ಕರಾವಳಿಯಲ್ಲಿ ಬಾವಿಗಳೀಗ ಖಾಲಿ ಖಾಲಿ! ಯಾಕೆ ಹೀಗೆ..?

By Web DeskFirst Published Oct 29, 2018, 9:59 AM IST
Highlights

ಭಾರೀ ಮಳೆ ಪ್ರವಾಹದಿಂದ ತತ್ತರಿಸಿದ್ದ ಕರಾವಳಿ ಜನರಿಗೆ ಇದೀಗ ಆತಂಕ ಎದುರಾಗಿದೆ. ಯಾಕೆಂದರೆ ಇಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ಬಾವಿಗಳು ಖಾಲಿ ಖಾಲಿಯಾಗಿವೆ. 

ಮಂಗಳೂರು : ಭಾರೀ ಮಳೆಯಿಂದ ಪ್ರವಾಹ ಕಂಡಿದ್ದ ಕರಾವಳಿ ಜಿಲ್ಲೆಯಲ್ಲೀಗ ಬೇಸಿಗೆ ಆರಂಭವಾಗುವ ಮೊದಲೇ ಬರದ ಛಾಯೆ ಆವರಿಸುವ ಲಕ್ಷಣ ಗೋಚರಿಸುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಾವಿಗಳಲ್ಲಿ ನೀರಿನ ಮಟ್ಟ ದಿಢೀರ್ ಕುಸಿತ ಕಂಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಈಗಾಗಲೇ ಪಶ್ಚಿಮ ಘಟ್ಟದ ಬಹುತೇಕ ಹಣ್ಣಿನ ಮರಗಳು ಅವಧಿಗೆ ಮೊದಲೇ ಹೂಬಿಟ್ಟು ಪ್ರಕೃತಿ ವೈಪರೀತ್ಯದ ಮುನ್ಸೂಚನೆ ನೀಡಿವೆ. ಇದೀಗ ಬಾವಿಗಳೂ ದಿಢೀರ್ ಬತ್ತುತ್ತಿದ್ದು, ಈ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕರಾವಳಿಯ ಜೀವವೈವಿಧ್ಯ ಅಪಾಯಕ್ಕೆ ಸಿಲುಕುವುದು ನಿಶ್ಚಿತ ಎನ್ನುತ್ತಾರೆ ಸ್ಥಳೀಯರು.

ಈಗಲೇ ಫೆಬ್ರವರಿಯ ನೀರಿನ ಮಟ್ಟ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಬಾವಿ ನೀರು ತಳ ಸೇರುತ್ತಿತ್ತು. ಆದರೆ ಈ ವರ್ಷ ಬಾವಿಗಳಲ್ಲಿ ಫೆಬ್ರವರಿಯಲ್ಲಿ ಇರಬೇಕಾಗಿದ್ದ ನೀರಿನ ಮಟ್ಟ ಈಗಲೇ ಕಂಡುಬಂದಿದೆ. ಮಳೆಯಾಗದೆ ಮೇಲ್ಮಟ್ಟದ ಭೂಮಿಯ ಪದರದಲ್ಲಿ ನೀರ ಪಸೆ ಕೂಡ ಆರಿರುವುದರಿಂದ ತೋಟ, ಗದ್ದೆಗಳಿಗೆ ಬಾವಿಯಿಂದಲೇ ನೀರು ಹಾಯಿಸಲಾಗುತ್ತಿದ್ದು, ಅಂತರ್ಜಲ ಇನ್ನಷ್ಟು ಕುಸಿಯುತ್ತಿದೆ. 

