NSG ಕಮಾಂಡೋ ಅಮೃತ್ ತನ್ನ ಪ್ರೇಯಸಿ ತುಲಿಕಾಳನ್ನು ರೈಲಿನಲ್ಲಿ ಭೇಟಿಯಾಗುತ್ತಾನೆ. ಆದರೆ ಡಕಾಯಿತರ ದಾಳಿಯಿಂದ ಅವರ ಪ್ರಯಾಣ ರಕ್ತಸಿಕ್ತ ಹೋರಾಟಕ್ಕೆ ತಿರುಗುತ್ತದೆ. ಚಿತ್ರದಲ್ಲಿನ ಹಿಂಸಾಚಾರ ಮತ್ತು ಸಾಹಸ ದೃಶ್ಯಗಳು ರೋಮಾಂಚನಕಾರಿಯಾಗಿವೆ.
ವೀಣಾ ರಾವ್, ಕನ್ನಡಪ್ರಭ
ಚಿತ್ರದ ಹೆಸರು: ಕಿಲ್:
ಜಾನರ್: ಆಕ್ಷನ್ ಥ್ರಿಲ್ಲರ್
ಒಟಿಟಿ: ಡಿಸ್ನಿ ಹಾಟ್ ಸ್ಟಾರ್
ನಿರ್ದೇಶನ: ನಿಖಿಲ್ ನಾಗೇಶ್ ಭಟ್
ಬಿಡುಗಡೆಯಾದ ವರ್ಷ: 2023
ಸಂಸ್ಥೆ: ಧರ್ಮ ಕ್ರಿಯೇಷನ್ಸ್.
ತಾರಾಗಣ: ಲಕ್ಷ್ಯ, ತಾನ್ಯಾ ಮಾನಿಕ್ ತಲಾ, ರಾಘವ್ ಜುಯಾಲ್, ಅಭಿಷೇಕ್ ಚೌಹಾಣ್, ಹರ್ಷ ಛಾಯಾ, ಆಶಿಷ್ ವಿದ್ಯಾರ್ಥಿ, ಅಧ್ರಿಜಾ ಸಿನ್ಹಾ.
ಅಮೃತ್ ರಾಥೋಡ್ ಒಬ್ಬ NSGಯ ಯೋಧ. ಒಂದು ಕಾರ್ಯಾಚರಣೆಯನ್ನು ಮುಗಿಸಿ ಬೆಟಾಲಿಯನ್ ನೊಂದಿಗೆ ಹಿಮಾಚಲ ಪ್ರದೇಶದ ಪಾಲಂಪುರ್ ನ ತಮ್ಮ ಶಿಬಿರಕ್ಕೆ ಹಿಂದಿರುಗಿದ ಅಮೃತ್ ಸ್ನೇಹಿತನಿಗೆ ‘ನಾಳೆ ಮದ್ಯಾಹ್ನದವರೆಗೂ ನಿದ್ರೆಯಿಂದ ನನ್ನನ್ನು ಎಬ್ಬಿಸಬೇಡ’ ಎಂದು ಹೇಳುತ್ತಾನೆ. ಸ್ನೇಹಿತ ವೀರೇಶ ‘ಈಗಲೇ ಮಲಗಬೇಡ ಯಾರ್ ಒಂದೆರಡು ಪೆಗ್ ಹಾಕಿ ಮಲಗುವಾ’ ಎನ್ನುತ್ತಾನೆ. ಅಮೃತ್ ನಸು ನಕ್ಕು ತನ್ನ ಮೊಬೈಲ್ ತೆಗೆದು ನೋಡುತ್ತಾನೆ. ಹತ್ತಾರು ಫೋನ್ ಕಾಲ್ ಗಳು ಮೆಸೇಜುಗಳ ಮಹಾಪೂರವೇ ಬಂದಿರುತ್ತದೆ. ಅದೂ ತನ್ನ ಪ್ರೇಯಸಿ ‘ತುಲಿಕಾ’ಳಿಂದ. ‘ನನ್ನ ತಂದೆ ನನಗೆ ಬೇರೆಯೊಬ್ಬರ ಜೊತೆ ನಿಶ್ಚಿತಾರ್ಥ ಮಾಡುತ್ತಿದ್ದಾರೆ, ಬೇಗ ಬಾ. ನೀನು ಎಲ್ಲಿದೀಯ?’ ಅಮೃತ್ ಈ ಮೇಸೇಜ್ ಓದಿ ಚಕಿತನಾಗುತ್ತಾನೆ. ತುಲಿಕಾ ಹಾಗೂ ಅಮೃತ್ ಬಹಳ ವರ್ಷಗಳಿಂದ ಪ್ರೇಮಿಗಳು. ತುಲಿಕಾ ದೆಹಲಿಯ ಒಬ್ಬ ಹೆಸರಾಂತ ಟ್ರಾನ್ಸ್ ಪೋರ್ಟ್ ಉದ್ಯಮಿ ಬಲದೇವ್ ಸಿಂಗ್ ಠಾಕುರನ ಮಗಳು. ಠಾಕೂರ್ ಗೆ ತನ್ನ ಮಗಳ ಪ್ರೇಮದ ಸಂಗತಿ ಗೊತ್ತಿಲ್ಲದೆ ಬೇರೆಯವರೊಡನೆ ನಿಶ್ಚಿತಾರ್ಥ ನಿಶ್ಚಯಿಸಿರುತ್ತಾನೆ. ರಾಂಚಿಯಲ್ಲಿ ನಿಶ್ಚಿತಾರ್ಥ, ತುಲಿಕಾಳ ಪರಿವಾರವೆಲ್ಲ ರಾಂಚಿಗೆ ಬಂದಿಳಿಯುತ್ತದೆ. ತುಲಿಕಾಳ ತಂಗಿಗೆ(ಅಧ್ರಿಜಾ ಸಿನ್ಹಾ) ಮಾತ್ರ ಅಕ್ಕನ ಪ್ರೇಮದ ಬಗ್ಗೆ ಗೊತ್ತಿರುತ್ತದೆ. ಅಕ್ಕನಿಗೆ ‘ನೀನು ಯಾಕೆ ಅಪ್ಪ ತಂದ ಸಂಬಂಧವನ್ನು ಒಪ್ಪಿಕೊಂಡೆ ಎನ್ನುತ್ತಾಳೆ. ನಾನೆಲಿ ಒಪ್ಪಿಕೊಂಡೆ?’ ಇದು ತುಲಿಕಾಳ ಉತ್ತರ. ‘ಮತ್ತೆ ಯಾಕೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದೀಯಾ’ ತಂಗಿಯ ಪ್ರಶ್ನೆ. ‘ನಿಶ್ಚಿತಾರ್ಥ ನೂರು ಜನರ ಜೊತೆ ಮಾಡಿಕೊಂಡೇನು ಆದರೆ ಮದುವೆ ಮಾತ್ರ ಅಮೃತ್ ನೊಂದಿಗೇ’ ಎಂದು ನಗುತ್ತಾಳೆ. ತುಲಿಕಾಳಿಗೆ ಅಪ್ಪನ ಬಗ್ಗೆ ಅಪಾರ ಗೌರವ ಹಾಗೂ ಭಯ ಹಾಗಾಗಿ ಅವಳು ತನ್ನ ಪ್ರೇಮದ ಬಗ್ಗೆ ಅಪ್ಪನಿಗೆ ತಿಳಿಸಿರುವುದಿಲ್ಲ.
ಕಣ್ಣೀರಾಗಿಸುವ ‘ಮೇಯಗಳನ್’ ನೋಡಿದ್ರೆ ಊರಿಗೆ ಮರಳುವಂತಾಗುತ್ತೆ!
