ಬೋರ್ ವೆಲ್ ಗಳಿಗೆ ಬ್ರೇಕ್

By Web DeskFirst Published Mar 22, 2019, 8:21 AM IST
Highlights

ಬೋರ್ ವೆಲ್ ಕೊರೆಸುವುದಕ್ಕೆ ಬ್ರೇಕ್ ಹಾಕಲಾಗುತ್ತಿದೆ. ನೀರಿನ ಸಮಸ್ಯೆ ಹಾಗೂ ಅಂತರ್ಜಲ ಸಂಸರಕ್ಷಣೆ ದೃಷ್ಟಿಯಿಂದ ಬೆಂಗಳೂರು ಜನಮಂಡಳಿ ಕಠಿಣ ಕ್ರಮ ಕೈಗೊಳ್ಳುತ್ತಿದೆ. 

ಬೆಂಗಳೂರು :  ಉದ್ಯಾನ ನಗರಿಯಲ್ಲಿ ಅಂತರ್ಜಲ ಸಂರಕ್ಷಣೆ ದೃಷ್ಟಿಯಿಂದ ಕಾವೇರಿ ನೀರಿನ ಸಂಪರ್ಕವಿರುವ ಪ್ರದೇಶಗಳಲ್ಲಿ ಬೇಸಿಗೆ ಅವಧಿಯಲ್ಲಿ ಕೊಳವೆಬಾವಿಗಳನ್ನು ಕೊರೆಯುವುದನ್ನು ನಿಯಂತ್ರಿಸಲು ಬೆಂಗಳೂರು ಜಲಮಂಡಳಿ ನಿರ್ಧರಿಸಿದೆ.

