ಕಾಗ್ನಿಜೆಂಟ್ ಬಳಿಕ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಮತ್ತೊಂದು ಶಾಕ್! | ಜಾಗತಿಕ ಐಟಿ ಕಂಪನಿ ಇನ್ಫೋಸಿಸ್ ಕೂಡ ಸುಮಾರು 10 ಸಾವಿರ ಸಿಬ್ಬಂದಿಗೆ ಗೇಟ್ ಪಾಸ್ ನೀಡುವ ಚಿಂತನೆಯಲ್ಲಿದೆ
ಮುಂಬೈ (ನ. 06): ದೇಶವನ್ನು ಆರ್ಥಿಕ ಹಿಂಜರಿತ ಕಾಡುತ್ತಿದೆ ಎಂಬ ವರದಿಗಳ ಸಂದರ್ಭದಲ್ಲೇ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ವೆಚ್ಚ ಕಡಿತ ಕ್ರಮಗಳು ಪ್ರಾರಂಭವಾದಂತಿವೆ. 10 ರಿಂದ 12 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದಾಗಿ ಕಾಗ್ನಿಜೆಂಟ್ ಕಂಪನಿ ಘೋಷಿಸಿದ ಬೆನ್ನಲ್ಲೇ, ಬೆಂಗಳೂರು ಮೂಲದ ಜಾಗತಿಕ ಐಟಿ ಕಂಪನಿ ಇನ್ಫೋಸಿಸ್ ಕೂಡ ಸುಮಾರು 10 ಸಾವಿರ ಸಿಬ್ಬಂದಿಗೆ ಗೇಟ್ ಪಾಸ್ ನೀಡುವ ಚಿಂತನೆಯಲ್ಲಿದೆ.
ಮಧ್ಯಮ ವರ್ಗ ಹಾಗೂ ಹಿರಿಯ ಶ್ರೇಣಿಯಲ್ಲಿನ ಸಿಬ್ಬಂದಿ ಇವರಾಗಿದ್ದಾರೆ. ಉದ್ಯೋಗ ಶ್ರೇಣಿ 6 ರಲ್ಲಿ (ಅಂದರೆ- ಹಿರಿಯರು) 2,200 ಉದ್ಯೋಗಿಗಳಿದ್ದು ಆ ಪೈಕಿ ಶೇ.10 ರಷ್ಟು ಮಂದಿಯನ್ನು ಮನೆಗೆ ಕಳುಹಿಸಲು ಕಂಪನಿ ಮುಂದಾಗಿದೆ. ಉದ್ಯೋಗ ಶ್ರೇಣಿ 3 ಹಾಗೂ ಅದಕ್ಕಿಂತ ಕೆಳಗೆ ಮತ್ತು ಉದ್ಯೋಗ ಶ್ರೇಣಿ 4 ಹಾಗೂ ೫ (ಮಧ್ಯಮ ವರ್ಗ)ರಲ್ಲಿ 2 ಲಕ್ಷ ನೌಕರರು ಇದ್ದಾರೆ. ಆ ಪೈಕಿ ಶೇ.2 ರಿಂದ ಶೇ.5 ರಷ್ಟು ಉದ್ಯೋಗಿಗಳಿಗೆ ಕೊಕ್ ನೀಡಲು ಉದ್ದೇಶಿಸಿದೆ.
ಇ- ಶಾಪಿಂಗ್ ಗೆ 'ವ್ಯಸನ' ಹಣೆಪಟ್ಟಿ?
ಹಿರಿಯ ಕಾರ್ಯನಿರ್ವಾಹಕ ಹುದ್ದೆಯಲ್ಲಿ 971 ಮಂದಿ ಇದ್ದಾರೆ. ಆ ಪೈಕಿ ಶೇ. 2 ರಿಂದ ಶೇ.5 ರಷ್ಟು ಅಧಿಕಾರಿಗಳನ್ನು ಕೈಬಿಡಲು ಕಂಪನಿ ಯೋಜಿಸಿದೆ. ಹೀಗಾಗಿ ಸಹಾಯಕ ಉಪಾಧ್ಯಕ್ಷ, ಉಪಾಧ್ಯಕ್ಷ, ಹಿರಿಯ ಉಪಾಧ್ಯಕ್ಷ ಹುದ್ದೆಯಲ್ಲಿರುವ 50 ಮಂದಿ ವಜಾಗೊಳ್ಳಲಿದ್ದಾರೆ. ಮಾನವಸಂಪನ್ಮೂಲ ವಿಭಾಗದ ಸಂಸ್ಥೆಗಳ ಪ್ರಕಾರ, ಸುಮಾರು 10 ಸಾವಿರ ಮಂದಿ ಕೆಲಸ ಕಳೆದುಕೊಳ್ಳಬಹುದು. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇನ್ಫೋಸಿಸ್, ನೌಕರರನ್ನು ಕೈಬಿಡುವುದು ಉದ್ದಿಮೆಗಳಲ್ಲಿ ಸಾಮಾನ್ಯ ವಿಧಾನ. ಇದನ್ನು ನೌಕರರ ಸಂಖ್ಯೆ ಕಡಿತಗೊಳಿಸುವ ಕ್ರಮ ಎಂದು ವ್ಯಾಖ್ಯಾನಿಸಬಾರದು ಎಂದು ತಿಳಿಸಿದೆ.
ಹೆಚ್ಚಿನ ಲಾಭ ಗಳಿಸಲು ಕಂಪನಿ ಅನೈತಿಕ ಲೆಕ್ಕ ತೋರಿಸುತ್ತಿದೆ ಎಂದು ಅನಾಮಧೇಯ ವ್ಯಕ್ತಿಗಳು ಆರೋಪ ಮಾಡಿದ್ದರು. ಇದಕ್ಕೆ ಯಾವುದೇ ಪುರಾವೆ ಲಭಿಸಿಲ್ಲ ಎಂದು ಇನ್ಫೋಸಿಸ್ ಸೋಮವಾರವಷ್ಟೇ ತಿಳಿಸಿತ್ತು. ಈ ವಿವಾದದ ಸಂದರ್ಭದಲ್ಲೇ ನೌಕರರನ್ನು ಮನೆಗೆ ಕಳುಹಿಸುವ ಕ್ರಮವನ್ನು ಕಂಪನಿ ಕೈಗೊಂಡಿರುವುದು ಗಮನಾರ್ಹ.
ನವೆಂಬರ್ 06ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;