ಚೆನ್ನೈನಲ್ಲಿ ಬೆಳೆದ ಅರುಳ್ ತನ್ನ ತಂಗಿಯ ಮದುವೆಗೆ ಹುಟ್ಟೂರಿಗೆ ಹಿಂದಿರುಗುವ ಕಥೆ. ಕುಟುಂಬ, ಸಂಬಂಧಗಳು ಮತ್ತು ನೆನಪುಗಳನ್ನು ಕೆದಕುವ ಈ ಚಿತ್ರವು ಭಾವನಾತ್ಮಕವಾಗಿ ಸೆಳೆಯುತ್ತದೆ.
ಅವನು ತಾನು ಆಡಿ ಬೆಳೆದ ನನ್ನೂರು ಕೂಡ ನನ್ನದಲ್ಲ. ಅಲ್ಯಾರು ನನ್ನವರಿಲ್ಲ, ಆಪ್ತರಿಲ್ಲ, ಸ್ನೇಹಿತರಿಲ್ಲ, ಊರಿಗೆ ಹೋಗಬೇಕು ಎಂದು ಅನ್ನಿಸುವುದೇ? ಹೀಗಂದುಕೊಂಡು ಬರೋಬ್ಬರಿ 20 ವರ್ಷ ಮಹಾನಗರ ಚೆನ್ನೈನಲ್ಲಿ ಬೆಳೆದು ಬಿಡುತ್ತಾನೆ ನಾಯಕ ಅರುಳ್.
ಆದರೆ, ಕೂಡಿ, ಆಡಿ ಬೆಳೆದ ಚಿಕ್ಕಪ್ಪನ ಮಗಳು, ಅತ್ಯಂತ ಪ್ರೀತಿ ಪಾತ್ರ ತಂಗಿಯ ಮದುವೆಗೆ ಹೋಗಲೇ ಬೇಕು. ಹೋಗ್ತೀನಿ, ರಾತ್ರಿ ಹೋಗಿ ವಿಷ್ ಮಾಡಿ, ರಾತ್ರಿಯೇ ಬಸ್ ಹತ್ತಿ ವಾಪಸ್ ಬಂದುಬಿಡ್ತೀನಿ. ಗಟ್ಟಿ ಮನಸ್ಸು ಮಾಡಿಕೊಂಡು ಬಸ್ ಹತ್ತುತ್ತಾನೆ ನಾಯಕ ಅರುಳ್. ಆಮೇಲೆ? ಬಂಧುಗಳನ್ನು ಭೇಟಿಯಾದನಾ? ರಾತ್ರಿಯೇ ವಾಪಸ್ ಬಸ್ ಹತ್ತಿದನಾ? ಆಮೇಲೆ ನಡೆಯುವುದೇ ಕಥೆ. ಇದು ತಮಿಳಿನ ಮೇಯಳಗನ್ ಚಿತ್ರದ ಸರಳ ಕಥೆ.
ಇದು ಪ್ರತಿ ಊರಿನ ಕಥೆ. ದಾಯಾದಿಗಳು ಆಸ್ತಿ ಲಪಟಾಯಿಸುತ್ತಾರೆ. ತನ್ನ ಅಕ್ಕ ತಂಗಿಯರಿಗೆ ಆಸ್ತಿ ಹಂಚಿ, ಊರನ್ನೇ ಬಿಟ್ಟು ಹೋಗುವ ಅಣ್ಣ ಶಿಕ್ಷಕ. ಹುಟ್ಟಿನಿಂದ ತುಂಬು ಕುಟುಂಬದಲ್ಲಿ ಬೆಳೆದು, ಅದೇ ಮನೆಯಲ್ಲಿ ಸಾಯಬೇಕೆಂಬ ಕನಸು ಹೊತ್ತಿದ್ದ ಮೇಸ್ಟ್ರ ಮಗ. ಊರು ಬಿಟ್ಟ ಮೇಲೆ ಹಳ್ಳಿ, ಸಂಬಂಧಿಗಳ ನಡುವಿನ ಕರುಳ ಬಳ್ಳಿ ಸಂಬಂಧ ಕಡಿದುಕೊಂಡು ಮದ್ರಾಸ್‌ನಲ್ಲಿ ಬೆಳೆಯುತ್ತಾನೆ. ಮತ್ತೆ ಆತನಿಗೆ ಊರೆಂಬ ಕರುಳ ಬಳ್ಳಿ, ಆ ಕರುಳಬಳ್ಳಿ ಹಿಡಿದು ಜೀಕಿ, ಜೀಕಿ ಬೆಳೆದ ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳ ನೆನಪು ಕೆದಕಿ, ಕೆದಕಿ, ಆತನನ್ನು ಮತ್ತೆ ಹುಟ್ಟಿದೂರೆಂಬ ತವರು ನೆನಪಿಸುತ್ತಾನೆ ಮೇಯಳಗನ್ ಎಂಬ ಸಂಬಂಧಿ ಯುವಕ. ಸಂಬಂಧ ಕಡಿದು ಕೊಂಡು ಸಿಟಿಯಲ್ಲಿ ಬೆಳೆದ ಅರವಿಂದ ಸ್ವಾಮಿ, ಇಡೀ ಊರು, ರಕ್ತ ಸಂಬಂಧದ ಬಾಂಧವ್ಯ ನೆನಪಿಸುತ್ತಾ, ನಮ್ಮನ್ನೂ, ನಮ್ಮ ಬಾಲ್ಯ, ಹಳ್ಳಿಯ ಬದುಕಿಗೆ ಕರೆದೊಯ್ಯುವ ಕಾರ್ತಿ ನಟನೆ ಅದ್ಭುತ.