ಮಳೆಗಾಲ ಆರಂಭವಾಗುವವರೆಗೆ ಕೊಳವೆಬಾವಿ ಕೊರೆಯಲು ಅವಕಾಶ ಕೋರಿ ಎಷ್ಟೇ ಅರ್ಜಿ ಬಂದರೂ, ಖುದ್ದು ಸ್ಥಳ ಪರಿಶೀಲನೆ ನಡೆಸಿ ಆ ಪ್ರದೇಶದಲ್ಲಿ ಕಾವೇರಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿದ್ದರೆ ಅವಕಾಶ ನೀಡದಿರಲು ತೀರ್ಮಾನಿಸಿದೆ. ಬಹುಮಹಡಿ ಕಟ್ಟಡಗಳ ನಿರ್ಮಾಣ, ಕೈಗಾರಿಕೆ, ಉದ್ಯಮಗಳಿಗೆ ಪೂರೈಕೆಯಾಗುತ್ತಿರುವ ಕಾವೇರಿ ನೀರು ಸಾಲುತ್ತಿಲ್ಲ ಎಂಬುದು ಖಚಿತವಾದಲ್ಲಿ ಅಂತಹ ಕಡೆ ಮಾತ್ರ ಕೊಳವೆ ಬಾವಿ ಕೊರೆಯಲು ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅವಕಾಶ ನೀಡುವ ಮುನ್ನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಿದೆ. ಆ ತಂಡ ಅವಶ್ಯಕತೆ ಪರಿಶೀಲಿಸಿ ಒಪ್ಪಿಗೆ ನೀಡಿದ ಕಡೆ ಮಾತ್ರ ಕೊಳವೆ ಬಾವಿ ಕೊರೆಯಲು ಜಲಮಂಡಳಿ ಅನುಮತಿ ನೀಡಲು ನಿರ್ಧರಿಸಿದೆ. ಖಾಸಗಿಯಾಗಿ ನೀರು ಪೂರೈಕೆ ಉದ್ಯಮ ನಡೆಸುವುದಕ್ಕಾಗಿ ಯಾರಾದರೂ ಕೊಳವೆಬಾವಿ ಕೊರೆಸಲು ಅನುಮತಿ ಕೋರಿದರೆ ಅದು ಜಲಮಂಡಳಿ ವ್ಯಾಪ್ತಿಗೆ ಬರುವುದಿಲ್ಲ. ಆ ಅರ್ಜಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರ್ಗಾಯಿಸಲಾಗುವುದು. ಆ ಇಲಾಖೆಯ ಸಮಿತಿ ಪರಿಶೀಲನೆ ನಡೆಸಿ ಅನುಮತಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3.80 ಲಕ್ಷ ಕೊಳವೆ ಬಾವಿ:  ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 4 ಲಕ್ಷದಷ್ಟುಕೊಳವೆಬಾವಿಗಳಿವೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಜಲಮಂಡಳಿಗೆ ಸೇರಿದ ಸುಮಾರು 9300 ಸಾರ್ವಜನಿಕ ಕೊಳವೆಬಾವಿಗಳು ಮತ್ತು ಬಿಬಿಎಂಪಿಗೆ ಸೇರಿದ 1200ಕ್ಕೂ ಹೆಚ್ಚು ಕೊಳವೆಬಾವಿಗಳಿದ್ದು, ಅವುಗಳ ಮೂಲಕ ಪ್ರತಿ ದಿನ ನಗರದ ಜನರಿಗೆ ಸುಮಾರು 500 ದಶಲಕ್ಷ ಲೀಟರ್‌ನಷ್ಟುನೀರನ್ನು ಪೂರೈಸಲಾಗುತ್ತಿದೆ. ಇವಷ್ಟೇ ಅಲ್ಲದೆ, ನಗರದ ನಿವಾಸಿಗಳು ವೈಯಕ್ತಿಕ ಬಳಕೆಗಾಗಿ, ವಾಣಿಜ್ಯ ಉದ್ದೇಶಕ್ಕೆ ಕೊರೆಸಿರುವ ಸುಮಾರು 3.80 ಲಕ್ಷ ಕೊಳವೆಬಾವಿಗಳಿವೆ. ಇವುಗಳಿಂದ ಪ್ರತಿ ದಿನ ಯಾವುದೇ ಮಾನದಂಡವಿಲ್ಲದೆ ನೀರನ್ನು ಮೇಲೆತ್ತುತ್ತಿರುವುದರಿಂದ ಕಳೆದ ಒಂದು ವರ್ಷದಲ್ಲಿ ಒಂಬತ್ತು ಅಡಿಗಳಷ್ಟುಅಂತರ್ಜಲ ಮಟ್ಟಕುಸಿದುಹೋಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಂಕಿ ಅಂಶ ಹೇಳುತ್ತದೆ.

ಅಂತರ್ಜಲದ ಮೇಲಿನ ತೀವ್ರ ಶೋಷಣೆಯಿಂದಾಗಿ ನಗರದಲ್ಲಿ ಬೇಸಿಗೆ ಆರಂಭದ ಅವಧಿಯಲ್ಲೇ ಸಾವಿರಾರು ಕೊಳವೆಬಾವಿಗಳು ಬತ್ತಿ ಹೋಗಿವೆ. ಜಲಮಂಡಳಿ ಮಾಹಿತಿ ಪ್ರಕಾರವೇ 600ಕ್ಕೂ ಹೆಚ್ಚು ಕೊಳವೆಬಾವಿಗಳು ಸಂಪೂರ್ಣ ಬತ್ತಿದ್ದು, ಇನ್ನೂ 300ರಿಂದ 400 ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕುಸಿದಿದೆ. ಕೆಲವೇ ದಿನಗಳಲ್ಲಿ ಅವೂ ಕೂಡ ಬತ್ತುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಲಮಂಡಳಿ ನಗರದಲ್ಲಿ ಅಂತರ್ಜಲ ಸಂರಕ್ಷಣೆ ದೃಷ್ಟಿಯಿಂದ ಮಳೆಗಾಲ ಆರಂಭದ ವರೆಗೆ ಕಾವೇರಿ ಸಂಪರ್ಕವಿರುವ ಪ್ರದೇಶಗಳಲ್ಲಿ ಕೊಳವೆಬಾವಿ ಕೊರೆಯುವುದನ್ನು ನಿಯಂತ್ರಿಸಲು ಹೊರಟಿದೆ.

