ಗವಿಮಠ ಅನ್ನ, ಅಕ್ಷರ ಹಾಗೂ ಆರೋಗ್ಯ ದಾಸೋಹಕ್ಕೆ ಹೆಸರುವಾಸಿ. ತ್ರಿವಿಧ ದಾಸೋಹಕ್ಕೆ ಸುಪ್ರಸಿದ್ಧಿಯಾಗಿತ್ತು. ಆದರೆ, 18ನೇ ಪೀಠಾಧಿಪತಿಗಳಾಗಿರುವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಜಾತ್ರೆಯನ್ನು ಜಾತ್ರೆಯನ್ನಾಗಿ ಆಚರಣೆ ಮಾಡುವುದಕ್ಕೆ ಸೀಮಿತವಾಗಲಿಲ್ಲ. ಪರಿಣಾಮ ಅದನ್ನೊಂದು ಸಾಮಾಜಿಕ ಜಾಗೃತಿ ಯಾತ್ರೆಯನ್ನಾಗಿ ಮಾಡಲು ಮುಂದಾದರು.
ದನಕಾಯುವ ಗುಡದಪ್ಪ ತನ್ನ ಪವಾಡದಿಂದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳಾಗುತ್ತಾರೆ. ಗವಿಮಠದ 10ನೇ ಪೀಠಾಧಿಪತಿಗಳಾಗಿದ್ದ ಶ್ರೀ ಚನ್ನಬಸವಮಹಾಸ್ವಾಮಿಗಳು ಇವರನ್ನು ಗುರುತಿಸಿ, ತನ್ನ ಶಿಷ್ಯರನ್ನಾಗಿ ಸ್ವೀಕಾರ ಮಾಡುತ್ತಾರೆ. ಮಠದ 11ನೇ ಪೀಠಾಧಿಪತಿಯಾಗಿ ನೇಮಕ ಮಾಡುತ್ತಾರೆ.
ಗುರುವಿನ ಆರಾಧಕರಾಗಿದ್ದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಗುರುವಿಗೂ ಮುನ್ನವೇ ದೇಹ ತ್ಯಜಿಸಬೇಕು ಎಂದು ತೀರ್ಮಾನಿಸಿ 1806ರಲ್ಲಿ ಬನದ ಹುಣ್ಣಿಮೆ ಮೂರು ದಿನವಾದ ಮೇಲೆ ಜೀವಂತ ಸಮಾಧಿಯಾಗಿತ್ತಾರೆ. ಈಗ ಇರುವ ಕರ್ತೃ ಗದ್ದುಗೆಯೇ ಇವರ ಜೀವಸಮಾಧಿ. ಇವರ ಜೀವಂತ ಸಮಾಧಿಯ ಪ್ರತೀಕವಾಗಿಯೇ ಪ್ರತಿ ವರ್ಷ ಅವರ ಪುಣ್ಯಸ್ಮರಣೆಯ ನಿಮಿತ್ತ ಜಾತ್ರಾ ಮಹೋತ್ಸವದ ಆಚರಣೆಯನ್ನು ಪ್ರಾರಂಭಿಸಲಾಗಿದ್ದು, ಈಗ ಜಗದಗಲ ಬೆಳೆಯುತ್ತಿದೆ.
undefined
ಸುಮಾರು 17 ಪೀಠಾಧಿಪತಿಗಳನ್ನು ಕಂಡ ಶ್ರೀ ಗವಿಮಠಕ್ಕೆ 2002 ಡಿಸೆಂಬರ್ 13ರಂದು 18 ನೇ ಪೀಠಾಧಿಪತಿಗಳಾಗಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಪಟ್ಟಾಧಿಕಾರವನ್ನು ವಹಿಸುತ್ತಾರೆ.
ಗವಿಮಠ ಶಾಲೆಯಲ್ಲಿ ಓದಲು ಬಂದ ಕಲಬುರಗಿ ಜಿಲ್ಲೆಯ ಹಾಗರಗುಂಡಿ ಗ್ರಾಮದ ಪರ್ವತಯ್ಯ ಅವರು 17ನೇ ಪೀಠಾಧಿಪತಿಗಳಾಗಿದ್ದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕೃಪೆಗೆ ಪಾತ್ರವಾಗುತ್ತಾರೆ. 6ನೇ ತರಗತಿಯಲ್ಲಿ ಇರುವಾಗಲೇ ಮುಂದಿನ ಪೀಠಾಧಿಪತಿ ಇವರೇ ಎಂದು ಮನದಲ್ಲಿ ನಿಶ್ಚಯ ಮಾಡಿ, ತಮ್ಮ ಶಿಷ್ಯನನ್ನಾಗಿ ಅಪ್ಪಿಕೊಳ್ಳುತ್ತಾರೆ.
