ಜೈ ಶ್ರೀರಾಮ್ ಘೋಷಣೆ, ಟ್ರೋಲ್ ಮತ್ತು ಸಂಸದೆ ನುಸ್ರತ್ ಜಹಾನ್!

By Web Desk  |  First Published Jul 13, 2019, 8:33 PM IST

ಟಿಎಂಸಿಯಿಂದ ಆಯ್ಕೆಯಾದ ಸಂಸದೆ ನುಸ್ರತ್ ಜಹಾನ್ ಖಾಸಗಿ ವಾಹಿನಿಯೊಂದರ ಜತೆ ಮಾತನಾಡುತ್ತ ಅನೇಕ ವಿಚಾರಗಳನ್ನು ಹೇಳಿಕೊಂಡು ಹೋಗಿದ್ದಾರೆ. ಪಶ್ಚಿಮ ಬಂಗಾಳದ ರಾಜಕೀಯ ಸ್ಥಿತಿಗತಿ, ಜೈ ಶ್ರೀರಾಮ್ ಘೋಷಣೆ, ಜಾತ್ಯತೀತತೆ ಸೇರಿದಂತೆ  ಸದ್ಯದ ಟ್ರೆಂಡ್ ಗಳ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.


ಕೋಲ್ಕತ್ತಾ[ಜು. 13] 29 ವರ್ಷದ ನುಸ್ರತ್ ಸಂಸತ್ತಿಗೆ ಕಾಲಿರಿಸಿದಾಗಲೇ ಎಲ್ಲರ ಗಮನ ಸೆಳೆದಿದ್ದರು. ಅವರು ಪ್ರಮಾಣ ವಚನ ತೆಗೆದುಕೊಂಡ ರೀತಿಯೂ ದೊಡ್ಡ ಸುದ್ದಿಯಾಗಿತ್ತು.

ತೃಣಮೂಲ ಕಾಂಗ್ರೆಸ್ ನ ಕ್ಯಾಂಡಿಡೇಟ್ ಆಗಿ ಆಯ್ಕೆಯಾಗಿದ್ದು ಹೇಗೆ? ಚುನಾವಣೆಯಲ್ಲಿ ಜನರು ಅವರನ್ನು ಮೆಚ್ಚಿಕೊಂಡಿದ್ದು ಹೇಗೆ? ಸದ್ಯದ ಪಶ್ಚಿಮ ಬಂಗಾಳದ ಸ್ಥಿತಿ ಏನು? ಎಂಬುದರ ಬಗ್ಗೆಯೂ ಹೇಳಿದ್ದಾರೆ. ಟ್ರೋಲ್ ಗಳನ್ನು ಹೇಗೆ ಹ್ಯಾಂಡಲ್ ಮಾಡಬೇಕು, ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ವರ್ತನೆ ಕಂಡುಬಂದರೆ ಏನು ಮಾಡಬೇಕು ಎಂಬುದಕ್ಕೂ ಉತ್ತರ ನೀಡಿದ್ದಾರೆ.

Latest Videos

undefined

ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ಟಿಎಂಸಿಯ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರನ್ನು ಕಂಡಾಗ ಅಚ್ಚರಿಯಾಗಿತ್ತು. ಆದರೆ ಈಗ ನಾನೊಬ್ಬ ಪಕ್ಕಾ ರಾಜಕಾರಣಿಯಾಗಿ ನಿಂತಿದ್ದೇನೆ. ಮೊದಲನೇ ದಿನದಿಂದಲೂ ಸಂಸತ್ ನನಗೆ ಕುತೂಹಲಗಳ ಖಜಾನೆ. ಬೇರೆ ಜನರು ನನ್ನ ಮತ್ತು ನನ್ನ ಬಟ್ಟೆ ಬಗ್ಗೆ ಹೇಗೆ ಯೋಚನೆ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಆದರೆ ಸಂಸತ್ ನಲ್ಲಿನ ಎಲ್ಲರೂ ಪಕ್ಷಾತೀತವಾಗಿ ನನ್ನನ್ನು ಬರಮಾಡಿಕೊಂಡರು. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನನ್ನ ಮೇಲೆ ವಿಶೇಷ ನಂಬಿಕೆ ಇಟ್ಟಿದ್ದಾರೆ. ಪ್ರತಿದಿನ ಹೊಸ ವಿಚಾರಗಳನ್ನು ಕಲಿಯುತ್ತಿದ್ದೇನೆ ಎಲ್ಲ ರಾಜಕೀಯ ಘಟನಾವಳಿಗಳ ಅವಲೋಕನ ಮಾಡುತ್ತಿದ್ದೇನೆ.

ಜಾತ್ಯಾತೀತ ಭಾರತದ ಸ್ವರೂಪ ಬದಲಾಗಿದೆ: ನುಸ್ರತ್ ಬಂದ್ಮೇಲೆ ಏನೇನಾಗಿದೆ?

