Bhavapoorna Review: ಬದುಕಿನ ಫೋಟೋ ಎಫೆಕ್ಟ್‌

By Kannadaprabha News  |  First Published Nov 4, 2023, 10:35 AM IST

ರಮೇಶ್‌ ಪಂಡಿತ್‌, ಶೈಲಶ್ರೀ ಅರಸ್‌, ಮಂಜುನಾಥ ಹೆಗಡೆ, ಅಥರ್ವ ಪ್ರಕಾಶ್‌, ವೆನ್ಯಾ ರೈ ನಟಿಸಿರುವ ಭಾವಪೂರ್ಣ ಸಿನಿಮಾ ರಿಲೀಸ್ ಆಗಿದೆ...


ಪ್ರಿಯಾ ಕೆರ್ವಾಶೆ

ಮಲೆನಾಡ ಒಂದು ಹಳ್ಳಿ. ರಾತ್ರಿ ಹಗಲೆನ್ನದೆ ಜಿಯ್ಯನೆ ಸುರಿಯುತ್ತಲೇ ಇರುವ ಮಳೆ. ಅಲ್ಲೊಬ್ಬ ಹುಲಿಯಂತೆ ಕಾಣುವ ಹಸುವಿನಂಥಾ ವ್ಯಕ್ತಿ ಧರ್ಮಣ್ಣ. ಅವನ ಹಳೆ ಸ್ಕೂಟರ್‌, ಮಲೆನಾಡ ಮಳೆಯಂತೆ ಬೈಯ್ಯುತ್ತಲೇ ಇರುವ ಹೆಂಡತಿ, ಜಿಗಣೆಯಂಥಾ ದೋಸ್ತ. ಈ ಚೌಕಟ್ಟಿನಲ್ಲಿ ಕಥೆಯೊಂದು ವೇಗ ಪಡೆದುಕೊಳ್ಳುವ ಹೊತ್ತಿಗೆ ಮನಸು ಮಲೆನಾಡು.

Latest Videos

undefined

ತಾರಾಗಣ: ರಮೇಶ್‌ ಪಂಡಿತ್‌, ಶೈಲಶ್ರೀ ಅರಸ್‌, ಮಂಜುನಾಥ ಹೆಗಡೆ, ಅಥರ್ವ ಪ್ರಕಾಶ್‌, ವೆನ್ಯಾ ರೈ

ನಿರ್ದೇಶನ: ಚೇತನ್‌ ಮುಂಡಾಡಿ

ಸೆಲ್ಫಿ, ಮೊಬೈಲ್‌ ಇತ್ಯಾದಿಗಳ ಕಲ್ಪನೆಯೂ ಇಲ್ಲದಿದ್ದ ದಶಕಗಳ ಹಿಂದಿನ ಕಾಲಘಟ್ಟವದು. ಸತ್ತ ಮೇಲೆ ಕಟ್ಟು ಹಾಕಿಸಿ ಇಡಲಾದರೂ ಒಂದು ಫೋಟೋ ಇರಬೇಕು ಅಂತ ಜನ ಬಯಸುತ್ತಿದ್ದ ಕಾಲ. ಈ ಕತೆಯ ಹೀರೋ ಧರ್ಮಣ್ಣನಿಗೆ ತನ್ನದೂ ಫೋಟೋ ಇಲ್ಲ ಅಂತ ಜ್ಞಾನೋದಯ ಆಗುವ ಹೊತ್ತಿಗೆ ಆತನ ಕೂದಲು ಹಣ್ಣಾಗಿರುತ್ತದೆ. ಮುಂದಿನ ಇಡೀ ಸಿನಿಮಾ ಒಂದು ಪೋಟೋಗಾಗಿ ಹಂಬಲಿಸುವ ಆತನ ಏರಿಳಿತಗಳ ಕಥೆ. ಸತ್ತ ಮೇಲೆ ಕಟ್ಟು ಹಾಕಿಡುವ ಫೋಟೋವೇ ಬದುಕಿಗಿಂತ ದೊಡ್ಡದಾಗಿ ನಿಲ್ಲುವ ಚಿಂತನೆ ಸಖತ್‌ ಪವರ್‌ಫುಲ್‌.