ಪೊಲೀಸರಿಗೆ ಒಳ್ಳೆ ಊಟ ಕೊಟ್ರೆ ಗುಡ್ಡವನ್ನೇ ಕಿತ್ತಿಡ್ತಾರೆ: ರವಿ ಚೆನ್ನಣ್ಣನವರ್
ಪರಿಣಾಮ ಮುಂದೆ ಪರ್ವತಯ್ಯ ಅವರನ್ನು ಪರುತದೇವರು ಎಂದು, ನಂತರ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಎಂದು ನಾಮಕರಣ ಮಾಡಿ ಪಟ್ಟಕಟ್ಟಲಾಗುತ್ತದೆ. ಶಿವಶಾಂತವೀರ ಮಹಾಸ್ವಾಮಿಗಳು ಲಿಂಗೈಕ್ಯರಾದ ಬಳಿಕ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಪಟ್ಟಾಧಿಕಾರ ಸ್ವೀಕಾರ ಮಾಡುತ್ತಾರೆ.
ದಿಕ್ಕೇ ಬದಲಾಯಿತು
ಗವಿಮಠ ಅನ್ನ, ಅಕ್ಷರ ಹಾಗೂ ಆರೋಗ್ಯ ದಾಸೋಹಕ್ಕೆ ಹೆಸರುವಾಸಿ. ತ್ರಿವಿಧ ದಾಸೋಹಕ್ಕೆ ಸುಪ್ರಸಿದ್ಧಿಯಾಗಿತ್ತು. ಆದರೆ, 18ನೇ ಪೀಠಾಧಿಪತಿಗಳಾಗಿರುವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಜಾತ್ರೆಯನ್ನು ಜಾತ್ರೆಯನ್ನಾಗಿ ಆಚರಣೆ ಮಾಡುವುದಕ್ಕೆ ಸೀಮಿತವಾಗಲಿಲ್ಲ. ಪರಿಣಾಮ ಅದನ್ನೊಂದು ಸಾಮಾಜಿಕ ಜಾಗೃತಿ ಯಾತ್ರೆಯನ್ನಾಗಿ ಮಾಡಲು ಮುಂದಾದರು. ಇದಕ್ಕಾಗಿ ಎದುರಾದ ಸವಾಲುಗಳನ್ನು ಶಾಂತಚಿತ್ತದಿಂದಲೇ ಎದುರಿಸಿ ಗೆದ್ದರು.
ಪಟ್ಟವೇರಿದ ಮೇಲೆ 2-3 ವರ್ಷ ಸಂಪ್ರದಾಯದಂತೆ ಜಾತ್ರೆ ನಡೆಯಿತು. ಅದಾದ ಮೇಲೆ 2005ರಿಂದ ಗವಿಮಠ ಜಾತ್ರೆಯ ದಿಕ್ಕೇ ಬದಲಾಯಿತು. ಕಾರ್ಯಕ್ರಮ ಆಯೋಜನೆ, ಕಾರ್ಯಕ್ರಮ ಆಯ್ಕೆ ಸೇರಿದಂತೆ ಅದೊಂದು ಕ್ರಾಂತಿ ಎನ್ನುವಂತೆ ಉತ್ಸವವಾಗಿ ಮಾರ್ಪಟ್ಟಿತು.
ಹಂಪಿ ಉತ್ಸವ ಮಾದರಿಯಲ್ಲಿ ಜಾತ್ರೆ ಆಚರಣೆಗೆ ಮುಂದಾದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಮೂರು ವೇದಿಕೆ, ವಾರಪೂರ್ತಿ ಕಾರ್ಯಕ್ರಮ ಸೇರಿದಂತೆ ವೈವಿಧ್ಯತೆಯಿಂದ ಶುರು ಮಾಡಿದ್ದರಿಂದ ಸ್ವರ್ಗವೇ ಧರೆಗಿಳಿದಿದೆ ಎನ್ನುವಂತೆ ಭಾಸವಾಯಿತು.
ಹೀಗೆ ವರ್ಷದಿಂದ ವರ್ಷಕ್ಕೆ ತಪ್ಪುಗಳನ್ನು ಸರಿಮಾಡಿಕೊಳ್ಳುತ್ತಾ, ಅರ್ಥಪೂರ್ಣತೆಯನ್ನು ಹೆಚ್ಚಿಸಿಕೊಳ್ಳುತ್ತಾ, ವೈಭವಯುತದ ಬದಲಾಗಿ ಸಮಾಜಮುಖಿ ಎನ್ನುವ ತತ್ವದ ಮೊರೆ ಹೋದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಜಾತ್ರೆಯಲ್ಲಿ ಸೇರುವ ಲಕ್ಷ ಲಕ್ಷ ಭಕ್ತರ ಸಮೂಹಸನ್ನಿಯನ್ನೇ ಸಾಮಾಜಿಕ ಕ್ರಾಂತಿಯತ್ತ ತಿರುಗಿಸಿದರು.