9.14 ಮೀ.ಗೆ ಕುಸಿತ: ಅಂತರ್ಜಲ ಇಲಾಖೆ ಮಾಹಿತಿ ಪ್ರಕಾರ, ಆಗಸ್ಟ್ ತಿಂಗಳಲ್ಲಿ ದ.ಕ. ಜಿಲ್ಲೆಯಲ್ಲಿ ನೆಲಮಟ್ಟದಿಂದ ಕೆಳಗೆ ನೀರಿನ ಮಟ್ಟ 3 ಮೀಟರ್ ಆಸುಪಾಸಿನಲ್ಲಿದ್ದರೆ, ಸೆಪ್ಟೆಂಬರ್ ತಿಂಗಳಲ್ಲಿ 8.60 ಮೀ.ಗೆ ದಿಢೀರ್ ಕುಸಿದಿತ್ತು. ಅಕ್ಟೋಬರ್ ಮಧ್ಯಭಾಗದ ವೇಳೆಗೆ ಈ ಮಟ್ಟ 9.14 ಮೀ. ಆಳಕ್ಕೆ ತಲುಪಿದೆ.

‘ಆಗಬೇಕಾದ ಕಾಲದಲ್ಲಿ ಸರಿಯಾಗಿ ಮಳೆಯಾಗದೆ ಇರುವುದೇ ಭೂಮಿಯಲ್ಲಿ ನೀರಿನ ಮಟ್ಟ ಕುಸಿಯಲು ಕಾರಣ. ಇನ್ನೂ ಮಳೆ ಬಾರದೆ ಇದ್ದರೆ ಗಮನಾರ್ಹವಾಗಿ ನೀರಿನ ಮಟ್ಟ ಕುಸಿಯಲಿದೆ’ ಎಂದು ಇಲಾಖೆಯ ಹಿರಿಯ ಭೂಗರ್ಭಶಾಸ್ತ್ರಜ್ಞೆ ಜಾನಕಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಕಂಟಕ ಖಂಡಿತ: ಹಿಂಗಾರು ಮಳೆ ನವೆಂಬರ್, ಡಿಸೆಂಬರ್‌ನಲ್ಲೂ ಸುರಿಯುವುದು ವಾಡಿಕೆ. ಈ ಮಳೆ ಬಂದರೆ ನೀರಿನ ಒರತೆ ಬರುತ್ತದೆ. ಈ ಬಾರಿ ಮಳೆಗಾಲದ ಉತ್ತರಾರ್ಧದಲ್ಲೇ ಮಳೆಯಾಗಿಲ್ಲ, ಇನ್ನು ಹಿಂಗಾರು ಮಳೆ ಕೂಡ ಆಗದಿದ್ದರೆ ಈ ವರ್ಷ ಕುಡಿಯಲು ಮಾತ್ರವಲ್ಲ, ಕೃಷಿಗೂ ಕಂಟಕ ಖಂಡಿತ ಎಂದು ರೈತ ಸಂಘ ಹಸಿರು ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ಹೇಳುತ್ತಾರೆ.

ಸುಗ್ಗಿ ಬೆಳೆಗೇ ನೀರಿಲ್ಲ: ಕರಾವಳಿಯ ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಎರಡು ಅವಧಿಯಲ್ಲಿ ಬತ್ತ ಬೆಳೆಯಲಾಗುತ್ತದೆ. ಕೆಲವೊಂದು ಕಡೆ ಮೂರು ಬೆಳೆಗಳನ್ನೂ ಬೆಳೆಯುತ್ತಾರೆ. ಈ ಬಾರಿ ಮಳೆಗಾಲದ ಬೆಳೆಗೇ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಇತ್ತೀಚೆಗೆ ಸ್ವಲ್ಪ ಮಳೆ ಯಾಗಿದ್ದರಿಂದ ಬತ್ತ ತೆನೆ ಹುಟ್ಟಿದರೂ ಸಮಯಕ್ಕೆ ಸರಿಯಾಗಿ ಮಳೆಯಾಗದೆ ಇದ್ದುದರಿಂದ ಕಾಳಿಗಿಂತ ಜೊಳ್ಳೇ ಹೆಚ್ಚಾಗಿದೆ ಎಂದು ರೈತ ಸುಬ್ರಹ್ಮಣ್ಯ ಅಳಲು ತೋಡಿಕೊಳ್ಳುತ್ತಾರೆ. ಈಗ ಕೆರೆ, ಬಾವಿ ನೀರೆಲ್ಲ ಬತ್ತಿ ಹೋಗುತ್ತಿದೆ, ಇನ್ನು ಸುಗ್ಗಿ ಬೆಳೆಯಂತೂ ಆಗದ ಮಾತು ಎನ್ನುತ್ತಾರವರು. 