ತುಲಿಕಾಳ ಮೆಸೇಜ್ ಓದಿದ ಅಮೃತ್ ಗೆಳೆಯ ವೀರೇಶನೊಡನೆ ರಾಂಚಿಗೆ ಬರುತ್ತಾನೆ. ಅಲ್ಲಿ ನಿಶ್ಚಿತಾರ್ಥ ಆಗುತ್ತಿರುವ ಹೊಟೆಲ್ ಗೆ ಹೋಗಿ ತುಲಿಕಾಳನ್ನು ಭೇಟಿಯಾಗುತ್ತಾನೆ. ಇಲ್ಲಿಂದ ಓಡಿ ಹೋಗಿ ಮದುವೆಯಾಗೋಣ ಬಾ ಎನ್ನುತ್ತಾನೆ. ಆದೆ ತುಲಿಕಾ ಒಪ್ಪುವುದಿಲ್ಲ. ನಾನು ಮದುವೆಯಾಗುವುದಾದರೆ ನಿನ್ನನ್ನೇ, ತಂದೆಗೆ ತಿಳಿಸಿಯೇ ಮದುವೆಯಾಗುತ್ತೇನೆ ಎಂದು ಸುಂದರವಾಗಿ ನಗುತ್ತಾಳೆ. ತನಗೆ ಇಷ್ಟವಿಲ್ಲದಿದ್ದರೂ ತಂದೆಗಾಗಿ ಆ ನಿಶ್ಚಿತಾರ್ಥದ ಶಾಸ್ತ್ರ ಮಾಡಿಕೊಳ್ಳುವ ತುಲಿಕಾ ತನ್ನ ಪರಿವಾರದೊಡನೆ ವಾಪಸ್ ದೆಹಲಿಗೆ ಹೊರಡುತ್ತಾಳೆ. ತುಲಿಕಾಳಿಗೆ ತಿಳಿಯದಂತೆ ಅಮೃತ್ ಸಹ ತನ್ನ ಗೆಳೆಯನೊಂದಿಗೆ ತುಲಿಕಾ ಪಯಣಿಸುವ ಅದೇ ಸೂಪರ್ ಫಾಸ್ಟ್ ರೈಲಿನಲ್ಲಿ ದೆಹಲಿಗೆ ಹೊರಡುತ್ತಾನೆ. ಅಚಾನಕ್ ಆಗಿ ರೈಲಿನಲ್ಲಿ ತುಲಿಕಾಳನ್ನು ಸಂಧಿಸುವ ಅಮೃತ್ ಅವಳನ್ನು ಟಾಯ್ಲೆಟ್ ಕಮೋಡ್ ಮೇಲೆ ಕೂಡಿಸಿ ತಾನು ತಂದಿದ್ದ ಉಂಗುರವನ್ನು ತೊಡಿಸಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾನೆ. ಇಬ್ಬರೂ ಸಂಭ್ರಮ ಪಡುತ್ತಾರೆ. ಸುಮ್ಮಾನ ಪಡುತ್ತಾರೆ. ತಮ್ಮ ಮುಂದಿನ ಬದುಕಿನ ಬಗ್ಗೆ ಕನಸು ಕಾಣುತ್ತಾರೆ. ಆದರೆ ವಿಧಿಯಾಟವೇ ಬೇರೆ ಅಲ್ಲವೇ?
undefined
ಅರ್ಧ ದಾರಿ ಕ್ರಮಿಸಿದ ನಂತರ ಶಸ್ತ್ರಧಾರಿಗಳಾದ ಡಕಾಯಿತರ ಗುಂಪೊಂದು ರೈಲಿನೊಳಗೆ ಪ್ರವೇಶಿಸುತ್ತಾರೆ. ಇವರ ಮುಂದಾಳತ್ವ ಅತ್ಯಂತ ಕ್ರೂರಿಯೂ ಕುತಂತ್ರಿಯೂ ಆದ ಫನಿ (ರಾಘವ್ ಜುಯಲ್) ವಹಿಸಿರುತ್ತಾನೆ. ಇವನು ಬೆನಿ ಎಂಬ ಕುಖ್ಯಾತ ಡಕಾಯತನ ಮಗ. (ಆಶಿಷ್ ವಿದ್ಯಾರ್ಥಿ) ಇವರು ಐವತ್ತೂ ಜನ ಒಂದೇ ಪರಿವಾರದವರು. ಇನ್ನೊಂದು ಸ್ಟೇಷನ್ ನಲ್ಲಿ ಬೆನಿ ಮತ್ತು ಕೆಲವು ಜನರು ಫನಿಗಾಗಿ ಕಾಯುತ್ತಿರುತ್ತಾರೆ. ಕೆಲವು ನಿರ್ದಿಷ್ಟ ಬೋಗಿಗಳಲ್ಲಿ ಮಾತ್ರ ಡಕಾಯತಿ ಮುಗಿಸಿ ಸಿಕ್ಕಿದ್ದಷ್ಟು ದೋಚಿಕೊಂಡು ಮುಂದಿನ ಸ್ಟೇಷನ್ ನಲ್ಲಿ ಫನಿ ಮತ್ತು ಸಂಗಡಿಗರು ಇಳಿಯಬೇಕು, ಅಲ್ಲಿ ಗಾಡಿಗಳಲ್ಲಿ ಬೆನಿ ಮತ್ತು ಸಂಗಡಿಗರು ಕಾಯುತ್ತಿದ್ದು, ಇವರನ್ನು ಪಿಕ್ ಮಾಡಿಕೊಂಡು ಪರಾರಿಯಾಗುವುದು ಇದು ಅವರ ಯೋಜನೆಯಾಗಿರುತ್ತದೆ.