ರಾಷ್ಟ್ರೀಯ, ಅಂತರಾಷ್ಟ್ರೀಯ ಕಲಾವಿದರು, ಖ್ಯಾತ ವಾಗ್ಮಿಗಳು, ಅನುಭಾವಿಗಳ ಉಪದೇಶಾಮೃತ, ಪ್ರತಿ ವರ್ಷವೂ ಸಮಾಜಮುಖಿ ರಾರಯಲಿ ಹೀಗೆ, ಗವಿಮಠ ಜಾತ್ರೆ ಕೇವಲ ಜಾತ್ರೆಯಾಗಿ ಉಳಿಯದೆ ಅದೊಂದು ಜಾಗೃತಿ ಜಾತ್ರೆಯಾಯಿತು.
ಗವಿಸಿದ್ದೇಶ್ವರ ಜಾತ್ರೆ: ಪೌರ ಕಾರ್ಮಿಕರಿಗೆ ಊಟ ಬಡಿಸಿ ಸರಳತೆ ಮೆರೆದ ಶ್ರೀಗಳು
ಹಲವು ಕ್ರಾಂತಿಗಳು
ಜಾತ್ರೆ ಕೇವಲ ಮಂಡಾಳು ಮಿರ್ಚಿಗೆ ಸೀಮಿತವಾಗಬಾರದು ಎಂದು ಅರಿತ ಶ್ರೀಗಳು ಅದಕ್ಕೊಂದು ಸಮಾಜಮುಖಿ ಟಚ್ ನೀಡಿದರು. 2015ರಲ್ಲಿ ರಕ್ತದಾನ ಜಾಗೃತಿ ನಡೆಸಿ, ಜಾತ್ರಾಮಹೋತ್ಸದಲ್ಲಿ ಮೂರು ದಿನಗಳ ಕಾಲ ರಕ್ತದಾನ ಶಿಬಿರ ಏರ್ಪಡಿಸಿದರು. ಜಾತ್ರೆಯೊಂದರಲ್ಲಿ ದಾಖಲೆ ರಕ್ತದಾನಕ್ಕೆ ಗವಿಮಠ ಸಾಕ್ಷಿಯಾಯಿತು. ಇವರ ಈ ನಡೆ ಜಿಲ್ಲಾದ್ಯಂತ ಜಾತ್ರೆಗಳಲ್ಲಿ ರಕ್ತದಾನ ಶಿಬಿರ ಆಯೋಜನೆಗೆ ನಾಂದಿಯಾಯಿತು. ಪ್ರತಿ ವರ್ಷವೂ ರಕ್ತದಾನ ಶಿಬಿರ ಜಾತ್ರೆಯಲ್ಲಿ ನಡೆಯುತ್ತದೆ. ಬಂದಿದ್ದ ಅನೇಕ ಸ್ವಾಮೀಜಿಗಳು ರಕ್ತದಾನ ಮಾಡುತ್ತಾರೆ ಎನ್ನುವುದು ಇನ್ನು ವಿಶೇಷ.
ಸತ್ತವರನ್ನು ಬದುಕಿಸುವ ಶಕ್ತಿಯನ್ನು ದೇವರು ನಮಗೆ ಕರುಣಿಸಿಲ್ಲ. ಆದರೆ, ಸಾಯುತ್ತಿರುವವರನ್ನು ಬದುಕಿಸುವ ಶಕ್ತಿಯನ್ನು ದೇವರು ನಮಗೆ ಕರುಣಿಸಿದ್ದಾನೆ. ಅದು ರಕ್ತದಾನದ ಮೂಲಕ ಜೀವ ಉಳಿಸುವ ಪುಣ್ಯಕಾರ್ಯದಲ್ಲಿ ಭಾಗಿಯಾಗೋಣ ಎನ್ನುವ ಇವರ ಸಂದೇಶ ಕೊಪ್ಪಳ ಜಿಲ್ಲೆಯಲ್ಲಿ ರಕ್ತದ ಕೊರತೆಯನ್ನು ನೀಗಿಸುವಂತಾಯಿತು.