ನಿಯಮವೇ ಪಾಲನೆಯಾಗುತ್ತಿಲ್ಲ

ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಬಳಕೆ, ಕಟ್ಟಡ ನಿರ್ಮಾಣ ಸೇರಿದಂತೆ ವಾಣಿಜ್ಯ ಉದ್ದೇಶೇತರ ಕಾರ್ಯಕ್ಕೆ ಕೊಳವೆಬಾವಿ ಕೊರೆಸಲು ಜಲಮಂಡಳಿ ಅನುಮಡಿ ಪಡೆಯುವುದು ಕಡ್ಡಾಯ. ಅದೇ ರೀತಿ ವಾಣಿಜ್ಯ ಉದ್ದೇಶಕ್ಕೆ ಕೊಳವೆಬಾವಿ ಕೊರೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ನಗರದಾದ್ಯಂತ ಈ ನಿಯಮ ಪಾಲನೆಯೇ ಆಗುತ್ತಿಲ್ಲ.

ಅನುಮತಿಯನ್ನೇ ಪಡೆಯದೆ ನಗರದಲ್ಲಿ ಕೊಳವೆಬಾವಿಗಳನ್ನು ಕೊರೆಸುವುದು ಸಾಮಾನ್ಯವಾಗಿದೆ. ಮೊದಲು ಕೊಳವೆಬಾವಿ ಕೊರೆಸಿ ನಂತರ ಅನುಮತಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳೂ ನಡೆಯುತ್ತಿವೆ. ಈ ರೀತಿ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚುವುದಾಗಲಿ, ಅವರ ವಿರುದ್ಧ ಮಾತ್ರ ಜಲಮಂಡಳಿಯಾಗಲಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವಿದೆ. ಮೊದಲು ನಿಯಮ ಉಲ್ಲಂಘಿಸುವುದನ್ನು ತಡೆಯಬೇಕು. ಇಲ್ಲದಿದ್ದರೆ ಜಲಮಂಡಳಿ ಉದ್ದೇಶ ಈಡೇರುವುದಿಲ್ಲ ಎನ್ನುತ್ತಾರೆ ತಜ್ಞರು.

ಅಂತರ್ಜಲ ಸಂರಕ್ಷಣೆ ದೃಷ್ಟಿಯಿಂದ ನಗರದಲ್ಲಿ ಕಾವೇರಿ ನೀರಿನ ಸಂಪರ್ಕವಿರುವ ಪ್ರದೇಶಗಳಲ್ಲಿ ಕೊಳವೆಬಾವಿ ಕೊರೆಯುವುದನ್ನು ನಿಯಂತ್ರಿಸಲು ನಿರ್ಧರಿಸಲಾಗಿದೆ. ಕೊಳವೆಬಾವಿ ಕೊರೆಯಲು ಅನುಮತಿ ಕೋರಿ ಜಲಮಂಡಳಿಗೆ ಬರುವ ಅರ್ಜಿಗಳನ್ನು ಆಧರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಂಡ ಖುದ್ದು ಸ್ಥಳ ಪರಿಶೀಲಿಸಿ ವರದಿ ನೀಡಲಿದೆ. ಅನುಮತಿ ನೀಡುವ ಅಗತ್ಯವಿದೆ ಎಂದು ತಂಡ ವರದಿ ನೀಡಿದ ಕಡೆ ಮಾತ್ರ ಅನುಮತಿ ನೀಡಲಾಗುವುದು.’

-ಕೆಂಪರಾಮಯ್ಯ, ಜಲಮಂಡಳಿ ಪ್ರಧಾನ ಮುಖ್ಯ ಎಂಜಿನಿಯರ್‌.

click me!