ತರಕಾರಿ ಬೆಳೆದು ವರ್ಷಕ್ಕೆ 5.50 ಲಕ್ಷ ರೂ ಸಂಪಾದಿಸುತ್ತಿರುವ ರೈತ!

By Kannadaprabha NewsFirst Published Mar 3, 2020, 3:29 PM IST
Highlights

‘ಮೈಬೆವರು ಉಕ್ಕಿದರ ಮನೆ ಮನ ನಕ್ಕೀತ, ತೆನೆ ತೆನೆ ಕೂಡಿ ಹಾಡ್ಯಾವ..’ ಎಂಬಂತೆ ಕಷ್ಟಪಟ್ಟು ಥರಾವರಿ ತರಕಾರಿ ಬೆಳೆವ ಕೃಷಿಕ ಬೀದರ ಜಿಲ್ಲೆಯ ಚಿಟಗುಪ್ಪ ಉಡಬಾಳ ಗ್ರಾಮದ ನಾರಾಯಣರಾವ ಭಂಗಿ. ವಯಸ್ಸು 63 ವರ್ಷ. ಸದಾ ಚಟುವಟಿಕೆಯಿಂದ ಕೃಷಿಯಲ್ಲಿ ತೊಡಗಿಸಿಕೊಂಡು ನಾನಾ ಬಗೆ ತರಕಾರಿ ಬೆಳೆದು ಪ್ರತಿ ವರ್ಷ ಸುಮಾರು 5.50 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

ಜಿ.ಚಂದ್ರಕಾಂತ

ಅವಿದ್ಯಾವಂತರಾಗಿರುವ ನಾರಾಯಣರಾವ 25 ವರ್ಷದಿಂದ ಸಮಾಜ ಸೇವೆ ಮಾಡುತ್ತಿದ್ದರು. ಕಳೆದ 5 ವರ್ಷದ ಹಿಂದೆ ಒಂದು ಎಕರೆಯಲ್ಲಿ ತರಕಾರಿ ಬೆಳೆಯಲು ಪ್ರಾರಂಭಿಸಿದರು. ಮೊದಲನೇ ವರ್ಷ ಎರಡು ಬೆಳೆಯಿಂದ 8-10 ಟನ್‌ ಟೊಮ್ಯಾಟೋ ಉತ್ಪಾದಿಸಿ 1.20 ಲಕ್ಷ ರೂ. ಆದಾಯ ಪಡೆದಿದ್ದಾರೆ. ಇದರ ಲಾಭದಿಂದಲೇ ಇನ್ನೂ ಆರು ಎಕರೆ ಹೊಲ ಖರೀದಿಸಿ ತರಕಾರಿ ಬೆಳೆಯನ್ನು ಈಗ 5 ಎಕರೆವರೆಗೆ ವಿಸ್ತರಿಸಿದ್ದಾರೆ.

ಆರೈಕೆ ಹೀಗಿರುತ್ತೆ

ತರಕಾರಿ ಬೆಳೆಗೆ ಯೋಗ್ಯವಾದ ಕಪ್ಪು ಭೂಮಿಯಿದೆ. ತೆರೆದ ಬಾವಿಯಿಂದ ನಾಲ್ಕು ದಿನಕ್ಕೊಮ್ಮೆ ಬೆಳೆಗಳಿಗೆ ಹನಿ ನೀರಾವರಿಯಿಂದ ನೀರುಣಿಸುತ್ತಿದ್ದಾರೆæ. ಬೆಳೆಗಳಿಗೆ ತಿಪ್ಪೆಗೊಬ್ಬರ ಮತ್ತು ರಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ.

ಸ್ಟ್ರಾಬೆರಿ ಬೆಳೆದು ಭರ್ಜರಿ ಲಾಭ ಮಾಡುತ್ತಿರುವ ಚಿಕ್ಕಬಳ್ಳಾಪುರದ ರೈತ ಸತೀಶ್ ರೆಡ್ಡಿ!

ಇದಕ್ಕೂ ಮೊದಲು ಕಬ್ಬು, ಜೋಳ, ಕಡಲೆ ಮುಂತಾದವನ್ನು ಮಾತ್ರ ಬೆಳೆಯುತ್ತಿದ್ದರು. ಖರ್ಚು ಲಾಭ ಅಷ್ಟಕ್ಕಷ್ಟೇ ಆಗುತ್ತಿತ್ತು. ಇದರಿಂದ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸ ಕಷ್ಟಸಾಧ್ಯ. ಈ ಹೊತ್ತಿಗೆ ತರಕಾರಿ ಬೆಳೆಯ ಲಾಭದ ಬಗ್ಗೆ ತಿಳಿದು ತರಕಾರಿ ಬೆಳೆದ ರೈತರ ಹೊಲಗಳಿಗೆ ಭೇಟಿಕೊಟ್ಟು ಮಾಹಿತಿ ಪಡೆದರು. ತೋಟಗಾರಿಕೆ ಅಧಿಕಾರಿಗಳ ಮತ್ತು ಪ್ರಗತಿಪರ ರೈತರ ಪ್ರೇರಣೆಯನ್ನೂ ಪಡೆದು ತರಕಾರಿಯನ್ನೇ ಬೆಳೆಸಲು ನಿರ್ಧರಿಸಿದರು.