Tagaru Palya Review: ಭಾಷೆ ಸೊಗಸು, ದೃಶ್ಯ ಚಂದ, ಕಥನ ವಿಶಿಷ್ಟ

ಇಲ್ಲಿ ಇಂದಿನ ಮತ್ತು ಅಂದಿನ ಕಾಲಘಟ್ಟಗಳ ಮುಖಾಮುಖಿ ಇದೆ. ಕ್ಷಣಕ್ಕೊಂದು ಸೆಲ್ಫಿ ಕ್ಲಿಕ್ಕಿಸುವ ಕಾಲಘಟ್ಟದಲ್ಲಿ ನಿಂತು, ಒಂದೇ ಒಂದು ಫೋಟೋಗಾಗಿ ಇನ್ನಿಲ್ಲದಂತೆ ಒದ್ದಾಡುವ ಧರ್ಮಣ್ಣನನ್ನು ಕಾಣುವುದು ಕಾಲದ ವ್ಯಂಗ್ಯದಂತೆ ಭಾಸವಾಗುತ್ತದೆ.

ಇಂಥದ್ದೊಂದು ವಿಶೇಷ ಸಬ್ಜೆಕ್ಟ್‌ ಆರಿಸಿಕೊಂಡು ಅದಕ್ಕೆ ತಕ್ಕಂಥ ಪರಿಸರವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕ ಚೇತನ ಮುಂಡಾಡಿ ಯಶಸ್ವಿ ಆಗಿದ್ದಾರೆ. ಛಾಯಾಗ್ರಾಹಕ ಪ್ರಸನ್ನ ಗುರಲಕೆರೆ ಪ್ರತೀ ಫ್ರೇಮೂ ಕಲಾಕೃತಿಯಂತಿದೆ. ಆದರೆ ಸ್ಕ್ರಿಪ್ಟಿಂಗ್‌ಗೆ ಇನ್ನಷ್ಟು ಮಹತ್ವ ಕೊಡಬೇಕಿತ್ತು. ಈ ಸಿನಿಮಾದ ಘಟನೆಗಳು ಆರ್ಗ್ಯಾನಿಕ್‌ ಆಗಿ ಬರದೇ ಎಳೆದು ತಂದಂತೆ ತೋರುತ್ತವೆ. ಸಂಭಾಷಣೆ ಇನ್ನಷ್ಟು ಚುರುಕಾಗಿದ್ದರೆ ಚೆನ್ನಿತ್ತು. ಫೋಟೋ ಎಂಬುದನ್ನು ಪ್ರತೀ ಮಾತಿನಲ್ಲೂ ಎಳೆದುತಂದರೆ ಸಂಭಾಷಣೆಯ ತೀಕ್ಷ್ಣತೆ ಕಳೆದುಹೋಗುತ್ತದೆ ಎಂಬುದು ಹೊಸ ವಿಚಾರ ಏನಲ್ಲ.

Baanadariyalli Review: ಪ್ರೇಮ, ವಿರಹ ಮತ್ತು ಸಂಗಮ

ಧರ್ಮಣ್ಣನಾಗಿ ರಮೇಶ್‌ ಪಂಡಿತ್‌ ಪಾತ್ರದಲ್ಲಿ ಜೀವಿಸಿದ್ದಾರೆ. ಯುವ ನಟ ಅಥರ್ವ ಕಣ್ಣುಗಳಲ್ಲೇ ಕನಸನ್ನೂ, ಅಸಹನೆಯನ್ನೂ ಸಂವಹನ ಮಾಡುತ್ತಾರೆ. ಹಾಡುಗಳು ಮಲೆನಾಡಿಗೆ ತಕ್ಕಂತಿವೆ. ಸಂಭಾಷಣೆ ಚುರುಕಾಗಿ ಕಥೆಯಲ್ಲೊಂದು ಸಹಜತೆ ಬಂದಿದ್ದರೆ ಸಿನಿಮಾ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು.

 

click me!