ಬಲದೇವ್ ಸಿಂಗ್ ಠಾಕೂರನನ್ನು ನೋಡಿದ ಹಿರಿಯ ಡಕಾಯಿತ ಬಬನ್ ಠಾಕೂರ್ ಒಬ್ಬ ಕೊಟ್ಯಧಿಪತಿ ಎಂದು ಗೊತ್ತಾಗಿ ಫನಿಗೆ ಹೇಳುತ್ತಾನೆ. ಫನಿಗೆ ಜಾಕ್ ಪಾಟ್ ಹೊಡೆದಷ್ಟು ಖುಷಿಯಾಗುತ್ತದೆ. ಬಬನ್ ಠಾಕೂರನ ಹೆಂಡತಿಯನ್ನು ಅಟ್ಯಾಕ್ ಮಾಡಿದಾಗ ಹೊಡೆದಾಟದಲ್ಲಿ ವೀರೇಶ್ ಬಬನ್ನನ್ನು ಕೊಂದುಬಿಡುತ್ತಾನೆ. ಇಲ್ಲಿ ಡಕಾಯಿತರ ಬಳಿ ಬಂದೂಕುಗಳು ರಿವಲ್ವಾರ್ ಗಳು ಇರುವುದಿಲ್ಲ. ಕೇವಲ ಮಚ್ಚು ಲಾಂಗ್ ಕತ್ತಿ ಮೊದಲಾದ ಹರಿತವಾದ ಆಯುಧಗಳಿರುತ್ತದೆ. ವೀರೇಶ್ ಹಾಗೂ ಅಮೃತ್ ಬಳಿ ಕೂಡ ರಿವಲ್ವಾರ್ ಇರುವುದಿಲ್ಲ. ಅವರು ನುರಿತ ಕಮಾಂಡೋಗಳಾದ್ದರಿಂದ ಸಿಕ್ಕಿದ ವಸ್ತುಗಳನ್ನೇ ತಮ್ಮ ಆಯುಧ ಮಾಡಿಕೊಳ್ಳುತ್ತಾರೆ. ಹಾಗೂ ಡಕಾಯಿತರ ಬಳಿ ಇರುವ ಆಯುಧಗಳನ್ನು ಹೊಡೆದಾಟದಲ್ಲಿ ಕಸಿಯುತ್ತಾರೆ. ರೈಲ್ವೇ ಪೊಲೀಸ್ ಇದ್ದರೂ ಅವರು ಮುಂದಿನ ಬೋಗಿಯಲ್ಲಿ ಇರುವುದರಿಂದ ಅವರಿಗೆ ಬಹಳ ಹಿಂದೆ ಇರುವ ಬೋಗಿಗಳಲ್ಲಿ ನಡೆಯುವ ಈ ವಿದ್ಯಮಾನ ಹಿಂಸಾಚಾರ ಅರಿವಿಗೆ ಬರುವುದಿಲ್ಲ. ರಾತ್ರಿ ಕಗ್ಗತ್ತಲು ಹಾಗೂ ಸೂಪರ್ ಫಾಸ್ಟ್ ಆಗಿ ಓಡುವ ರೈಲು ಡಕಾಯಿತರಿಗೆ ಸಹಾಯ ಮಾಡುತ್ತದೆ.
