ಪ್ರವಾಹದ ಬಳಿಕ ಇದೀಗ ಕೊಡಗಲ್ಲಿ ಮತ್ತೊಂದು ಭೀತಿ

By Web DeskFirst Published Aug 23, 2018, 7:26 AM IST
Highlights

ಕೊಡಗಿನಲ್ಲಿ ಸದ್ಯ ಪ್ರವಾಹ ಅಲ್ಪ ಪ್ರಮಾಣದಲ್ಲಿ ತಣ್ಣಗಾಗಿದೆ. ಆದರೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಇಲ್ಲಿನ ಜನರಲ್ಲಿ ಮತ್ತೊಂದು ರೀತಿಯ ಆತಂಕ ಮನೆ ಮಾಡಿದೆ. 

ಬೆಂಗಳೂರು:  ಕೊಡಗು ಜಿಲ್ಲೆಯಲ್ಲಿ ಉಂಟಾದ ತೀವ್ರ ನೆರೆಯಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಆತಂಕ ಶುರುವಾಗಿದೆ. ಹೀಗಾಗಿ ನೀರು ನಿಲುಗಡೆ ಪ್ರದೇಶಗಳಲ್ಲಿ ಸಾರ್ವಜನಿಕರು ಎಚ್ಚರವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಜತೆಗೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ನಿರ್ಧರಿಸಿದೆ.

ವಾಸ್ತವವಾಗಿ ಕೊಡಗು ಜಿಲ್ಲೆಯಲ್ಲಿ ಪ್ರವಾಹದ ಹೊರತಾಗಿಯೂ ಸಾಂಕ್ರಾಮಿಕ ರೋಗಗಳ ಹಾವಳಿ ತೀರಾ ಕಡಿಮೆ. ಗುಡ್ಡಗಾಡು ಪ್ರದೇಶವಾಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತದೆ. ಹೀಗಾಗಿ ಕೇರಳ ಮಾದರಿಯಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಕಾಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

ಆದರೆ, ಕಳೆದ ಎರಡು ತಿಂಗಳಿನಿಂದ ಇಲ್ಲಿನ ವಾತಾವರಣವು ಒಂದು ದಿನವೂ ಸಂಪೂರ್ಣ ಬಿಸಿಲು ಕಂಡಿಲ್ಲ. ಜತೆಗೆ ಪ್ರವಾಹದಿಂದಾಗಿ ಗುಡ್ಡ ಕುಸಿತ, ಮನೆಗಳು ಧ್ವಂಸವಾಗಿದ್ದು ಕೆಲವೆಡೆ ನೀರೂ ಸಹ ನಿಂತಿದೆ. ಹೀಗಾಗಿ ಅಂತಹ ಕಡೆಗಳಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಜತೆಗೆ ನಿರಾಶ್ರಿತರ ಕೇಂದ್ರಗಳಲ್ಲೂ ಒಬ್ಬರಿಂದ ಒಬ್ಬರಿಗೆ ಸಣ್ಣ-ಪುಟ್ಟಸಾಂಕ್ರಾಮಿಕ ಕಾಯಿಲೆಗಳು ಹರಡಬಹುದು. ಹೀಗಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕರಾದ ಡಾ.ಎಸ್‌.ಪುಷ್ಪರಾಜ್‌ ‘ಕನ್ನಡಪ್ರಭಕ್ಕೆ’ ತಿಳಿಸಿದ್ದಾರೆ.

ಮಾನಸಿಕ ಸ್ಥೈರ್ಯ ತುಂಬಲು ಕಾರ್ಯಾಗಾರ:

ಭಾರಿ ಪ್ರವಾಹದಿಂದಾಗಿ ಹನ್ನೆರಡು ಮಂದಿ ಮೃತಪಟ್ಟಿದ್ದಾರೆ. ಆದರೆ, ಯಾರೊಬ್ಬರೂ ಗಾಯಾಳು ಆಗಿರುವ ಬಗ್ಗೆ ವರದಿಯಾಗಿಲ್ಲ. ಸರ್ಕಾರಿ ವೈದ್ಯರ ಕ್ಯಾಂಪ್‌ಗೆ ಒಬ್ಬ ಗಾಯಾಳುವೂ ಚಿಕಿತ್ಸೆಗಾಗಿ ಆಗಮಿಸಿಲ್ಲ. ಆದರೆ, ಏಕಾಏಕಿ ಮನೆ, ಸಂಬಂಧಿಕರು ಹಾಗೂ ಆಸ್ತಿ ನಷ್ಟಉಂಟಾಗಿರುವುದರಿಂದ ಮಾನಸಿಕವಾಗಿ ಕುಗ್ಗಿದ್ದಾರೆ. ಹೀಗಾಗಿ ನಾಲ್ಕು ಜಿಲ್ಲೆಗಳಿಂದ ಜಿಲ್ಲಾ ಮಾನಸಿಕ ಆರೋಗ್ಯ ವೈದ್ಯರನ್ನು ಕೊಡಗಿಗೆ ರವಾನಿಸಲಾಗಿದೆ. ಇವರು ನಿರಾಶ್ರಿತರಿಗೆ ಸಾಮೂಹಿಕ ಕಾರ್ಯಾಗಾರ ನಡೆಸಿ ಬದುಕಿನ ಬಗ್ಗೆ ಆಶಾಭಾವನೆ ಹಾಗೂ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಸಂಬಂಧಿಕರನ್ನು ಕಳೆದುಕೊಂಡಿರುವವರಿಗೆ ಕೌನ್ಸೆಲಿಂಗ್‌ ನಡೆಸಲಾಗುತ್ತಿದೆ ಎಂದು ಡಾ.ಎಸ್‌. ಪುಷ್ಪರಾಜ್‌ ಮಾಹಿತಿ ನೀಡಿದರು.