ಯಾಕೆ ಹೀಗಾಯ್ತು..?

ಕರಾವಳಿಯಲ್ಲಿ ಈ ಬಾರಿ ಮಳೆಗಾಲಕ್ಕೆ ಮೊದಲೇ ಭಾರಿ  ಮಳೆ ಕಾಣಿಸಿತ್ತು. ಆಗಸ್ಟ್ ತಿಂಗಳ ಮೊದಲಾರ್ಧದವರೆಗೆ ವಾಡಿಕೆಗಿಂತ ಶೇ.20ಕ್ಕೂ  ಅಧಿಕ ಮಳೆ ಭೋರ್ಗರೆದು ಸುರಿದಿತ್ತು. ಪರಿಣಾಮವಾಗಿ ಎಲ್ಲ ನದಿ, ತೋಡುಗಳೆಲ್ಲ ಪ್ರವಾಹರೂಪಿಯಾಗಿ ಕೃಷಿ ಸೇರಿದಂತೆ ಜನಜೀವನಕ್ಕೆ ಅಪಾರ ಹಾನಿ ಸಂಭವಿಸಿತ್ತು. 

ಅದಾದ ಬಳಿಕ ಮಳೆ ನಾಪತ್ತೆಯಾಗಿದ್ದೇ ಈ ವೈರುಧ್ಯಕ್ಕೆ ಕಾರಣ. ಮಳೆಗಾಲದ ಮೊದಲ ಎರಡೂವರೆ ತಿಂಗಳು ಮಳೆ ಸುರಿದದ್ದು ಬಿಟ್ಟರೆ ಮತ್ತೆ ಮಳೆಯೇ ಬಂದಿಲ್ಲ. ಆಗಾಗ ಮಳೆ ಸುರಿದರೂ ಅಂತರ್ಜಲ ಹೆಚ್ಚಿಸುವಷ್ಟು, ಒಸರು ಸೃಷ್ಟಿಸುವಷ್ಟು ಆಗಿಲ್ಲ. ಮಳೆಗಾಲದ ಅವಧಿಯೊಂದರಲ್ಲೇ ಅತಿವೃಷ್ಟಿ, ಅನಾವೃಷ್ಟಿ ಜಿಲ್ಲೆಯನ್ನು ಕಾಡಿದೆ. ಕಡಲ ತಡಿಯ ಮರಳು ಮಿಶ್ರಿತ ಮಣ್ಣಿಗೆ ನೀರು ಹಿಡಿದಿಡುವ ಗುಣ ಇಲ್ಲದಿರುವುದರಿಂದ ಮಳೆಗಾಲದ ನೀರೆಲ್ಲ ಸಮುದ್ರಪಾಲಾಗಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಬೋರ್‌ವೆಲ್ ಹಾವಳಿ!

ಬಾವಿ ತೋಡಿದರೆ ಸಾಮಾನ್ಯವಾಗಿ 10 - 25  ಅಡಿ ಆಳದಲ್ಲಿ ನೀರು ಸಿಗುತ್ತಿತ್ತು. ಈಗ ಬೋರ್‌ವೆಲ್ ಹಾವಳಿ ಹೆಚ್ಚಿದೆ. 300 -  400 ಅಡಿ ಕೊರೆಯಬೇಕಾಗಿದೆ. ಇದರಿಂದಲೂ ಅಂತರ್ಜಲ ಮಟ್ಟ ತೀವ್ರ ಕುಸಿಯಲು ಕಾರಣ ಎಂದು ಮನೋಹರ ಶೆಟ್ಟಿ ಬೊಟ್ಟು ಮಾಡುತ್ತಾರೆ.

ವರದಿ :  ಸಂದೀಪ್ ವಾಗ್ಲೆ

click me!