ಉಲಝ್: ರಾಜತಾಂತ್ರಿಕ ಜಾಲದಲ್ಲಿ ಭಾರತೀಯ ರಾಯಭಾರಿ
ಬಬನ್ ಸತ್ತು ಬಿದ್ದಾಗ ಸಹಜವಾಗಿ ಫನಿ ಆಕ್ರೋಶಗೊಳ್ಳುತ್ತಾನೆ ಹಾಗೂ ಬಬನ್ ನ ಮಗ ರವಿ ಕೂಡ ಕ್ರೋಧದಿಂದ ವೀರೇಶನ ಮೇಲೆ ಅಟ್ಯಾಕ್ ಮಾಡುತ್ತಾರೆ. ವೀರೇಶ್ ತೀವ್ರವಾಗಿ ಗಾಯಗೊಳ್ಳುತ್ತಾನೆ ಆದರೂ ರೋಷಾವೇ಼ದಿಂದ ಹೋರಾಡುತ್ತ ತನ್ನ ಗೆಳೆಯನಿಗೆ ಸಹಾಯ ಮಾಡುತ್ತಾನೆ. ಅಮೃತ್ ಅಂತೂ ಭೀಮನಂತೆ ಶತ್ರುಗಳ ಮೇಲೆ ಬಿದ್ದು ಹೋರಾಡುತ್ತಾನೆ. ಚಿತ್ರ ಆರಂಭವಾದ ಇಪ್ಪತ್ತು ನಿಮಿಷಗಳಲ್ಲಿ ಶುರುವಾಗುವ ಈ ಹೋರಾಟ ಅವಿರತವಾಗಿ ಚಿತ್ರ ಮುಗಿಯುವವರೆಗೂ ನಡೆಯುತ್ತದೆ. ಚಿತ್ರದ ಹೆಸರೇ ಕಿಲ್ ಅಂದರೆ ಸಾಯಿಸು. ಹಾಗಾಗಿ ಈ ಚಿತ್ರದ ಉದ್ದಕ್ಕೂ ಮಾರಣಹೋಮ ನಡೆಯುತ್ತದೆ. ಅಮೃತ್ ಭೀಷಣವಾಗಿ ಕಾದಾಡುತ್ತಾನೆ. ಗಾಯಗೊಂಡಿದ್ದರೂ ವೀರೇಶ ಸಹ ಹೋರಾಡುತ್ತಾನೆ. ಫನಿಯ ಕಣ್ಣು ತುಲಿಕಾಳ ಮೇಲೆ ಬೀಳುತ್ತದೆ. ಅವಳ ಬಳಿ ಅಸಭ್ಯವಾಗಿ ನಡೆದುಕೊಳ್ಳುತ್ತಾನೆ. ಇದರಿಂದ ಕ್ರುದ್ಧಗೊಂಡ ಅಮೃತ್ ಫನಿ ತೀವ್ರವಾಗಿ ಗಾಯಗೊಳ್ಳುವಂತೆ ಮಾಡುತ್ತಾನೆ. ಅಮೃತ್ ಮತ್ತು ವೀರೇಶ್ ಇಬ್ಬರೂ ವೀರಾವೇಶದಿಂದ ಒಬ್ಬೊಬ್ಬ ಡಕಾಯಿತನನ್ನೂ ಕೊಚ್ಚಿಹಾಕುತ್ತಾರೆ. ಇದೇನು ರೈಲಿನ ಬೋಗಿಗಳೊ ಕುರುಕ್ಷೇತ್ರವೋ ಎಂಬಂತೆ ಪ್ರೇಕ್ಷಕನಿಗೆ ಭಾಸವಾದರೆ ಅಚ್ಚರಿಯಿಲ್ಲ. ರೈಲಿನ ಬೋಗಿಗಳು ರಕ್ತಸಿಕ್ತವಾಗುತ್ತದೆ. ಇದರಲ್ಲಿ ರವಿ ತುಲಿಕಾಳ ಚಿಕ್ಕಪ್ಪನ ಮಗನನ್ನು ಕೊಂದು ಬಿಡುತ್ತಾನೆ. ಟ್ರೈನ್ ಚಲಿಸುತ್ತಲೇ ಇದೆ.
