ರಧಾರಿ ಮನುಷ್ಯರು. ರಕ್ಷಕರಿಗೆ ರಕ್ಷಣೆ ಬೇಕು’ ಎಂದು ಪೊಲೀಸರು ಹೇಳಿದರು.

ಟಿಪ್ಪು ಜಯಂತಿ ರದ್ದುಗೊಳಿಸಲು ಕಾರಣ ಕೇಳಿದ ಹೈ ಕೋರ್ಟ್

ಈ ನಡುವೆ, ‘ಗಾಯಾಳು ಪೊಲೀಸರನ್ನು ಆಸ್ಪತ್ರೆಯಲ್ಲಿ ವಿಚಾರಿಸಲು ಯಾವ ಹಿರಿಯ ಪೊಲೀಸ್‌ ಅಧಿಕಾರಿಯೂ ಬರಲಿಲ್ಲ. ಇದು ನಮ್ಮ ನೈತಿಕ ಸ್ಥೈರ‍್ಯ ಕುಸಿಯುವಂತೆ ಮಾಡಿದೆ’ ಎಂದು ಅವರು ಬೇಸರಿಸಿದರು.

ಈ ಬಳಿಕ ‘ಪ್ರತಿಭಟನೆ ನಿಲ್ಲಿಸಿ’ ಎಂಬ ಆಯುಕ್ತರು ಹಾಗೂ ಉಪ ಆಯುಕ್ತರು ಮಾಡಿದ ಕೋರಿಕೆಯನ್ನು ಅವರು ತಿರಸ್ಕರಿಸಿದರು. ಆದರೆ ಎಲ್ಲ ಬೇಡಿಕೆ ಈಡೇರಿಸುವ ಭರವಸೆ ಬಂದ ನಂತರ ನಿಲುವು ಬದಲಿಸಿದ ಮುಷ್ಕರ ನಿರತರು, ಪ್ರತಿಭಟನೆ ವಾಪಸ್‌ ಪಡೆದರು.

ಶಾಗೆ ವರದಿ ಸಲ್ಲಿಕೆ:

ಅಮಿತ್‌ ಶಾ ಅವರ ಕೇಂದ್ರ ಗೃಹ ಸಚಿವಾಲಯಕ್ಕೆ ದಿಲ್ಲಿ ಪೊಲೀಸರು ವಕೀಲರು ಹಲ್ಲೆ ಮಾಡಿದ ಬಗ್ಗೆ ವರದಿ ಸಲ್ಲಿಸಿದ್ದಾರೆ. ಆ ಬಳಿಕ ಶಾ ಅವರು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ.

ಪೊಲೀಸರ ಬೇಡಿಕೆ ಏನಾಗಿತ್ತು?

- ಹಲ್ಲೆಕೋರ ವಕೀಲರ ಲೈಸೆನ್ಸ್‌ ರದ್ದು ಮಾಡಬೇಕು

- ಆರೋಪಿ ನ್ಯಾಯವಾದಿಗಳ ಮೇಲೆ ಕೇಸು ದಾಖಲಿಸಬೇಕು.

- ವಕೀಲರ ದೂರಿನ ಮೇರೆಗೆ ಪೊಲೀಸರ ಮೇಲೆ ದಾಖಲಾದ ಎಫ್‌ಐಆರ್‌ ರದ್ದು ಮಾಡಬೇಕು.

- ಗಾಯಾಳು ಪೊಲೀಸರಿಗೆ ಉತ್ತಮ ಚಿಕಿತ್ಸೆಯನ್ನು ಪೊಲೀಸ್‌ ಸಂಘ ಕೊಡಿಸಬೇಕು.

- ಘಟನೆ ನಂತರ ವರ್ಗಕ್ಕೆ ಒಳಗಾದ ಪೊಲೀಸರ ವರ್ಗಾವಣೆ ರದ್ದು ಮಾಡಬೇಕು.

- ಕೆಲವು ಪೊಲೀಸರನ್ನು ಅಮಾನತು ಮಾಡಲಾಗಿದ್ದು, ಇದು ರದ್ದಾಗಬೇಕು.

- ಹಲ್ಲೆಗೆ ಒಳಗಾದ ಪೊಲೀಸರಿಗೆ ಪರಿಹಾರ ನೀಡಬೇಕು.

ಪೊಲೀಸ್‌ ಆಯುಕ್ತರು ನೀಡಿದ ಭರವಸೆ ಏನು?

ಧರಣಿನಿರತ ಪೊಲೀಸರ ಎಲ್ಲ ಬೇಡಿಕೆಗಳನನ್ನು ಈಡೇರಿಸಲಾಗುವುದು. ಹಲ್ಲೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ನಿಮ್ಮ ಎಲ್ಲ ಅಹವಾಲು ಆಲಿಸಲಾಗುವುದು. ನಿಮ್ಮ ಮೇಲೆ ಹಲ್ಲೆ ಮಾಡಿದ ವಕೀಲರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ.

ಆಗಿದ್ದೇನು?

ಪಾರ್ಕಿಂಗ್‌ ವಿಷಯಕ್ಕೆ ಸಂಬಂಧಿಸಿದಂತೆ ದಿಲ್ಲಿಯ ತೀಸ್‌ ಹಜಾರಿ ಕೋರ್ಟ್‌ ಬಳಿ ವಕೀಲರು ಹಾಗೂ ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಆಗ ಈ ಕೋರ್ಟ್‌ ಆವರಣ ಹಾಗೂ ಸಾಕೇತ್‌ ನ್ಯಾಯಾಲಯದ ಆವರಣದಲ್ಲಿ ವಕೀಲರು ಎನ್ನಲಾದ ಕೆಲವರು ಪೊಲೀಸರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದ ವಿಡಿಯೋಗಳು ವೈರಲ್‌ ಆಗಿದ್ದವು.

click me!