ಪ್ರತಿಯೊಂದೂ ಅನಾಚಾರ, ಅತ್ಯಾಚಾರ, ದೌರ್ಜನ್ಯವೂ ಅಪಾರಧವೇ, ಶಿಕ್ಷಾರ್ಹವೇ. ಆದರೆ ಜನರ ನಂಬಿಕೆಯ ಜೊತೆಗೆ ಇದನ್ನು ಮಾಡಿದಾಗ, ಆಯಾ ಸ್ಥಾನದಲ್ಲಿ, ಅಧಿಕಾರದಲ್ಲಿದ್ದು ಇದನ್ನು ನಡೆಸಿದಾಗ ಅದೇ ಅನಾಚಾರ, ಅಪರಾಧ ಮಹಾಪರಾಧವಾಗುತ್ತದೆ, ಅತಿ ಅಮಾನುಷ ಎನ್ನಿಸಿಕೊಂಡುಬಿಡುತ್ತದೆ.
- ತೇಜಸ್ವಿನಿ ಹೆಗಡೆ
ಕೇವಲ ಓರ್ವ ವ್ಯಕ್ತಿಯೇ ಸಾಕು…
undefined
ನಾನು ಸೆಕೆಂಡ್ ಪಿ.ಯು.ಸಿಯಲ್ಲಿದ್ದಾಗ ಯಂಡಮೂರಿಯವರ ಕಾದಂಬರಿ `ಅಂತಿಮ ಹೋರಾಟ/‘ಅಂತಿಮ ಯುದ್ಧ’ ಏನೋ ಇದ್ದಿರಬೆಕು ಹೆಸರು ಸರಿಯಾಗಿ ನೆನಪಿಲ್ಲ, ಇದನ್ನು ಓದಿ ಬೆಚ್ಚಿಬಿದ್ದಿದೆ! ಆ ಕಾದಂಬರಿಯಲ್ಲಿ ಇಬ್ಬರು ನಾಯಕಿಯರು. ಒಬ್ಬಳ ಹೆಸರು ನೆನಪಿಲ್ಲ, ಆದರೆ ಮತ್ತೊಬ್ಬಳ ಹೆಸರು ‘ಸಾಹಿತಿ’ ಎಂದು ಪಕ್ಕಾ ನೆನಪಿದೆ. ಅದಲು ಬದಲಾಗಿ ಬೆಳೆದು ವಿಭಿನ್ನ ಸಾಮಾಜಿಕ ನೆಲೆಯಲ್ಲಿ ಬೆಳೆಯುತ್ತಾ ಹೇಗೆ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳುತ್ತಾರೆ ಎನ್ನುವುದು ಆ ಕಾದಂಬರಿಯ ವಸ್ತು. ಓರ್ವಳು Fragile, weak minded… ಮತ್ತೊಬ್ಬಳು ತುಂಬ ಸ್ಟ್ರಾಂಗ್, ಗಟ್ಟಿಗಿತ್ತಿ. ಇದಕ್ಕೆ ಕಾರಣ ಇಬ್ಬರೂ ಬೆಳೆಯುವ ಪರಿಸರ. ಅವರಲ್ಲೋರ್ವ ನಾಯಕಿ ಪೋಲೀಸ್ ಅಧಿಕಾರಿಯಾಗಿ ತನ್ನ ನಿಜತಾಯಿಯನ್ನು ಹುಡುಕಿ ಹೋದಾಗ, ಆಕೆ ಸನ್ಯಾಸಿ ವೇಷಧಾರಿಯಾದ ಪರಮ ನೀಚ, ಕಪಟಿಯ ಕಪಿಮುಷ್ಟಿಯಲ್ಲಿ ನರಳುತ್ತಿರುವುದನ್ನು ಕಾಣುತ್ತಾಳೆ. ಆತ ಅವಳ ತಾಯಿಯನ್ನು ಮಾತ್ರವಲ್ಲ, ತನ್ನ ಮಗಳೆಂದು ಸಾಕುತ್ತಿದ್ದ ಮತ್ತೋರ್ವ ನಾಯಕಿಯನ್ನೂ ಅತ್ಯಾಚಾರ ಮಾಡಿ ಹಿಂಸಿಸುತ್ತಿರುತ್ತಾನೆ, ಇದೆಲ್ಲ ಸ್ವಂತ ತಾಯಿಗೇ ತನ್ನ ಮಗಳು ಪಡುತ್ತಿರುವ ಯಾತನೆಯ ಅರಿವೇ ಇರುವುದಿಲ್ಲ! ಜೀವದ ಕೊನೆಯ ಉಸಿರಿಗೂ ಆಕೆ ಆ ಕಾಮುಕ ಸನ್ಯಾಸಿ ವೇಷಧಾರಿಯ ಸತ್ಯಕ್ಕೆ ತನ್ನನು ತೆರೆದುಕೊಳ್ಳುವುದೇ ಇಲ್ಲ! ಪೋಲೀಸ್ ಅಧಿಕಾರಿಯಾದ ಆ ನಾಯಕಿ ಒಬ್ಬಳೇ ಅವನ ವಿರುದ್ಧ ನಿಂತು ಹೋರಾಡಿ ಕೆಡವಿಹಾಕುತ್ತಾಳೆ.
ಥ್ರಿಲ್ ಅನ್ನಿಸಿದ್ದರೂ ನನಗೆ ಆಗ ಈ ಕಾದಂಬರಿಯನ್ನೋದಿ, 'ಅಯ್ಯಾ, ಈ ಹಿಪ್ನೋಟಿಸಂ ಎಲ್ಲ ಎಂತ ಮಣ್ಣಗಂಟಿ.. ಇದೆಲ್ಲ ಇರ್ತದಾ.. ಎಷ್ಟು ದಡ್ಡಿ ಆ ತಾಯಿ.. ಆ ಮಗಳಾದರೂ ಯಾಕೆ ಸುಮ್ಮನೇ ಸಹಿಸಿದ್ಲು, ಇದೆಲ್ಲ ನಡೆಯೋದು ಹೌದಾ...?'- ಎಂದೆಲ್ಲ ನಾನು ಆಗ ಸಂದೇಹಿಸಿದ್ದೆ, ಸ್ವಲ್ಪ ನಿರಾಕರಿಸಿಯೂ ಇದ್ದೆ. ವಯಸ್ಸು ಆಗ ಹಾಗಿತ್ತು ಮತ್ತು ನನ್ನ ಸದೃಢ ಮನಸ್ಸು ಇದನ್ನು ಒಪ್ಪಲು ಹಿಂದೇಟುಹಾಕಿತ್ತು. ಆದರೆ.., ಆದರೆ ನಮ್ಮ ಮನಸ್ಸು ದುರ್ಬಲಗೊಂಡಾಗ ಇವೆಲ್ಲವೂ ಕೆಲಸ ಮಾಡಿಬಿಡುತ್ತವೆ ಎನ್ನುವುದನ್ನು ನಾನು ಕ್ರಮೇಣ ಸುತ್ತಲೂ ನಡೆದ ಹಲವು ಘಟನೆಗಳಿಂದ ಅರಿತುಕೊಳ್ಳುತ್ತ ಹೋದೆ.