ಉಲಝ್: ರಾಜತಾಂತ್ರಿಕ ಜಾಲದಲ್ಲಿ ಭಾರತೀಯ ರಾಯಭಾರಿ
ಅಗಾಧ ನಿರೀಕ್ಷೆ ಇಟ್ಟು ‘ಮೇಯಳಗನ್’ ನೋಡಿದಿರೋ, ಹುಂ, ನಿಮಗೆ ಇಷ್ಟ ಆಗದು. ಇಷ್ಟೇನಾ? ಎಂದು ಅನ್ನಿಸದೇ ಇರದು. ಆದರೆ ಒಂದು ಸಾಮಾನ್ಯ ಕಥೆಯನ್ನು ಸಿನಿಮಾ ಎಂದು ನೋಡಲು ಕುಳಿತರೇ ನಿಧಾನವಾಗಿ ನಿಮ್ಮನ್ನು ಸೆಳೆಯುತ್ತದೆ. ಕಥೆಯ ಎಳೆ ಅರ್ಥವಾಗಿಬಿಡುತ್ತದೆ. ಮುಂದೇನಾಗಬಹುದೆಂಬ ಕುತೂಹಲ ನಿಧಾನಕ್ಕೆ ಹೆಚ್ಚ ತೊಡಗುತ್ತದೆ. ಬದುಕಿನ ಸರಳ ನವಿರು ಕಥೆ ಇಟ್ಟು ಕೊಂಡು ಕಟ್ಟಿ ಕೊಟ್ಟಿದ್ದಾರೆ ನಿರ್ದೇಶಕ ಪ್ರೇಮ್ಕುಮಾರ್. ಹೆಚ್ಚು ಪಾತ್ರಗಳೂ ಇಲ್ಲ. ಕಾರ್ತಿ- ಅರವಿಂದ್ ಸ್ವಾಮಿಯ ನಟನೆ ಮೂಲಕವೇ ನಿಮ್ಮನ್ನು ಸೆಳೆಯುತ್ತಾರೆ. ಅವರಿಬ್ಬರ ಸಂಭಾಷಣೆಗಳ ಮೂಲಕವೇ ಇಡೀ ಚಿತ್ರಕಥೆ ತಣ್ಣಗೆ ಚಲಿಸ ತೊಡಗುತ್ತದೆ. ಬದುಕುವ ನಾಲ್ಕು ದಿನಕ್ಕಾಗಿ ಎಷ್ಟೆಲ್ಲ ಕಹಿ ಅನುಭವ, ಎದೆಯೊಳಗೆ ವಿಷ ಇಟ್ಟುಕೊಂಡು ಬದುಕಬೇಕಾ? ನಮಗೆ ಮೋಸ ಮಾಡಿದವರನ್ನು ಕ್ಷಮಿಸಿ ಬಿಡಬೇಕು. ಸುಖವಾಗಿ ಬದುಕಿ, ನಿಮ್ಮ ಮೋಸ ನನ್ನನ್ನು ಕಲ್ಲವಿಲ್ಲಗೊಳಿಸದು. ಇಷ್ಟೇ ಬದುಕಿಗೆ ಬೇಕಿರುವುದು ಎಂಬುದನ್ನು ಸರಳವಾಗಿ ಹೇಳಿ ಮುಗಿಸಿಬಿಡುತ್ತಾನೆ ನಾಯಕ ಕಾರ್ತಿ.