2016ರಲ್ಲಿ ನಡೆದ ಬಾಲ್ಯವಿವಾಹ ತಡೆ ಜಾಗೃತಿ ಜಾಥಾದಿಂದ ಜಿಲ್ಲೆಯಲ್ಲಿ ಬಾಲ್ಯವಿವಾಹ ನಿಯಂತ್ರಣವಾಯಿತು. ಪ್ರಥಮ ಸ್ಥಾನದಲ್ಲಿದ್ದ ಕೊಪ್ಪಳ 12ನೇ ಸ್ಥಾನಕ್ಕೆ ಬಂದಿತು. ಸಾಮಾನ್ಯವಾಗಿ ಮಠದಲ್ಲಿ ಲಿಂಗದೀಕ್ಷೆ ಅಥವಾ ಗುರುದೀಕ್ಷೆ ನೀಡಲಾಗುತ್ತದೆ. ಆದರೆ, ಜಲದೀಕ್ಷೆ ನೀಡುವ ಮೂಲಕ ಜಲಕ್ರಾಂತಿಗೆ ಮುನ್ನುಡಿ ಬರೆದರು. ಒತ್ತಡದ ಬದುಕು ನಿವಾರಣೆಗಾಗಿ ಸಶಕ್ತ ಮನ ಸಂತೃಪ್ತ ಜೀವನ ಎನ್ನುವ ಜಾಗೃತ ನಡಿಗೆ, ಕೃಪಾದೃಷ್ಟಿಎನ್ನುವ ಜಾಥಾ ಮಾಡುವ ಮೂಲಕ ಸಾವಿರಾರು ಜನರು ತಮ್ಮ ಕಣ್ಣುದಾನ ಮಾಡಿದರು. ಕೊಪ್ಪಳದಲ್ಲೊಂದು ಐ ಸ್ಟೋರೇಜ್ ಯುನಿಟ್ ಪ್ರಾರಂಭವಾಯಿತು.
ಸಾಮಾನ್ಯವಾಗಿ ಮಠದಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ. ಆದರೆ, ಕೊಪ್ಪಳ ಗವಿಮಠ ಈ(2020) ವರ್ಷ ಲಕ್ಷ ವೃಕ್ಷೋತ್ಸವ ಜಾಗೃತಿ ಜಾಥಾ ನಡೆಸಿತು. ದೈವ ಸಾಕ್ಷಾತ್ಕಾರಕ್ಕೆ ಲಕ್ಷ ದೀಪೋತ್ಸವ, ಪ್ರಕೃತಿ ಸಾಕ್ಷಾತ್ಕಾರಕ್ಕೆ ಲಕ್ಷ ವೃಕ್ಷೋತ್ಸವ ಎನ್ನುವ ಕಲ್ಪನೆಯಲ್ಲಿ ಲಕ್ಷ ವೃಕ್ಷೋತ್ಸವ ಜಾಥಾ ಮಾಡಲಾಗಿದ್ದು, ಈ ವರ್ಷ 1 ಲಕ್ಷ ಸಸಿ ನೆಡುವ ಗುರಿ ಹಾಕಿಕೊಂಡು, 1 ಲಕ್ಷ ಸಸಿಗಳನ್ನೂ ಬೆಳೆಸಿದ್ದಾರೆ.
ಜಲಕ್ರಾಂತಿ
ಗವಿಮಠದ ಆವರಣದಲ್ಲೊಂದು 108 ಅಡಿ ಎತ್ತರದ ಗೋಪುರವನ್ನು ಕಟ್ಟಲು ಮುಂದಾದ ಗವಿಮಠ ಶ್ರೀಗಳು ಒಮ್ಮಿಂದೊಮ್ಮೆಲೆ ಮನಪರಿವರ್ತನೆ ಹೊಂದಿದರು. ಗದಗ ರಸ್ತೆಯಲ್ಲಿ ಸಂಚಾರ ಮಾಡುವ ವೇಳೆಯಲ್ಲಿ ಪಕ್ಕದಲ್ಲಿಯೇ ಇದ್ದ ಹಿರೇಹಳ್ಳ ಕಣ್ಣಿಗೆ ಬಿದ್ದಿತು. ಅದು ವಿನಾಶದ ಅಂಚಿನಲ್ಲಿರುವುದನ್ನು ಕಂಡು ಮರುಗಿದರು. ಗೋಪುರ ಕಟ್ಟುವುದಕ್ಕಿಂತ ಹಿರೇಹಳ್ಳವನ್ನು ಪುನಶ್ಚೇತನ ಮಾಡಲು ನಿರ್ಧರಿಸಿದರು.
ಬಿಯಾಸ್ ನದಿಯನ್ನು ಬಲ್‌ಬೀರ್‌ಸಿಂಗ್ ಪುನಶ್ಚೇತನ ಮಾಡಿದ್ದನ್ನು ಕೇಳಿದ್ದ ಗವಿಮಠ ಶ್ರೀಗಳು ಅಲ್ಲಿಗೆ ಹೋಗಿ ಬಂದರು. ಅದರಿಂದ ಪ್ರೇರೇಪಿತರಾಗಿ 2019ರಲ್ಲಿ ಹಿರೇಹಳ್ಳ ಪುನಶ್ಚೇತನಕ್ಕೆ ಕೈ ಹಾಕಿದರು. ಸುಮಾರು 26 ಕಿ.ಮೀ ಹಿರೇಹಳ್ಳವನ್ನು ಕೇವಲ ಒಂದೇ ವರ್ಷದಲ್ಲಿ ಕೋಟ್ಯಂತರ ರುಪಾಯಿ ವ್ಯಯಿಸಿ, ಸಾರ್ವಜನಿಕರ ಸಹಯೋಗದಲ್ಲಿ ಪುನಶ್ಚೇತನ ಮಾಡಿದರು. ಪರಿಣಾಮ ಅಕ್ಕಪಕ್ಕದ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳ ದಾಹ ತೀರಿತು. ಅಂತರ್ಜಲ ವೃದ್ಧಿಯಾಯಿತು. ಬರದಲ್ಲಿಯೂ ಬೆಳೆ ಕಂಗೊಳಿಸಲಾರಂಭಿಸಿತು.