ಪದೇ ಪದೇ ತಲೆ ಮೇಲೆ ಸೆರಗು ಮುಚ್ಚಿಕೊಳ್ತಿದ್ದ ಮಹಿಳೆ ನೋಡಿಯೇ ಬ್ಯುಸಿನೆಸ್ ಶುರು ಮಾಡಿದ ಯುವತಿ…
ಪ್ರತಿಯೊಂದೂ ಅನಾಚಾರ, ಅತ್ಯಾಚಾರ, ದೌರ್ಜನ್ಯವೂ ಅಪಾರಧವೇ, ಶಿಕ್ಷಾರ್ಹವೇ. ಆದರೆ ಜನರ ನಂಬಿಕೆಯ ಜೊತೆಗೆ ಇದನ್ನು ಮಾಡಿದಾಗ, ಆಯಾ ಸ್ಥಾನದಲ್ಲಿ, ಅಧಿಕಾರದಲ್ಲಿದ್ದು ಇದನ್ನು ನಡೆಸಿದಾಗ ಅದೇ ಅನಾಚಾರ, ಅಪರಾಧ ಮಹಾಪರಾಧವಾಗುತ್ತದೆ, ಅತಿ ಅಮಾನುಷ ಎನ್ನಿಸಿಕೊಂಡುಬಿಡುತ್ತದೆ.
ಸನ್ಯಾಸತ್ವ, ಗುರು ಮಾರ್ಗದರ್ಶನ, ಗುರುಪರಂಪರೆ, ಮಠ - ಇವೆಲ್ಲ ನಮ್ಮಲ್ಲಿ ಪರಮ ಶ್ರೇಷ್ಠ ಸ್ಥಾನವನ್ನು ಪಡೆದುಕೊಂಡಿರುವಂಥವು. ಅಧ್ಯಾತ್ಮದ ದಾರಿಯಲ್ಲಿ ಸಹಕಾರಿಯಾಗಿ ನಮ್ಮೊಂದಿಗೆ ಬರುವಂಥವು, ಮುನ್ನೆಡೆಸುವಂಥವು. ಆದರೆ ಕೆಲವು ಸ್ವಾರ್ಥಿ, ಕಪಟಿ, ಕಾಮುಕರ ಹಗಲುವೇಷದಿಂದ ಎಲ್ಲರ ಮೇಲೆ ಅಪನಂಬಿಕೆ, ಅನುಮಾನ, ಗೊಂದಲ ಹುಟ್ಟಿಹಾಕುವಂತಹ ವಿಷಮಸ್ಥಿತಿಯಲ್ಲಿ ನಾವಿಂದು ಇದ್ದೇವೆ.
ಜನರ ಮುಗ್ಧ ನಂಬಿಕೆಗೆ ಕುರುಡು ಅನುಕರಣೆ, ವಿವೇಕರಹಿತ ಆಚರಣೆಗಳನ್ನೇ ಬಂಡವಾಳಮಾಡಿಕೊಳ್ಳುವ ಇಂಥವರು ಕೇವಲ ಐಶ್ವರ್ಯ, ಕೀರ್ತಿ, ಸ್ಥಾನ-ಮಾನ ಪಡೆದುಕೊಂಡಿದ್ದರೂ ಒಂದಂಶ ಕ್ಷಮಿಸಿಬಿಡಬಹುದಿತ್ತೆನೋ! ಆದರೆ ಅಮಾಯಕ ಹೆಣ್ಣುಮಕ್ಕಳನ್ನು, ಪಾಪದ ಬಾಲಕ/ಬಾಲಕಿಯರನ್ನು ಇನ್ನಿಲ್ಲದಂತೇ ಹಿಂಸಿಸಿ, ದೈಹಿಕವಾಗಿ ಶೋಷಿಸಿ ಬಳಸಿಕೊಂಡು ತಮ್ಮ ಚಪಲ ತೀರಿಸಿಕೊಳ್ಳುವ ರಕ್ಕಸೀ ವಿಕೃತಿಗೆ ಯಾತನಾಮಯ ಸಾವೂ ಪರಿಹಾರವಲ್ಲ ಅನ್ನಿಸಿಬಿಡುತ್ತದೆ. ‘ನಿನ್ನ ಉದ್ಧಾರ ನಿನೇ ಮಾಡಿಕೊಳ್ಳಬೇಕು, ಅದಕ್ಕೆ ಸರಿಯಾದ ಗುರುವಿನ ಅವಕಾಶ ಬಿದ್ದಾಗ ‘ಕಣ್ತೆರೆದು’ ಹುಡುಕು’ ಎಂಬುದನ್ನು ಮರೆತುಬಿಡುವ ಅಮಾಯಕರು ಬಹುಬೇಗ ಇದಕ್ಕೆ ಬಲಿಯಾಗಿಬಿಡುತ್ತಾರೆ. ಇಂತಹ ಸತ್ಯಕಥೆಯನ್ನಾಧಾರಿತ ಒಂದೊಳ್ಳೆಯ ಚಲನಚಿತ್ರವೇ "Sirf Ek Bandaa Kaafi Hai"!