ಸಿನಿಮಾ ರಂಗದವರು ರಾಜಕಾರಣಕ್ಕೆ ಬರುತ್ತಿರುವುದು ಒಂದು ಟ್ರೆಂಡ್ ಎಂದು ಪರಿಗಣಿಸುವುದಾದರೆ  ಇದೊಂದು ಉತ್ತಮ ಬೆಳವಣಿಗೆ ಎಂದೇ ಭಾವಿಸುತ್ತೇನೆ. ಯಾಕೆ ಸಿನಿಮಾದವರು ರಾಜಕಾರಣಕ್ಕೆ ಬರಬಾರದೇ? ನಾನು ಕೇವಲ ನಗುಮೊಗದ ಸೆಲೆಬ್ರಿಟಿಯಾಗಿ ಉಳಿದುಕೊಂಡಿಲ್ಲ ಹಾಗೆ ಉಳಿದುಕೊಳ್ಳಲು ಬಯಸುವುದಿಲ್ಲ. ಬಶಿರತ್ ಜನರ, ಸಮುದಾಯದ ಕೆಲಸ ಮಾಡುವ ಕಾರಣಕ್ಕೆ ಬಂದು ನಿಂತಿದ್ದೇನೆ. ನಾನು ನಟಿಯಾಗಲು ತುಂಬಾ ಶ್ರಮವಹಿಸಿದ್ದೆ.. ಆದರೆ ರಾಜಕಾರಣಿಯಾಗಲು ಅಲ್ಲ.. ಆದರೆ ಇಂದು ಆ ಸ್ಥಾನ ನನಗೆ ಒದಗಿ ಬಂದಿದೆ.

ಟ್ರೋಲ್ ಬಗ್ಗೆ ನಾನು ಯಾವತ್ತೂ ಪ್ರತಿಕ್ರಿಯೆ ನೀಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ನನ್ನ ಫಾಲೋವರ್ ಗಳಾಗಿದ್ದವರು ನನ್ನ ವಿರುದ್ಧದ ಟ್ರೋಲ್ ಬಗ್ಗೆ ತಿರುಗೇಟು ನೀಡಿದ್ದಾರೆ. ನನ್ನ ಸಹೋದ್ಯೋಗಿಗಳು ಸಂಸತ್ ನಲ್ಲಿ ನನ್ನ ಜತೆಗಿದ್ದಾರೆ. ಬಟ್ಟೆ ಮತ್ತು ಆಹಾರದ ವಿಚಾರದಲ್ಲಿ ಮನುಷ್ಯ ತನ್ನದೇ ಆಯ್ಕೆಗಳನ್ನು ಹೊಂದಿರುತ್ತಾನೆ.. ಅಲ್ಲವೇ?

ತಮ್ಮ ಪ್ರೀತಿ-ಪ್ರೇಮದ ಕತೆ  ತೆರೆದಿರಿಸಿದ ನುಸ್ರತ್

ಪಶ್ಚಿಮ ಬಂಗಾಳದ ಸಿಎಂ ಅಲ್ಪಸಂಖ್ಯಾತರ ಹಕ್ಕು ರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅಲ್ಪಸಂಖ್ಯಾತರ ಪರವಾಗಿ ನಿಂತರೆ ಅದು ಹೇಗೆ ತಾರತಮ್ಯವಾಗುತ್ತದೆ? ನನಗೆ ಅರ್ಥವಾಗುತ್ತಿಲ್ಲ. ಟಿಎಂಸಿ ನನ್ನನ್ನು ಬಳಕೆ ಮಾಡುತ್ತಿದೆ ಎಂಬ ಮಾತನ್ನು ನೀವು ಹೇಳುತ್ತೀರಿ... ಇದೊಂದು ಜಾತ್ಯತೀತ ಪಕ್ಷ. ಎಲ್ಲ ಧರ್ಮಗಳಿಗೂ ಗೌರವ ನೀಡುತ್ತೇವೆ. ರಥಯಾತ್ರೆಯಲ್ಲಿ ಪಾಲ್ಗೊಳ್ಳಬೇಡ, ಸಿಂಧೂರ ಇಟ್ಟುಕೊಳ್ಳಬೇಡ ಎಂದು ನನಗೆ ಯಾರೂ ಹೇಳಿಲ್ಲ.  ನಾನು ಎಲ್ಲ ಹಬ್ಬಗಳಲ್ಲಿಯೂ ಭಾಗವಹಿಸುತ್ತೇನೆ. ಆದರೆ ಮಾಧ್ಯಮದವರೆ ಕಾರಣ ಹುಡುಕಿ ಸುದ್ದಿ ಮಾಡುತ್ತಿದ್ದಾರೆ.