ಇಷ್ಟಕ್ಕೆ ಸುಮ್ಮನಾಗದ ಗವಿಮಠ ಶ್ರೀಗಳು ಹಳ್ಳದುದ್ದಕ್ಕೂ ಬ್ಯಾರೇಜ್ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ಪರೋಕ್ಷವಾಗಿ ಕಾರಣವಾದರು. ಈಗಾಗಲೇ ನಾಲ್ಕು ನಿರ್ಮಾಣವಾಗಿದ್ದು, 9 ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಒಟ್ಟು 15 ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸಿದ್ದಾರೆ. ಸರ್ಕಾರವೂ ಇದಕ್ಕೆ ಸಾಥ್ ನೀಡುತ್ತಿದೆ.
ಇದಲ್ಲದೆ ತುಂಗಭದ್ರಾ ನದಿಯಿಂದ ಹಿಮ್ಮುಖವಾಗಿ ಹಿರೇಹಳ್ಳಕ್ಕೆ ನೀರು ತರುವ ಯೋಜನೆ ರೂಪಿತವಾಗಲು ಕಾರಣವಾಗಿದ್ದಾರೆ. ಇನ್ನೈದು ವರ್ಷಗಲ್ಲಿ ಪಾಳುಬಿದ್ದಿದ್ದ ಹಿರೇಹಳ್ಳ ನದಿಯಂತೆ ಮಾಡುವ ಕನಸು ಕಟ್ಟಿಕೊಂಡಿದ್ದಾರೆ.
ಕೆರೆಗಳ ಪುನಶ್ಚೇತನ
ಹಿರೇಹಳ್ಳ ಪುನಶ್ಚೇತನ ಮಾಡುತ್ತಲೇ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಜಿಲ್ಲೆಯಲ್ಲಿರುವ ಕೆರೆಗಳ ಪುನಶ್ಚೇತನಕ್ಕೂ ಸಾರಥ್ಯ ವಹಿಸಿದರು. ಪ್ರಥಮವಾಗಿ ಸುಮಾರು 300 ಎಕರೆ ವಿಸ್ತಾರವಾದ ಕುಷ್ಟಗಿ ತಾಲೂಕಿನ ನೀಡಶೇಷಿ ಕೆರೆಯನ್ನು ಸಾರ್ವಜನಿಕರು, ಜಿಲ್ಲಾಡಳಿತ ಸಹಯೋಗದಲ್ಲಿ ಪುನಶ್ಚೇತನ ಮಾಡಿದರು. ಹೂಳೆ ತೆಗೆಯಿಸಲಾಯಿತು. ಹೀಗೆ ಜಿಲ್ಲಾದ್ಯಂತ ಸುಮಾರು 14 ಕೆರೆಗಳ ಪುನಶ್ಚೇತನವಾಗಿದ್ದು, ಎಲ್ಲವೂ ಭರ್ತಿಯಾಗಿ ಕಂಗೊಳಿಸುತ್ತಿವೆ. ನೂರಾರು ಹಳ್ಳಿಗಳ ಜನ, ಜಾನುವಾರುಗಳ ದಾಹ ತೀರುವಂತಾಗಿದೆ.
ಇವರ ಈ ಜಲ ಕ್ರಾಂತಿ ಈಗ ಕೊಪ್ಪಳ ಸೇರಿದಂತೆ ಸುತ್ತಮುತ್ತಲ ಜಿಲ್ಲೆಯಲ್ಲಿಯೂ ಪ್ರಜ್ವಲಿಸಿದ್ದು, ಅನೇಕ ಕೆರೆಗಳ ಪುನಶ್ಚೇತನಕ್ಕೆ ನಾಂದಿಯಾಗಿದೆ. ಇದರ ಜೊತೆ ಜೊತೆಗೆ ಲಕ್ಷ ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮದೊಂದಿಗೆ ಬಿಸಿಲು ನಾಡನ್ನು ಮಲೆನಾಡು ಮಾಡಲು ಹೊರಟಿದ್ದಾರೆ ಶ್ರೀಗಳು.
ಗವಿಮಠದಲ್ಲಿ ಜಲಕ್ರಾಂತಿ; ರೈತರ ಮುಖದಲ್ಲಿ ಮಂದಹಾಸ!