ಏನೆಲ್ಲ ತರಕಾರಿಗಳು?

ಒಂದು ಎಕರೆಯಲ್ಲಿ ಹೂಕೋಸು ಮತ್ತು ಎಲೆಕೋಸು, ಹೀರೆಕಾಯಿ ಮತ್ತು ತುಪ್ಪದ ಹೀರೆಕಾಯಿ, ಹಾಗಲಕಾಯಿ, ಒಂದೂವರೆ ಎಕರೆಯಲ್ಲಿ ಟೊಮ್ಯಾಟೋ ಮತ್ತು ಅರ್ಧ ಎಕರೆಯಲ್ಲಿ ಬದನೆಕಾಯಿ ಬೆಳೆಯುತ್ತಿದ್ದಾರೆ. ಉಳಿದೆರಡು ಎಕರೆಯಲ್ಲಿ ಕಲ್ಲಂಗಡಿ, ಕಬ್ಬು, ಸೋಯಾ ಮತ್ತು ತೊಗರಿ ಬೆಳೆದಿದ್ದಾರೆ. ಕಳೆದ 5 ವರ್ಷದಿಂದ ವಿವಿಧ ತರಕಾರಿ ಬೆಳೆಗಳಿಂದ ದಿನಕ್ಕೆ 1500 ರಿಂದ 2000 ರು.ಗಳಂತೆ ವರ್ಷಕ್ಕೆ ಸುಮಾರು 5.50 ಲಕ್ಷ ರು.ಗಳವರೆಗೆ ಆದಾಯ ಪಡೆಯುತ್ತಿದ್ದಾರೆ. ಕಳೆದ ವರ್ಷ ಒಂದು ಎಕರೆಯಲ್ಲಿ ಕಲ್ಲಂಗಡಿಯೊಂದರಿಂದಲೇ 1.65 ಲಕ್ಷ ರೂ. ಗಳಿಸಿದ್ದಾರೆ. ತರಕಾರಿಯನ್ನು ಚಿಟಗುಪ್ಪಾ, ಕಲಬುರಗಿ ಮತ್ತು ಹೈದ್ರಾಬಾದ್‌ ತರಕಾರಿ ಮಾರುಕಟ್ಟೆಗಳಲ್ಲಿ ಹರಾಜು ಮೂಲಕ ಮಾರಾಟ ಮಾಡುತ್ತಿದ್ದಾರೆ.

ಜೇನು ಕೃಷಿಯಲ್ಲಿ ಕೋಟ್ಯಂತರ ರುಪಾಯಿ ದುಡಿದ ಶಿರಸಿ ಮಧುಕೇಶ್ವರ ಹೆಗಡೆ!

ತೋಟಗಾರಿಕೆ ಇಲಾಖೆಯಿಂದ 2015-16ರಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ 7 ಎಕರೆ ಭೂಮಿಯಲ್ಲಿ ಹನಿ ನೀರಾವರಿ ಮತ್ತು ಮಲ್ಚಿಂಗ್‌ ಪದ್ಧತಿ ಅಳವಡಿಸಿಕೊಳ್ಳಲು 90000 ರೂ. ಸಹಾಯಧನ, 2016-17ರಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಒಂದು ಹೆಕ್ಟೇರ್‌ ಪಪ್ಪಾಯ ಬೆಳೆಗೆ 86000 ರೂ. ಮತ್ತು ಯಾಂತ್ರೀಕರಣ ಯೋಜನೆಯಡಿ ಸ್ಪ್ರೇಯರ್‌ ಯಂತ್ರಕ್ಕಾಗಿ 36000 ರೂ. ಸಹಾಯಧನ ಪಡೆದಿದ್ದಾರೆ.

ಮಲ್ಚಿಂಗ್‌ ಮತ್ತು ಹನಿ ನೀರಾವರಿಯಿಂದ ತರಕಾರಿ ಬೆಳೆಗಳ ಖರ್ಚು ಕಡಿಮೆ. ಬಹುಬೆಳೆ ಪದ್ಧತಿಯಿಂದ ಉತ್ಪಾದನೆ ಹೆಚ್ಚು. ಆಕಳು, ಎಮ್ಮೆಗಳಿಂದ ಹೊಲಕ್ಕೆ ಗೊಬ್ಬರ, ಮನೆಗೆ ಹಾಲು ಸಿಗುತ್ತಿದೆ. ತರಕಾರಿ ಬೆಳೆಯಿಂದ ಸಾಕಷ್ಟುಆದಾಯ ಬರುತ್ತಿದೆ ಎಂದು ನಾರಾಯಣ ರಾವ ಭಂಗಿ ಹೇಳುತ್ತಾರೆ. ಇವರ ಮೊಬೈಲ್‌ ಸಂ. 9448584932.

click me!