ಕೆಲ ವೈದ್ಯರ ತಂಡ ವಾಪಸು:

ನೆರೆಯಿಂದಾಗಿ ಪರಿಹಾರ ಕಾರ್ಯಕ್ಕೆ 100 ಮಂದಿ ವೈದ್ಯರ ತಂಡವನ್ನು ಆರೋಗ್ಯ ಇಲಾಖೆಯಿಂದ ರವಾನಿಸಲಾಗಿತ್ತು. ಪ್ರತಿ ನಾಲ್ಕು ದಿನಗಳಿಗೆ ಒಂದು ತಂಡದಲ್ಲಿ ಶಿಫ್ಟ್‌ ಆಧಾರದ ಮೇಲೆ ಕಳುಹಿಸಲಾಗುತ್ತಿದೆ. ಅಲ್ಲಿ ಹೆಚ್ಚು ವೈದ್ಯರು ಬೀಡು ಬಿಟ್ಟಿರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಎಚ್ಚರವಹಿಸಲು ಹಾಗೂ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ತಂಡವನ್ನು ನೇಮಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಏನು ಕಾಯಿಲೆ ಬರಬಹುದು?

ಕೊಡಗು ಭಾಗದ ಜನ ಅಲ್ಲಿನ ಪರಿಸ್ಥಿತಿಗೆ ಒಗ್ಗಿಕೊಂಡಿರುವುದರಿಂದ ಅಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಹಾವಳಿ ಕಡಿಮೆ. ಆದರೂ, ನೆರೆ ಪರಿಸ್ಥಿತಿ, ಶುದ್ಧ ಕುಡಿಯುವ ನೀರಿನ ಅಲಭ್ಯತೆ ಹಾಗೂ ಬೇರೆ-ಬೇರೆ ಸ್ಥಳದಿಂದ ಬಂದಿರುವ ಆಹಾರ ಸೇವನೆಯಿಂದ ಕೆಲ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ಹೀಗಾಗಿ ವಿಷಮಶೀತ ಜ್ವರ, ಹೆಪಟೈಟಿಸ್‌,  ಕಾಲರಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಎಚ್ಚರ ವಹಿಸಬೇಕು.

ರೋಗ ತಡೆಗೆ ಹೀಗೆ ಮಾಡಿ

ಕುಡಿಯುವ ನೀರು ಹಾಗೂ ಆಹಾರ ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ತಾಜಾ ಆಹಾರವನ್ನಷ್ಟೇ ಸೇವಿಸಬೇಕು. ಊಟಕ್ಕೆ ಮುನ್ನ ಹಾಗೂ ಶೌಚಾಲಯ ಬಳಕೆ ಬಳಿಕ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛಗೊಳಿಸಬೇಕು. ತಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆದು ಬಳಸಬೇಕು. ಮನೆ ಮತ್ತು ಸುತ್ತಮುತ್ತಲಿನ ಪರಿಸರ ಶುಚಿಯಾಗಿಟ್ಟುಕೊಳ್ಳಬೇಕು. ಸಂಗ್ರಹವಾದ ನೀರು ಹಾಗೂ ಸೋರುವ ಕೊಳವೆಯ ನೀರು ಕುಡಿಯಬಾರದು. ನೆರೆಯಿಂದ ಮನೆ ಸುತ್ತಮುತ್ತ ಉಂಟಾಗಿರುವ ಕಸ ಹಾಗೂ ಚರಂಡಿ ಗಲೀಜನ್ನು ಕೂಡಲೇ ಸ್ವಚ್ಛಗೊಳಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಡಗು ಪ್ರದೇಶದ ಭೌಗೋಳಿಕ ಪರಿಸ್ಥಿತಿ ಆಧಾರದ ಮೇಲೆ ಅಲ್ಲಿ ಸಾಂಕ್ರಾಮಿಕ ರೋಗಗಳ ಸಾಧ್ಯತೆ ಕಡಿಮೆ. ಆದರೂ, ತೀವ್ರ ನೆರೆಯಿಂದಾಗಿ ರೋಗಗಳು ಹರಡುವ ಸಾಧ್ಯತೆಯನ್ನು ಸಂಪೂರ್ಣ ತಳ್ಳಿ ಹಾಕಲಾಗುವುದು. ಹೀಗಾಗಿ ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳಲು ತಂಡಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ.

- ಡಾ.ಎಸ್‌. ಪುಷ್ಪರಾಜ್‌, ಆರೋಗ್ಯ ಇಲಾಖೆ ನಿರ್ದೇಶಕರು

 

 

click me!