ಅಸಾರಾಂ ಬಾಬು ಎನ್ನುವ ಪಾಖಂಡಿಯ ಪ್ರಕರಣ ಬಹುತೇಕರಿಗೆ ಗೊತ್ತಿರೋದೇ. ತನ್ನ ಆಶ್ರಮದಲ್ಲಿ ಆತ ನಡೆಸಿದ ಅವ್ಯಾಹತ ಅತ್ಯಾಚಾರಗಳು, ದುರಾಚಾರಗಳು ಒಂದಿಷ್ಟು ಹೊರಗೆ ಈಗಾಗಲೇ ಬಂದಿವೆ. ಅದೆಷ್ಟೋ ಪ್ರಭಾವಿಗಳ ಕುಮ್ಮಕ್ಕು, ಬೆಂಬಲ ಆತನ ಹಿಂದೆ ಇತ್ತೋ ಗೊತ್ತಿಲ್ಲ. ಹಲವು ಪ್ರಕರಣಗಳನ್ನು ಮುಚ್ಚಿಹಾಕಿದ್ದಿರಲೂಬಹುದು. ಆದರೆ ಪಾಪದ ಕೊಡ ತುಂಬಿದಾಗ ಓರ್ವ ದಿಟ್ಟ ಬಾಲಕಿ, ಆಕೆಯ ಹೆತ್ತವರು, ಹಾಗೂ ಓರ್ವ ವಕೀಲ ಒಗ್ಗಟ್ಟಿನಿಂದ ಹೋರಾಡಿದಾಗ ಅನ್ಯಾಯಕ್ಕೆ ಕೊನೆಗೂ ಸೋಲಾಗುತ್ತದೆ. ಇದೆಲ್ಲ ಸಿನೀಮಿಯ ಅನ್ನಿಸಿದರೂ ನಿಜದಲ್ಲೂ ಹಾಗೇ ಆಗಿದೆ ಎನ್ನುವುದನ್ನು ಹುಡುಕಿ ಓದಿದಾಗ ಅರ್ಥವಾಗಿ ಬೆರಗಾಗುತ್ತದೆ, ಸಮಾಧಾನವಾಗುತ್ತದೆ.
ಸುಬ್ರಹ್ಮಣ್ಯ ಸ್ವಾಮಿ, ಸಲ್ಮಾನ್ ಖುರ್ಷಿದ್, ಜೇಠ್ಮಲಾನಿ - ಈ ಮೂರು ಪ್ರಸಿದ್ಧ ಲಾಯರುಗಳೇ ಬಾಬಾನ ಬೇಲ್‌ಗಾಗಿ, ಬಿಡುಗಡೆಗಾಗಿ ಬಂದಿದ್ದರು ಎಂಬುದನ್ನು ಓದಿದಾಗ ಬೆಚ್ಚಿಬಿದ್ದೆ!
ಇವೆರೆಲ್ಲರಿಗೂ ತಮಗೆ ಕರತಲಾಮಲವಾಗಿದ್ದ ಕಾನೂನು ಸೆಕ್ಷನ್ನುಗಳನ್ನು ಬಗ್ಗಿಸಲಾಗಲಿಲ್ಲ ಎನ್ನುವುದು ಅರಿತಾಗ ಅಯ್ಯಬ್ಬಾ ಅನ್ನಿಸಿತು. ಒಬ್ಬ ಅಸರಾಂ ಬಾಬಾ ಒಳಗೆ ಹೋದ ತಕ್ಷಣ ನಾಯಿಕೊಡೆಯಂತೆಯೇ ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿರುವ, ಹುಟ್ಟಿಕೊಂದಿರುವ ಇಂತಹ ಬಾಬಾರು ಕಮ್ಮಿಯಾಗರು. ಅದನ್ನು ತಡೆಯಲು ಇರುವ ಏಕೈಕ ಸಾಧನವೆಂದರೆ ಜನಜಾಗೃತಿ, ಸ್ವಯಂ ಜಾಗೃತಗೊಳ್ಳುವುದು.