ಮಹಾದಾಸೋಹ
ಗವಿಮಠದಲ್ಲಿ ಇದುವರೆಗೂ ತ್ರಿವಿಧ ದಾಸೋಹ ಪರಂಪರೆ ಇತ್ತು. ಅನ್ನ, ಅಕ್ಷರ, ಆರೋಗ್ಯ ದಾಸೋಹಕ್ಕೆ ಹೆಸರಾಗಿತ್ತು. ಇದರ ಜೊತೆಗೆ ಅರಿವು, ವೃಕ್ಷ ದಾಸೋಹದೊಂದಿಗೆ ಪಂಚ ದಾಸೋಹ ಸಂಗಮವಾಗಿದೆ.
ಗವಿಮಠದಲ್ಲಿ ದಾಸೋಹ ನಿತ್ಯ ನಿರಂತರವಾಗಿ ನಡೆಯುತ್ತದೆ. ಮಧ್ಯೆರಾತ್ರಿ ಬಂದವರಿಗೂ ಪ್ರಸಾದವನ್ನು ಬಡಿಸಲಾಗುತ್ತದೆ. ಹಸಿದು ಯಾರು ಮಲಗಬಾರದು ಎನ್ನುವ ಕಲ್ಪನೆಯಲ್ಲಿ ದಾಸೋಹ ನಿರಂತರವಾಗಿ ನಡೆಯುತ್ತದೆ.
ಜಾತ್ರಾ ಮಹೋತ್ಸದ ಪರಂಪರೆಯಲ್ಲಿ ಲಕ್ಷ ಲಕ್ಷ ಭಕ್ತರಿಗೂ ವೈವಿಧ್ಯಮಯ ಪ್ರಸಾದ ನೀಡುವ ಜಾತ್ರೆ ಇದಾಗಿದೆ. ದಾಸೋಹದಲ್ಲಿ ಹಾಲು, ತುಪ್ಪ, ಸಿಹಿ ತಿನಿಸು, ರೊಟ್ಟಿ, ಚಟ್ನಿ, ಪಲ್ಯ ಹೀಗೆ ಸಮೃದ್ಧ ಪ್ರಸಾದ ನೀಡಲಾಗುತ್ತದೆ.
ಮಹಾ ದಾಸೋಹಕ್ಕೆ 15 ಲಕ್ಷ ರೊಟ್ಟಿ, 600 ಕ್ವಿಂಟಾಲ್ ಅಕ್ಕಿ, 700 ಕ್ವಿಂಟಾಲ್ ಸಿಹಿ ಪದಾರ್ಥ, 200 ಕ್ವಿಂಟಾಲ್ ತರಕಾರಿ, 250 ಕ್ವಿಂಟಾಲ್ ಕಾಳು-ಕಡಿ, 10 ಕ್ವಿಂಟಾಲ್ ತುಪ್ಪ, 10 ಸಾವಿರ ಲೀಟರ್ ಹಾಲು, 5000 ಕೆಜಿ ಉಪ್ಪಿನಕಾಯಿ, 6 ಕ್ವಿಂಟಾಲ್ ಕೆಂಪು ಚಟ್ನಿ, 20 ಕ್ವಿಂಟಾಲ್ ಕಡ್ಲೆಬೆಳೆ ಹಿಟ್ಟಿನ ಮಿರ್ಚಿ ಭಜ್ಜಿ ಬಳಕೆಯಾಗುತ್ತದೆ. ಇದೆಲ್ಲವೂ ಭಕ್ತರೇ ನೀಡಿದ್ದು ಎನ್ನುವುದು ಗಮನಾರ್ಹ ಸಂಗತಿ.
ಊರಿಗೆ ಊರೇ ಸೇರಿ ರೊಟ್ಟಿಯನ್ನು ಮಾಡಿಕೊಂಡು ಬಂದುಕೊಡುವ ಸಂಪ್ರದಾಯ ಬೆಳೆದಿದೆ. ಹೀಗೆ, ನಡೆಯುವ ಮಹಾ ದಾಸೋಹದಲ್ಲಿ ಯಾರೊಬ್ಬರೂ ಸಂಬಳಕ್ಕಾಗಿ ಕೆಲಸ ಮಾಡುವುದಿಲ್ಲ. ಭಕ್ತರೇ ಸರದಿಯಲ್ಲಿ ನಿಂತು ಅಡುಗೆ ಮಾಡುತ್ತಾರೆ, ಸರದಿಯಲ್ಲಿ ನಿಂತು ಪ್ರಸಾದ ನೀಡುತ್ತಾರೆ. ಪ್ರಸಾದಕ್ಕಾಗಿ ಸರದಿ ಸಾಲು ಇರುವುದು ಸಾಮಾನ್ಯ. ಆದರೆ, ಇಲ್ಲಿ ಸೇವೆ ಮಾಡುವುದಕ್ಕೂ ಸರದಿ ಸಾಲು ಇರುತ್ತದೆ ಇರುತ್ತದೆ ಎನ್ನುವುದು ವಿಶೇಷ.
