ಬರ ನಿರ್ವಹಣೆಗೆ ಸರ್ಕಾರ ಚುರುಕು : ಕೈಗೊಂಡ ಕ್ರಮಗಳೇನು?

By Web DeskFirst Published May 10, 2019, 7:45 AM IST
Highlights

ಕರ್ನಾಟಕದಲ್ಲಿ ಮಳೆಯ ಕೊರತೆಯಿಂದ ಹಲವು ಪ್ರದೇಶಗಳು ಬರ ಪರಿಸ್ಥಿತಿ ಎದುರಿಸುತ್ತಿದ್ದು, ನಿರ್ವಹಣಗೆ ಈಗಾಗಲೇ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. 

ಬೆಂಗಳೂರು :  ರಾಜ್ಯದಲ್ಲಿ ತಲೆದೋರಿರುವ ಬರಗಾಲ ಪರಿಸ್ಥಿತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಎದುರಿಸಲು ಉಪಚುನಾವಣೆ ನಡೆಯುತ್ತಿರುವ ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಲ್ಲಿ ವಾರದೊಳಗೆ ಪ್ರಗತಿ ಪರಿಶೀಲನೆ ಸಭೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಚಿವ ಸಂಪುಟ ಸಭೆಯಲ್ಲಿ ಸೂಚನೆ ನೀಡಲಾಗಿದೆ.

ಚುನಾವಣಾ ನೀತಿ ಸಂಹಿತೆ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಎರಡು ತಿಂಗಳ ಬಳಿಕ ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಶೇಷವಾಗಿ ಬರ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಗಂಭೀರವಾಗಿ ಚರ್ಚಿಸಲಾಯಿತು. ಕುಡಿಯುವ ನೀರು, ಜನತೆಗೆ ಉದ್ಯೋಗ ಖಾತ್ರಿ, ರಾಸುಗಳಿಗೆ ಲಭ್ಯವಾಗುತ್ತಿರುವ ಮೇವು ಸೇರಿದಂತೆ ಬರ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯ, ಎದುರಾಗಿರುವ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಬರ ಪರಿಹಾರಕ್ಕೆ ಈವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಮೇ 15ರಂದು ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಸರ್ಕಾರವು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುತ್ತಿದೆ. ಅಲ್ಲದೇ, ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಕೆಲವು ನ್ಯೂನತೆಗಳು ಇರುವ ಬಗ್ಗೆ ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ಬಗ್ಗೆ ತಕ್ಷಣ ಗಮನಹರಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

2 ದಿನದಲ್ಲಿ ನೀರು ಪೂರೈಕೆ:

ಸಚಿವ ಸಂಪುಟ ಸಭೆಯಲ್ಲಿ ಬರ ಪರಿಸ್ಥಿತಿ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಕುಡಿಯುವ ನೀರಿನ ಅಭಾವ ನೀಗಿಸಲು ಖಾಸಗಿ ಬೋರ್‌ವೆಲ್‌ ಬಾಡಿಗೆ ಪಡೆಯಲು ಮತ್ತು ಟ್ಯಾಂಕರ್‌ ಮೂಲಕ ನೀರು ಪೂರೈಸಲು ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಎರಡು ದಿನದಲ್ಲಿ ನೀರು ಪೂರೈಕೆ ಮಾಡಬೇಕು. ನೀರು ಪೂರೈಕೆಗೆ ಜಿಲ್ಲಾಧಿಕಾರಿ ಅನುಮತಿ ನೀಡಬೇಕು ಎಂಬ ನಿಯಮವನ್ನು ಸಡಿಲಗೊಳಿಸಿ ತಹಶೀಲ್ದಾರ್‌ಗೆ ಅಧಿಕಾರ ನೀಡಲಾಗಿದೆ. ಟ್ಯಾಂಕರ್‌ ಮೂಲಕ ತಹಶೀಲ್ದಾರ್‌ ಅವರೇ ನೀರು ಪೂರೈಸಲು ಅನುಮತಿ ನೀಡಬಹುದಾಗಿದೆ ಎಂದು ಹೇಳಿದರು.

ಪ್ರತಿ ತಾಲೂಕಿಗೆ 2 ಕೋಟಿ:  ಕಂದಾಯ ಇಲಾಖೆಯು ಕುಡಿಯುವ ನೀರಿಗಾಗಿ ಪ್ರತಿ ತಾಲೂಕಿಗೆ ಎರಡು ಕೋಟಿ ರು. ನಂತೆ 324 ಕೋಟಿ ರು. ಬಿಡುಗಡೆ ಮಾಡಿದೆ. ಈ ಮೊತ್ತವು ಜಿಲ್ಲಾಧಿಕಾರಿ ಖಾತೆಯಲ್ಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಈಗಾಗಲೇ 2600 ಕೋಟಿ ರು. ನೀಡಿದ್ದು, ಹೆಚ್ಚುವರಿಯಾಗಿ 201 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ 2800 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, 3600 ಕೋಟಿ ರು. ಕ್ರಿಯಾ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ 2,575 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಕಂಡು ಬಂದಿದೆ. 1,324 ಗ್ರಾಮಗಳಿಗೆ 2,177 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. 1,647 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು 1,251 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ತುರ್ತು ಕುಡಿಯುವ ನೀರಿಗಾಗಿ 727 ಕೋಟಿ ರು. ಹಣ ಇದೆ ಎಂದು ವಿವರಿಸಿದರು.