ಮಧ್ಯೆ ಬೆನಿ ಮಗನಿಗೆ ಫೋನ್ ಮಾಡುತ್ತಾನೆ. ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು. ಬಬನ್ ನ ಮಗ ತಂದೆ ಸತ್ತುಹೋಗಿದ್ದಾಗೆ ಹೇಳಿಬಿಡುತ್ತಾನೆ. ಬೆನಿಗೆ ಆಘಾತವಾಗುತ್ತದೆ. ಬೆನಿ ಒಂದು ಸ್ಟೇಷನ್ ನಲ್ಲಿ ತನ್ನ ಬೆಟಾಲಿಯನ್ ರೊಡನೆ ಟ್ರೈನ್ ಹತ್ತುತ್ತಾನೆ. ಒಟ್ಟು 30-50 ಜನ ಡಕಾಯಿತರಾಗುತ್ತಾರೆ. ಅಮೃತ್ ಹಾಗೂ ವೀರೇಶ್ ವೀರಾವೇಶದಿಂದ ಹೋರಾಡುತ್ತಾರೆ. ತುಲಿಕಾ ಫನಿಗೆ ಗಾಯ ಮಾಡುತ್ತಾಳೆ. ಇದರಿಂದ ಕೋಪಗೊಂಡ ಫನಿ ತುಲಿಕಾಳಿಗೆ ಚಾಕುವಿನಿಂದ ಇರಿದು ಓಡುತ್ತಿರುವ ಟ್ರೈನ್ ಹೊರಗೆ ನೂಕಿ ಬಿಡುತ್ತಾನೆ. ತುಲಿಕಾಳ ಮರಣ ಕಣ್ಣಾರೆ ಕಂಡ ಅಮೃತ್ ಕ್ರುದ್ಧನಾಗುತ್ತಾನೆ. ಅಮೃತ್ ಡಕಾಯಿತರನ್ನು ಸಿಕ್ಕಸಿಕ್ಕಂತೆ ಬೇಟೆಯಾಡುತ್ತಾನೆ. ವೀರ ಅಭಿಮನ್ಯು ಅತಿರಥರನ್ನು ಎದುರಿಸುವಂತೆ ಅಮೃತ್ ಸಹ ಡಕಾಯಿತರನ್ನು ಕೊಚ್ಚಿ ಹಾಕುತ್ತಾನೆ. ಅವನಿಗೆ ಗಾಯ ಗೊಂಡ ವೀರೇಶನ ಸಹಾಯ ಹೆಚ್ಚು ಸಿಗುವುದಿಲ್ಲ. ವೀರೇಶ್ ನನ್ನು ಫನಿ ಸಾಯಿಸಿ ಬಿಡುತ್ತಾನೆ.
ದಿ ಗೋಟ್ ಲೈಫ್ (ಆಡು ಜೀವಿತಂ): ಸೌದಿಗೆ ಹೋಗಿ ನೋವು ಅನುಭವಿಸಿದ ಭಾರತೀಯರ ಕಥೆ!
ಬಲದೇವ್ ಠಾಕೂರ್ ಮತ್ತು ಅವನ ಪರಿವಾರದವರು ರೈಲ್ವೇ ಸಿಬ್ಬಂದಿ ಗಮನ ಸೆಳೆಯಲು ಒಂದು ಉಪಾಯ ಮಾಡುತ್ತಾರೆ. ಕೆಲವು ಬಟ್ಟೆಗಳನ್ನು ಗುಡ್ಡೆ ಹಾಕಿ ಬೆಂಕಿಯಿಡುತ್ತಾರೆ. ಮುಂದಿನ ನಿಲ್ದಾಣದಲ್ಲಿ ರೈಲ್ವೆ ಸಿಬ್ಬಂದಿ ಬೆಂಕಿಯನ್ನು ನೋಡಿ ರೈಲಿನ ಒಳಗಿರುವ ಪೊಲೀಸ್ ಸಿಬ್ಬಂದಿಗೆ ಫೋನ್ ಮಾಡಿ ಎಚ್ಚರಿಸುತ್ತಾರೆ. ಪೊಲೀಸ್ ಗಾಬರಿಯಿಂದ ಬಂದೂಕು ತೆಗೆದು ಕೊಂಡು ಯಾವ ಬೋಗಿಯಲ್ಲಿ ಬೆಂಕಿ ಹೊತ್ತಿ ಕೊಂಡಿದೆ ಎಂದು