ಇಂತಹ ವಸ್ತುನಿಷ್ಠ, ಕ್ರಿಸ್ಪ್ ಆದ ಚಲನಚಿತ್ರಗಳು ಇಂದಿನ ತುರ್ತು. ಎಲ್ಲಿಯ ಅನಗತ್ಯ ಮಸಾಲೆಗಳನ್ನು ಹಾಕದೇ, ಆ ಸಿದ್ಧಾಂತ, ಈ ಸಿದ್ಧಾಂತ, ಜನರ ನಂಬಿಕೆ, ಧರ್ಮ, ಆಚರಣೆಗಳನ್ನೆಲ್ಲ ಎಳೆದು ತಂದು, ಲೇವಡಿಮಾಡಿ ಗಬ್ಬೆಬ್ಬಿಸದೇ, ಇದ್ದುದನ್ನು ಇದ್ದ ಹಾಗೇ, ಇರುವ ಸಮಸ್ಯೆಯನ್ನು ಸರಿಯಾಗಿ, ಸೂಕ್ತರೀತಿಯಲ್ಲಿ ಹರವಿ ಎಚ್ಚರಿಸುತ್ತಿರುವುದು ಬಹಳ ಮೆಚ್ಚುಗೆಯ ಸಂಗತಿ.
ವಶೀಕರಣ ಎಂದರೆ ಆಲೋಚಿಸುವ, ಸರಿ-ತಪ್ಪುಗಳನ್ನು ವಿಶ್ಲೇಶಿಸುವ ವಿವೇಕವನ್ನು ನಶಿಸಿ ಹಾಕುವುದು, ಆಲೋಚನಾ ಶಕ್ತಿಯನ್ನು ಕುಂಠಿತಗೊಳಿಸುವುದು, ಪ್ರತಿಭಟಿಸುವ ಸಾಮರ್ಥ್ಯವನ್ನು ಕುಗ್ಗಿಸುವುದು. ನಮಗೆ ನಾವೇ ಹಾನಿಮಾಡುಕೊಳ್ಳುವಂತೆ, ಅಥವಾ ಇತರರಿಂದ ನಮಗೆ ಹಾನಿಯಾಗುತ್ತಿದೆ ಎಂಬ ಅರಿವೂ ಮೂಡದಂತೇ ಮಾಡಿಬಿಡುವುದು. ಸ್ವಯಂ ದುರ್ಬಲಗೊಳ್ಳದೇ ಇದು ತಾಗದು. ನಮ್ಮೊಳಗಿನ ಆತ್ಮವಿಶ್ವಾಸವನ್ನು, ಶಕ್ತಿಯನ್ನು ಗುರುತಿಸಿಕೊಂದು, ಯಾರು ನಿಜಾರ್ಥದಲ್ಲಿ ಗುರುಗಳು, ಗುರುವೆನ್ನಿಸಿಕೊಳ್ಳಲು ಅರ್ಹರು ಎನ್ನುವುದನ್ನು ಮನಗಾಣುವುದು, ಗುರುತಿಸುವುದು ಅತ್ಯಗತ್ಯ.
ಹಾಂ, ಕೊನೆಯಲ್ಲೊಂದು...