ವಯಸ್ಸಾದ ಜೀವಕ್ಕೆ ಬೆಲೆ ಇಲ್ಲವೇ?: ಸಿಗ್ನೇಚರ್ ಹೇಳೋ ಕಥೆ ಇದು!
ಸಿನಿಮಾ ನೋಡುವ ಪ್ರತಿಯೊಬ್ಬರೂ ತಮ್ಮ ಕರುಳ ಸಂಬಂಧ ನೆನದು ಕಣ್ಣೀರಾಗುವಂಥ ಗಟ್ಟಿ ಕಥೆ ಇದು. ಹೊಡಿ ಬಡಿ ಇಲ್ಲದ, ಗಿರಿ ಗಿರಿ ಸುತ್ತುವ ಹಾಡುಗಳಿಲ್ಲದ, ತಣ್ಣನೆಯ ನದಿಯಂತೆ ಹರಿಯುವ ಕಥೆ, ನಮ್ಮನ್ನೂ ನಮ್ಮ ಹಳ್ಳಿಯ ನೆನಪು ಒತ್ತರಿಸಿ ಬರುವಂತೆ ಮಾಡುತ್ತದೆ. ತಂಜಾವೂರಿನ ಹಳ್ಳಿಯನ್ನು ಕಣ್ಣಿಗೆ ಹಬ್ಬವಾಗಿಸುವಂತೆ ಚಿತ್ರೀಕರಿಸಿ, ಗ್ರಾಫಿಕ್ಸ್ ಮರೆಸಿದ್ದಾರೆ. ಸೈಕಲ್ ಕಲಿತ ದಿನಗಳು, ಮಕ್ಕಳ ಆಟ, ಪಾಠ, ಡ್ಯಾಮ್, ಊರಿನ ದೇವಸ್ಥಾನ, ಹಳ್ಳಿ ಮನೆ, ತಂಗಿಯ ಅಕ್ಕರೆ, ಚಿಕ್ಕಪ್ಪನ ವಾತ್ಸಲ್ಯ, ಅತ್ತೆ, ಮಾವನ ಕಾಳಜಿ..ಒಂದೊಂದು ಪಾತ್ರವೂ ನಮ್ಮದೇ ಕುಟುಂಬದೊಳಗೂ ಕಾಣತೊಡಗುತ್ತದೆ.ಆಸ್ತಿ ಜಗಳದಲ್ಲಿ ಹೀಗೆ ಊರು ಬಿಟ್ಟು, ಸಂಬಂಧ ಹರಿದು ಕೊಂಡವರು ಕಥೆಯ ಜತೆ ಕನೆಕ್ಟ್ ಆಗುತ್ತಾ, ಕಣ್ಣೀರಾಗುವಂತೆ ಮಾಡಿ ಗೆದ್ದಿದ್ದಾರೆ ನಿರ್ದೇಶಕ ಪ್ರೇಮ್ ಕುಮಾರ್.
ಮಾಮೂಲಿ ಕಥೆಯನ್ನು ಹೃದಯದ ಆಳಕ್ಕಿಳಿಸಿ, ನಗಿಸಿ, ಅಳಿಸಿ, ನೆನಪುಗಳನ್ನು ಕೆದಕಿ ರಾಡಿ ಹಿಡಿಸಿ, ನೋಡುವವರನ್ನು ಕಣ್ಣೀರಾಗಿಸುವ ‘ಮೇಯಗಳನ್’ ನೋಡಿದ ಮೇಲೆ ಹುಟ್ಟಿದೂರಿಗೆ ಒಮ್ಮೆ ಹೋಗಿ ಬರಬೇಕು ಅನ್ನಿಸದಿದ್ರೆ ಕೇಳಿ. ಯಾಕೆಂದ್ರೆ, ಪ್ರತಿ ಕುಟುಂಬದಲ್ಲಿ ಒಬ್ಬ ಆತನ್, ಒಬ್ಬ ಮೇಯಳಗನ್ ಇರುತ್ತಾನೆ. ನಿಮ್ಮ ನೆನಪು ಕೆದಕುತ್ತಾನೆ.