ವಿಭಿನ್ನ ರೀತಿ ಚಾಲನೆ
ಜಾತ್ರಾ ಮಹೋತ್ಸವಕ್ಕೆ ವಿಭಿನ್ನ ರೀತಿಯಲ್ಲಿ ಚಾಲನೆ ನೀಡಲಾಗುತ್ತದೆ. ಮೊದಮೊದಲು ಸ್ವಾಮೀಜಿಗಳಿಂದ ಚಾಲನೆ ನೀಡಲಾಗುತ್ತಿತ್ತು. ಆದರೆ, ಈಗ ಇದಕ್ಕೊಂದು ಹೊಸ ಕಲ್ಪನೆ ನೀಡಲಾಗಿದೆ. ಸೇವೆಗೈದವರನ್ನ, ಸಾಧನೆಗೈದವರನ್ನು ಗುರುತಿಸಿ ಜಾತ್ರಾ ಮಹೋತ್ಸವಕ್ಕೆ ಅವರಿಂದ ಚಾಲನೆ ಕೊಡಿಸಲಾಗುತ್ತದೆ. ಅಣ್ಣ ಹಜಾರೆ, ಸಾಲು ಮರದ ತಿಮ್ಮಕ್ಕ, ದೇಶದಲ್ಲಿಯೇ ಸೇವೆಯಲ್ಲಿ ತೊಡಗಿರುವ ವಿದೇಶದ ಮ್ಯಾಥೋ ಫೌರ್ಟಿಯಾರ, ಖ್ಯಾತ ಕ್ರೀಡಾಪಟು ಡಾ. ಮಾಲತಿ ಹೊಳ್ಳ ಅಂತಹವರ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ಕೊಡಿಸಲಾಗುತ್ತದೆ.
ಆರ್ಥಿಕ ಪ್ರಗತಿಗೂ ಪ್ರೇರಣೆ
ಗವಿಮಠ ಜಾತ್ರೆ ಕೇವಲ ಧಾರ್ಮಿಕ ಆಚರಣೆಯ ಕೇಂದ್ರವಾಗಿ ಅಷ್ಟೇ ಉಳಿದಿಲ್ಲ, ಅದು ಸಾಮಾಜಿಕ ಕ್ರಾಂತಿಗೂ ನಾಂದಿಯಾಗುತ್ತಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಕೊಪ್ಪಳದ ಗತಿಯನ್ನೇ ಬದಲಾಯಿಸುತ್ತಿದೆ. ಇಲ್ಲಿಯ ಜನರು ಸೇರಿದಂತೆ ಅನೇಕರ ಬದುಕಿಗೆ ಜಾತ್ರೆ ದಾರಿದೀಪವಾಗುತ್ತಿದೆ. ಆರ್ಥಿಕ ಪ್ರಗತಿಗೂ ಪರೋಕ್ಷವಾಗಿ ಕಾರಣವಾಗುತ್ತಿದೆ.
ಜಾತ್ರೆಗೆ ಬರುವ ಲಕ್ಷಲಕ್ಷ ಜನರ ವ್ಯವಹಾರದಿಂದ ನೂರಾರು ಕೋಟಿ ರುಪಾಯಿ ವಹಿವಾಟು ವೃದ್ಧಿಯಾಗಿದೆ. ಆಟೋ ಓಡಿಸುವವನ ಬದುಕು ಆರ್ಥಿಕವಾಗಿ ಮೇಲೇಳುವುದಕ್ಕೆ ದಾರಿಯಾಗಿದೆ. ಹೀಗೆ, ಕೊಪ್ಪಳದ ಖದರ್ ಅನ್ನೇ ಅದು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಿದೆ. ನಗರದ ಬೆಳವಣಿಗೆಗೂ ಪೂರಕವಾಗಿದೆ. ಪಾಳುಬಿದ್ದ ಕೊಂಪೆ ಎನ್ನುವಂತಿದ್ದ ಕೊಪ್ಪಳ ಜಾತ್ರೆಯಿಂದ ಸಂಪದ್ಭರಿತವಾಗುತ್ತಿದೆ.