ಈಗಲೂ ಅಸರಾಂ ಬಾಬಾ ಪರವಾಗಿ ಟ್ವೀಟ್ ಮಾಡುವ, ಬಿಡುಗಡೆಗೆ ಅಭಿಯಾನ ಮಾಡುವ ಕುರುಡು ಜನರ ದಂಡೇ ಸೋಶಿಯಲ್ ಮೀಡಿಯಾದಲ್ಲಿ ಇದೆ. ಟ್ವಿಟ್ಟರ್ ಅಲ್ಲಿ ಧಾರಾಳ ಕಾಣುತ್ತಿರುತ್ತೇನೆ. ಅವರ ಪ್ರಕಾರ ಬಾಬಾ ಪರಿಶುದ್ಧ, ಸಿಕ್ಕಿಸಿಹಾಕಲಾಗಿದೆ. ಇನ್ನು ಕೆಲವರ ಪ್ರಕಾರ, ಆತ ಮಹಾನ್ ವ್ಯಕ್ತಿ, ಏನು ಮಾಡಿದರೂ ತಪ್ಪೇ ಅಲ್ಲ! ಇವರಿಗೂ, ಮೊನ್ನೆ ಪುಟ್ಟ ಬಾಲಕರ ಕತ್ತು ಸೀಳಿಹಾಕಿದವರನ್ನು ಬೆಂಬಲಿಸುತ್ತಿರುವವರಿಗೂ ಏನೂ ವ್ಯತ್ಯಾಸವಿಲ್ಲ!
ಗ್ಯಾರೇಜ್ ಕ್ವೀನ್, ಸೀತಮ್ಮಳ ಸೊಸೆ 'ರೌಡಿ ಬೇಬಿ ಸತ್ಯ' ಈಗ ಪೊಲೀಸ್ ಇನ್ಸ್‌ಪೆಕ್ಟರ್!
ಮುದ್ದಾಂ ಒಮ್ಮೆ ಈ ಚಲನಚಿತ್ರವನ್ನು ನೋಡಿ. #Zee5 OTT ಯಲ್ಲಿ ಲಭ್ಯವಿದೆ. ಎಂದಿನಂತೇ ನನ್ನಚ್ಚುಮೆಚ್ಚಿನ ಕ್ಲಾಸಿಕ್ ನಟ ಮನೋಜ್ ಬಾಜಪೇಯಿ ಅದ್ಭುತವಾಗಿ ನಟಿಸಿದ್ದಾನೆ. ಹೀರೋಯಿನ್ನು, ಡುಯೆಟ್ ಸಾಂಗು, ಐಟಮ್ ಸಾಂಗು, ಕ್ರಾಂತಿಕಾರಿ ಹಾಡು ಯಾವುದೂ ಇಲ್ಲದೇ ನಮ್ಮನ್ನು ಬಡಿದೆಬ್ಬಿಸುವ ವಾಗ್ಝರಿಯನ್ನುಳ್ಳ ಅಪರೂಪದ ಚಲನಚಿತ್ರವಿದು. ಖುರ್ಷಿದ್ದು, ಸುಬ್ರಹ್ಮಣ್ಯ ಸ್ವಾಮಿ, ಜೇಠ್ಮಲಾನಿ - ಇವರೆಲ್ಲರನ್ನೂ ಹೋಲುವ ಪಾತ್ರಗಳು ಬಂದು ಹೋಗುತ್ತವೆ. ಕೇವಲ ಚಲನಚಿತ್ರದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಅಪರೂಪಕ್ಕೆ ಇಂತಹ ನ್ಯಾಯ ಸಾಮಾನ್ಯರಿಗೆ ಲಭ್ಯವಿದೆ, ಪಾಪದ ಕೊಡ ತುಂಬಬೇಕಷ್ಟೆ ಎನ್ನುವುದು ಅರಿವಾಗಿ ಸಮಾಧಾನವಂತೂ ಆಗುತ್ತದೆ. Justice delayed is justice denied ಒಂದು ಆಗದಿದ್ದರೆ ಸಾಕು.
#ಚಿತ್ರಪರಿಚಯ #SirfEkBandaaKaafiHai