ಬಶಿರತ್ ನಲ್ಲಿ ಕೋಮು ದಳ್ಳುರಿ ಇದೆ ಎಂದು ಪದೇ ಪದೇ ಹೇಳುತ್ತಿರುವುದು ಮಾಧ್ಯಮಗಳ ಸೃಷ್ಟಿ.. ಇಲ್ಲಿ ಪರಿಸ್ಥಿತಿ ಶಾಂತವಾಗಿಯೇ ಇದೆ. ಜನರು ಹೊರಗಿನಿಂದ ಎಲ್ಲವನ್ನು ನೋಡುತ್ತಿರುತ್ತಾರೆ. ನಾನು ಮದುವೆಗೆಂದು ಹೊರ ದೇಶಕ್ಕೆ ತೆರಳಿದ್ದರೂ ಇಲ್ಲಿಯ ಪರಿಸ್ಥಿತಿಗಳ ಬಗ್ಗೆ ಕ್ಷಣ ಕ್ಷಣದ ವಿವರ ಪಡೆದುಕೊಳ್ಳುತ್ತಿದ್ದೆ. ಯಾವ ಕಾರಣಕ್ಕೆ ಬಶಿರತ್ ಮೇಲೆ ಸೂಕ್ಷ್ಮ ಪ್ರದೇಶ ಟ್ಯಾಗ್ ಹಾಕುವ ಕೆಲಸ ಮಾಡುತ್ತಿದ್ದಾರೋ ನಾನರಿಯೆ! ಜನರು ರಾಜಕಾರಣ ಮತ್ತು ಧರ್ಮವನ್ನು ಬೆರೆಸುವುದನ್ನು ಮೊದಲು ನಿಲ್ಲಿಸಬೇಕು. 

ಹೊಸ ಲೋಕಸಭೆಯಲ್ಲಿ 29 ವರ್ಷದ ಬೆಂಗಾಲಿ ಬೆಡಗಿ, ಎಲ್ಲಿಯ ಸಂಸದೆ?

ನನ್ನ ಕ್ಷೇತ್ರದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ ವಿಚಾರವನ್ನು ಚರ್ಚೆಗೆ ತೆಗೆದುಕೊಂಡಿದ್ದೇನೆ. ಬಸ್ ಸೇವೆಯನ್ನು ಸುಧಾರಿಸಿದ ಹೆಮ್ಮೆ ಇದೆ. ಶುದ್ಧ ನೀರು ಪೂರೖಕೆಗೆ ಆದ್ಯತೆ ನೀಡಿದ್ದೇನೆ. ಕೆಲ ಗಂಭೀರ ವಿಚಾರಗಳನ್ನು ಕೇಂದ್ರದ ಗಮನಕ್ಕೂ ತಂದಿದ್ದೇನೆ. ನನ್ನ ಕ್ಷೇತ್ರದಲ್ಲಿ ಶೇ. 84 ರಷ್ಟು ಅಲ್ಪಸಂಖ್ಯಾತ ಸಮುದಾಯದವರಿದ್ದಾರೆ. ನಾನು ನನ್ನ ಕ್ಷೇತ್ರವೊಂದರ ಬಗ್ಗೆ ಮಾತನಾಡುತ್ತಿಲ್ಲ. ಮುಸ್ಲಿಮರ ಗುರಿಯಾಗಿರಿಸಿಕೊಂಡು ನಡೆಯುವ ಹಿಂಸಾಚಾರ ಕೊನೆಯಾಗಬೇಕು.. ಇದನ್ನು ಇಡೀ ದೇಶಕ್ಕೆ ಹೇಳುತ್ತಿದ್ದೇನೆ. ಕೇಂದ್ರ ಸರಕಾರ ಗಮನ ನೀಡಿ ಸ್ಪಷ್ಟ ಕಾನೂನು ರೂಪಣೆ ಮಾಡಬೇಕು.

ದೇವರ ಹೆಸರನ್ನು ಘೋಷಣೆ ಕೂಗುವುದರಲ್ಲಿ ಯಾವ ತಪ್ಪಿದೆ? ಆದರೆ ಬೇರೆಯವರನ್ನು ಕೆರಳಿಸುವ ರೀತಿ ಘೋಷಣೆ ಕೂಗಬಾರದು. ಆ ರೀತಿ ಮಾಡಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈದ್ ಸಂದರ್ಭದಲ್ಲಿ ಶುಭಾಶಯದ ರೀತಿ ಜೈ ಶ್ರೀರಾಮ್ ಎಂದೇ ಸಾವಿರಾರು ಸಂದೇಶಗಳು ನನಗೆ ಬಂದಿದ್ದವು. ನಾನು ಕೆಟ್ಟ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲಿಲ್ಲ. ಭಾರತ ಒಂದು ಜಾತ್ಯತೀತ ರಾಷ್ಟ್ರ ಎಂದು ಶಾಲಾ ದಿನಗಳಿಂದ ಓದಿಕೊಂಡು ಬಂದಿದ್ದೇವೆ. ಅದರಂತೆ ನಾವೆಲ್ಲರೂ ಬದುಕಬೇಕು ಅಲ್ಲವೇ?

click me!