ಶ್ರೀಗಳ ಸ್ವಚ್ಛತಾ ಅಭಿಯಾನ
ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಜಾತಿ, ಮತ, ಪಂಥವನ್ನು ಮೀರಿ ನಿಲ್ಲುತ್ತಾರೆ. ಗೊಡ್ಡು ಸಂಪ್ರದಾಯಗಳಿಗೆ ತಿಲಾಂಜಲಿ ಇಡುತ್ತಾರೆ. ಅವರು ಪ್ರತಿ ವರ್ಷ ಜಾತ್ರೆಯ ವೇಳೆಯಲ್ಲಿ ಬೆಳಗ್ಗೆಯೇ ಎದ್ದು ಸೀದಾ ಹೋಗುವುದು ಜಾತ್ರೆಯಲ್ಲಿರುವ ಸಾರ್ವಜನಿಕ ಶೌಚಾಲಯಗಳ ಬಳಿ, ಅಲ್ಲಿ ಸ್ವತಃ ತಾವೇ ಶೌಚಾಲಯವನ್ನು ಸ್ವಚ್ಛ ಮಾಡುತ್ತಾರೆ. ಸ್ವಾಮೀಜಿಯೊಬ್ಬರು ಶೌಚಾಲಯ ಸ್ವಚ್ಛ ಮಾಡುವುದು ಇವರೇ ಇರಬೇಕು. ಜಾತ್ರೆ ಮುಗಿಯುತ್ತಿದ್ದಂತೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕಾರ್ಮಿಕರಂತೆ ಕಸಗೂಡಿಸುತ್ತಾರೆ, ಕಸ ತುಂಬಿಹಾಕುತ್ತಾರೆ. ಈ ಮೂಲಕ ಆ ಕೆಲಸವು ಶ್ರೇಷ್ಠ ಎನ್ನುವ ಸಂದೇಶ ಸಾರುತ್ತಾರೆ.
ಗವಿ ಸಿದ್ದೇಶ್ವರ ಜಾತ್ರೆ; ಭಾವಪರವಶದಲ್ಲಿ ಮಿಂದೆದ್ದ ಭಕ್ತಾದಿಗಳು!
ಗವಿಮಠ ಹಿನ್ನೆಲೆ
ಕೊಪ್ಪಳವು ಜೈನರ ಪವಿತ್ರ ಕ್ಷೇತ್ರವಾಗಿತ್ತು. ಇದರಿಂದಾಗಿ ಇಲ್ಲಿ 777 ಜೈನ ಬಸದಿಗಳಿದ್ದವು. ವೈದಿಕ ಸಂಪ್ರದಾಯದ ಶಿವ, ದುರ್ಗೆಯರ ಸುಂದರ ಅನೇಕ ದೇವಾಲಯಗಳನ್ನು ಹೊಂದಿದೆ. ನಂತರ ಇಸ್ಲಾಂ ಸೂಫಿಗಳ ಪ್ರಭಾವದಿಂದಾಗಿ ಅಸ್ತಿತ್ವಕ್ಕೆ ಬಂದ ಸುಂದರವಾಗಿ ನಿರ್ಮಿಸಿದ ಸೂಫಿಗಳ ಸಮಾಧಿಗಳನ್ನು ಕಾಣಬಹುದು. ಹಾಗೆಯೇ ಪುರಂದರ ದಾಸರು ನಡೆದಾಡಿದ, ಶರಣರ ಕರ್ಮಭೂಮಿಯಾಗಿ ಕೊಪ್ಪಳ ಶರಣ ಚಳುವಳಿಯ ಕೇಂದ್ರವೂ ಆಗಿತ್ತು.
ಈ ಪರಂಪರೆಯಲ್ಲಿಯೇ ಬೆಳೆದ ಮಠ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠ. ಇದಕ್ಕೆ ಜಾತಿಯ ಚೌಕಟ್ಟುಗಳಿಲ್ಲ. ಧರ್ಮದ ಹಂಗನ್ನು ತೊರೆದು ಸಮಾಜದ ಕೊನೆಯ, ದುರ್ಬಲ, ಅಶಕ್ತ ಮಾನವನ ಏಳಿಗೆಯೇ ಶ್ರೀ ಗವಿಮಠದ ಗುರಿಯಾಗಿದೆ. 11ನೇ ಶತಮಾನದಲ್ಲಿ ಕಾಶಿ ಜಂಗಮವಾಡಿ ಮಠದಿಂದ ಶ್ರೀ ರುದ್ರಮುನಿ ಶಿವಾಚಾರ್ಯರು ಧರ್ಮ ಪ್ರಚಾರಾರ್ಥವಾಗಿ ದಕ್ಷಿಣಕ್ಕೆ ದಯಮಾಡಿಸಿ, ಕರ್ನಾಟಕದ ಕೊಪ್ಪಳ ಗುಡ್ಡದ ಗವಿಯಲ್ಲಿ ನೆಲೆಸಿ ತಪವನ್ನಾಚರಿಸಿದರು. ಶ್ರೀ ರುದ್ರಮುನಿ ಶಿವಯೋಗಿಗಳು ನೆಲೆಸಿ ನಿಂತ ಬೆಟ್ಟದ ಗವಿ ಈಗಿನ ಗವಿಮಠವಾಗಿದೆ.
ಇವರಿಂದ ಪ್ರಾರಂಭವಾದ ಪೀಠಾಧಿಪತಿ ಪರಂಪರೆಯಲ್ಲಿ ಇದುವರೆಗೂ 17 ಪೀಠಾಧಿಪತಿಗಳು ಲಿಂಗೈಕ್ಯರಾಗಿದ್ದು, ಈಗ 18 ಪೀಠಾಧಿಪತಿಗಳಾದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
- ಸೋಮರಡ್ಡಿ ಅಳವಂಡಿ