ಜಾನುವಾರುಗಳಿಗೆ ಮೇವು ಕಲ್ಪಿಸುವ ದೃಷ್ಟಿಯಿಂದ ರಾಜ್ಯದಲ್ಲಿ 150 ಮೇವು ಬ್ಯಾಂಕ್‌ ತೆರೆಯಲಾಗಿದೆ. ಪ್ರತಿ ಕೆ.ಜಿ.ಗೆ 2 ರು.ನಂತೆ ರೈತರಿಗೆ ವಿತರಣೆ ಮಾಡಲಾಗುತ್ತಿದೆ. 12 ಗೋ ಶಾಲೆಗಳನ್ನು ತೆರೆಯಲಾಗಿದ್ದು, 11,614 ಜಾನುವಾರುಗಳಿಗೆ ಇದರ ಅನುಕೂಲವಾಗಿದೆ. 16,080 ಮೇವಿನ ಕಿಟ್‌ಗಳನ್ನು ನೀಡಲಾಗಿದೆ. ಜಾನುವಾರುಗಳಿಗೆ ಮೇವು ವಿತರಿಸಲು 60 ಲಕ್ಷ ಟನ್‌ ಮೇವು ಉತ್ಪಾದನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಖಾತ್ರಿಯಡಿ ದಾಖಲೆಯ 10 ಕೋಟಿ ಉದ್ಯೋಗ ಸೃಷ್ಟಿ

ಉದ್ಯೋಗ ಖಾತ್ರಿ ಯೋಜನೆಯಡಿ ನಿಗದಿತ ಗುರಿಗಿಂತ ಹೆಚ್ಚು ಮಾನವ ದಿನಗಳನ್ನು ಸೃಜಿಸಲಾಗಿದ್ದು, ಇದರಿಂದ ಗ್ರಾಮೀಣ ಭಾಗದಲ್ಲಿ ಗುಳೆ ಹೋಗುವುದು ತಪ್ಪಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸಂಪುಟ ಸಭೆಗೆ ತಿಳಿಸಿದರು. ಮಾಚ್‌ರ್‍ ಅಂತ್ಯದವರೆಗೆ 8.5 ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿಯನ್ನು ಹೊಂದಲಾಗಿತ್ತು. ಆದರೆ, 10.47 ಕೋಟಿ ಮಾನವ ದಿನಗಳ ಉದ್ಯೋಗವನ್ನು ಸೃಜಿಸಲಾಗಿದೆ. 4600 ಕೋಟಿ ರು. ಮೌಲ್ಯದ ಕೆಲಸಗಳನ್ನು ಸೃಜಿಸಲಾಗಿದ್ದು, 21 ಲಕ್ಷ ಕುಟುಂಬಗಳಿಗೆ ಪ್ರಯೋಜನವಾಗಿದೆ. 2011ರಿಂದ ಈವರೆಗೆ ನಡೆದ ಗರಿಷ್ಠ ಪ್ರಮಾಣದ ಕೆಲಸ ಇದಾಗಿದೆ. ಮೇ ತಿಂಗಳಿನಲ್ಲಿಯೇ 74 ಲಕ್ಷ ಮಾನವ ದಿನಗಳ ಉದ್ಯೋಗ ಸೃಜಿಸಲಾಗಿದೆ ಎಂದರು

ಕೇಂದ್ರದ ವಿರುದ್ಧ ಸಂಪುಟ ಸಭೆ ಅತೃಪ್ತಿ

ಮುಂಗಾರು ಹಂಗಾಮಿನ ನಷ್ಟಪರಿಹಾರವಾಗಿ .949 ಕೋಟಿ ಕೊಡುತ್ತೇನೆ ಎಂದಿದ್ದ ಕೇಂದ್ರ ಕೇವಲ .430 ಕೋಟಿ ನೀಡಿದೆ. ಮಹಾರಾಷ್ಟ್ರಕ್ಕೆ ಬರೋಬ್ಬರಿ .4700 ಕೋಟಿ ಕೊಟ್ಟಿಡೆ. ಹಿಂಗಾರಿನಲ್ಲಿ .11384 ಕೋಟಿ ನಷ್ಟವಾಗಿದ್ದು, .2064 ಕೋಟಿ ನೆರವು ಕೋರಲಾಗಿತ್ತು. ಇದಕ್ಕೆ ಕೇಂದ್ರ ಪ್ರತಿಕ್ರಿಯೆ ನೀಡಿಲ್ಲ. ಅದೇ ರೀತಿ, ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರ .1697 ಕೋಟಿ ಬಾಕಿ ನೀಡಬೇಕಿದೆ. 3-4 ತಿಂಗಳಾದರೂ ಹಣ ಬಿಡುಗಡೆ ಮಾಡಿಲ್ಲ. ಕೂಲಿ ಕಾರ್ಮಿಕರಿಗೆ ಅನ್ಯಾಯವಾಗಬಾರದೆಂದು ರಾಜ್ಯ ಸರ್ಕಾರವೇ ಹಣ ಬಿಡುಗಡೆ ಮಾಡಿದೆ. ಈ ಎಲ್ಲದರ ಬಗ್ಗೆ ಸಂಪುಟ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

- ಕೃಷ್ಣ ಬೈರೇಗೌಡ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

click me!