ಪರೀಕ್ಷಿಸುತ್ತ ಬರುತ್ತಾರೆ. ಅವರ ಬಂದೂಕಿಗೆ ಸಿಕ್ಕಿ ಕೆಲವು ಡಕಾಯಿತರು ಸಾಯುತ್ತಾರೆ. ಆದರೆ ಡಕಾಯಿತರ ಹತ್ಯಾರುಗಳಿಗೆ ಮೂವರು ಪೊಲೀಸರೂ ಪ್ರಾಣ ತೆರುತ್ತಾರೆ. ಅಮೃತ್ ಒಬ್ಬನೇ ಈಗ ಹೋರಾಟಗಾರ. ಮೈಮೇಲೆ ಭೂತದ ಆವಾಹನೆ ಆದಂತೆ ಡಕಾಯಿತರನ್ನು ಕೊಚ್ಚಿ ಕೊಲ್ಲುವ ಅಮೃತ್ ಕೊನೆಗೂ ಬಲದೇವ ಪರಿವಾರವನ್ನು ಉಳಿಸುವಲ್ಲಿ ಸಫಲನಾಗುತ್ತಾನೆ. ಆದರೆ ಅದಕ್ಕಾಗಿ ಅವನ ಜೀವದ ಜೀವವಾಗಿದ್ದ ತುಲಿಕಾಳನ್ನು ಕಳೆದು ಕೊಳ್ಳಬೇಕಾಗುತ್ತದೆ. ಡಕಾಯಿತರು ಒತ್ತೆ ಇಟ್ಟುಕೊಂಡಿದ್ದ ತುಲಿಕಾಳ ಸಹೋದರಿಯನ್ನು ಸುರಕ್ಷಿತವಾಗಿ ತಂದೆ ಬಲದೇವ್ ಗೆ ಒಪ್ಪಿಸುತ್ತಾನೆ.
ಚಿತ್ರಪೂರ್ತಿ ಬರೀ ಹೊಡೆದಾಟ ಕೊಲೆಗಳೇ ಆದರೂ, ಎಲ್ಲಿಯೂ ಬೋರಾಗದಂತೆ ಚಿತ್ರಿಸಿರುವ ಜಾಣ್ಮೆ ನಿರ್ದೇಶಕರದ್ದು. ಭೀಭತ್ಸ ದೃಶ್ಯಗಳು ರಕ್ತಸಿಕ್ತ ದೇಹ ಛಿದ್ರವಾದ ದೇಹಗಳು ನೋಡುವಾಗ ಹೇವರಿಕೆ ಹುಟ್ಟಿಸುತ್ತದೆ. ಪ್ರತಿಯೊಂದು ಸೀನ್ ತವಕ ಕಾತುರದಿಂದ ಕೂಡಿದೆ. ತುಲಿಕಾಳ ಮೃದುವಾದ ಮೋಹಕ ಸೌಂದರ್ಯ ಮನಸ್ಸಿಗೆ ಹಿತ ನೀಡುತ್ತದೆ. ಅವಳ ಸುಂದರ ನಗೆ ನಮ್ಮ ಹೃದಯದಲ್ಲಿ ಬೆಚ್ಚಗೆ ಇಳಿದು ಬಿಡುತ್ತದೆ. ಅಮೃತ್ ನ ಶೌರ್ಯ ಸಾಹಸಗಳು ಎನ್‌ಎಸ್‌ಜಿ ಗೆ ನಮಿಸುವಂತೆ ಮಾಡುತ್ತದೆ. ತುಲಿಕಾಳ ಸಾವು ಮನಸ್ಸಿಗೆ ಖೇದ ಹುಟ್ಟಿಸಿದರೂ, ಅಮೃತ್ ನ ಸಾಹಸ ಮೈನವಿರೇಳುವಂತೆ ಮಾಡಿದೆ. ರೈಲ್ವೆ ಡಕಾಯತಿ ಭೀತಿ ಹುಟ್ಟಿಸುತ್ತದೆ. ಆದರೆ ಸಾಹಸ ದೃಶ್ಯಗಳನ್ನು ಇಷ್ಟ ಪಡುವವರು ಈ ಚಿತ್ರ ಒಮ್ಮೆಯಾದರೂ ನೋಡಬೇಕು. ಚಿತ್ರದ ತುಂಬೆಲ್ಲ ಹೊಡಿ, ಕೊಚ್ಚು, ಕೊಲ್ಲು ಇವೇ ಆದರೂ ಡಕಾಯಿತರಿಗೆ ಒಂದು ಅಂತ್ಯ ಕಾಣಿಸುವುದು ಖುಷಿ ಕೊಡುತ್ತದೆ.